ಹುಬ್ಬಳ್ಳಿ[ಫೆ. 22]: ಇಲ್ಲಿನ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಜಾತ್ರಾ ಮಹೋತ್ಸವ ಇಂದು (ಫೆ. 22) ಅದ್ಧೂರಿಯಿಂದ ನೆರವೇರಲಿದೆ. ಮಠಕ್ಕೆ ಈಗಾಗಲೇ ಕರ್ನಾಟಕ ಸೇರಿದಂತೆ ಐದಾರು ರಾಜ್ಯಗಳಿಂದ ಹರಿದು ಬಂದ ಭಕ್ತಸಾಗರದಿಂದ ತುಂಬಿ ತುಳುಕುತ್ತಿದೆ. ಊಟ, ಫಲಾಹಾರ ನೀಡಲು ಹತ್ತಾರು ಸಂಘಟನೆಗಳು ಮುಂದಾಗಿವೆ.

ಜಾತ್ರಾ ಹಿನ್ನೆಲೆಯಲ್ಲಿ ಕಳೆದ ಫೆ. 16ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶುಕ್ರವಾರ ಮಧ್ಯಾಹ್ನ ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಮಹಾಸ್ವಾಮೀಜಿ, ಹೊಸದುರ್ಗ ಬ್ರಹವಿದ್ಯಾನಗರದ ಪುರುಷೋತ್ತಮಾನಂದ ಪುರಿ ಶ್ರೀ, ಬಾಗಲಕೋಟೆ ರಾಮರೂಢಮಠದ ಪರಮರಾಮಾರೂಢ ಸ್ವಾಮೀಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಸ್ವಾಮೀಜಿ ಹಾಗೂ ಕನಕಪೀಠದ ಶಿವಾನಂದ ಮಹಾಸ್ವಾಮೀಜಿಗಳು ತತ್ವೋಪದೇಶಗಳನ್ನು ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಧ್ಯಾಹ್ನ 1ಗಂಟೆಗೆ ಶ್ರೀಮಠದಿಂದ ಹೊರಟ ಸಿದ್ಧಾರೂಢರು ಹಾಗೂ ಗುರುನಾಥಾರೂಢರ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಇದರ ಜತೆ ನೂರಾರು ಭಕ್ತರು ನಗರದ ಹಳೇ ಹುಬ್ಬಳ್ಳಿ ಪ್ರದೇಶ, ಮೇದಾರ ರಸ್ತೆ ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್‌ ರೋಡ್‌, ಚೆನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಗಣೇಶ ಪೇಟ ಮೂಲಕ ಜೆಡಿಮಠ ತಲುಪಿ, ದಿವಟೇಯವರ ಮನೆಯಲ್ಲಿ ವಿಶೇಷ ಪೂಜೆ ನಡೆಸಿಕೊಂಡು ಸಂಜೆ ವಾಪಸ್ಸಾಯಿತು. ಶನಿವಾರ ಬೆಳಗ್ಗೆ ಪುನಃ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಪಾದಯಾತ್ರೆ:

ಇನ್ನು ಅಜ್ಜನ ಜಾತ್ರೆಗಾಗಿ ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿಯಿಂದ ಜನತೆ ಪಾದಯಾತ್ರೆ ಮೂಲಕ ಆಗಮಿಸುತ್ತಲೇ ಇದ್ದಾರೆ. ಮಹಾಲಿಂಗಪುರ, ಕಲ್ಲೊಳ್ಳಿ, ಆಳಂದ, ಜೋಡಕುರಡಿ, ಅಥಣಿ, ಚಿಕ್ಕನಂದಿ, ಕರಗುಟಿ ಗ್ರಾಮಗಳಿಂದ ಜನತೆ ಟ್ರ್ಯಾಕ್ಟರ್‌, ಟಂಟಂ ವಾಹನಗಳಲ್ಲಿ ಭಕ್ತರು ಮಠದೆಡೆ ಬಂದಿದ್ದಾರೆ. ಇದಲ್ಲದೆ, ಕರ್ನಾಟಕ ಸೇರಿದಂತೆ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದಾರೆ.

ಅನ್ನಪ್ರಸಾದ ವಿತರಣೆ

ಇದೇ ಮೊದಲ ಬಾರಿಗೆ ಶ್ರೀಮಠದಿಂದ ಎರಡು ದಿನಗಳ ಬೆಳಗ್ಗೆ 12ಗಂಟೆಗಳ ನಿರಂತರ ಫಲಾಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಮಠದ ವತಿಯಿಂದ 10 ಕ್ವಿಂಟಲ್‌ ಅವಲಕ್ಕಿ, 4 ಕ್ವಿಂಟಲ್‌ ಬುಂದೆ ವಿತರಿಸಲಾಗಿದೆ. ಇನ್ನು, 20ಕ್ವಿಂಟಲ್‌ ಅಕ್ಕಿಯಿಂದ ಅನ್ನ, 4 ಕೊಳಗ ಸಾಂಬಾರ್‌, 6 ಕ್ವಿಂಟಲ್‌ ಪಾಯಸ ಹಾಗೂ 3 ಕ್ವಿಂಟಲ್‌ ಬದನೆಕಾಯಿ ಪಲ್ಯವನ್ನು ಮಧ್ಯಾಹ್ನ ಪೂರೈಸಲಾಗಿದೆ.

ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ 15ಕ್ವಿಂಟಲ್‌ ಪಲಾವ್‌, 3 ಕ್ವಿಂಟಲ್‌ ಶಿರಾ ವಿತರಣೆ ಮಾಡಲಾಗುವುದು. ಇನ್ನು ಮಧ್ಯಾಹ್ನ 40ಕ್ವಿಂಟಲ್‌ ಅಕ್ಕಿಯಿಂದ ಅನ್ನ, 8 ಸಾವಿರ ಲೀ. ಸಾಂಬಾರ್‌, 5 ಕ್ವಿಂಟಲ್‌ ಬದನೆಕಾಯಿ ಪಲ್ಯವನ್ನು ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಎಂದು ಅಡುಗೆ ವಿಭಾಗದ ನೇತೃತ್ವ ವಹಿಸಿರುವ ಸದಾನಂದ ತಿಳಿಸಿದರು.ಇನ್ನು ಅಡುಗೆಗಾಗಿ ನೂರಾರು ಬಾಣಸಿಗರು ಸೇವೆ ಸಲ್ಲಿಸುತ್ತಿದ್ದಾರೆ. ಮುರ್ಕಿಬಾವಿ, ನಾಗನೂರು ಸೇರಿದಂತೆ ನಾಲ್ಕೈದು ಗ್ರಾಮಗಳಿಂದ ಭಕ್ತರು ಬಂದಿದ್ದಾರೆ. ಅಲ್ಲದೇ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸೇವಾ ಸಮಿತಿ, ಅಜ್ಜ ಆರೂಢ ಸ್ನೇಹಿತರ ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಅನ್ನಸಂತರ್ಪಣೆ ನಡೆಸಲಿವೆ.

ಬಿಗಿ ಭದ್ರತೆ: 

ಬೆಳಗ್ಗೆ ಮಠದಿಂದ ಪಲ್ಲಕ್ಕಿ ಹೊರಟು ನಗರದ ವಿವಿಧೆಡೆ ಮೆರವಣಿಗೆ ನಡೆಸಲಿದೆ. ಬಳಿಕ ಸಂಜೆ 5.30ಕ್ಕೆ ಮಠಕ್ಕೆ ಪಲ್ಲಕ್ಕಿ ವಾಪಸ್ಸಾದ ಬಳಿಕ ರಥೋತ್ಸವ ಆರಂಭವಾಗಲಿದೆ. ಸಿದ್ಧಾರೂಢ ಮಠದಿಂದ ಮಹಾದ್ವಾರದವರೆಗೆ ರಥೋತ್ಸವ ಜರುಗಲಿದೆ. ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರೆಟ್‌ ಅಗತ್ಯ ಭದ್ರತೆ ಕೈಗೊಂಡಿದೆ. ಜಾತ್ರೆಗಾಗಿ 800 ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್‌ ಕಮೀಟಿ ಚೇರಮನ್‌ ಚೇರಮನ್‌ ಅವರು, ಭಕ್ತ ಸಾಗರ ಸೇರುವ ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ. ಮುಂದಿನ ವರ್ಷ ಇಲ್ಲಿ ನೂರು ಶೌಚಾಲಯ, ಸ್ನಾನಗೃಹಗಳು ತಲೆ ಎತ್ತಲಿದೆ ಎಂದು ತಿಳಿಸಿದ್ದಾರೆ.