ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಡತ ವಿಲೇವಾರಿಗೆ ಡಿಜಿಫೈಲ್ ತಂತ್ರಾಂಶ ಅಳವಡಿಕೆ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿನ ಕಂದಾಯ ವಿಭಾಗದ ಕಡತ ವಿಲೇವಾರಿಗೆ ಡಿಜಿಫೈಲ್ ಎಂಬ ತಂತ್ರಾಂಶ ಅಳವಡಿಕೆಯಾಗಿದ್ದು, ತಿಂಗಳಿಗೆ ತಲಾ 1 ಸಾವಿರದಂತೆ ಕಳೆದ ಐದು ತಿಂಗಳಲ್ಲಿ ಐದು ಸಾವಿರ ಕಡತ ವಿಲೇವಾರಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕನ್ನಡಪ್ರಭ ವಿಶೇಷ ವರದಿ
ಶಿವಮೊಗ್ಗ(ಜೂ.06): ಮಹಾ ನಗರಪಾಲಿಕೆಯಾಗಿ ಉನ್ನತೀಕರಣದ ಬಳಿಕವೂ ಕೆಲಸ ಕಾರ್ಯಗಳ ವಿಚಾರದಲ್ಲಿ ಪಾಲಿಕೆ ಎಂದರೆ ಜನರ ಪಾಲಿಗೆ ಇನ್ನೂ ಮುನ್ಸಿಪಾಲಿಟಿ ಎಂಬ ಬೇರೆಯೇ ಅರ್ಥ ಎದುರಾಗುತ್ತದೆ. ಯಾವುದೇ ಕೆಲಸಕ್ಕೂ ತಿಂಗಳಗಟ್ಟಲೆ ಅಲೆಯಬೇಕು ಮತ್ತು ಹಣ ಚೆಲ್ಲಬೇಕು ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಇದನ್ನೆಲ್ಲಾ ಬದಲಾವಣೆ ಮಾಡುವ ಒಂದು ಹಂತದ ಕಾರ್ಯ ಇದೀಗ ಪಾಲಿಕೆಯಲ್ಲಿ ಆರಂಭವಾಗಿದೆ. ನಗರಪಾಲಿಕೆಯಲ್ಲಿನ ಕಂದಾಯ ವಿಭಾಗದ ಕಡತ ವಿಲೇವಾರಿಗೆ ಡಿಜಿಫೈಲ್ ಎಂಬ ತಂತ್ರಾಂಶ ಅಳವಡಿಕೆಯಾಗಿದ್ದು, ತಿಂಗಳಿಗೆ ತಲಾ 1 ಸಾವಿರದಂತೆ ಕಳೆದ ಐದು ತಿಂಗಳಲ್ಲಿ ಐದು ಸಾವಿರ ಕಡತ ವಿಲೇವಾರಿಯಾಗಿದೆ.
ಈವರೆಗೆ ಪಾಲಿಕೆಯಲ್ಲಿದ್ದ ತಂತ್ರಾಂಶಕ್ಕಿಂತ ಭಿನ್ನ ಹಾಗೂ ಸುಲಭವಾಗಿ ನಿರ್ವಹಿಸಬಹುದಾದ ಈ ತಂತ್ರಾಂಶದಿಂದ ಪಾಲಿಕೆ ಸಿಬ್ಬಂದಿ, ಉನ್ನತಾಧಿಕಾರಿಗಳು ಮತ್ತು ಸಾರ್ವಜನಿಕರು ಎಲ್ಲರಿಗೂ ಲಾಭವಾಗಲಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಒಮ್ಮೆ ಪೂರ್ಣ ದಾಖಲೆ ನೀಡಿ ಬಂದರೆ ಮತ್ತೆ ಕಚೇರಿಗೆ ಅಲೆಯಬೇಕಾದ ಅಗತ್ಯವಿಲ್ಲ.
ಏನಿದು ಡಿಜಿಪೈಲ್:
ಕಂದಾಯ ವಿಭಾಗದಲ್ಲಿನ ಕಾರ್ಯವೈಖರಿ ಬಗ್ಗೆ ವ್ಯಾಪಕ ಟೀಕೆ ಕೇಳಿ ಬರುತ್ತಲಿತ್ತು. ಈ ಹಿನ್ನೆಲೆಯಲ್ಲಿ ಇದರ ಸುಧಾರಣೆಗಾಗಿ ಡಿಸೆಂಬರ್ ತಿಂಗಳಲ್ಲಿ ನೂತನ ಸಾಫ್ಟ್‌ವೇರ್ ಒಂದನ್ನು ಅಳವಡಿಸಿಕೊಳ್ಳಲು ಪಾಲಿಕೆ ಮುಂದಾಗಿತ್ತು. ಕಂದಾಯ ವಿಭಾಗದ ಎಲ್ಲ ಕಾರ್ಯಗಳನ್ನು ಇದೊಂದೇ ಸಾಫ್ಟ್‌ವೇರ್‌ನಿಂದ ಮಾಡಬಹುದಾಗಿದೆ. ಇದು ಸುಲಭ ಮತ್ತು ಜನಸ್ನೇಹಿ ಸಾಫ್ಟ್‌ವೇರ್ ಆಗಿದ್ದರಿಂದ ಜನರಿಗೆ ಲಾಭವಾಗಬಹುದೆಂದು ನಿರೀಕ್ಷಿಸಲಾಗಿತ್ತು.
ಕನಿಷ್ಟ ಬೆಂಬಲ ಬೆಲೆ ನಿಗದಿಗೆ ರೈತಸಂಘ ಆಗ್ರಹ
ಜೊತೆಗೆ ಸಿಬ್ಬಂದಿಗಳ ಕೆಲಸ ಕೂಡ ಇದರಿಂದ ಕಡಿಮೆಯಾಗುತ್ತಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದು, ಕಳೆದ ಐದು ತಿಂಗಳಲ್ಲಿ ಐದು ಸಾವಿರ ಕಡತಗಳನ್ನು ಈ ಮೂಲಕ ವಿಲೇವಾರಿ ಮಾಡಲಾಗಿದೆ. ಈ ತಂತ್ರಾಂಶದಲ್ಲಿ ಕಡತಗಳ ವಿಲೇವಾರಿ ನಡೆಯುತ್ತಿದ್ದರೆ, ಅದರ ಸಂಪೂರ್ಣ ಮಾಹಿತಿ ಮೇಲಧಿಕಾರಿಯ ಜೊತೆಗೆ ಸಾರ್ವಜನಿಕರಿಗೂ ಲಭ್ಯವಾಗುತ್ತದೆ. ಇದರಿಂದಾಗಿ ಪದೇ ಪದೇ ಕಚೇರಿಗೆ ಅಲೆಯಬೇಕಾಗಿಲ್ಲ.
ಮೊದಲಿದ್ದ ತಂತ್ರಾಂಶ ಮತ್ತು ನ್ಯೂನತೆಗಳು:
ಇದಕ್ಕೆ ಮೊದಲು ಕಂದಾಯ ವಿಭಾಗದಲ್ಲಿ ಎಲ್ಲ ಖಾತೆಗಳ ಕೆಲಸ ಕಾರ್ಯಗಳಿಗೆ ಪಿಎಲ್‌ಓ ಎಂಬ ತಂತ್ರಾಂಶ ಬಳಕೆಯಾಗುತ್ತಿತ್ತು. ಇದರಲ್ಲಿ ಕಡತ ವಿಲೇವಾರಿಗೆ ಕಾಲಮಿತಿ ಇರಲಿಲ್ಲ. ಕಡತಗಳಿಗೆ ಸೀನಿಯಾರಿಟಿ ಇರಲಿಲ್ಲ. ಅರ್ಜಿದಾರರಿಗೆ ಕಡತಗಳ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಗುತ್ತಿರಲಿಲ್ಲ. ಕಡತ ಅನುಮೋದನೆಯಾದ ಬಗ್ಗೆ ಮತ್ತು ಆಸ್ತಿ ವರ್ಗಾವಣೆ ಶುಲ್ಕದ ಕುರಿತು ಅರ್ಜಿದಾರರಿಗೆ ತಕ್ಷಣ ತಿಳಿಯುತ್ತಿರಲಿಲ್ಲ.
ಓಯಾಸೀಸ್ ತಂತ್ರಾಂಶ:
ಆ ನಂತರದಲ್ಲಿ ಸುಧಾರಣೆಯಾಗಿ ಓಯಾಸೀಸ್ ತಂತ್ರಾಂಶ ಅಳವಡಿಕೆಯಾಯ್ತು. ಈ ಸಂದರ್ಭದಲ್ಲಿ ಪ್ರತಿ ಸ್ವತ್ತಿಗೂ ತಂತ್ರಾಂಶದಲ್ಲಿ ಪ್ರತ್ಯೇಕ ಆಸ್ತಿ ಸಂಖ್ಯೆ ನೀಡಲಾಗುತ್ತಿದ್ದರೂ, ಸಿಬ್ಬಂದಿಗಳು ತಮಗೆ ಬೇಕಾದ ಕಡತಗಳನ್ನು ಮಾತ್ರ ಬೇಗನೆ ವಿಲೇವಾರಿ ಮಾಡಬಹುದಾಗಿತ್ತು. ಅರ್ಜಿಯ ಜೊತೆಗೆ ಬೇಕಾದ ದಾಖಲೆ ಇಲ್ಲದಿದ್ದರೂ ಅರ್ಜಿ ಸ್ವೀಕರಿಸಿ, ಬಳಿಕ ಒಂದೊಂದೇ ದಾಖಲೆಗಳ ಬೇಡಿಕೆಯನ್ನು ಸಿಬ್ಬಂದಿಗಳು ಅರ್ಜಿದಾರರಿಗೆ ಕೋರಿಕೆ ಇಡಲು ಸಾಧ್ಯವಿತ್ತು. ಇದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದುದು ಮಾತ್ರವಲ್ಲದೆ, ಅನುಮಾನ ಶುರುವಾಗುತ್ತಿತ್ತು. ನಿಗದಿತ ಸಮಯಕ್ಕೆ ಸಂಬಂಧಪಟ್ಟವರಿಂದ ದಾಖಲೆಗಳು ಸಲ್ಲಿಕೆಯಾಗದ ಕಾರಣ ಕಡತ ವಿಲೇವಾರಿಯಾಗದೇ ಬಾಕಿ ಉಳಿಯುತ್ತಿತ್ತು. ಈ ತಂತ್ರಾಂಶದಲ್ಲಿ ಕಾಲಮಿತಿಯಿದ್ದರೂ ನಿಗದಿತ ಅವಧಿಯಲ್ಲಿ ವಿಲೇವಾರಿಯಾಗದ ಕಡತಗಳ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ಲಭ್ಯವಾಗುತ್ತಿರಲಿಲ್ಲ.
ಅರ್ಜಿಯ ಜೊತೆಗೆ ದಾಖಲೆ:
ಆದರೆ ಡಿಜಿಫೈಲ್ ತಂತ್ರಾಂಶದಲ್ಲಿ ಅರ್ಜಿಯ ಜೊತೆಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಕೇಳಲಾಗುತ್ತದೆ. ಸರಿಯಾದ ದಾಖಲೆ ಇಲ್ಲದೆ ಅರ್ಜಿ ಸ್ವೀಕಾರವಾಗುವುದಿಲ್ಲ. ಹೀಗಾಗಿ ಒಮ್ಮೆ ಅರ್ಜಿ ಸ್ವೀಕಾರವಾಯಿತು ಎಂದರೆ ಕಾಲಮಿತಿಯಲ್ಲಿ ಕೆಲಸವಾಗುತ್ತದೆ. ಕಡತ ವಿಲೇಗೆ ಪ್ರತಿ ಹಂತದಲ್ಲಿಯೂ ಕಾಲಮಿತಿ ನೀಡಲಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಮತ್ತು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಯಾವುದೇ ಸಮಸ್ಯೆ ಇಲ್ಲದೆ ಕೆಲಸ ಮಾಡಿಕೊಡುವ ದೃಷ್ಟಿಯಿಂದ ಹೊಸ ತಂತ್ರಜ್ಞಾನ ಪರಿಚಯಿಸಲಾಗಿದೆ. ಸಧ್ಯಕ್ಕಂತೂ ಸಾಕಷ್ಟುಯಶಸ್ಸು ಇದರಿಂದ ಸಿಕ್ಕಿದಂತಾಗಿದೆ.
ಕಡತಗಳ ಸ್ಥಿತಿಗತಿ ಬಗ್ಗೆ ಅರ್ಜಿದಾರರ ಮೊಬೈಲ್‌ಗೆ ಸಂದೇಶದ ಮೂಲಕ ಮಾಹಿತಿ ರವಾನೆಯಾಗುತ್ತದೆ. ಕಡತ ಅನುಮೋದನೆಯಾದ ಬಗ್ಗೆ ಮತ್ತು ಆಸ್ತಿ ವರ್ಗಾವಣೆ ಶುಲ್ಕದ ಕುರಿತು ಅರ್ಜಿದಾರರಿಗೆ ತಕ್ಷಣ ನೋಂದಾಯಿಸಿದ ಮೊಬೈಲ್‌ಗೆ ಸಂದೇಶ ರವಾನಿಸಲಾಗುತ್ತದೆ.
ಡಿಜಿ ಫೈಲ್ ತಂತ್ರಾಂಶದ ಮೂಲಕ ಕಡತಗಳನ್ನು ಆದ್ಯತೆ ಮೇರೆಗೆ ನಿರ್ವಹಿಸಲಾಗುತ್ತದೆ. ಇಲ್ಲಿ ಸೀನಿಯಾರಿಟಿ ಮುರಿಯಲು ಸಾಧ್ಯವಿಲ್ಲ. ಇದರಲ್ಲಿ ಕೂಡ ಸಣ್ಣಪುಟ್ಟಸಮಸ್ಯೆ ಇದ್ದರೂ ಶೀಘ್ರದಲ್ಲಿಯೇ ಬಗೆಹರಿಯಲಿದೆ. ಈ ತಂತ್ರಾಂಶದಿಂದ ಸಾಕಷ್ಟುಸಮಸ್ಯೆ ಬಗಹರಿದಿದ್ದು, ಸಾರ್ವಜನಿಕರಿಗೆ ನೆರವಾಗಿದೆ.
-ಬಾಲಾಜಿ ರಾವ್, ಪಾಲಿಕೆ ಕಂದಾಯ ಅಧಿಕಾರಿ