ಯಲ್ಲಾಪುರ [ಡಿ.15]:  ಮಳೆಗಾಲದ ಹಿನ್ನೆಲೆ ತಾಲೂಕಿನ ಬಹುತೇಕ ಪ್ರಮುಖ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ರಸ್ತೆಗಳೂ ಸಂಚಾರಕ್ಕೆ ಅಯೋಮಯಗೊಂಡಿವೆ. ಇದರೊಂದಿಗೆ ಪ್ರಮುಖ ಪ್ರದೇಶಗಳಿಗೆ ಹೋಗುವ ಡಾಬರು ರಸ್ತೆಗಳೂ ಮಳೆಯಿಂದಾಗಿ ಹೊಂಡ- ಗುಂಡಿಗಳಾಗಿವೆ. ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಶಪಿಸುವ ವಾತಾವರಣ ನಿರ್ಮಾಣಗೊಂಡಿತ್ತು.

ಯಲ್ಲಾಪುರ ಕ್ಷೇತ್ರದ ಶಾಸಕರ ಮುತುವರ್ಜಿಯಿಂದಾಗಿ ತುಸು ತಡವಾಗಿಯಾದರೂ ಲೋಕೋಪಯೋಗಿ ಇಲಾಖೆ ರಸ್ತೆಯ ನಿರ್ವಹಣಾ ಯೋಜನೆಯಡಿ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದು, ಪ್ರಯಾಣಿಕರಿಂದ ಸಂತಸ ವ್ಯಕ್ತಗೊಳ್ಳುತ್ತಿದೆ. ಪಟ್ಟಣದ ಹಳಿಯಾಳ ಕ್ರಾಸ್‌ನಿಂದ ತಾಲೂಕಿನ ಗಡಿ ಪ್ರದೇಶವಾದ ತುಡುಗುಣಿವರೆಗಿನ ಸುಮಾರು 40 ಕಿಮೀ ದೂರದ ಈ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ರಸ್ತೆಯಲ್ಲಿ ಹೊಂಡ ತುಂಬುವುದು, ಅಗತ್ಯವಿದ್ದೆಡೆ ಮರು ಡಾಂಬರೀಕರಣ, ನಾಲ್ಕು ಅಪಾಯಕಾರಿ ತಿರುವುಗಳಲ್ಲಿ ಸುಧಾರಣೆ ಹಾಗೂ ಬಾಳೇಹದ್ದ ಮತ್ತು ಉಮ್ಮಚಗಿಗಳಲ್ಲಿ ಅತ್ಯಗತ್ಯವಿದ್ದ ವೇಗತಡೆ(ಹಂಪ್) ನಿರ್ಮಾಣ ಅಲ್ಲದೇ, ಬೇಡ್ತಿ ಸೇತುವೆಯ ತಿರುವಿನಲ್ಲಿ ಮತ್ತು ಇತರೆಡೆಗೆ ಅಗಲೀಕರಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಜಿಎಸ್‌ಟಿ ಸೇರಿದಂತೆ ಒಟ್ಟು 47 ಲಕ್ಷ ರು. ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ಖಾನಾಪುರದಿಂದ ತಾಳಗುಪ್ಪಕ್ಕೆ ಹೋಗುವ ಈ ರಾಜ್ಯ ಹೆದ್ದಾರಿ ಕಳೆದ 2 -  3 ವರ್ಷಗಳಿಂದೀಚೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿ ವರ್ತನೆಯಾಗಿದೆ ಎಂಬ ವದಂತಿ ನಿರಂತರ ಹರಿದಾಡುತ್ತಿದ್ದು, ಕಳೆದ ವರ್ಷದಿಂದೀಚೆ ರಸ್ತೆ ಮಂಜೂರಿಯೇ ಆಗಿಬಿಟ್ಟಿದೆ ಎಂಬಂತೆ ಅನೇಕ ನಾಯಕರು ವೇದಿಕೆಯ ಭಾಷಣದಲ್ಲಿ ಹೇಳುತ್ತಿದ್ದು, ಅದನ್ನು ಸಾರ್ವಜನಿಕರು ಸತ್ಯವೆಂದೇ ಭಾವಿಸಿದ್ದರು. ಆದರೆ ಲಕ್ಷಾಂತರ ರು. ವೆಚ್ಚ ಮಾಡಿ ರಸ್ತೆ ದುರಸ್ತಿ ಕಾಮಗಾರಿ ಮಾಡುತ್ತಿರುವುದನ್ನು ನೋಡಿದರೆ ರಾಷ್ಟ್ರೀಯ ಹೆದ್ದಾರಿ ನಮಗೆ ಸದ್ಯಕ್ಕಂತೂ ಕನಸಿನ ವಿಚಾರವೆಂದೇ ಅನ್ನಿಸುವಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವಂತೆ ಇಲಾಖೆಯಿಂದ ಪ್ರಸ್ತಾವನೆ ಕಳಿಸಲಾಗಿತ್ತಾದರೂ ಇದು ಸರ್ಕಾರದ ಅನುಮೋದನೆ ಪಡೆದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಸ.ಕಾ.ನಿ. ಅಭಿಯಂತರ ವಿ.ಎಂ. ಭಟ್ಟ ತಿಳಿಸಿದ್ದಾರೆ. ಹಾಳಾಗಿರುವ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿರುವುದು ಉತ್ತಮವಾಗಿರುವುದು ವಾಸ್ತವಿಕ. ಆದರೆ ರಸ್ತೆಯಂಚಿನ ಅನೇಕ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ನಾಮಫಲಕಗಳು ಸಂಪೂರ್ಣ ಅಳಿಸಿ ಹೋಗಿದ್ದು, ಬಸ್ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ತಾವು ತೆರಳಬೇಕಾದ ಊರಿನ ಮಾಹಿತಿಗಾಗಿ ಇಂತಹ ಫಲಕಗಳನ್ನು ಸೂಕ್ತ ರೀತಿಯಲ್ಲಿ ಇಲಾಖೆ ಅಳವಡಿಸಬೇಕಿದೆ. ಈ ಕುರಿತಂತೆ ಅಧಿಕಾರಿಗಳು ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳು ಗಂಭೀರವಾಗಿ ಗಮನ ಹರಿಸಬೇಕಿದೆ.