ತರೀಕೆರೆ ಶ್ರೀಗಂಧ ಕೋಠಿ ಇನ್ನು ಮ್ಯೂಸಿಯಂ

 ಶ್ರೀಗಂಧದ ದಿಮ್ಮಿಗಳನ್ನು ಶೇಖರಿಸಲು ತರೀಕೆರೆಯಲ್ಲಿ 1905ರಲ್ಲಿ ನಿರ್ಮಾಣವಾಗಿದ್ದ ‘ಶ್ರೀಗಂಧ ಕೋಠಿ’ ಕಟ್ಟಡ ಶೀಘ್ರದಲ್ಲಿ ಸಂಗ್ರಹಾಲಯವಾಗಿ ಬದಲಾಗುತ್ತಿದೆ.

Tarikere Srigandha Koti Is Now Sandal Museum

ರಮೇಶ್‌ ಬನ್ನಿಕುಪ್ಪೆ

ಚಿಕ್ಕಮಗಳೂರು [ಆ.27]:  ಬ್ರಿಟಿಷರ ಆಡಳಿತಾವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಗಳ್ಳರಿಂದ ವಶಪಡಿಸಿಕೊಳ್ಳುತ್ತಿದ್ದ ಶ್ರೀಗಂಧದ ದಿಮ್ಮಿಗಳನ್ನು ಶೇಖರಿಸಲು ತರೀಕೆರೆಯಲ್ಲಿ 1905ರಲ್ಲಿ ನಿರ್ಮಾಣವಾಗಿದ್ದ ‘ಶ್ರೀಗಂಧ ಕೋಠಿ’ ಕಟ್ಟಡ ಶೀಘ್ರದಲ್ಲಿ ಶ್ರೀಗಂಧದ ಕುರಿತು ಸಮಗ್ರ ಮಾಹಿತಿ ನೀಡುವ ಸಂಗ್ರಹಾಲಯವಾಗಿ ಬದಲಾಗಲಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಲು ತರೀಕೆರೆಯಲ್ಲಿ ಶ್ರೀಗಂಧದ ಕೋಠಿ ನಿರ್ಮಾಣ ಮಾಡಲಾಗಿತ್ತು. ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳು ಕಡಿಮೆಯಾಗುತ್ತಿದ್ದಂತೆ ಈ ಕೋಠಿ ಕಾರ್ಯನಿರ್ವಹಿಸದಂತಾಯಿತು. ಸುಮಾರು 115 ವರ್ಷಗಳ ಹಿಂದೆ ನಿರ್ಮಿಸಿರುವ ಈ ಪುರಾತನ ಕಟ್ಟಡ ಪ್ರಸ್ತುತ ಶಿಥಿಲಾವಸ್ಥೆ ತಲುಪಿದೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇದು ರಾಜ್ಯದ ಮೊದಲ ಮತ್ತು ಏಕೈಕ ಶ್ರೀಗಂಧ ಮ್ಯೂಸಿಯಂ ಎಂಬ ಹೆಗ್ಗಳಿಕೆ ಪಡೆಯಲಿದೆ.

ಸಂಗ್ರಹಾಲಯ ನಿರ್ಮಿಸುವ ಸಂಬಂಧ ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಈ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಸೂಚಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದು, ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಅರಣ್ಯ ಇಲಾಖೆ ಮಾಡಲಿದೆ. ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ಸುಮಾರು 2.3 ಕೋಟಿ ರು. ವೆಚ್ಚವಾಗಲಿದೆ ಎಂದು ಶಿವಮೊಗ್ಗ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸುಲು ವಿವರಿಸಿದರು.

ಹೇಗಿದೆ ತರೀಕೆರೆ ಶ್ರೀಗಂಧ ಕೋಠಿ?

ಶಿವಮೊಗ್ಗ ಮತ್ತು ತರೀಕೆರೆ ಮಾರ್ಗದಲ್ಲಿ ಸುಮಾರು 1819.26 ಚದರ ಮೀಟರ್‌ ವಿಸ್ತೀರ್ಣದ ಅಮೋಘ ಶೈಲಿಯ ಶ್ರೀಗಂಧ ಕೋಠಿಯಿದೆ. ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಸಾಗಣೆ ಮಾಡುವವರಿಂದ ಮತ್ತು ಅರಣ್ಯ ಅಪರಾಧಿಗಳಿಂದ ವಶಪಡಿಸಿಕೊಂಡು ಇಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಸುಮಾರು 1.5 ಅಡಿ ದಪ್ಪವಿರುವ ಈ ಕಟ್ಟಡದ ಗೋಡೆಗಳು ಇಂದಿಗೂ ಭದ್ರವಾಗಿವೆ. ಕಟ್ಟಡದ ಮೇಲ್ಛಾವಣಿಯನ್ನು ಸಾಗುವಾನಿ ನಾಟಾಗಳಿಂದ ನಿರ್ಮಿಸಲಾಗಿದ್ದು, ಇಂದಿಗೂ ಗಟ್ಟಿಯಾಗಿವೆ. ಗಾಳಿ, ಮಳೆ ಮತ್ತು ಛಾವಣಿ ಮೇಲೆ ಮಂಗಗಳ ಹಾವಳಿಯಿಂದ ಹೆಂಚುಗಳು ನಾಶವಾಗಿವೆ.

ಸಂಗ್ರಹಾಲಯದಲ್ಲಿ ಏನೇನಿರಲಿದೆ?

ಸಂಗ್ರಹಾಲಯದಲ್ಲಿ ಶ್ರೀಗಂಧದ ವಿವಿಧ ತಳಿಗಳು ಮತ್ತು ಅವುಗಳನ್ನು ಬೆಳೆಯುವ ಕುರಿತ ಮಾಹಿತಿ. ಪ್ರಾಣಿ ಮತ್ತು ಸಸ್ಯಗಳ ಜೀವವೈವಿಧ್ಯತೆ ಕುರಿತ ಪ್ರದರ್ಶನ ಮತ್ತು ವಿವರಣೆ. ಅಳಿವಿನಂಚಿನಲ್ಲಿರುವ ಸಿಂಗಳೀಕಗಳ ಜೀವನ ಹಾಗೂ ಅವುಗಳ ರಕ್ಷಣೆಯ ಬಗ್ಗೆ ಮಾಹಿತಿ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಲಭ್ಯವಿರುವ ಅಪರೂಪದ ಸಸ್ಯಸಂಕುಲಗಳ ಮಾಹಿತಿ ಇಲ್ಲಿ ಸಿಗಲಿದೆ. ಜೊತೆಗೆ ಕಟ್ಟಡದ ಸುತ್ತಲಿರುವ ಖಾಲಿ ಜಾಗದಲ್ಲಿ ಮಕ್ಕಳ ಉದ್ಯಾನ ನಿರ್ಮಿಸಲಿದ್ದು, ಪ್ರವಾಸಿಗರ ಆಕರ್ಷಣೆಯ ತಾಣವನ್ನಾಗಿ ಮಾಡಲಾಗುತ್ತಿದೆ.

1905ರಲ್ಲಿ ನಿರ್ಮಿಸಿರುವ ತರೀಕೆರೆ ಶ್ರೀಗಂಧ ಕೋಠಿಯನ್ನು ರಕ್ಷಿಸಿ ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆಯೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಈ ಕುರಿತ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು.

- ರಾಜೀವ್‌ ರಂಜನ್‌, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

(ಸಾಂದರ್ಭಿಕ ಚಿತ್ರ)

Latest Videos
Follow Us:
Download App:
  • android
  • ios