ರೈತರ ಬದುಕು ಸಿಹಿಯಾಗಿಸುವ ಹುಣಸೆ : ಬಂಪರ್ ಲಾಭ

ರೈತರಲ್ಲಿ ಈಗ ಹುಣಸೆ ಸುಗ್ಗಿ ಸಂಭ್ರಮ ಮನೆಮಾಡಿದೆ. ಹೆಚ್ಚು ಖರ್ಚು ವೆಚ್ಚವಿಲ್ಲದೆ ಲಾಭ ತಂದುಕೊಡುವ ಹುಣಸೆ ಇದೀಗ ರೈತರ ಪಾಲಿಗೆ ಕಲ್ಪವೃಕ್ಷವಾಗಿದೆ. 

tamarind Price Hikes in Ramanagara

ರುದ್ರೇಶ್‌ ಹೊನ್ನೇನಹಳ್ಳಿ

 ದಾಬಸ್‌ಪೇಟೆ [ಮಾ.18]:  ಮಾವು, ಜೋಳ, ರಾಗಿ ಬೆಳೆಯುವ ತಾಲೂಕಿನ ರೈತರಲ್ಲಿ ಈಗ ಹುಣಸೆ ಸುಗ್ಗಿ ಸಂಭ್ರಮ ಮನೆಮಾಡಿದೆ. ಬರಗಾಲದಲ್ಲೂ ರೈತರ ಕೈ ಹಿಡಿಯುವ ಹುಣಸೆ ರೈತರ ಬದುಕನ್ನು ಸಿಹಿಯಾಗಿಸುತ್ತದೆ.

ಹೆಚ್ಚು ಖರ್ಚು ವೆಚ್ಚವಿಲ್ಲದೆ ಲಾಭ ತಂದುಕೊಡುವ ಹುಣಸೆ ಇದೀಗ ರೈತರ ಪಾಲಿಗೆ ಕಲ್ಪವೃಕ್ಷವಾಗಿದೆ. ತಾಲೂಕಿನಾದ್ಯಾಂತ ಹುಣಸೆ ಕೊಯ್ಲು ಆರಂಭಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಒಂಟಿಯಾಗಿ ಮತ್ತು ಒಟ್ಟಾಗಿ ತೋಪುಗಳಲ್ಲಿ ಬೆಳೆಸಲಾಗಿರುವ ಹುಣಸೆ ಮರಗಳಲ್ಲಿ ಕಾಯಿ ಹಣ್ಣಾಗಿದ್ದು ಉದುರಿಸಿ ಮೂಟೆಗಳಿಗೆ ತುಂಬಿ ಕೊಂಡೊಯ್ದು ಬಯಲಲ್ಲಿ ಹಾಕಿ ಒಣಗಿಸಲಾಗುತ್ತಿದೆ. ನಂತರ ಅದನ್ನು ಕುಟ್ಟಿಬೀಜ ನಾರು ತೆಗೆದು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು ಮತ್ತು ಮನೆಮನೆಗಳಲ್ಲೂ ಹುಣಸೆ ಹಣ್ಣನ್ನು ಕುಟ್ಟಿಬೀಜ ಹಾಗೂ ನಾರನ್ನು ಬೇರ್ಪಡಿಸುತ್ತಿರುವ ಕಾಯಕ ಬಿರುಸಾಗಿಯೇ ನಡೆಯುತ್ತಿದೆ.

ಬೆಳೆ ಸಾಲ ಮನ್ನಾ: ಈ ದಿನಾಂಕದೊಳಗೆ ಅಗತ್ಯ ದಾಖಲೆ ಸಲ್ಲಿಸಿ...

ಲಾಭದ ನಿರೀಕ್ಷೆ: ಹುಣಸೆ ಹಣ್ಣಿನ ಸುಗ್ಗಿ ಈಗಿನ್ನೂ ಪ್ರಾರಂಭವಾಗಿರುವ ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಶಿವರಾತ್ರಿ ಹಬ್ಬ ಮುಗಿದ ಬಳಿಕ ಹುಣಸೆ ಸುಗ್ಗಿಗೆ ಮತ್ತಷ್ಟುಬೆರಗು ಬಂದಿದೆ. ಇದೀಗ ಹುಣಸೆ ಹಣ್ಣು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಬಹುದು ಎಂಬ ಯೋಚನೆಯಲ್ಲಿರುವ ರೈತರು ಮತ್ತು ಹುಣಸೆ ಮರದ ವ್ಯಾಪಾರಸ್ಥರು ಈಗಲೇ ಕೊಯ್ಲು ಮಾಡಿ ಒಂದಿಷ್ಟುಲಾಭಾಂಶ ಮಾಡಲು ಮುಂದಾಗಿದ್ದಾರೆ.

ಕಾರ್ಮಿಕರ ಕೊರತೆ:

ತಾಲೂಕಿನಾದ್ಯಂತ ಹುಣಸೆಕಾಯಿ ಕೊಯ್ಲು ಆರಂಭವಾಗಿರುವ ಕಾರಣ ಕಾರ್ಮಿಕರ ಕೊರತೆ ಉಂಟಾಗಿದೆ. ಹಿಂದೆ ಹುಣಸೆ ಕಾಯಿ ಕೊಯ್ಲು ಮಾಡುವುದರಲ್ಲಿ ಪಳಗಿದ ವ್ಯಕ್ತಿಗಳು ಇದ್ದರು. ಮರ ಹತ್ತಿ ಕಾಯಿ ಕೊಯ್ಯಲು ಬರುವ ಕಾರ್ಮಿಕರಿಗೆ ದಿನಕ್ಕೆ ಅಂದಾಜು 600ರಿಂದ 800 ರು. ಕೂಲಿ ಕೊಡಬೇಕಾಗಿದೆ. ಇನ್ನೂ ಕೊಯ್ದು ಕಾಯಿಯನ್ನು ಅದು ಮೂಟೆಗಳಿಗೆ ತುಂಬುವ ಮಹಿಳೆಯರ ಕೂಲಿ ಅಂದಾಜು 200ರಿಂದ 250 ರು. ದಾಟಿದೆ. ಇಷ್ಟೆಲ್ಲ ಮಾಡಬೇಕಾದರೆ ಹೆಚ್ಚಿನ ಸಂಖ್ಯೆ ಕೃಷಿ ಕಾರ್ಮಿಕರ ಅಗತ್ಯವಿದೆ.

ಹುಣಸೆಗೂ ಪ್ರಸಿದ್ಧಿ:

ತಾಲೂಕಿನಲ್ಲಿ ಹೆಚ್ಚಾಗಿ ಮಾವು ಬೆಳೆ ಕಂಡುಬರುತ್ತಿದ್ದರೂ ಮಾವು ಬೆಳೆಗೆ ಮಾತ್ರ ಸೀಮಿತವಾಗದೆ, ಹುಣಸೆ ಹಣ್ಣಿಗೂ ಪ್ರಸಿದ್ಧಿ ಪಡೆದಿದೆ. ನೀರು ಬಯಸದ ಹುಣಸೆ ಬೆಳೆಯತ್ತ ರೈತರ ಚಿತ್ತ ವಾಲಿದೆ. ವರ್ಷದಿಂದ ವರ್ಷಕ್ಕೆ ರೈತರು ಹುಣಸೆ ಮರಗಳನ್ನು ಬೆಳೆಸಲು ಮುಂದಾಗುತ್ತಿದ್ದಾರೆ. ಹಿಂದೆ ಹುಣಸೆಗಿಂತ ಹೆಚ್ಚಾಗಿ ಮಾವು ಬೆಳೆಯುವಲ್ಲಿ ರೈತರು ಮುಂದಾಗಿದ್ದರು. ಮಾವು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾವು ಬೆಳೆ ಲಾಭದಾಯಕವಲ್ಲ ಮತ್ತು ಅದಕ್ಕೆ ಖರ್ಚು ಅಧಿಕ ಎಂಬ ಕಾರಣಕ್ಕೆ ಮಾವಿನ ಮನಸೋತಿದ್ದ ರೈತರೆಲ್ಲಾ ಹುಣಸೆ ಮರಗಳನ್ನು ಬೆಳೆಸುವತ್ತಾ ವಾಲಿದ್ದಾರೆ. ತೆಂಗು ಅಡಿಕೆ ಬೆಳೆಗೆ ನೀಡುವ ಆದ್ಯತೆಯನ್ನು ಹುಣಸೆ ಬೆಳೆಗೂ ತೋರುತ್ತಿದ್ದಾರೆ. ಮುಖ್ಯವಾಗಿ ಬರಗಾಲದಲ್ಲೂ ಕೈ ಹಿಡಿಯುವ ಹುಣಸೆ ರೈತರ ಪಾಲಿಗೆ ಕಲ್ಪವೃಕ್ಷವೇ ಆಗಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ:

ಮಾರುಕಟ್ಟೆಯಲ್ಲಿ ಸದ್ಯ ಕ್ವಿಂಟಲ್‌ ಉತ್ತಮ ಹುಣಸೆ ಹಣ್ಣಿಗೆ 15ರಿಂದ 20 ಸಾವಿರದವರೆಗೂ ಬೆಲೆ ಇದೆ. ಈ ಬಾರಿ ಇಳುವರಿ ಕೊಂಚ ಕಡಿಮೆಯಾಗಿರುವ ಕಾರಣ ಉತ್ತಮ ಬೆಲೆ ಸಿಗಲಿದೆ.

ನಮ್ಮ ಹೊಲದಲ್ಲಿಯೂ ನಾಲ್ಕೈದು ಹುಣಸೆ ಮರಗಳಿವೆ. ಜೊತೆಗೆ ಬೇರೆ ಕಡೆ ವ್ಯಾಪಾರವನ್ನೂ ಮಾಡಿದ್ದೇವೆ. ಈಗಿಲೂ ಹಣ್ಣಾಗುತ್ತಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಹಾಗಾಗಿ ಕೊಯಿಲು ಕಾರ್ಯವನ್ನು ಬೇಗ ಮುಗಿಸಿಕೊಳ್ಳುತ್ತಿದ್ದೇವೆ.

ಚಂದ್ರಯ್ಯ, ರೈತ

Latest Videos
Follow Us:
Download App:
  • android
  • ios