ಅಡಕೆ ಹಿಂಗಾರು ಒಣಗು ರೋಗ: ರೈತ​ರಿಗೆ ಹತೋಟಿ ಕ್ರಮದ ಸಲಹೆ

ಅಡಿಕೆಯ ಹಿಂಗಾರು ಒಣಗು ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ನಿರ್ವಹಣೆಗೆ ಮುಂದಾಗಿ ಎಂದು ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರ ಬೆಳೆಗಾರರಿಗೆ ಮಾಹಿತಿ ನೀಡಿದೆ.

Shivamogga Arecanut Farmers Worried Over Mite Disease

ತೀರ್ಥಹಳ್ಳಿ [ಜ.20]:  ಅಡಕೆ ತೋಟಗಳಲ್ಲಿ ಹಿಂಗಾರ ತಿನ್ನುವ ಹುಳುಗಳ ಕಾಟ ತೀವ್ರವಾಗಿ ಬೆಳೆಗಾರರನ್ನು ಕಾಡುತ್ತಿದೆ. ಅಡಿಕೆಯ ಹಿಂಗಾರು ಒಣಗು ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ನಿರ್ವಹಣೆಗೆ ಮುಂದಾಗಿ ಎಂದು ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರ ಬೆಳೆಗಾರರಿಗೆ ಮಾಹಿತಿ ನೀಡಿದೆ. ಅಡಕೆಯಲ್ಲಿ ಹಿಂಗಾರ ಒಣಗು ರೋಗವು ಜನವರಿ-ಮಾಚ್‌ರ್‍ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಹಿಂಗಾರು ಕೊಲ್ಲೆಟೋಟ್ರೈಕಂ ಗ್ಲಿಯೋಸ್ಪೋರಿಯಾಡಿಸ್‌ ಎಂಬ ಶಿಲೀಂದ್ರದ ಸೋಂಕಿಗೆ ಒಳಗಾದಾಗ ಕಂಡು ಬರುತ್ತದೆ ಎಂದು ಕೇಂದ್ರ ತಿಳಿ​ಸಿದೆ.

ಇದೇ ಮೊದಲ ಬಾರಿಗೆ ಹಿಂಗಾರ ತಿನ್ನುವ ಹುಳುವು ಅಡಕೆ ಬೆಳೆಯಲ್ಲಿ ಕಂಡುಬಂದಿದೆ. ತೀರ್ಥಹಳ್ಳಿ ತಾಲೂಕಿನ ಬಸವಾನಿ, ದೇವಂಗಿ, ಗಬಡಿ, ಹೆಗ್ಗೋಡು ಹಾಗೂ ಮೇಗರವಳ್ಳಿ ಭಾಗಗಳಲ್ಲಿ ರೋಗ​ವು ವ್ಯಾಪಕವಾಗಿದೆ. ಈ ಕೀಟವು ವೇಗವಾಗಿ ಅಡಕೆ ಬೆಳೆಯುವ ಎಲ್ಲ ಪ್ರದೇಶಗಳಿಗೆ ಹರಡುತ್ತಿದೆ. ಈ ಹುಳು ಅಡಕೆಯ ಹಿಂಗಾರದ ಎಸಳುಗಳನ್ನು ಕೆರೆದು ತಿನ್ನುತ್ತವೆ ಹಾಗೂ ಗೂಡು ಕಟ್ಟಿಕೊಂಡು ಅದರಲ್ಲಿ ಜೀವಿಸುತ್ತದೆ. ಇದಲ್ಲದೇ ನಂತರದ ಅವಧಿಯಲ್ಲಿ ಪೆಂಟಾಟೋಡ್‌ ತಿಗಣೆಯ ಬಾಧೆಯು ಹೆಚ್ಚಾಗಿ ಕಂಡು ಬರುತ್ತದೆ. ಆದುದರಿಂದ ಈ ರೋಗ ಹಾಗೂ ಕೀಟಗಳಿಂದ ಬೆಳೆ ಉಳಿಸಿಕೊಳ್ಳುವ ಬಗ್ಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು

ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ. ಎಂ. ರವಿಕುಮಾರ್‌ ಮತ್ತು ತಜ್ಞರ ತಂಡದ ನಿರಂಜನ ಕೆ.ಎಸ್‌., ವಿವೇಕ್‌ ಟಿ.ಎಸ್‌., ಪ್ರದೀಪ್‌ ಕುಮಾರ್‌ ಬಿ.ಎ. ಹಾಗೂ ರಮ್ಯಾ, ಎಚ್‌.ಎಸ್‌. ಅವರು ಈ ಕೆಳಕಂಡ ಕ್ರಮಗಳನ್ನು ಶಿಫಾರಸ್ಸು ಮಾಡಿ​ದ್ದಾ​ರೆ.

ರೋಗ ಹಾಗೂ ಕೀಟಗಳ ಲಕ್ಷಣಗಳು: 

- ಹಿಂಗಾರ (ಅಡಕೆ ಹೂವು) ಒಣಗು ರೋಗವು ಜನವರಿ-ಮೇ ತಿಂಗಳಿನಲ್ಲಿ ಹೆಚ್ಚಾಗಿ ಬಾಧಿಸುವುದು. ಗೊಂಚಲುಗಳ ಎಸಳುಗಳು ತುದಿಯಿಂದ ಬುಡದ ಕಡೆಗೆ ಒಣಗಿ ಹಳದಿಯಾಗಿ ನಂತರ ಕಂದುಬಣ್ಣಕ್ಕೆ ತಿರುಗಿ ಒಣಗುವುದು. ಬಾಧೆಗೊಳಗಾದ ಹಿಂಗಾರದ ಹೂಗಳು ಮತ್ತು ಎಳೆಮೊಗ್ಗುಗಳು ಉದುರುತ್ತವೆ.

- ಹಿಂಗಾರ ತಿನ್ನುವ ಹುಳುವು ಅಡಕೆಯ ಹಿಂಗಾರದ ಎಸಳುಗಳನ್ನು ಕೆರೆದು ತಿನ್ನುವುದರಿಂದ ಹೂವು ಕಂದು ಬಣ್ಣಕ್ಕೆ ತಿರುಗಿ ಮೊಗ್ಗುಗಳು ಉದುರುತ್ತವೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇಡೀ ಹಿಂಗಾರವು ಕೀಟದ ಗೂಡುಗಳಿಂದ ತುಂಬಿಕೊಂಡು ಹಿಂಗಾರವು ಸಾಯುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

- ಈ ಲಕ್ಷಣಗಳು ಮೊದಲ ಹಂತದಲ್ಲಿ ಹಿಂಗಾರು ಒಣಗು ರೋಗಕ್ಕೆ ಹೋಲುತ್ತವೆæ. ಪೆಂಟಾಟೋವಿಡ್‌ ಜಾತಿಯ ತಿಗಣೆ ಬಾಧೆಗೊಳಗಾದ ಕಾಯಿ ಹಾಗೂ ಮೊಗ್ಗುಗಳ ತೊಟ್ಟಿನ ಭಾಗದಲ್ಲಿ ಸೂಜಿಯಿಂದ ಚುಚ್ಚಿದಂತಹ ಚಿನ್ಹೆಗಳು ಕಾಣಸಿಕೊಳ್ಳುತ್ತವೆ.

ಸಮಗ್ರಹತೋಟಿ ಕ್ರಮಗಳು

- ಅಡಕೆ ಕೃಷಿಕರು ಕಳೆದ ವರ್ಷ ರೋಗ ಪೀಡಿತ ಒಣಗಿದ ಹಿಂಗಾರಗಳನ್ನು ತೋಟದಿಂದ ತೆಗೆದು ನಾಶ ಪಡಿಸುವುದರಿಂದ ರೋಗದ ಹರಡುವಿಕೆಯನ್ನುಪರಿಣಾಮಕಾರಿಯಾಗಿ ತಡೆಯಬಹುದು.

- ಡೈಥೇನ್‌-ಎಂ-45 - 3.0 ಗ್ರಾಂ ಅಥವಾ ಡೈಥೇನ್‌-ಜೆಡ್‌-782.0 ಗ್ರಾಂ ಹಾಗೂ ರಾಳ 0.5 ಮಿ.ಲೀ. ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಹಿಂಗಾರ ಅರಳುವ ಸಮಯದಲ್ಲಿ (ತೋಟದಲ್ಲಿ ಶೇ. 30-40 ಹಿಂಗಾರಗಳು ಹೊರ ಬಂದಿದ್ದಲ್ಲಿ) ಹಾಗೂ ಸುಮಾರು 25-30 ದಿನಗಳ ನಂತರ ಮತ್ತೊಂದು ಬಾರಿ ಸಿಂಪಡಿಸಬೇಕು.

- ಶಿಲೀಂದ್ರ ನಾಶಕದ ಜೊತೆಯಲ್ಲಿ ಪೆಂಟಾಟೋಮಿಡ್‌ ತಿಗಣೆ ಹಾಗೂ ಮೊದಲನೇ ಬಾರಿಗೆ ಕಂಡು ಬಂದಿರುವಂತಹ ಹಿಂಗಾರವನ್ನು ಕೆರೆದು ತಿನ್ನುವ ಹುಳುನ ನಿಯಂತ್ರಣಕ್ಕಾಗಿ ಕ್ಲೋರೋಪೈರಿಫಾಸ್‌ 2.0 ಮಿ.ಲೀ. ಅಥವಾ ಕ್ವಿನಾಲ್ಫಾಸ್‌ 1.0 ಮಿ.ಲೀ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು.

- ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಅಡಕೆ ಬೆಳೆಯನ್ನು ಹಿಂಗಾರ ಒಣಗು ರೋಗ, ಪೆಂಟಾಟೋಮಿಡ್‌ತಿಗಣೆ ಮತ್ತು ಹಿಂಗಾರ ತಿನ್ನುವ ಹುಳುವಿನಿಂದ ಸಮರ್ಪಕವಾಗಿ ರಕ್ಷಿಸಬಹುದು.

Latest Videos
Follow Us:
Download App:
  • android
  • ios