ಶಿವಮೊಗ್ಗ(ಜೂ.19): ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂನ್‌ 25ರಿಂದ ಜುಲೈ 4ರವರೆಗೆ ಜಿಲ್ಲೆಯ 84 ಪರೀಕ್ಷಾ ಕೇಂದ್ರಗಳಲ್ಲಿ ಕೊರೋನಾ ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಂ.ರಮೇಶ್‌ ಹೇಳಿದರು.

ನಗರದಲ್ಲಿ ಪರೀಕ್ಷಾ ಪೂರ್ವಸಿದ್ಧತೆಗಳ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು ಕೈಗೊಂಡ ಕ್ರಮಗಳ ಕುರಿತು ಮಾಧ್ಯಮ ಪ್ರತಿನಿಧಿ​ಗಳಿಗೆ ಮಾಹಿತಿ ನೀಡಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 12,287 ವಿದ್ಯಾರ್ಥಿಗಳು ಹಾಗೂ 11,956 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 24,243 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪೈಕಿ ಭದ್ರಾವತಿ ತಾಲೂಕಿನ 4,607, ಹೊಸನಗರ ತಾಲೂಕಿನ 1,629, ಸಾಗರ ತಾಲೂಕಿನ 2,878, ಶಿಕಾರಿಪುರ ತಾಲೂಕಿನ 3,697, ಶಿವಮೊಗ್ಗ ತಾಲೂಕಿನ 7164., ಸೊರಬ ತಾಲೂಕಿನ 2578 ಹಾಗೂ ತೀರ್ಥಹಳ್ಳಿ ತಾಲೂಕಿನ 1,690 ವಿದ್ಯಾರ್ಥಿಗಳಿದ್ದಾರೆ ಎಂದರು.

ಪರೀಕ್ಷೆ ನಡೆಸಲು ಈ ಹಿಂದೆ 1,050 ಕೊಠಡಿಗಳನ್ನು ನಿಗ​ಪಡಿಸಲಾಗಿತ್ತು. ಆದರೆ ಪ್ರಸಕ್ತ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿಯಾಗಿ 202 ಕೊಠಡಿಗಳು ಸೇರಿದಂತೆ ಒಟ್ಟು 84 ಪರೀಕ್ಷಾ ಕೇಂದ್ರಗಳಲ್ಲಿ 1252 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಶೇಷ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೊಠಡಿಗೆ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 8 ಕಂಟೈನ್‌ಮೆಂಟ್‌ ಝೋನ್‌ಗಳಿಂದ ಪರೀಕ್ಷೆಗೆ ಹಾಜರಾಗುವ 250 ವಿದ್ಯಾರ್ಥಿಗಳಿಗಾಗಿ ವಿಶೇಷ ಕೊಠಡಿ ಸ್ಥಾಪಿಸಲಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಸಾಮಾನ್ಯ ಅಂತರಕ್ಕಿಂತ ಹೆಚ್ಚಿನ ಅಂತರದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೆ ಹಾಜರಿದ್ದು, ಆರೋಗ್ಯ ಇಲಾಖೆಯ ಸಿಬ್ಬಂ​ಗಳು ನಡೆಸುವ ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಬೇಕು. ಪ್ರತಿ ವಿದ್ಯಾರ್ಥಿಗೆ ಸ್ವಯಂ ಸೇವಾ ಸಂಸ್ಥೆಗಳು ನೀಡಿರುವ 2ಮಾಸ್ಕ್‌ ಹಾಗೂ ದೈನಂದಿನ ಬಳಕೆಗೆ ಸ್ಯಾನಿಟೈಜರ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಶಿವಮೊಗ್ಗ: ಅಪಘಾತಕ್ಕೊಳಗಾದ ವಿದ್ಯಾರ್ಥಿ ಪರೀಕ್ಷೆ ಬರೆದ

ಅಂತೆಯೇ ವಿದ್ಯಾರ್ಥಿಯು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಅವರಿರುವ ಸ್ಥಳದಿಂದಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಶಿವಮೊಗ್ಗ ಜಿಲ್ಲೆಯ 743ವಿದ್ಯಾರ್ಥಿಗಳು ಹೊರಜಿಲ್ಲೆಗಳಲ್ಲಿ ಹಾಗೂ ಹೊರಜಿಲ್ಲೆಯ 668 ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟಾರೆಯಾಗಿ ಯಾವುದೇ ವಿದ್ಯಾರ್ಥಿಯು ಪರೀಕ್ಷೆ ಅವಕಾಶದಿಂದ ವಂಚಿತರಾಗದಂತೆ ಗಮನಹರಿಸಲಾಗಿದೆ ಎಂದು ತಿಳಿಸಿದರು.

ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಮತ್ತಿತರು ನಿರ್ವಹಿಸುತ್ತಿರುವ ಹಾಸ್ಟೆಲ್‌ನಲ್ಲಿದ್ದು ಪರೀಕ್ಷೆ ಬರೆಯಲಿರುವ 586 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಅವ​ಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಬಯಸಿದಲ್ಲಿ ಅವರಿಗೂ ತಂಗುವ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಪ್ರತಿ ಹಾಸ್ಟೆಲ್‌ಗೆ ಓರ್ವ ಅ​ಕಾರಿಯನ್ನು ಮೇಲ್ವಿಚಾರಕರನ್ನಾಗಿ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂ​ದಿ ಒಬ್ಬರನ್ನು ನೋಡಲ್‌ ಅ​ಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಸುಮಾರು 3745 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕಾಲ್ನಡಿಗೆಯಲ್ಲಿ, 10,940 ಮಕ್ಕಳು ತಮ್ಮ ಪೋಷಕರ ನೆರವಿನೊಂದಿಗೆ, 548ಮಕ್ಕಳು ಶಾಲಾ ವಾಹನದಲ್ಲಿ, 752 ಮಕ್ಕಳು ರೂಟ್‌ ಬಸ್‌ನಲ್ಲಿ ಹಾಗೂ 586 ಮಕ್ಕಳ ಹಾಸ್ಟೆಲ್‌ನಲ್ಲಿದ್ದು ಪರೀಕ್ಷಾ ಕೇಂದ್ರಕ್ಕೆ ಬರಲಿದ್ದಾರೆ. ಯಾವುದೇ ಸೌಲಭ್ಯವಿಲ್ಲದಿರುವ 4,097 ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಸುರಕ್ಷಿತವಾಗಿ ಮನೆಗೆ ತಲುಪಿಸಲು 189 ಶಾಲೆಗಳ 252 ಖಾಸಗಿ ಶಾಲಾ ವಾಹನಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ 104 ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅವುಗಳಲ್ಲಿ 5 ಬಸ್‌ಗಳನ್ನು ತುರ್ತು ಸಂದರ್ಭಗಳಿಗಾಗಿ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.