ಬೆಂಗಳೂರು[ಜು.02]: ಪಬ್‌ಗೆ ಹೋಗಿದ್ದ ಯುವತಿ ಬಳಿ ಪಬ್‌ನ ಬೌನ್ಸರ್‌ನೊಬ್ಬ ಅನುಚಿತ ವರ್ತನೆ ತೋರಿರುವ ಘಟನೆ ಮಾರತ್ತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ಳಂದೂರು ನಿವಾಸಿ 28 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಯುವತಿ ತನ್ನ ಸ್ನೇಹಿತರ ಜತೆ ಜೂ.28ರ ರಾತ್ರಿ ಮಾರತ್ತಹಳ್ಳಿಯಲ್ಲಿರುವ ‘ಸೈಟ್‌ ವಾಕ್‌ಪಬ್‌ಗೆ ಹೋಗಿದ್ದರು. ರಾತ್ರಿ 11ರ ಸುಮಾರಿಗೆ ಯುವತಿ ಪಬ್‌ನಲ್ಲಿ ಸ್ನೇಹಿತರೊಂದಿಗೆ ನೃತ್ತ ಮಾಡುತ್ತಿದ್ದಾಗ ಪಬ್‌ನ ಬೌನ್ಸರ್‌ನೊಬ್ಬ ಯುವತಿಯ ಎದೆ ಭಾಗ ಮುಟ್ಟಿ, ಸೊಂಟ ಮುಟ್ಟಲು ಯತ್ನಿಸಿದ್ದ. ಯುವತಿ ಚೇರಿಕೊಂಡಿದ್ದು, ಯುವತಿಯ ಸ್ನೇಹಿತರು ಆರೋಪಿಯನ್ನು ಹಿಡಿಯಲು ಹೋದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಬಗ್ಗೆ ಸ್ಲೈಡ್‌ ವಾಕ್‌ ಪಬ್‌ ಮ್ಯಾನೇಜ್‌ಮೆಂಟ್‌ ಅವರಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪಬ್‌ ಹಾಗೂ ಬೌನ್ಸರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ವಿವರಿಸಿದ್ದಾರೆ.