ಸ್ಕ್ಯಾನಿಂಗ್ ಸುಳಿವು ನಿಗೂಢ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರ

ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಈ ಅಮಾನುಷ ಕೃತ್ಯಗಳಲ್ಲಿ ತೊಡಗಿರುವವರು ಕಾನೂನಿಂದ ತಪ್ಪಿಸಿಕೊಳ್ಳುವುದಕ್ಕೆ ಹೊಸ ಹೊಸ ವಿಧಾನಗಳು, ತಂತ್ರಗಳನ್ನು ಅನುಸರಿಸುತ್ತಿದ್ದಾರೆ. 

Scanning clue mystery Female feticide continues in Mandya district gvd

ಮಂಡ್ಯ/ಪಾಂಡವಪುರ (ಜೂ.02): ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಈ ಅಮಾನುಷ ಕೃತ್ಯಗಳಲ್ಲಿ ತೊಡಗಿರುವವರು ಕಾನೂನಿಂದ ತಪ್ಪಿಸಿಕೊಳ್ಳುವುದಕ್ಕೆ ಹೊಸ ಹೊಸ ವಿಧಾನಗಳು, ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಹೆಣ್ಣು ಮಗು ಬೇಡ ಎಂಬ ನಿರ್ಧಾರಕ್ಕೆ ಬಂದು ಗರ್ಭಪಾತ ಮಾಡಿಸಿಕೊಂಡ ಮಹಿಳೆಯರು ಇದೀಗ ರಕ್ತಸ್ರಾವದೊಂದಿಗೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕುರಿತಾಗಿ ಪೊಲೀಸರ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಪ್ರಕರಣ ಬಯಲಿಗೆ ಬಂದು ಒಂದು ತಿಂಗಳಾದರೂ ಪ್ರಮುಖ ಮೂವರು ಆರೋಪಿಗಳು ಪತ್ತೆಯಾಗಿಲ್ಲ. ರಕ್ತಸ್ರಾವದಿಂದ ದಾಖಲಾದ ಮಹಿಳೆಯಿಂದ ಕೆಲವೊಂದು ಮಾಹಿತಿಗಳು ದೊರಕಿವೆಯೇ ವಿನಃ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆ ಚುರುಕಾಗಿ ನಡೆಯುತ್ತಿಲ್ಲವೆನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕಾರುಗಳಲ್ಲೇ ಸ್ಕ್ಯಾನಿಂಗ್: ಹೆಣ್ಣು ಭ್ರೂಣ ಹತ್ಯೆ ಜಾಲವನ್ನು ಕಂಡುಹಿಡಿಯಲು ಪೊಲೀಸರು ಗರ್ಭಪಾತ ಮಾಡಿಸಿಕೊಂಡ ಮಹಿಳೆಯರನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಅವರಿಂದ ಸ್ಕ್ಯಾನಿಂಗ್ ಮಾಡಿದ್ದು ಯಾರು, ಎಲ್ಲಿ ಎಂಬ ಮಾಹಿತಿ ದೊರಕಿದ್ದರೂ ಆರೋಪಿಗಳನ್ನು ಪತ್ತೆಹಚ್ಚುವುದಕ್ಕೆ ಸಾಧ್ಯವಾಗಿಲ್ಲ. ಗರ್ಭಿಣಿಯರನ್ನು ಮಧ್ಯರಾತ್ರಿ ಕಾರಿನಲ್ಲಿ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ೨-೩ ನಿಮಿಷದಲ್ಲೇ ಭ್ರೂಣ ಪತ್ತೆ ಮಾಡಲಾಗುತ್ತಿದ್ದು, ಆನಂತರ ಗರ್ಭಪಾತಕ್ಕೆ ಕಳುಹಿಸುತ್ತಿದ್ದರು ಎನ್ನುವುದು ಗೊತ್ತಾಗಿದೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಒಳಗಾಗುವ ಮಹಿಳೆಯರ ಪತಿಯರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತಿದೆ. ಮಹಿಳೆಯರನ್ನು ಸಾಕ್ಷಿದಾರರನ್ನಾಗಿ ಮಾಡಲಾಗುತ್ತಿದೆ. ಪತಿ ಹಾಗೂ ಕುಟುಂಬದವರ ಒತ್ತಡಕ್ಕೆ ಒಳಗಾಗಿ ಗರ್ಭಿಣಿಯರು ಹೆಣ್ಣು ಭ್ರೂಣ ಹತ್ಯೆಗೆ ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ.

ಪ್ರವಾಹ ಎದುರಿಸಲು ಕೊಡಗು ಪೊಲೀಸರು ಸಜ್ಜು: ಹಾರಂಗಿ ಜಲಾಶಯದ ಆಳ ನೀರಿನಲ್ಲಿ ಕಟ್ಟುನಿಟ್ಟಿನ ತಾಲೀಮು

ಸ್ಕ್ಯಾನಿಂಗ್‌ನಲ್ಲಿ ಪರಿಣತಿ ಸಾಧಿಸಿದ್ದು ಹೇಗೆ?: ಆರೋಪಿಗಳು ವಿದ್ಯಾವಂತರೂ ಅಲ್ಲ, ತಜ್ಞ ವೈದ್ಯರೂ ಅಲ್ಲ. ಹೀಗಿದ್ದರೂ ಸ್ಕ್ಯಾನಿಂಗ್‌ನಲ್ಲಿ ಪರಿಣತಿ ಸಾಧಿಸಿದ್ದು ಹೇಗೆ ಎನ್ನುವುದು ಕುತೂಹಲಕಾರಿ ಅಂಶವಾಗಿದೆ. ಭ್ರೂಣ ಪತ್ತೆ ಸ್ಕ್ಯಾನಿಂಗ್ ಮಾಡಲು ಎಂಬಿಬಿಎಸ್, ರೇಡಿಯಾಲಜಿ ಓದಿರಬೇಕು. ಆದರೆ, ಪ್ರಕರಣದಲ್ಲಿ ಸ್ಕ್ಯಾನಿಂಗ್ ಮಾಡಿದ ಆರೋಪಿಗಳು ಶಿಕ್ಷಿತರಲ್ಲ. ಆದರೂ ನಿಖರವಾಗಿ ಭ್ರೂಣವನ್ನು ಗುರುತಿಸುತ್ತಿದ್ದುದು ಹೇಗೆ, ಇವರಿಗೆ ತರಬೇತಿ ನೀಡಿದವರು ಯಾರು? ಎಲ್ಲಿ ನೀಡಿದರು ಎಂಬ ಬಗ್ಗೆಯೂ ತನಿಖೆ ನಡೆಯಬೇಕಿದೆ.

ಗರ್ಭಪಾತವಾಗಿದ್ದ ಮಹಿಳೆಗೆ ರಕ್ತಸ್ರಾವ, ಆಸ್ಪತ್ರೆಗೆ ದಾಖಲು: ಗರ್ಭಪಾತ ಮಾಡಿಸಿಕೊಂಡಿದ್ದ ಶ್ರೀರಂಗಪಟ್ಟಣ ಮೂಲದ ಮಹಿಳೆಯೊಬ್ಬರು ತೀವ್ರ ರಕ್ತಸ್ರಾವದಿಂದ ಪಾಂಡವಪುರ ವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದು, ಭ್ರೂಣವನ್ನು ಜಮೀನಿನಲ್ಲಿ ಹೂತು ಹಾಕಿರುವುದಾಗಿ ಮಾಹಿತಿ ನೀಡಿದ್ದಾರೆ. ಪಾಂಡವಪುರ ತಾಲೂಕು ಹಿರೇಮರಳಿಯ ಗೀತಾ ಹಾಗೂ ಕೆ.ಆರ್.ಪೇಟೆಯ ಶ್ರುತಿ ಅವರು ಹೊಸಕೋಟೆ ಗ್ರಾಮದಲ್ಲಿರುವ ಹಂಚಿನ ಮನೆಯೊಂದಕ್ಕೆ ಮಧ್ಯರಾತ್ರಿ ಕರೆದೊಯ್ದು ಮಾತ್ರೆಯನ್ನು ನುಂಗಲು ತಿಳಿಸಿದ್ದರು. ನಂತರ ಬೆಳಗ್ಗೆ ೮.೩೦ರ ಸಮಯಕ್ಕೆ ಗರ್ಭಪಾತವಾಯಿತು. ಇದಾದ ಬಳಿಕ ನನ್ನ ಫೋನ್ ಪೇ ಖಾತೆಯಿಂದ ಚೇತನ್‌ಕುಮಾರ್ ಖಾತೆಗೆ ೧೮ ಸಾವಿರ ರು., ಆಶಾ ಶಿವರಾಜ್ ಖಾತೆಗೆ ೧ ಸಾವಿರ ರು., ಗೀತಾ ಅವರಿಗೆ ೧೩ ಸಾವಿರ ರು.ಗಳನ್ನು ವರ್ಗಾವಣೆ ಮಾಡಲಾಯಿತು. 

ಇದರಲ್ಲಿ ಸ್ಕ್ಯಾನಿಂಗ್ ಮಾಡಿದ ಅಭಿಗೆ ೧೩ ಸಾವಿರ ರು.ಗಳನ್ನು ನೀಡಿರುವುದಾಗಿ ಅಸ್ವಸ್ಥ ಮಹಿಳೆ ತಿಳಿಸಿದ್ದಾರೆ. ಗರ್ಭಪಾತದಿಂದ ಹೊರಬಂದ ಹೆಣ್ಣು ಭ್ರೂಣವನ್ನು ಶ್ರೀರಂಗಪಟ್ಟಣ ತಾಲೂಕು ಮಹದೇಶ್ವರ ಪುರ ಗ್ರಾಮದ ಬಳಿ ಹೂಳಿರುವುದಾಗಿ ತಿಳಿಸಿದ್ದಾರೆ. ಮೇ ೧೫ರಂದು ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆ ವಸತಿಗೃಹದಲ್ಲಿ ನಡೆದಿದ್ದ ಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದವರೇ ಈ ಮಹಿಳೆಗೂ ಗರ್ಭಪಾತ ಮಾಡಿರುವುದಾಗಿ ತಿಳಿದುಬಂದಿದೆ. ಪಾಂಡವಪುರದಲ್ಲಿಯೇ ಭ್ರೂಣಹತ್ಯೆ ಮಾಡಿಸಿಕೊಂಡಿದ್ದ ಕೆ.ಆರ್.ನಗರ ಮಹಿಳೆಯೊಬ್ಬರು ಮೂರು ತಿಂಗಳ ಹಿಂದೆಯೇ ಗರ್ಭಪಾತದಲ್ಲಿ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ ಎನ್ನುವ ಪ್ರಕರಣಕ್ಕೆ ಈ ಪ್ರಕರಣದಿಂದ ಜೀವ ಬಂದಿದೆ. 

ಬ್ರೇಕಪ್‌ ಬೆನ್ನಲ್ಲೇ 'ಅದೊಂದು ಸಮಸ್ಯೆ' ಇದೆ ಎಂದ ಶ್ರುತಿ ಹಾಸನ್: ಕಮಲ್ ಪುತ್ರಿಗೆ ಆ ಭಾಗ್ಯ ಇಲ್ವಾ?

ಭ್ರೂಣಹತ್ಯೆ ಮಾಡಿಸಿಕೊಂಡು ಹಲವಾರು ಮಹಿಳೆಯರು ಪಾಂಡವಪುರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಹೋಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭ್ರೂಣಹತ್ಯೆ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದರಿಂದ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆಯರ ಬಗ್ಗೆ ಮಾಹಿತಿಗಳು ಒಂದೊಂದಾಗೆಯೇ ಹೊರಬರುತ್ತಿವೆ. ಅಲ್ಲದೆ ಭ್ರೂಣಹತ್ಯೆಗೆ ಮಾಡಿಸಿಕೊಂಡ ಮಹಿಳೆಯರು ಮೈಸೂರು, ಮಂಡ್ಯದಲ್ಲೂ ಚಿಕಿತ್ಸೆ ಪಡೆದಿರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಅಸ್ವಸ್ಥ ಮಹಿಳೆಗೆ ಪಾಂಡವಪುರ ವಿಭಾಗೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್ ಅವರು ಮಹಿಳೆಯಿಂದ ಮಾಹಿತಿ ಪಡೆದುಕೊಂಡು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರಿಗೆ ವಿವರಣೆ ನೀಡಿದ್ದಾರೆ.

Latest Videos
Follow Us:
Download App:
  • android
  • ios