ಮಯೂರ ಹೆಗಡೆ 

ಹುಬ್ಬಳ್ಳಿ(ಫೆ.27): ಇಲ್ಲಿನ ನೈಋುತ್ಯ ರೈಲ್ವೆ ಕೇಂದ್ರೀಯ ನಿಲ್ದಾಣದ ಭದ್ರತೆಗೆ ಆರ್‌ಪಿಎಸ್‌ಎಫ್‌ (ರೈಲ್ವೆ ಪ್ರೊಟೆಕ್ಷನ್‌ ಸ್ಪೆಷಲ್‌ ಫೋರ್ಸ್‌) ಬಲ ಬಂದಿದೆ. ಅದಲ್ಲದೆ, ಇನ್ನು ಹತ್ತು ದಿನಗಳಲ್ಲಿ ನಾಲ್ಕು ಡಿಎಫ್‌ಎಂಡಿ (ಡೋರ್‌ ಫ್ರೇಮ್‌ ಮೆಟಲ್‌ ಡಿಟೆಕ್ಟರ್‌) ರೈಲ್ವೆ ನಿಲ್ದಾಣದಲ್ಲಿ ಅಳವಡಿಕೆ ಆಗಲಿದೆ.

ಆರ್‌ಪಿಎಫ್‌ ಸಿಬ್ಬಂದಿ ಕೊರತೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉಂಟಾಗಿದ್ದ ನಿಗೂಢ ಸ್ಫೋಟದ ಹಿನ್ನೆಲೆಯಲ್ಲಿ ಹಾಗೂ ನಿಲ್ದಾಣಕ್ಕೆ ಹೆಚ್ಚಿನ ರಕ್ಷಣೆ ಒದಗಿಸುವ ಉದ್ದೇಶದಿಂದ ಆರ್‌ಪಿಎಫ್‌ ಅಧಿಕಾರಿಗಳು ಹುಬ್ಬಳ್ಳಿಗೆ ಆರ್‌ಪಿಎಸ್‌ಎಫ್‌ ತುಕಡಿ ಒದಗಿಸುವಂತೆ ಕೇಳಿಕೊಂಡಿದ್ದರು. ಅದರ ಕೋರಿಕೆ ಮೇರೆಗೆ ಆರ್‌ಪಿಎಸ್‌ಎಫ್‌ ಒಂದು ತುಕಡಿ ಇಲ್ಲಿಗೆ ಆಗಮಿಸಿದ್ದು, ಭದ್ರತಾ ಸಾಮರ್ಥ್ಯ ಹೆಚ್ಚಿದಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈಲ್ವೆ ಪ್ರೊಟೆಕ್ಷನ್‌ ಸ್ಪೆಷಲ್‌ ಫೋರ್ಸ್‌ ಇದು ಆರ್‌ಪಿಎಫ್‌ನ ಒಂದು ಬಟಾಲಿಯನ್‌. ತಮಿಳುನಾಡು ತಿರುಚನಾಪಲ್ಲಿಯ ತಿರುಚಿ 5ನೇ ಬಟಾಲಿಯನ್‌ನ ಕಂಟೋನ್ಮೆಂಟ್‌ ಸ್ಥಳ. ಅಲ್ಲಿನ ಒಂದು ತುಕಡಿ ಕೆಲ ದಿನಗಳ ಕಾಲ ಅಲಹಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸಿ ಈಗ ಹುಬ್ಬಳ್ಳಿಗೆ ಬಂದಿದೆ. ಅಸಿಸ್ಟೆಂಟ್‌ ಕಮಾಂಡೆಂಟ್‌ ಇದರ ಮುಖ್ಯಸ್ಥರಾಗಿದ್ದು, ಇನಸ್ಪೆಕ್ಟರ್‌, ಸಬ್‌ಇನಸ್ಪೆಕ್ಟರ್‌, ಹೆಡ್‌ಕಾನಸ್ಟೇಬಲ್‌, ಕಾನಸ್ಟೇಬಲ್‌ ಸೇರಿ ಒಟ್ಟಾರೆ 120 ಅಧಿಕಾರಿಗಳನ್ನು ತುಕಡಿ ಒಳಗೊಂಡಿದೆ.

ಮುಖ್ಯವಾಗಿ ತುರ್ತು ಸಂದರ್ಭ, ವಿಶೇಷ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಈ ಪಡೆ, ಕೋರಿಕೆ ಮೇರೆಗೆ ಆಗಮಿಸಿ ಭದ್ರತೆ ಒದಗಿಸುತ್ತದೆ. ಆದರೆ, ಈ ತುಕಡಿ ಕಾಯಂ ಆಗಿ ಹುಬ್ಬಳ್ಳಿಯಲ್ಲಿ ಇರುವುದಿಲ್ಲ. ಹಲವು ತಿಂಗಳುಗಳ ಮಟ್ಟಿಗೆ ಇಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹುಬ್ಬಳ್ಳಿ ಆರ್‌ಪಿಎಫ್‌ ಡಿವಿಜನಲ್‌ ಸೆಕ್ಯೂರಿಟಿ ಕಮೀಷನರ್‌ ವಲ್ಲೇಶ್ವರ ತಿಳಿಸಿದ್ದಾರೆ. 

ಡಿಎಫ್‌ಎಂಡಿ

ಇನ್ನು ಹದಿನೈದು ದಿನಗಳಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ನಾಲ್ಕು ಡಿಎಫ್‌ಎಂಡಿ (ಡೋರ್‌ ಫ್ರೇಮ್‌ ಮೆಟಲ್‌ ಡಿಟೆಕ್ಟರ್‌) ಅಳವಡಿಕೆ ಆಗಲಿದೆ. ಇದರ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದು ವಾರ-ಹತ್ತು ದಿನಗಳಲ್ಲಿ ಆಗಮಿಸಲಿದೆ ಎಂದು ವಲ್ಲೇಶ್ವರ ತಿಳಿಸಿದರು.

ಬ್ಯಾಗ್‌ ಸ್ಕ್ಯಾನರ್‌

ಇನ್ನು ಬ್ಯಾಗ್‌ ಸ್ಕ್ಯಾನರ್‌ನ್ನು ಹುಬ್ಬಳ್ಳಿ ನಿಲ್ದಾಣದಲ್ಲಿ ಅಳವಡಿಕೆ ಮಾಡುವಂತೆಯೂ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ನಾಲ್ಕು ಬ್ಯಾಗ್‌ ಸ್ಕ್ಯಾನರ್‌ ಯಂತ್ರಗಳನ್ನು ಒದಗಿಸುವಂತೆಯೂ ಇದಕ್ಕೂ ಆರ್‌ಪಿಎಫ್‌ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಲಾಗಿದೆ. ಇದರ ಆನ್‌ಲೈನ್‌ ಟೆಂಡರ್‌ ಪ್ರಕ್ರಿಯೆ ನಡೆದು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಭದ್ರತೆಗೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲು ಆರ್‌ಪಿಎಫ್‌ ಬದ್ಧವಾಗಿದೆ ಎಂದು ಆರ್‌ಪಿಎಫ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣೆಗೆ ಒತ್ತು

ಆರ್‌ಪಿಎಫ್‌ ಕಳೆದ ಜನವರಿಯಿಂದ ಡ್ರೋಣ್‌ ಕ್ಯಾಮೆರಾವನ್ನು ರಕ್ಷಣೆಗೆ ಬಳಸುತ್ತಿದೆ. ಹುಬ್ಬಳ್ಳಿ, ಬೆಳಗಾವಿ, ವಿಜಯಪುರದಲ್ಲಿ ಇದರ ಬಳಕೆ ಆಗುತ್ತಿದೆ. ಅದಲ್ಲದೆ, ಕಳೆದ ವಾರದಿಂದ ಆರ್‌ಪಿಎಫ್‌ ಸಿಬ್ಬಂದಿಗೆ ಬಾಡಿವೋರ್ನ್‌ ಕ್ಯಾಮೆರಾವನ್ನೂ ಅಳವಡಿಸಲಾಗಿದ್ದು, ಇದು ನಿಲ್ದಾಣದ ಚಲವಲನಗಳನ್ನು ಚಿತ್ರೀಕರಿಸುತ್ತಿದೆ.

ಈ ಬಗ್ಗೆ ಮಾತನಾಡಿದ ಆರ್‌ಪಿಎಫ್‌ ಹುಬ್ಬಳ್ಳಿ ಡಿವಿಜನಲ್‌ ಸೆಕ್ಯೂರಿಟಿ ಕಮೀಷನರ್‌ ವಲ್ಲೇಶ್ವರ ಅವರು, ರೈಲ್ವೆ ನಿಲ್ದಾಣದ ಆರ್‌ಪಿಎಫ್‌ ಸಿಬ್ಬಂದಿ ಕೊರತೆ, ಹೆಚ್ಚಿನ ಭದ್ರತೆ ಒದಗಿಸುವ ಕಾರಣದಿಂದ ಆರ್‌ಪಿಎಸ್‌ಎಫ್‌ ತುಕಡಿ ಬಂದಿದೆ. ಡಿಎಫ್‌ಎಂಡಿ ಸದ್ಯವೆ ಅಳವಡಿಕೆಯಾಗಲಿದ್ದು, ಬ್ಯಾಗ್‌ ಸ್ಕ್ಯಾನರ್‌ ಕೂಡ ಬರಲಿದೆ ಎಂದು ಹೇಳಿದ್ದಾರೆ.