ತರೀಕೆರೆ ತಾಲೂಕಲ್ಲಿ ಬೇಸಿಗೆಯಂಥ ಬಿಸಿಲು: ರೈತರು ಕಂಗಾಲು
ತರೀಕೆರೆ ಪಟ್ಟಣದಲ್ಲಿ ಈ ಬಾರಿ ಮಳೆ ಸುರಿದಿಲ್ಲ. ತಾಲೂಕಿನ ಯಾವ ಪ್ರದೇಶದಲ್ಲೂ ಈ ಸಾರಿ ಕೆರೆ -ಕಟ್ಟೆಗಳಲ್ಲಿ, ಹಳ್ಳಕೊಳ್ಳಗಳಲ್ಲಿ, ಬಾವಿಗಳಲ್ಲಿ ಹೊಸ ನೀರು ಕಂಡುಬಂದಿಲ್ಲ. ಮಳೆಗಾಲವಾದರೂ ಇಡೀ ತರೀಕೆರೆ ತಾಲೂಕಿನಲ್ಲಿ ಇನ್ನೂ ಬೇಸಿಗೆಯ ವಾತಾವರಣವೇ ಇದೆ. ಬಿಸಿಲಿನ ಪ್ರಖರತೆ ಕಡಿಮೆಯಾಗಿಲ್ಲ.
ಚಿಕ್ಕಮಗಳೂರು (ಜು.13): ತಾಲೂಕು ಸೇರಿದಂತೆ ತರೀಕೆರೆ ಪಟ್ಟಣದಲ್ಲಿ ಈ ಬಾರಿ ಮಳೆ ಕಾಣಿಸಿಕೊಂಡಿಲ್ಲ. ತಾಲೂಕಿನ ಯಾವ ಪ್ರದೇಶದಲ್ಲೂ ಈ ಸಾರಿ ಕೆರೆ -ಕಟ್ಟೆಗಳಲ್ಲಿ, ಹಳ್ಳಕೊಳ್ಳಗಳಲ್ಲಿ, ಬಾವಿಗಳಲ್ಲಿ ಹೊಸ ನೀರು ಕಂಡುಬಂದಿಲ್ಲ.
ತಾಲೂಕಿನ ಅನೇಕ ತೋಟಗಳ ಬೋರ್‌ವೆಲ್‌ಗಳು, ಕಿರುನೀರು ಬಾವಿಗಳು ನೀರಿಲ್ಲದೆ ಖಾಲಿ ಹೊಡೆಯುತ್ತಿದೆ. ಮಳೆಗಾಲವಾದರೂ ಇಡೀ ತರೀಕೆರೆ ತಾಲೂಕಿನಲ್ಲಿ ಇನ್ನೂ ಬೇಸಿಗೆಯ ವಾತಾವರಣವೇ ಇದೆ. ಅಂದರೆ ಬಿಸಿಲಿನ ಪ್ರಖರತೆಯೇ ಕಡಿಮೆಯಾಗಿಲ್ಲ. ಭೂಮಿ ವ್ಯವಸಾಯಕ್ಕೆ ಮತ್ತು ಬಿತ್ತನೆಗಾಗಿ ಹದ ಮಾಡಿಟ್ಟುಕೊಂಡು ಮಳೆಗೆ ದಿನನಿತ್ಯ ಕಾಯುತ್ತಿರುವಂತಹ ಪರಿಸ್ಥಿತಿ ತಾಲೂಕಿನಾದ್ಯಂತ ಕಂಡುಬಂದಿದೆ. ಹೀಗಾಗಿ ರೈತರು ಯಾವುದೇ ಸಾಂಪ್ರದಾಯಿಕ ಬೆಳೆಗಳ ಬಿತ್ತನೆ ಕಾರ್ಯ ಆರಂಭಿಸಿಲ್ಲ.
ಧಾರಾಕಾರ ಮಳೆಯ ಮಾತು ಹಾಗಿರಲಿ, ವಾಡಿಕೆಯಂತೆ ಸಾಮಾನ್ಯವಾಗಿ ಸುರಿಯಬೇಕಾದ ಮಳೆಯೇ ತಾಲೂಕಿನಲ್ಲಿ ಇನ್ನೂ ಬಂದಿಲ್ಲ. ಶೇ.30 ರಷ್ಟುಮಳೆ ಕೂಡ ಬಂದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿರುವುದು ಗಂಭೀರ ಚಿಂತನೆ ವಿಚಾರವಾಗಿದೆ.
ಹೆಸರು, ಉದ್ದು ಇತ್ಯಾದಿ ಬೆಳೆಗಳು ಶೇ.20ರಷ್ಟುಗುರಿ ಕೂಡ ಸಾಧಿಸಿಲ್ಲವೆಂದರೆ ಕೃಷಿ ಕಾರ್ಯದ ವಾಸ್ತವ ಚಿತ್ರ ಅನಾವರಣಗೊಳ್ಳುತ್ತದೆ. 3000 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಬೇಕಾಗಿದ್ದ ಶೇಂಗಾ ಈ ಬಾರಿ ಕೇವಲ 900 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕಾಣಸಿಗಬಹುದು.
ಭದ್ರಾನದಿಯಲ್ಲೂ ನೀರು ಕಡಿಮೆ:
ಭದ್ರಾನದಿಯಲ್ಲೂ ನೀರು ಕಡಿಮೆಯಾಗಿದೆ. ಹೋದ ವರ್ಷ ಇದೇ ಜುಲೈನಲ್ಲಿ ಈ ಹೊತ್ತಿಗೆ 162 ಅಡಿ ನೀರು ಶೇಖರಣೆಯಾಗಿತ್ತು. ಆದರೆ ಈ ವರ್ಷ ಕೇವಲ 133 ಅಡಿ ಮಾತ್ರ ನೀರು ಶೇಖರಣೆಯಾಗಿದೆ. ನದಿಗೆ ಹರಿದುಬರುವ ನೀರಿನ ಒಳಹರಿವು ಕೂಡ ಕಡಿಮೆಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಬಿತ್ತನೆಗೆ ಸಿದ್ಧವಾಗಿರುವ ಬೀಜ ಗೊಬ್ಬರ:
ಸಮಪ್ರಮಾಣದಲ್ಲಿ ಮಳೆ ಬಂದಿದ್ದರೆ ಈ ಹೊತ್ತಿಗಾಗಲೇ ಬೆಳೆಗಳ ಬಿತ್ತನೆ ಕಾರ್ಯ ಮುಗಿದು ಬಿಡುವಿಲ್ಲದಷ್ಟು ಕೃಷಿ ಕಾರ್ಯಗಳಲ್ಲಿ ರೈತರು ತೊಡಗಬೇಕಾಗಿತ್ತು. ಅಸಲು ಸಂಗತಿ ಎಂದರೆ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಗೆ ಸಿದ್ಧವಾಗಿರುವ ಬೀಜ, ಸಿಂಪಡಿಸಲು ಗೊಬ್ಬರ ಇತ್ಯಾದಿ ಪದಾರ್ಥಗಳು ಮಳೆ ಬೀಳುವುದನ್ನೇ ಕಾಯುತ್ತಿವೆ. ಇಂತಹ ಸಂದರ್ಭದಲ್ಲಿ ರೈತರ ಸಂಕಷ್ಟಗಳಿಗೆ ಪರಿಹಾರ ಕಂಡುಹಿಡಿಯುವತ್ತ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಅನಂತ ನಾಡಿಗ್