ಒಮ್ಮೆ ಜೋರು ಮಳೆ ಬಂದರೆ ಸಾಕು, ಶಿವಮೊಗ್ಗ ನಗರದ ಹಲವು ಬಡಾವಣೆಗಳು ಜಲಾವೃತವಾಗುತ್ತವೆ. ತುಂಗಾನದಿ ಪ್ರವಾ​ಹಕ್ಕೆ ನಲುಗುವ ಸೀಗೆಹಟ್ಟಿ, ಮದಾರಿಪಾಳ್ಯ, ಬಿ.ಬಿ.ರಸ್ತೆ, ಬಾಪೂಜಿ ನಗರ ಇನ್ನ​ತರ ಬಡಾವಣೆಗಳಲ್ಲಿ ತೀರದ ಗೋಳು 

ವರದಿ: ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ (ಆ.1) : ಒಮ್ಮೆ ಜೋರು ಮಳೆ ಬಂದರೆ ಸಾಕು, ಶಿವಮೊಗ್ಗ ನಗರದ ಹಲವು ಬಡಾವಣೆಗಳು ಜಲಾವೃತವಾಗುತ್ತವೆ. ಮನೆಗಳ ಒಳಗೆ ನೀರು ನುಗ್ಗುತ್ತದೆ. ಪ್ರತಿ ಬಾರಿಯೂ ಒಂದಷ್ಟುಮನೆಗಳು ಕುಸಿದು ಬೀಳುತ್ತವೆ. ಪುನರಾವರ್ತನೆ ಆಗುವ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ.

ನಗರದ ಶಾಂತಮ್ಮ ಲೇಔಟ್‌(Shantamma Layout), ರಾಜೀವ್‌ ಗಾಂಧಿ ಬಡಾವಣೆ (Rajeev Gandhi), ವಿದ್ಯಾನಗರ(Vidyanagar), ಗುರುಪುರ(Gurupura), ಚಿಕ್ಕಲ…, ಕುಂಬಾರಗುಂಡಿ, ಸೀಗೆಹಟ್ಟಿ, ಇಮಾಂಬಾಡ, ಮಂಡಕ್ಕಿಬಟ್ಟಿ, ಮುರಾದ್‌ ನಗರ, ಸೀಗೆಹಟ್ಟಿ, ಮದಾರಿಪಾಳ್ಯ, ಬಿ.ಬಿ. ರಸ್ತೆ, ಬಾಪೂಜಿ ನಗರ ಸೇರಿ ಹಲವು ಬಡಾವಣೆಗಳು ಪ್ರತಿ ಮಳೆಗಾಲದಲ್ಲೂ ಜಲಾವೃತವಾಗುತ್ತವೆ. ಮಳೆಗಾಲದಲ್ಲಿ ತುಂಬಿ ಹರಿಯುವ ತುಂಗಾನದಿ ಅತಿ ಹೆಚ್ಚಿನ ಸಮಸ್ಯೆ ಸೃಷ್ಟಿಸಿದರೆ, 20 ನಿಮಿಷ ಸತತ ಮಳೆ ಸುರಿದರೆ ಸಾಕು ಹೂಳು ತುಂಬಿದ ರಾಜಕಾಲುವೆಗಳು ರಸ್ತೆ ಮೇಲೆ ಹರಿದು ತಗ್ಗುಪ್ರದೇಶದ ಮನೆಗಳಿಗೆ ಕಲ್ಮಶ ನೀರು ನುಗ್ಗುತ್ತದೆ.

ಹೊಸನಗರ ತಾಲೂಕು ಹಳ್ಳ-ಕೊಳ್ಳಗಳು ಭರ್ತಿ; ಹತ್ತಾರು ಎಕರೆ ಭತ್ತದ ಗದ್ದೆ ಜಲಾವೃತ

ತುಂಗಾ ಜಲಾಶಯ ಭರ್ತಿಯಾದ ಸಮಯದಲ್ಲಿ ಎಷ್ಟುಒಳಹರಿವು ಇರುತ್ತದೆಯೋ, ಅಷ್ಟೂನೀರನ್ನು ನದಿಗೆ ಹರಿಸಲಾಗುತ್ತದೆ. ನದಿಗೆ ಬಿಡುವ ನೀರು 80 ಸಾವಿರ ಕ್ಯುಸೆಕ್‌ ಮೀರಿದರೂ ನದಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣ ಆಗುತ್ತದೆ. ಕೆಲವು ಬಾರಿ ಒಳಹರಿವು 2 ಲಕ್ಷ ಕ್ಯುಸೆಕ್‌ ಮೀರುತ್ತದೆ. ಇಂತಹ ಸಮಯದಲ್ಲಿ ಅರ್ಧ ಶಿವಮೊಗ್ಗ ಅಪಾಯಕ್ಕೆ ಸಿಲುಕುತ್ತದೆ.

ಮೊನ್ನೆಯಷ್ಟೇ ತಡರಾತ್ರಿ ಸುರಿದ ಮಳೆಗೆ ರಾಜಕಾಲುವೆಗಳು ತುಂಬಿ ಹರಿದು ಹೊಸಮನೆ, ಅಣ್ಣಾ ನಗರ, ಬೆಂಕಿನಗರ ಸೇರಿದಂತೆ ಕೆಲ ಬಡಾವಣೆಗಳ ಮನೆಗಳಿಗೆ ಹಾಗೂ ಕಮಲನೆಹರು ಮಹಿಳಾ ಕಾಲೇಜಿಗೆ ನೀರು ನುಗ್ಗಿತ್ತು. ರಾಜಕಾಲುವೆಗಳ ಒತ್ತುವರಿ, ಕಾಲುವೆಗಳ ಮೇಲೆಯೇ ಮನೆಗಳನ್ನು ಕಟ್ಟಿಕೊಂಡಿರುವುದು, ಸಮಯಕ್ಕೆ ಸರಿಯಾಗಿ ಹೂಳು ತೆಗೆಸದ ಕಾರಣ ನೀರು ಸರಾಗವಾಗಿ ಹರಿಯದೇ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕಾಲುವೆಗಳ ಆಧುನೀಕರಣ, ಒತ್ತುವರಿ ತೆರವಿಗೆ ಪಾಲಿಕೆ ಸೂಕ್ತ ಕ್ರಮ ತೆಗೆದುಕೊಳ್ಳದ ಪರಿಣಾಮ ಸಮಸ್ಯೆಗಳು ಪುನರಾವರ್ತನೆಯಾಗುತ್ತಲೇ ಇವೆ. 

ಘಟ್ಟಪ್ರದೇಶದಲ್ಲಿ ಮುಂದುವರಿದ ಜಡಿ ಮಳೆ, ಭೋರ್ಗರೆಯುತ್ತಿದೆ ಜೋಗ..!

ನಾಲಾ ಪ್ರದೇಶಗಳ ಜನರಿಗೂ ಸಂಕಷ್ಟ:

ತುಂಗಾ ನಾಲೆ ನಗರದ ಒಳಗೆ ಹಾದು ಹೋಗುತ್ತದೆ. ಮಳೆಗಾಲದಲ್ಲಿ ನೀರು ತುಂಬಿ ಹರಿದಾಗ, ದಂಡೆಗಳು ಒಡೆದಾಗ ನಾಲೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸಂಕಷ್ಟುಅನುಭವಿಸುತ್ತಿದ್ದಾರೆ. ತುಂಗಾನಗರ, ಹೊಸಮನೆ, ಮಲ್ಲಿಕಾರ್ಜುನ ನಗರ, ಹಳೆ ಮಂಡ್ಲಿ, ಟಿಪ್ಪುನಗರ ಮತ್ತಿತರ ಬಡಾವಣೆಗಳ ನಿವಾಸಿಗಳು ಸಾಕಷ್ಟುತೊಂದರೆಗೆ ಸಿಲುಕುತ್ತಾರೆ. ಮನೆಗಳಿಗೆ ನೀರು ನುಗ್ಗಿ ಹಲವು ಬಾರಿ ದವಸ-ಧಾನ್ಯ, ಬಟ್ಟೆಗಳು ನೀರು ಪಾಲಾಗಿವೆ.

ಮನೆಹಾನಿಗೆ ದೊರಕದ ಪರಿಹಾರ : ಪ್ರತಿ ವರ್ಷ ಮಳೆಗಾಲದಲ್ಲೂ ಕನಿಷ್ಠ ಸಾವಿರ ಮನೆಗಳು ಹಾನಿಗೊಳಗಾಗುತ್ತವೆ. 2019ರ ಮಳೆಗಾಲದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಶೇ. 75ಕ್ಕಿಂತ ಹೆಚ್ಚು ಹಾನಿಗೆ 5 ಲಕ್ಷ ರು., ಭಾಗಶಃ ಮನೆಗಳಿಗೆ 3 ಲಕ್ಷ ರು. ಶೇ.25ಕ್ಕಿಂತ ಕಡಿಮೆ ಹಾನಿಗೆ 50 ಸಾವಿರ ರು.ಪರಿಹಾರ ಘೋಷಿಸಲಾಗಿತ್ತು. ಆದರೆ, ಶೇ 50ರಷ್ಟುಮನೆಗಳಿಗೆ ಇಂದಿಗೂ ಪೂರ್ಣ ಪ್ರಮಾಣದ ಪರಿಹಾರ ದೊರಕಿಲ್ಲ. ಖಾತೆ ಇಲ್ಲದ ಕುಟುಂಬಗಳಿಗೆ ಬಿಡಿಗಾಸೂ ನೆರವು ನೀಡಿಲ್ಲ.

ಸ್ಮಾರ್ಚ್‌ಸಿಟಿ ಕಾಮಗಾರಿಯೇ ಕಾರಣ : ಕಳೆದ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಅಣ್ಣಾ ನಗರ, ಬೆಂಕಿನಗರ ಸೇರಿದಂತೆ ಬಾಲರಾಜ ರಸ್ತೆಯ ಕೆಲ ಮಳಿಗಗೆ ನೀರು ನುಗ್ಗಿತ್ತು. ನಗದರಲ್ಲಿ ಸ್ಮಾರ್ಚ್‌ಸಿಟಿ ಕಾಮಗಾರಿ ಆರಂಭವಾಗಿನಿಂದಲೂ ಸಣ್ಣ ಮಳೆಗೂ ಮನೆಗಳಿಗೆ ನೀರು ನುಗ್ಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳೇ ಇದಕ್ಕೆ ಕಾರಣವಾಗಿದೆ. ಕಳೆದ ವರ್ಷ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿತ್ತು. ಆಗ ಕೇವಲ 10 ಸಾವಿರ ರು. ಕೆಲವರಿಗೆ ನೀಡಿದ್ದು, ಬಿಟ್ಟರೆ ಬೇರೆ ಯಾವ ಪರಿಹಾರವೂ ಸಿಕ್ಕಿಲ್ಲ. ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಗೂ ನೀರು ನುಗ್ಗಿತ್ತು. ರಾತ್ರಿಯಿಡಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದೆವು. ಪಾಲಿಕೆಯ ಕಂದಾಯ ಅಧಿಕಾರಿಗಳು ಹಾನಿಯ ಅಂದಾಜು ಪಟ್ಟಿಸಿದ್ಧಪಡಿಸಿಕೊಂಡು ಹೋಗಿದ್ದು ಬಿಟ್ಟರೆ ಯಾವುದೇ ಪರಿಹಾರ ಬಂದಿಲ್ಲ ಎಂದು ಸ್ಥಳೀಯ ನಿವಾಸಿಗಳ ಆರೋಪ.