Asianet Suvarna News Asianet Suvarna News

ಬೇಸಿಗೆಯಲ್ಲಿ ರೇಷ್ಮೆ ಸಾಕಾಣಿಕೆ: ಮುಂಜಾಗ್ರತಾ ಕ್ರಮಗಳು

ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚಿದ್ದು, ತೇವಾಂಶ ಕಡಿಮೆಯಾಗುವ ಕಾರಣ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಏರುಪೇರಾಗುವುದರಿಂದ ಬೆಳೆಗಳು ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ. ಹಾಗಾಗಿ ರೇಷ್ಮೆ ಹುಳು ಸಾಕಾಣಿಕೆಗೆ ಮುಂಜಾಗೃತ ಕ್ರಮ ಅನುಸರಿಸುವಂತೆ ರೇಷ್ಮೆ ಇಲಾಖೆ ಉಪನಿರ್ದೇಶಕರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

Summer sericulture: Precautionary measures snr
Author
First Published May 5, 2024, 12:19 PM IST

 ರಾಮನಗರ :  ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚಿದ್ದು, ತೇವಾಂಶ ಕಡಿಮೆಯಾಗುವ ಕಾರಣ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಏರುಪೇರಾಗುವುದರಿಂದ ಬೆಳೆಗಳು ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ. ಹಾಗಾಗಿ ರೇಷ್ಮೆ ಹುಳು ಸಾಕಾಣಿಕೆಗೆ ಮುಂಜಾಗೃತ ಕ್ರಮ ಅನುಸರಿಸುವಂತೆ ರೇಷ್ಮೆ ಇಲಾಖೆ ಉಪನಿರ್ದೇಶಕರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ರೇಷ್ಮೆ ಕೃಷಿಕರು ಬೇಸಿಗೆ ಕಾಲದಲ್ಲಿ ಬೆಳೆಗಳ ಸಂರಕ್ಷಣೆ ಮಾಡಲು ಹುಳು ಸಾಕಾಣಿಕೆಯ ಮನೆಯ ಸುತ್ತಲೂ ಗೋಡೆಗಳ ಮೇಲೆ ಬಿಸಿಲು ಬೀಳದಂತೆ ಚಪ್ಪರ ಹಾಕಬೇಕು. ಅದರಲ್ಲೂ ದಕ್ಷಿಣ ಮತ್ತು ಪಶ್ಚಿಮದ ಗೋಡೆಗಳು ಬಿಸಿಲಿನಿಂದ ಕಾಯದಂತೆ ಎಚ್ಚರವಹಿಸಬೇಕು. ಕಿಟಕಿಗಳಿಗೆ ಗೋಣಿ ತಾಟುಗಳನ್ನು ಹಾಕಿ ಆಗಿಂದಾಗ್ಗೆ ನೀರಿನಿಂದ ನೆನೆಸಿಡಬೇಕು. ಮನೆಯ ಮೇಲ್ಛಾವಣಿ ಬಿಸಿಲಿನಿಂದ ಕಾಯದಂತೆ ದಪ್ಪವಾಗಿ ತೆಂಗಿನ ಗರಿಗಳನ್ನು ಹೊದಿಸಿಡಬೇಕು. ಹಾಗೂ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಮೂಲಕ ಬೆಳಿಗ್ಗೆ 11.30ರಿಂದ 120 ಗಂಟೆಗೆ ಒಮ್ಮೆ ಮತ್ತು ಸಂಜೆ 4-00 ರಿಂದ 5-00 ಗಂಟೆಗೆ ಒಮ್ಮೆ ನೀರು ಹಾಯಿಸುವುದು ಹೆಚ್ಚು ಅನುಕೂಲಕರ ಎಂದು ತಿಳಿಸಿದ್ದಾರೆ.

ಆರ್‌ಸಿಸಿ ಹುಳು ಸಾಕಾಣಿಕೆ ಮನೆಗಳ ಮೇಲ್ಛಾವಣಿಗೆ ಸುಣ್ಣ ಅಥವಾ ಕೂಲ್ ಸಮ್ ಬಳಿಯಿರಿ ಇದರಿಂದ ಮೇಲ್ಛಾವಣಿ ಬಿಸಿಲಿಗೆ ಕಾಯುವುದಿಲ್ಲ. ಹುಳು ಸಾಕಾಣಿಕೆಗೆ ಅಗತ್ಯವಾದ ಸೊಪ್ಪನ್ನು ತಂಪು ಹೊತ್ತಿನಲ್ಲಿ ಕಟಾಯಿಸಿರಿ, ಬೆಳಿಗ್ಗೆ ಮತ್ತು ರಾತ್ರಿ ವೇಳೆಯ ಸೊಪ್ಪನ್ನು ಚೆನ್ನಾಗಿ ನೀಡಿರಿ, ಮಧ್ಯಾಹ್ನದ ಒಂದು ಸೊಪ್ಪಿನ ಪ್ರಮಾಣವನ್ನು ಎರಡು ಭಾಗ ಮಾಡಿ ತೆಳುವಾಗಿ ನೀಡುವುದು ಸೂಕ್ತ. ಅಂದರೆ ಬೆಳಿಗ್ಗೆ 6 ಗಂಟೆಯ ಸೊಪ್ಪಿನ ನಂತರ 11 ಗಂಟೆಗೆ ಒಮ್ಮೆ ತೆಳುವಾಗಿ ಸೊಪ್ಪು ನೀಡುವುದು ಹಾಗೂ ಮಧ್ಯಾಹ್ನ 4 ಗಂಟೆಗೆ ಒಮ್ಮೆ ಸೊಪ್ಪು ನೀಡಬೇಕು.

ಕಟಾವು ಮಾಡಿದ ಸೊಪ್ಪನ್ನು ಬೇಗನೆ ಹುಳು ಸಾಕಾಣಿಕೆ ಮನೆಗೆ ಸಾಗಿಸಿರಿ ಹಾಗೂ ತೇವಾಂಶ ಆರದಂತೆ ಸೊಪ್ಪಿನ ಶೇಖರಣೆ ಮಾಡಿರಿ. ಹುಳು ಸಾಕಾಣಿಕೆ ಮನೆ ಹೊರಭಾಗದ ಕಿಟಕಿಗಳ ನೇರಕ್ಕೆ ಎತ್ತರದಲ್ಲಿ ಫಾರ್ಮ್ಸ್ ಗಳನ್ನು ಅಳವಡಿಸಿಕೊಳ್ಳುವುದರಿಂದ ಹುಳು ಸಾಕಾಣಿಕೆ ಮನೆಯ ಸುತ್ತಲೂ ತೇವಾಂಶ ಹೆಚ್ಚಿಸಲು ಸಾಧ್ಯ. ಹುಳು ಸಾಕಾಣಿಕೆ ಮನೆಯ ಒಳಭಾಗದಲ್ಲಿಯೂ ಸಹ ಫಾರ್ಗಗಳನ್ನು ಅಳವಡಿಸಿ ಹುಳು ಸಾಕಾಣಿಕೆಯ ಸ್ಟಾಂಡುಗಳು ಮತ್ತು ಹುಳುಗಳಿಗೆ ಫೋರ್ಸಾಗಿ ಚಿಮ್ಮುವ ನೀರಿನ ಹನಿಗಳು ಬೀಳದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

 ರೇಷ್ಮೆ ಮನೆಯಲ್ಲಿ ಮಣ್ಣಿನ ಮಡಿಕೆಗಳು ನೇತಾಕಿ

ಮಣ್ಣಿನ ಮಡಿಕೆಗಳನ್ನು ಹುಳು ಸಾಕಾಣಿಕೆ ಮನೆಯ ಒಳಗಡೆ ನೀರು ತುಂಬಿಸಿ ನೇತು ಹಾಕಿ ಇದರಿಂದ ಶೈತ್ಯಾಂಶ ಹೆಚ್ಚು ಮಾಡಬಹುದು. ಹುಳು ಸಾಕಾಣಿಕೆ ಮನೆಯ ಒಳಗಡೆ ಗೋಣಿ ತಾಟುಗಳನ್ನು ನೆಲದ ಮೇಲೆ ಹರಡಿ ನೀರನ್ನು ಹಾಕಿರಿ. ಚಾಕಿ ಹಂತದಿಂದಲೂ ಪ್ರತಿ ದಿನ ಸುಣ್ಣವನ್ನು ಬಳಸಿರಿ ಇದರಿಂದ ರೋಗಗಳನ್ನು ನಿಯಂತ್ರಿಸಬಹುದು, ಪ್ರತಿ ಹಂತದಲ್ಲೂ ಜ್ವರದ ನಂತರ ಹಾಸಿಗೆ ಸೋಂಕು ನಿವಾರಕಗಳನ್ನು ಬಳಸಬೇಕು.ಬೇಸಿಗೆಯಲ್ಲಿ ಹುಳು ಸಾಕಣಿಕೆ ಮನೆಯ ಉಷ್ಣಾಂಶ 28-30 ಸೆಲ್ಸಿಯಸ್ ಇದ್ದಲ್ಲಿ, ಬೆಳೆದ ಹುಳುಗಳಿಗೆ 50-60 ಶೇಕಡ ತೇವಾಂಶ ಇರುವಂತೆ ಎಚ್ಚರ ವಹಿಸಿರಿ. ತೇವಾಂಶದ ಪ್ರಮಾಣ ಹೆಚ್ಚಳವಾದರೂ ಸಹ ರೋಗಾಣುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಹಣ್ಣಾದ ಹುಳುಗಳನ್ನು ಚಂದ್ರಿಕೆಗಳಿಗೆ ಬಿಟ್ಟ ನಂತರ ಚಂದ್ರಿಕೆಗಳನ್ನು ನೆರಳಿನಲ್ಲಿ ಇಡಬೇಕು ಹಾಗೂ ಚಂದ್ರಿಕೆಗಳನ್ನು ಇಟ್ಟ ಕೊಠಡಿಯಲ್ಲಿ ನಿಗದಿತ ಉಷ್ಣಾಂಶ ಹಾಗೂ ಶೈತ್ಯಾಂಶ ಇರುವಂತೆ ನೋಡಿಕೊಳ್ಳಬೇಕು ಎಂದು ರೇಷ್ಮೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Follow Us:
Download App:
  • android
  • ios