ಜನರ ಜೇಬು ಸುಡುತ್ತಿರುವ ಬೇಸಿಗೆಯ ಬಿರುಬಿಸಿಲು
ಕೋಲಾರ ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ಒಂದೇ ಒಂದು ಹನಿ ಮಳೆಯಾಗಿಲ್ಲ, ಬಿರು ಬಿಸಿಲಿನ ತಾಪ ಮಿತಿ ಮೀರಿದೆ. ಜನರು ಭೂಮಿ ಮೇಲೆ ಬದುಕೋದೇ ಕಷ್ಟ ಎಂಬಂತ ಸನ್ನಿವೇಶ ನಿರ್ಮಾಣವಾಗಿದೆ.
ಕೋಲಾರ : ಬಿರು ಬಿಸಿಲಿನ ಬೇಗೆ ಕೇವಲ ಭೂಮಿಯನ್ನು ಸುಡುತ್ತಿಲ್ಲ, ಜನರ ನೆತ್ತಿಯನ್ನೂ ಸುಡುತ್ತಿಲ್ಲ. ಬದಲಾಗಿ, ಜನರ ಜೇಬನ್ನು ಸುಡುತ್ತಿದೆ. ಬಿಸಿಲಿನ ತಾಪಮಾನ ಏರಿಕೆಯಿಂದ ರೈತರು ಬೆಳೆದ ಬೆಳೆಗಳಲ್ಲಿ ಉತ್ತಮ ಫಸಲು ಬಾರದ ಹಿನ್ನೆಲೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಬಿರುಬಿಸಿಲು ಜನರ ಜೇಬು ಸುಡುತ್ತಿದ್ದು ಸದ್ಯ ದುಬಾರಿ ದುನಿಯಾ ಮಾರ್ಪಟ್ಟಿದೆ.
ಬೀನ್ಸ್ ಕೆಜಿಗೆ 200 ರು., ಕ್ಯಾರೇಟ್ ಕೆಜಿಗೆ 60 ರು., ಮೂಲಂಗಿ ಕೆಜಿಗೆ 55 ರು., ಸೌತೇಕಾಯಿ ಕೆಜಿಗೆ 700 ರು. ಹೀಗೆ ಒಂದಕ್ಕಿಂತ ಒಂದು ತರಕಾರಿಯ ಬೆಲೆಯಲ್ಲಿ ಏರಿಕೆ, ಬಿರು ಬಿಸಿಲಿನ ತಾಪಮಾನಕ್ಕೆ ರೈತರು ಬೆಳೆದ ಬೆಳೆಗಳು ಸಮರ್ಪಕವಾಗಿ ಕೈಗೆ ಬಾರದ ಹಿನ್ನೆಲೆ ತರಕಾರಿ ಬೆಲೆಯಲ್ಲಿ ಏರಿಕೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು, ಇವೆಲ್ಲಾ ಕಂಡು ಬಂದಿರುವುದು ಜಿಲ್ಲಾ ಕೇಂದ್ರ ಕೋಲಾರದಲ್ಲಿ.
ಕೋಲಾರ ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ಒಂದೇ ಒಂದು ಹನಿ ಮಳೆಯಾಗಿಲ್ಲ, ಬಿರು ಬಿಸಿಲಿನ ತಾಪ ಮಿತಿ ಮೀರಿದೆ. ಜನರು ಭೂಮಿ ಮೇಲೆ ಬದುಕೋದೇ ಕಷ್ಟ ಎಂಬಂತ ಸನ್ನಿವೇಶ ನಿರ್ಮಾಣವಾಗಿದೆ. ಹೀಗಿರುವಾಗ ರೈತರು ಬೆಳೆದ ಬೆಳೆಗಳು ಉಳಿಯಲು ಸಾಧ್ಯವೇ? ಉತ್ತಮ ಫಸಲು ಕೊಡಲು ಸಾಧ್ಯವೇ? ಹಾಗಾಗಿ ರೈತರು ಬೆಳೆದ ತರಕಾರಿ ಬೆಳೆಗಳು ಸರಿಯಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಕೋಲಾರದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ.
ಬಿರು ಬಿಸಿಲಿನಿಂದ ತರಕಾರಿ ಬೆಲೆಗಳು ಗ್ರಾಹಕನ ಜೇಬು ಸುಡುತ್ತಿವೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲೇ ಎಲ್ಲಾ ರೀತಿಯ ಹಣ್ಣು, ತರಕಾರಿಗಳು ಕೆಜಿಗೆ 50 ರಿಂದ 100 ರು.ಗಳ ಗಡಿ ದಾಟಿವೆ. ಇನ್ನು ಪಕ್ಕದ ರಾಜ್ಯಗಳಾದ ತಮಿಳುನಾಡು ಮತ್ತು ಆಂದ್ರದಲ್ಲೂ ಉಷ್ಣಾಂಶ ಹೆಚ್ಚಾಗಿರುವುದರಿಂದ ಬೆಳೆಗಳು ಸರಿಯಾದ ಪ್ರಮಾಣದಲ್ಲಿ ಬೆಳೆಯಲಾಗದೇ ಕೋಲಾರ ಜಿಲ್ಲೆಗೆ ಹೊರ ರಾಜ್ಯಗಳಿಂದಲೂ ತರಕಾರಿ ಉತ್ಪನ್ನಗಳು ಬರುತ್ತಿಲ್ಲ.
ಇನ್ನೂ ಕೋಲಾರ ತರಕಾರಿ ಮಾರುಕಟ್ಟೆಯಲ್ಲಿ ಸೊಪ್ಪು ಸೇರಿದಂತೆ ಎಲ್ಲಾ ರೀತಿಯ ತರಕಾರಿ ಬೆಲೆಗಳು ಏರಿಕೆ ಕಂಡಿವೆ. ಕಳೆದ ಹದಿನೈದು ದಿನದ ಹಿಂದೆ 60 ರುಪಾಯಿ ಇದ್ದ ಬೀನ್ಸ್ ಬೆಲೆ ಕೆಜಿಗೆ ಈಗ 180 ರಿಂದ 200 ರುಪಾಯಿ ಏರಿಕೆಯಾಗಿದೆ, 25 ರುಪಾಯಿ ಇದ್ದ ಕ್ಯಾರೆಟ್ ಬೆಲೆ ಈಗ ಕೆಜಿಗೆ 60-65 ರುಪಾಯಿಗೆ ಏರಿಕೆ ಕಂಡಿದೆ.
ಇನ್ನು 15 ರುಪಾಯಿ ಇದ್ದ ಮೂಲಂಗಿ ಬೆಲೆ ಕೆಜಿಗೆ 55 ರುಪಾಯಿಗೆ ಏರಿಕೆಯಾಗಿದೆ. 20 ರುಪಾಯಿ ಇದ್ದ ನವಿಲುಕೋಸು ಒಂದಕ್ಕೆ ಈಗ 60 ರುಪಾಯಿಗೆ ಏರಿಕೆ ಕಂಡಿದೆ. ಇನ್ನು ಟೊಮ್ಯಾಟೋ ಕೂಡಾ ಕೆಜಿಗೆ ೧೫ ರುಪಾಯಿಯಿಂದ ೩೫ ರುಪಾಯಿಗೆ ಏರಿಕೆಯಾಗಿದೆ. ಹಸಿಮೆಣಸಿನಕಾಯಿ 40 ರುಪಾಯಿಯಿಂದ 110 ರುಪಾಯಿಗೆ ಏರಿಕೆಯಾಗಿದ್ದರೆ, ಕ್ಯಾಪ್ಸಿಕಂ 25 ರುಪಾಯಿಯಿಂದ 50 ರುಪಾಯಿಗೆ ಕೆಜಿ ಏರಿಕೆಯಾಗಿದೆ, ಬಿಸಿಲಿಗೆ ಬೇಗೆ ಕಡಿಮೆಗೊಳಿಸಲು ಜನರು ಹೆಚ್ಚಾಗಿ ಬಳಸುವ ತರಕಾರಿ ಸೌತೇಕಾಯಿ ಬೆಲೆಯೂ ಮೂರು ಪಟ್ಟು ಹೆಚ್ಚಾಗಿದೆ. ಈ ಮೂಲಕ ತರಕಾರಿ ಬೆಲೆಗಳು ಗ್ರಾಹಕರ ಜೇಬು ಸುಡುತ್ತಿವೆ. ಹಾಗಾಗಿ ಸರ್ಕಾರ ಕೂಡಲೇ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಹೊರ ರಾಜ್ಯಗಳಿಂದ ತರಕಾರಿ ಆಮದು ಮಾಡಿಕೊಂಡು ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಗ್ರಾಹಕ ದೇವರಾಜ್ ಹಾಗೂ ಸುಮಿತ್ರಮ್ಮರ ಆಗ್ರಹವಾಗಿದೆ.