ಬೆಂಗಳೂರು(ಫೆ.05): ರಾಜಧಾನಿಯ ಉಪನಗರ ರೈಲು ಯೋಜನೆಯಲ್ಲಿ ಕೇಂದ್ರ ತನ್ನ ಪಾಲಿನ ಶೇಕಡ 20 ರಷ್ಟು ಅನುದಾನವನ್ನು ಯೋಜನೆಗೆ ನೀಡುವ ರೈಲ್ವೆ ಭೂಮಿಗೆ ಸರಿದೂಗಿಸಲು ಮುಂದಾಗಿದೆ ಎನ್ನಲಾಗಿದ್ದು, ಇದರಿಂದ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಸಾಧ್ಯತೆಯಿದೆ.

ಕೇಂದ್ರ ಬಜೆಟ್‌ನಲ್ಲಿ ಮೂರು ಬಾರಿ ಘೋಷಿಸಿರುವ ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಬಾಕಿ ಇದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಆದರೆ, ಈ ಯೋಜನೆ ಅನುಷ್ಠಾನಕ್ಕೆ ತಗುಲುವ ವೆಚ್ಚ ಹಂಚಿಕೆಯಲ್ಲಿ ಗೊಂದಲ ಶುರುವಾಗಿದೆ. ಏಕೆಂದರೆ, ಈ ಹಿಂದೆ ಯೋಜನೆ ವ್ಯಾಪ್ತಿಗೆ ಬರುವ ರೈಲ್ವೆ ಭೂಮಿಯನ್ನು ಒಂದು ರು.ಗೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.

ಬೆಂಗಳೂರಿಗರಿಗೆ ಇಲ್ಲಿದೆ ಗುಡ್ ನ್ಯೂಸ್ : ಶೀಘ್ರ ಬರಲಿದೆ ಉಪನಗರ ರೈಲು

ಇದೀಗ ಕೇಂದ್ರ ಸರ್ಕಾರ ಯೋಜನೆಗೆ ರೈಲ್ವೆ ಭೂಮಿ ನೀಡುವುದರಿಂದ ಯೋಜನಾ ವೆಚ್ಚ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆ-ರೇಡ್‌)ಕ್ಕೆ ತಿಳಿಸಿದೆ ಎನ್ನಲಾಗಿದೆ. ಅಂದರೆ ಉಪನಗರ ರೈಲು ಯೋಜನೆಗೆ ಅನುಷ್ಠಾನಕ್ಕೆ ಅಗತ್ಯವಿರುವ ಅನುದಾನದ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.20ರಷ್ಟುಭರಿಸುವುದು ಹಾಗೂ ಉಳಿದ ಶೇ.60 ರಷ್ಟನ್ನು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಒಪ್ಪಿಗೆ ಸೂಚಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.20ರಷ್ಟುಅನುದಾನವನ್ನು ರೈಲ್ವೆ ಭೂಮಿಗೆ ಸರಿದೂಗಿಸಿದರೆ, ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ.

ಬೆಂಗಳೂರಿನ ಸಬ್‌ ಅರ್ಬನ್‌ ಟ್ರೈನ್ ಅಪ್ಪಟ ಬಡವರ ರೈಲು: ಅಂಗಡಿ

ಉಪನಗರ ರೈಲು ಯೋಜನೆ ಈಗಾಗಲೇ ವಿಳಂಬವಾಗಿರುವುದರಿಂದ ಮತ್ತಷ್ಟುಸಮಯ ವ್ಯಯಿಸದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚರ್ಚಿಸಿ ಯೋಜನಾ ವೆಚ್ಚ ಹಂಚಿಕೆಯ ಗೊಂದಲ ಬಗೆಹರಿಸಿಕೊಳ್ಳಬೇಕು. ಅಂತೆಯೆ ಕೇಂದ್ರ ಸರ್ಕಾರ ಕೂಡಲೇ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಕೊಡಿಸಬೇಕು ಎಂದು ರೈಲ್ವೆ ಹೋರಾಟಗಾರರು ಒತ್ತಾಯಿಸಿದ್ದಾರೆ.