ವಾವ್ಹ್..! ಲಾಕ್‍ಡೌನ್ ಮಧ್ಯೆಯೂ ಪರ್ಯಾಯ ಹಾದಿ ಕಂಡುಕೊಂಡು ಲಾಭ ಕಂಡ ರೈತ

ಕೊರೋನಾ ಲಾಕ್ ಡೌನ್​ನಿಂದಾಗಿ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಒಂದು ಕಡೆ ಮಾರುಕಟ್ಟೆಗೆ ಸಾಗಿಸಲಾಗದೇ ಕೈಕಟ್ಟಿ ಕುಳಿತ್ರೆ, ಮತ್ತೊಂದೆಡೆ ಮಾರುಕಟ್ಟೆಗೆ ಹೋದ್ರೆ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ. ಇದರ ನಡುವೆ ಓರ್ವ ರೈತ ಲಾಕ್‍ಡೌನ್ ಮಧ್ಯೆಯೂ ಪರ್ಯಾಯ ದಾರಿ ಮಾಡಿಕೊಂಡು ಹೊಲಕ್ಕೆ ಹಾಕಿದ ಪರಿಶ್ರಮಕ್ಕೆ ರೈತ ಫಲ ಪಡೆದುಕೊಂಡಿದ್ದಾನೆ. ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಪರದಾಡುತ್ತಿರುವ ರೈತರಿಗೆ ಇದೊಂದು ಮಾದರಿಯಾಗಿದೆ.

success-story-of Shivamogga District farmer During Corona Lock Down

ಶಿವಮೊಗ್ಗ, (ಏ.21): ಲಾಕ್‍ಡೌನ್ ಪರಿಸ್ಥಿತಿ ಮಧ್ಯೆ ದೃತಿಗೆಡದೆ ತಾನು ಬೆಳೆದ ತರಕಾರಿಗಳನ್ನು ನೇರವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿ ಶಿಕಾರಿಪುರ ತಾಲೂಕಿನ ಸಹಸ್ರವಳ್ಳಿ ಗ್ರಾಮದ ರೈತ ದುರ್ಗಪ್ಪ ಅಂಗಡಿಯವರು ಲಾಭ ಕಂಡುಕೊಂಡಿದ್ದಾರೆ.

ದುರ್ಗಪ್ಪ ಅಂಗಡಿಯವರು ಕಳೆದ ಕೆಲವು ವರ್ಷಗಳಿಂದ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಮಾರ್ಗದರ್ಶನದಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ತಮ್ಮ 2 ಎಕರೆ ಪ್ರದೇಶದಲ್ಲಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಕೃಷಿ ಹೊಂಡ, ಎರೆಹುಳುಗೊಬ್ಬರ ತಯಾರಿಕೆ ಘಟಕಗಳನ್ನು ಸ್ಪಾಪಿಸಿಕೊಂಡಿದ್ದಾರೆ. 

ಲಾಕ್‌ಡೌನ್‌: ಬೆವರು ಸುರಿಸಿ ಬೆಳೆದ ಬೆಳೆ ಕದ್ದು ಮಾರುವ ಸ್ಥಿತಿ, ನಿಲ್ಲದ ಅನ್ನದಾತನ ಸಂಕಷ್ಟ..!

ತೋಟಗಾರಿಕೆ ಬೆಳೆಗಳಾದ ಬಾಳೆ ಮತ್ತು ಅಡಿಕೆಯ ಬೆಳೆಗಳ ಮಧ್ಯೆ ಅಂತರ ಬೆಳೆಯಾಗಿ ತರಕಾರಿ ಬೆಳೆಗಳಾದ ತೊಂಡೆಕಾಯಿ, ನುಗ್ಗೆಕಾಯಿ, ಸೌತೆಕಾಯಿ, ಟೊಮ್ಯಾಟೋ, ಬದನೆಕಾಯಿ ಮತ್ತು ಬೀನ್ಸ್ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಆದರೆ ಲಾಕ್‍ಡೌನ್ ಅವಧಿಯಲ್ಲಿ ತಾನು ಬೆಳೆದ ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕಂಗಾಲಾದ ದುರ್ಗಪ್ಪನವರಿಗೆ ತರಕಾರಿ ಕೊಯ್ಲಿಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸ್ಥಳೀಯ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಲಾಯಿತು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಬಿ.ಸಿ.ಹನುಮಂತಸ್ವಾಮಿ ಅವರು ತಿಳಿಸಿದ್ದಾರೆ.

ಬಳಿಕ ದುರ್ಗಪ್ಪನವರು ಪರಿಚಯಸ್ತ ಹಾಗೂ ಆರೋಗ್ಯವಂತ ಇಬ್ಬರು ಕೃಷಿ ಕಾರ್ಮಿಕರನ್ನು ನೇಮಿಸಿಕೊಂಡು ತರಕಾರಿಗಳನ್ನು ಕೊಯ್ಲು ಮಾಡಿದ್ದಾರೆ. ಅಲ್ಲದೆ, ತಾವು ತರಕಾರಿಗಳನ್ನು ಸಾಗಿಸುವ ವಾಹನ, ಗೋಣಿಚೀಲ ಮತ್ತು ಉಪಯೋಗಿಸುವ ವಸ್ತುಗಳನ್ನು ಸೋಂಕು ನಿವಾರಕ ರಾಸಾಯನಿಕಗಳಿಂದ ಶುದ್ಧಗೊಳಿಸಿಕೊಂಡು ತರಕಾರಿಗಳನ್ನು ಸಂಗ್ರಹಣೆ ಮಾಡಿಕೊಂಡಿದ್ದಾರೆ. 

ಕೊರೋನಾ ಕಾಟಕ್ಕೆ ಸುಸ್ತಾದ ಅನ್ನದಾತ: ಇನ್ನೂ ಮುಗಿಯದ ರೈತರ ಗೋಳು!

ದೂರದ ಗ್ರಾಮಗಳಿಗೆ ಸಾಗಾಟಕ್ಕೆ ಅವಕಾಶ ಇಲ್ಲದೆ ಇದ್ದುದ್ದರಿಂದ ತಾವೇ ಖುದ್ದು ತರಕಾರಿಗಳನ್ನು ಸ್ಥಳೀಯವಾಗಿ ಮನೆ ಮನೆಗೆ ಹೋಗಿ ತರಕಾರಿಗಳನ್ನು ಮಾರಾಟ ಮಾಡಿದ್ದಾರೆ.

ನೇರ ಮಾರುಕಟ್ಟೆಯಿಂದ ರೈತ ಫುಲ್ ಖುಷ್
ನೇರ ಮಾರುಕಟ್ಟೆಯಿಂದ ಅವರ ಮುಖದಲ್ಲಿ ಮಂದಹಾಸ ಬೀರುವ ಹಾಗೆ ಮಾಡಿದೆ. ರೈತ ಉತ್ಪಾದಕರ ಸಂಘ ಹಾಗೂ ಹಾಪ್‍ಕಾಮ್ಸ್‍ಗಳ ಮುಖಾಂತರ ಜೊತೆಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡ ಇವರು ಹೇಳುವ ಪ್ರಕಾರ 20 ರೂ.ನಂತೆ 20 ಕ್ವಿಂಟಾಲ್ ತೊಂಡೆಕಾಯಿ, 25 ರೂ.ನಂತೆ 5 ಕ್ವಿಂಟಾಲ್ ನುಗ್ಗೆಕಾಯಿ, 20 ರೂ.ನಂತೆ 6 ಕ್ವಿಂಟಾಲ್ ಟೊಮ್ಯಾಟೊ, 30 ರೂ.ನಂತೆ 10 ಕ್ವಿಂಟಾಲ್ ಬೀನ್ಸ್ ಮಾರಾಟ ಮಾಡಿರುತ್ತಾರೆ. ಇದರಿಂದ ಒಟ್ಟು 54,500 ರೂಪಾಯಿ ನಿವ್ವಳ ಆದಾಯ ಬಂದಿದೆ.

ಲಾಕ್‍ಡೌನ್ ಮಧ್ಯೆಯೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ವ್ಯಾಪ್ತಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ ಪಡೆದು ಮಾರಾಟ ಮಾಡಲು ಸೂಕ್ತ ಮತ್ತು ಪರ್ಯಾಯ ದಾರಿಯ ಬಗ್ಗೆ ಚಿಂತಿಸದಿದ್ದರೆ ತರಕಾರಿಗಳು ಹೊಲದಲ್ಲಿ ಕೊಳೆತು ನಾರುತ್ತಿದ್ದವು. ಈಗ ತಾನು ಹಾಕಿದ ಬಂಡವಾಳವೂ ಬಂದಿದೆ. ನಾವು ಹೊಲಕ್ಕೆ ಹಾಕಿದ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಅವರು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios