ಬೆಂಗಳೂರು/ಕೋಲಾರ [ಡಿ.04] : ಬಿಎಸ್ಸಿ ಪದವಿ ಪಡೆಯಲು ನಗರದ ಖಾಸಗಿ ಕಾಲೇಜಿಗೆ ಸೇರಿದ ಬಳಿಕ ಮೂರ್ಛೆರೋಗಕ್ಕೆ ತುತ್ತಾಗಿ ಶಿಕ್ಷಣ ಮುಂದುವರಿಸಲಾಗದ ವಿದ್ಯಾರ್ಥಿನಿಗೆ ಶುಲ್ಕ ರೂಪದಲ್ಲಿ ಪಡೆದುಕೊಂಡಿದ್ದ ಮೊತ್ತ ಹಾಗೂ ಕಾನೂನು ಹೋರಾಟದ ವೆಚ್ಚ ನೀಡುವಂತೆ ನಗರದ ಗ್ರಾಹಕರ ಹಕ್ಕುಗಳ ನ್ಯಾಯಾಲಯ ಕಾಲೇಜು ಆಡಳಿತ ಮಂಡಳಿಗೆ ಆದೇಶಿಸಿದೆ.

ವಿದ್ಯಾರ್ಥಿನಿ ಪಾವತಿಸಿದ್ದ ಒಟ್ಟು 25 ಸಾವಿರ ರು. ಶುಲ್ಕದಲ್ಲಿ ಕಾಲೇಜು ನೋಂದಣಿ ಪ್ರಕ್ರಿಯೆಗೆ ಐದು ಸಾವಿರ ರು.ಪಡೆದು, ಇನ್ನುಳಿದ .20 ಸಾವಿರಗಳನ್ನು ಹಿಂದಿರುಗಿಸಬೇಕು ಮತ್ತು ಕಾನೂನು ಹೋರಾಟದ ವೆಚ್ಚವಾಗಿ ಐದು ಸಾವಿರ ರು.ಗಳನ್ನು ವಿದ್ಯಾರ್ಥಿನಿಗೆ ನೀಡಬೇಕು. ಈ ಆದೇಶವನ್ನು ಮುಂದಿನ ಆರು ವಾರಗಳಲ್ಲಿ ಪಾಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಕೋಲಾರ ಜಿಲ್ಲೆ ಮಾಲೂರು ನಿವಾಸಿ  2018-19ನೇ ಶೈಕ್ಷಣಿಕ ಸಾಲಿನಲ್ಲಿ ಬಿಎಸ್ಸಿ ಪದವಿ ವಿದ್ಯಾಭ್ಯಾಸಕ್ಕೆ ನಗರದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ಆಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಸೈನ್ಸ್‌ಗೆ ಸೇರಿದ್ದರು. ಕಾಲೇಜು ಆಡಳಿತ ಮಂಡಳಿ ಒತ್ತಾಯದ ಮೇರೆಗೆ 25 ಸಾವಿರ ರು.ಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಿದ್ದರು. ಈ ನಡುವೆ ಮೂರ್ಚೆರೋಗಕ್ಕೆ ತುತ್ತಾದ ರಂಜಿತಾ ಖಾಸಗಿ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆಯಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಮುಂದುವರೆಸಲು ಸಾಧ್ಯವಾಗದಂತಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನಾರೋಗ್ಯದ ಕಾರಣದಿಂದ ತಾನು ಶಿಕ್ಷಣ ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗಾಗಲೇ ಪಾವತಿ ಮಾಡಿದ್ದ ಶುಲ್ಕ ವಾಪಸ್‌ ಮಾಡಬೇಕು ಎಂದು ಕಾಲೇಜಿನ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಈ ಮನವಿಗೆ ಕಾಲೇಜು ಆಡಳಿತ ಮಂಡಳಿ ಸಕಾರಾತ್ಮಕ ಉತ್ತರ ನೀಡಿರಲಿಲ್ಲ. ಬಳಿಕ ತಮ್ಮ ವಕೀಲರ ಮೂಲಕ ಲೀಗಲ್‌ ನೋಟಿಸ್‌ ಕಳುಹಿಸಲಾಗಿತ್ತು. ಆದರೂ, ಕಾಲೇಜು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕಾಲೇಜು ಆಡಳಿತ ಮಂಡಳಿಯ ಈ ಕ್ರಮ ಪ್ರಶ್ನಿಸಿ ರಂಜಿತಾ, ಬೆಂಗಳೂರಿನ ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಕಾಲೇಜಿನ ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೂ, ಕಾಲೇಜು ಯಾವುದೇ ರೀತಿಯ ಆಕ್ಷೇಪಣೆ ಸಲ್ಲಿಸಿರಲಿಲ್ಲ.

ರಾಜಾರೋಷವಾಗಿ ಬಸ್ಸಲ್ಲೇ ಇದನ್ನು ಸಾಗಿಸ್ತಿದ್ದ ಮಹಿಳೆ ಅರೆಸ್ಟ್...

ದೂರುದಾರಳಾದ ರಂಜಿತಾ ಸಲ್ಲಿಸಿದ್ದ ದಾಖಲೆಗಳಾದ ಶುಲ್ಕ ಪಾವತಿ ರಸೀದಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ಅನಾರೋಗ್ಯದಿಂದ ಕೂಡಿರುವ ವಿದ್ಯಾರ್ಥಿನಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎಂಬ ಅಂಶ ಸಾಬೀತಾಗುತ್ತದೆ. ಆದ್ದರಿಂದ ವಿದ್ಯಾರ್ಥಿನಿ ಪಾವತಿಸಿರುವ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಆದೇಶಿಸಿತು.