ಶ್ರೀ ರಂಗಪಟ್ಟಣ : ಅವಸಾನದ ಅಂಚಿಗೆ ಐತಿಹಾಸಿಕ ಕೋಟೆ

ಶ್ರೀರಂಗಪಟ್ಟಣದಲ್ಲಿ ದೇಗುಲ, ಕೋಟೆ, ಸ್ಮಾರಕಗಳು ಸೂಕ್ತವಾದ ಸಂರಕ್ಷಣೆ ಇಲ್ಲದೇ ಅನಾಥವಾಗಿದೆ. ಸರಿಯಾದ ಕ್ರಮದಲ್ಲಿ ಸಂರಕ್ಷಣೆ ಮಾಡದೇ ಇರುವುದರಿಂದ ಪಾರಂಪರಿಕ ಕೋಟೆ ಕೊತ್ತಲಗಳು ಕಣ್ಮರೆಯಾಗುತ್ತಿವೆ.

Srirangapatna Sendhil Fort on The Verge of  Vanishing

ಶ್ರೀ ರಂಗಪಟ್ಟಣ :  ಅವಸಾನದ ಅಂಚಿಗೆ ಐತಿಹಾಸಿಕ ಕೋಟೆ


ಎಲ್.ವಿ. ನವೀನ್‌ಕುಮಾರ್‌

ಶ್ರೀರಂಗಪಟ್ಟಣ [ಸೆ.20]:  ಐತಿಹಾಸಿಕ ಪಾರಂಪರಿಕ ಪಟ್ಟಣ ಎಂಬ ಖ್ಯಾತಿ ಒಳಗಾಗಿರುವ ದೇವಾಲಯಗಳ ಬೀಡು ಶ್ರೀರಂಗಪಟ್ಟಣದಲ್ಲಿ ದೇಗುಲ, ಕೋಟೆ, ಸ್ಮಾರಕಗಳು ಸೂಕ್ತವಾದ ಸಂರಕ್ಷಣೆ ಇಲ್ಲದೇ ಅನಾಥವಾಗಿದೆ. ಸರಿಯಾದ ಕ್ರಮದಲ್ಲಿ ಸಂರಕ್ಷಣೆ ಮಾಡದೇ ಇರುವುದರಿಂದ ಪಾರಂಪರಿಕ ಕೋಟೆ ಕೊತ್ತಲಗಳು ಕಣ್ಮರೆಯಾಗುತ್ತಿವೆ.  ಪಟ್ಟಣದ ಹೆಮ್ಮೆಯಾದ ಸೆಂದಿಲ್ ಕೋಟೆ ಕೂಡಾ ನಾಮಾವಶೇಷವಾಗುವ ಹಂತದಲ್ಲಿದೆ.

ಶ್ರೀರಂಗಪಟ್ಟಣ ಐತಿಹಾಸ ಸ್ಮಾರಕಗಳನ್ನು ನೋಡುವ ದೇಶ, ವಿದೇಶಿ ಪ್ರವಾಸಿಗರಿಗೆ ಇನ್ನು ಮುಂದೆ ಭಾರೀ ನಿರಾಸೆ ಕಾದಿದೆ. ಐತಿಹಾಸ ಸ್ಮಾರಕಗಳ ಸಂರಕ್ಷಣೆಗಾಗಿ ಇರುವ ಇಲಾಖೆ ಮತ್ತು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿದೆ? ಯಾವ ಹಂತದಲ್ಲಿದೆ ಎನ್ನುವುದಕ್ಕೆ ಸಾಕಷ್ಟುಉದಾಹರಣೆಯನ್ನು ನೀಡಬಹುದು.

ಅಧಿಕಾರಿಗಳು ಶ್ರೀರಂಗಪಟ್ಟಣ ಅಭಿವೃದ್ಧಿ ಅದಕ್ಕಾಗಿ ಹತ್ತಾರು ಯೋಜನೆಗಳು, ನೀಲನಕ್ಷೆಗಳು ಸಿದ್ಧ ಮಾಡುತ್ತಾರೆ. ಆದರೆ ಪಾರಂಪರಿಕ ಕಟ್ಟಡಗಳು, ಕೋಟೆಗಳನ್ನು ಸಂರಕ್ಷಣೆ ಮಾಡಬೇಕಾಗಿರುವ ಅನಿವಾರ್ಯತೆ ಯಾರಿಗೂ ಅರ್ಥವಾಗುತ್ತಿಲ್ಲ. ಶ್ರೀರಂಗಪಟ್ಟಣ ಈಗಿನ ವೈಭವ ನೋಡಲು ಯಾವ ಪ್ರವಾಸಿಗರೂೂ ಬರುವುದಿಲ್ಲ. ಗತ ಕಾಲದ ವೈಭವ ಶ್ರೀರಂಗಪಟ್ಟಣಕ್ಕೆ ಮೆರಗು ತಂದಿದೆ. ಅದಕ್ಕಾಗಿ ದೇಶ, ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸೂಕ್ತ ಸಂರಕ್ಷಣೆ ಮಾಡದೇ ಹೋದರೆ ಪ್ರವಾಸಿಗರು ಬರುವುದನ್ನೇ ನಿಲ್ಲಿಸುತ್ತಾರೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕಾಗಿರುವ ಜೊತೆ ಪಾರಂಪರಿಕ ಕಟ್ಟಡ ಕೋಟೆಗಳನ್ನು ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕು. ಆ ಕೆಲಸ ಈಗ ಆಗುತ್ತಿಲ್ಲ.

2 ವರ್ಷಗಳ ಹಿಂದೆ ಕುಸಿದಿತ್ತು, ಇಂದಿಗೂ ಹಾಗೇ ಇದೆ

* ಪಟ್ಟಣದ ತಾಲೂಕು ಕಚೇರಿ ಪಕ್ಕದಲ್ಲೇ ಸೆಂದಿಲ್ ಕೋಟೆ ಇದೆ. ಈ ಕೋಟೆಯ ಮೇಲ್ಬಾಗದಲ್ಲಿ ಗಿಡ, ಗಂಟಿಗಳು ಬೆಳೆದು ನಿಂತು ಕೆಲವು ವರ್ಷಗಳು ಗತಿಸಿವೆ. ಆಳಕ್ಕೆ ಬೇರು ಬಿಟ್ಟಿದೆ. ಆ ಕೋಟೆ ಕುಸಿಯುವ ಹಂತಕ್ಕೂ ಬಂದಿದೆ. ಪುರಾತನ ಕೋಟೆ ನಾಮಾವಶೇಷವಾಗುವ ಸ್ಥಿತಿ ತಲುಪಿದೆ.

*ಟಿಪ್ಪು ಕಾಲದಲ್ಲಿ ನಿರ್ಮಾಣವಾದ ಸೆಂದಿಲ್‌ ಕೋಟೆಯನ್ನು ಬಳಸಿಕೊಂಡು ಟಿಪ್ಪು ಸಾಂಬಾರ ಪ್ರದಾರ್ಥಗಳು ಮತ್ತು ಶ್ರೀಗಂಧವನ್ನು ಬೇರೆ ದೇಶಗಳಿಗೆ ರಪ್ತು ಮಾಡುತ್ತಿದ್ದ. 300 ವರ್ಷಕ್ಕೂ ಹಳೆಯದಾದ ಕೋಟೆ ಇದು. ಶ್ರೀಗಂಧ ಹಾಗೂ ಸಾಂಬಾರ ಪದಾರ್ಥಗಳನ್ನ ಸಂಗ್ರಹಿಸಿ ಇಡುವ ಉದ್ದೇಶಕ್ಕಾಗಿ ಈ ಕೋಟೆಯನ್ನು ನಿರ್ಮಾಣ ಮಾಡಿದ್ದ.

*ರಂಗನಾಥಸ್ವಾಮಿ ದೇವಾಲಯಕ್ಕೆ ಕೂಗಳತೆ ದೂರದಲ್ಲಿರುವಂತಹ ಈ ಸೆಂದಿಲ್ ಕೋಟೆ ಸಂಪೂರ್ಣ ಕಡೆಗಣನೆಗೆ ಒಳಗಾಗಿದೆ.

*ಈ ಕೋಟೆಯು ಸುಮಾರು 250 ಅಡಿ ಉದ್ದ, ಅಷ್ಟೇ ಅಗಲದ ವಿಸ್ತೀರ್ಣವನ್ನು ಹೊಂದಿದೆ. ಕಲ್ಲಿನಿಂದ ನಿರ್ಮಿಸಲಾಗಿದೆ. ಎರಡು ದ್ವಾರಗಳು ಎರಡು ಆನೆಗಳು ಏಕಕಾಲದಲ್ಲಿ ಹೋಗಿ ಬರುವಷ್ಟುದೊಡ್ಡದಾಗಿದೆ. ಇಂತಹ ವಿಶೇಷವಾದ ಕೋಟೆ ಕಳೆದ 2 ವರ್ಷಗಳ ಹಿಂದೆ ಬಿದ್ದ ಬಾರಿ ಮಳೆಗೆ ಭಾಗಶಃ ಕುಸಿದು ಹೋಗಿದೆ.

*ಪ್ರಾಚ್ಯವಸ್ತು ಇಲಾಖೆ ಇದೂವರೆಗೂ ದುರಸ್ತಿ ಮಾಡಿಲ್ಲ. ಈ ಅವಶೇಷದ ತುಂಬಾ ಮುಳ್ಳು ಗಂಟಿಗಳು, ಬಳ್ಳಿಗಳು ಹಬ್ಬಿಕೊಂಡಿದ್ದು ಹಾವು, ಹಲ್ಲಿಗಳ ವಾಸಸ್ಥಾನವಾಗಿದೆ. ಕೋಟೆಗಳ ಒಳಗೆ ಪಾರ್ಥೇನಿಯಂ ಮತ್ತಿತರೆ ಗಿಡಗಳು ಆಳೆತ್ತರದಲ್ಲಿ ಬೆಳೆದುನಿಂತವೆ. ನಾಯಿ, ಹಂದಿಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.

*ಸೆಂದಿಲ್ ಕೋಟೆ ಆವರಣ ದಶಕಗಳಿಂದ ಕುಸ್ತಿ ಪಂದ್ಯದ ತಾಣವಾಗಿ ಪ್ರಸಿದ್ಧವಾಗಿದೆ. ದಸರಾ ಹಾಗೂ ರಥಸಪ್ತಮಿ ಸಂದರ್ಭದಲ್ಲಿ ಎರಡು ಬಾರಿ ರಾಜ್ಯಮಟ್ಟದ ಕುಸ್ತಿ ಪಂದ್ಯಗಳು ನಡೆಯುತ್ತಾ ಬಂದಿವೆ. ರಾಜ್ಯ, ಹೊರರಾಜ್ಯದ ಕುಸ್ತಿ ಪಟುಗಳು ಇಲ್ಲಿ ಬಂದು ಕಾದಾಡುತ್ತಾರೆ. ಇಂತಹ ಪ್ರಮುಖವಾದ ಸ್ಥಳ ನಿರ್ಲಕ್ಷಕ್ಕೆ ಒಳಗಾಗಿದೆ.

*ಈ ಸೆಂದಿಲ್ ಕೋಟೆಯನ್ನು ದುರಸ್ತಿ ಮಾಡಿ ಮಾರ್ಗದರ್ಶಿ ಫಲಕವನ್ನು ಹಾಕಿ ಸ್ಥಳಿಯರು ಹಾಗೂ ಪ್ರವಾಸಿಗರಿಗೆ ಸೆಂದಿಲ್ ಕೋಟೆಯ ಮಹತ್ವದ ಬಗ್ಗೆ ಮಾಹಿತಿ ನೀಡಬೇಕು. ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

*ಸರ್ಕಾರ 3-4 ದಿನ ನಡೆಯುವ ದಸರಾ ಆಚರಣೆಗೆ ಕೋಟಿ ಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದರೆ ಪುರಾತನ ಕೋಟೆ ಕುಸಿದು 2ವರ್ಷಗಳೇ ಕಳೆದರೂ ಇತ್ತ ಗಮನ ಹರಿಸಿಲ್ಲ. ದುರಸ್ತಿ ಮಾಡುವ ಸೌಜನ್ಯವನ್ನೂ ತೋರಿಲ್ಲ.

ಕೋಟೆಯ ಬಗ್ಗೆ..

1450 ರಲ್ಲಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ನಾಗಮಂಗಲ ತಿಮ್ಮಣ್ಣ ನಾಯಕ ಕೋಟೆ ಕಟ್ಟುವ ಕೆಲಸ ಆರಂಭಿಸಿದರು ಎಂದು ಇತಿಹಾಸ ಹೇಳುತ್ತದೆ. ಬಳಿಕ ವಿಜಯನಗರ ಅರಸರು, ಯದುವಂಶದ ಅರಸರು, ಹೈದರಾಲಿ. ಟಿಪ್ಪು ಸುಲ್ತಾನ್‌ ಆಡಳಿತ ಅವಧಿ ಅಂತ್ಯದವರೆಗೂ ಕೋಟೆಯನ್ನು ಹಂತ, ಹಂತವಾಗಿ ಅಭಿವೃದ್ಧಿ ಪಡಿಸಾಯಿತು. ಶ್ರೀರಂಗಪಟ್ಟಣ ಸುತ್ತ ಮೂರು ಸುತ್ತು ಕೋಟೆ ನಿರ್ಮಾಣ ಮಾಡಲಾಗಿತ್ತು. ಕೋಟೆ ಸುತ್ತಲೂ ಕಂದಕಗಳನ್ನು ನಿರ್ಮಾಣ ಮಾಡಿ ಕಾವೇರಿ ನದಿ ನೀರು ಕಂದಕದಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಶತ್ರು ಸೈನಿಕರು ಕೋಟೆಯೊಳಗೆ ಪ್ರವೇಶ ಮಾಡದಂತೆ ಈ ವ್ಯವಸ್ಥೆ ಮಾಡಲಾಗಿತ್ತು.ಮೈಸೂರು ಗೇಟ್‌, ಬೆಂಗಳೂರು ಗೇಚ್‌, ದಿಲ್ಲಿಗೇಟ್‌ ಹೆಸರಿನಲ್ಲಿ ಗೇಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಆನೆಯ ಮೇಲೆ ರಾಜ ಮಹಾರಾಜರು ಪುರ ಪ್ರವೇಶ ಮಾಡುತ್ತಿದ್ದರು. ಇಂತಹ ಪುರಾತನ ಕೋಟೆ ಕೊತ್ತಲುಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕು ಇದು ಸ್ಥಳೀಯರ ಆಗ್ರಹ.

Latest Videos
Follow Us:
Download App:
  • android
  • ios