Chikkaballapura : ಕಮಲಕ್ಕೆ ಸುಧಾಕರ್, ದಳಕ್ಕೆ ಬಚ್ಚೇಗೌಡ, ಕೈಗೆ ಅಭ್ಯರ್ಥಿ ಯಾರು?
ಜಿಲ್ಲೆಯಲ್ಲಿ 2023 ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಕಾವು ನಿಧಾನಕ್ಕೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್‌ಗಾಗಿ ತೀವ್ರ ಲಾಭಿ ನಡೆಸುತ್ತಿರುವುದು ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಡಿ.08): ಜಿಲ್ಲೆಯಲ್ಲಿ 2023 ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಕಾವು ನಿಧಾನಕ್ಕೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್‌ಗಾಗಿ ತೀವ್ರ ಲಾಭಿ ನಡೆಸುತ್ತಿರುವುದು ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ದಶಕಗಳ ಕಾಲ ಮೀಸಲು ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ (Chikkaballapura) ವಿಧಾನಸಭಾ ಕ್ಷೇತ್ರ 2008 ರಲ್ಲಿ ಸಾಮಾನ್ಯ ಕ್ಷೇತ್ರವಾದ ಬಳಿಕ ಕ್ಷೇತ್ರದ ರಾಜಕಾರಣದ (politics) ದಿಕ್ಕು ದಿಸೆ ಬದಲಾಗಿದೆ. ಸದ್ಯ 2023 ರ ಚುನಾವಣೆಗೆ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ತಾಲೀಮು ಶುರುವಾಗಿದೆ. ಇದುವರೆಗೂ ಕಾಂಗ್ರೆಸ್, ಜೆಡಿಎಸ್ ನಡುವೆ ನಡೆಯುತ್ತಿದ್ದ ನೇರ ಹಣಾಹಣಿ ಇನ್ನು ಮುಂದೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಗೆ ಚಿಕ್ಕಬಳ್ಳಾಪುರ ಕ್ಷೇತ್ರ ಸಾಕ್ಷಿಯಾಗಲಿದೆ.
ಕಾಂಗ್ರೆಸ್ ಭದ್ರಕೋಟೆಗೆ ಲಗ್ಗೆಯಿಟ್ಟಬಿಜೆಪಿ
ರಾಜಕೀಯವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ದಶಕಗಳಿಂದಲೂ ಕಾಂಗ್ರೆಸ್‌ಗೆ ಭದ್ರಕೋಟೆಯಾಗಿತ್ತು. 15 ಚುನಾವಣೆಗಳಲ್ಲಿ 10ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ನಡೆದಿರುವ ಹೆಚ್ಚು ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮರೆದಿದೆ. ಆದರೆæ 2008ರಲ್ಲಿ ಜೆಡಿಎಸ್, 2019ರ ಉಪ ಚುನಾವಣೆಯಲ್ಲಿ ಬಿಜೆಪಿ ಒಮ್ಮೆ ಮಾತ್ರ ವಿಜಯದ ಪಾತಕೆ ಹಾರಿಸಿದೆ.
ಬಿಜೆಪಿಯಿಂದ ಡಾ.ಸುಧಾಕರ್ ಸ್ಪರ್ಧೆ
ಕಾಂಗ್ರೆಸ್ ಮೂಲಕ ರಾಜಕಾರಣ ಪ್ರವೇಶಿಸಿದ ಸುಧಾಕರ್, 2013, 2018 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸ ಗೆಲುವು ಸಾಧಿಸಿದ್ದರು. ಆದರೆ 2019ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಆ ಮೂಲಕ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸತತ 3ನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಕಮಲದ ಖಾತೆ ತೆರೆದ ಡಾ.ಸುಧಾಕರ್, ಕ್ಷೇತ್ರದ ರಾಜಕೀಯ ಚಿತ್ರವನ್ನು ಬದಲಿಸಿದ್ದಾರೆ. ಬಿಜೆಪಿಯಿಂದ 2023ಕ್ಕೆ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತವಾದರೂ ಪಕ್ಷದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ದಳಕ್ಕೆ ಕೆ.ಪಿ.ಬಚ್ಚೇಗೌಡ:
2013, 2018 ಸುಧಾಕರ್ ವಿರುದ್ದ ಸ್ಪರ್ಧಿಸಿ ಸೋತು 2019ರ ಉಪ ಚುನಾವಣೆಯಲ್ಲಿ ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ 2023ಕ್ಕೆ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಕ್ಷೇತ್ರಕ್ಕೆ ಪಂಚರತ್ನ ರಥಯಾತ್ರೆಗೆ ಆಗಮಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಚ್ಚೇಗೌಡ ಅಭ್ಯರ್ಥಿಯೆಂದು ಘೋಷಿಸಿದ್ದಾರೆ. ಆದರೆ 2019ರ ಉಪ ಚುನಾವಣೆಯಲ್ಲಿ ಬಚ್ಚೇಗೌಡ ಬದಲಾಗಿ ಸ್ಪರ್ಧಿಸಿದ್ದ ರಾಧಾಕೃಷ್ಣ ಸೋತ ನಂತರ ಕ್ಷೇತ್ರದ ಕಡೆಗೆ ತಲೆ ಹಾಕಿಲ್ಲ. ಹೀಗಾಗಿ ಬಚ್ಚೇಗೌಡರೇ ಕಣಕ್ಕೆ ಇಳಿಯಲಿದ್ದು ಕ್ಷೇತ್ರದಲ್ಲಿ ಸದ್ದಿಲ್ಲದೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕೈ ಟಿಕೆಟ್‌ಗೆ ಹೆಚ್ಚಿನ ಆಕಾಂಕ್ಷಿಗಳು:
2019 ರ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತ ನಂದಿ ಅಂಜಿನಪ್ಪ 2023ರ ಸ್ಪರ್ಧೆಗೆ ನಿರಾಕರಿಸಿದ್ದು ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯುಲುವಹಳ್ಳಿ ರಮೇಶ್, ಯುವ ಮುಖಂಡ ಕೆ.ಎನ್.ರಘು, ವಕೀಲ ನಾರಾಯಣಸ್ವಾಮಿ ಅರ್ಜಿ ಹಾಕಿದ್ದಾರೆ. ಆದರೆ ಸಚಿವ ಡಾ. ಸುಧಾಕರ್ ವಿರುದ್ದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಚಿಂತನೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾರು?
ಆ ಕಾರಣಕ್ಕಾಗಿ ಈ ಭಾಗದ ಬಲಿಜ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಬೆಂಗಳೂರಿನ ರಕ್ಷಾ ರಾಮಯ್ಯರನ್ನು ಕರೆ ತರಬೇಕೆಂಬ ಕರಸತ್ತು ನಡೆದಿದೆ. ಇನ್ನೂ ಜಾತಿಪ್ರಮಾಣ ಪತ್ರದ ಗೊಂದಲದಲ್ಲಿ ಮುಳಗಿರುವ ಮುಳಬಾಗಿಲಿನ ಮಾಜಿ ಶಾಸಕ ಕೊತ್ತನೂರು ಮಂಜುನಾಥ ಚಿಕ್ಕಬಳ್ಳಾಪುರ ಅಖಾಡಕ್ಕೆ ಇಳಿಯುತ್ತಾರೆಂದು ಪ್ರಬಲವಾಗಿ ಕೇಳಿ ಬರುತ್ತಿದೆ. ಆದರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೈ ವರಿಷ್ಠರಿಗೆ ತುಸು ತಲೆ ನೋವು ತರುವ ಸಾಧ್ಯತೆ ಇದೆ. ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ಒತ್ತಾಯ ಕೂಡ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.