ಕೋವಿಡ್ ಲಸಿಕೆ ನಿರಾಕರಿಸಿದರೆ ರೇಷನ್ ರದ್ದು..!

*  ಗುರಿ ಸಾಧನೆಗೆ ಪ್ರತಿದಿನ 15-20 ಸಾವಿರ ಲಸಿಕೆ ನೀಡಲೇಬೇಕು 
*  ಯಾದಗಿರಿ ಜಿಲ್ಲಾಡಳಿತದ ನಿರ್ಧಾರ: ಸಾರ್ವಜನಿಕರಲ್ಲಿ ಅಪಸ್ವರ 
*  ಲಸಿಕೆಗೆ ಗ್ರಾಮೀಣರ ಹಿಂದೇಟು: ಆಡಳಿತ ಬಿಡದ ಪಟ್ಟು
 

Ration Cancellation If Covid Vaccine Refused in Yadgir grg

ಆನಂದ್ ಎಂ. ಸೌದಿ

ಯಾದಗಿರಿ(ಆ.12):  ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದವರಿಗೆ ಪಡಿತರ ನೀಡದಂತೆ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಸೂಚನೆ ನೀಡಿದ್ದಾರೆ. ಪ್ರತಿದಿನ 15 ರಿಂದ 20 ಸಾವಿರ ಲಸಿಕೆಗಳನ್ನು ನೀಡಬೇಕು. ಇದಕ್ಕಾಗಿ 12 ಗಂಟೆಗಳ ಕಾಲ ಲಸಿಕೆ ನೀಡಿದಾಗ ಮಾತ್ರ ಟಾರ್ಗೆಟ್ ಪೂರ್ಣಗೊಳಿಸಲು ಸಾಧ್ಯ ಎಂದು ಅವರು ಸೋಮವಾರ ಸಂಜೆ ನಡೆದ ಕೋವಿಡ್ ಲಸಿಕೆ ವಿತರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದರು. 

ಲಸಿಕಾಕರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಜನರು ಹಿಂಜರಿಯುತ್ತಿದ್ದಾರೆ. ಈ ಬಗೆಗಿನ ಅಪನಂಬಿಕೆ ಹಾಗೂ ವದಂತಿಗಳು ಹಿಂದೇಟಿಗೆ ಕಾರಣ. ಹೀಗಾಗಿ, ಮೂರನೇ ಅಲೆ ತನ್ನ ಕರಾಳಮುಖ ಪ್ರದರ್ಶಿಸುವ ಮುನ್ನವೇ, ಶೇ.80ರಷ್ಟು ಲಸಿಕೆ ಹಾಕಿಸಿಕೊಂಡರೆ ಸೋಂಕಿನಿಂದ ಭಾರಿ ಪ್ರಮಾಣದ ಅಪಾಯ ತಪ್ಪಿಸುವಿಕೆ ಹಾಗೂ ಹರಡುವಿಕೆ ತಪ್ಪಿಸಬಹುದು. ಅಪತ್ತಿನ ಈ ಸಮಯದಲ್ಲಿ ಇಂತಹು ಕಟು ನಿರ್ಧಾರಗಳು ಲಸಿಕೆ ಹಾಕಿಸಿಕೊಳ್ಳಲು ಸಹಕಾರಿಯಾಗಬಹುದು ಎಂಬುದು ಆಡಳಿತದ ಅಂತರಾಳದ ಲೆಕ್ಕಾಚಾರ. 

ಆದರೆ, ಜಿಲ್ಲಾಡಳಿತದ ಇಂತಹುದ್ದೊಂದು ಸೂಚನೆ ಕೆಲವು ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಅಗತ್ಯ ಸೇವೆಗಳ ನಿರಾಕರಣೆ ಮಾಡಲಾಗುತ್ತಿದೆ ಎಂದು ಮೊನ್ನೆಯಷ್ಟೇ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ವೇಳೆ ಪ್ರಸ್ತಾಪವಾಗಿದೆ. ಲಸಿಕೆ ವಿಚಾರದಲ್ಲಿ ಸ್ವಯಂಪ್ರೇರಿದ ಎಂದು ಸರ್ಕಾರಗಳು ಹೇಳುತ್ತವಾದರೂ, ಲಸಿಕೆ ಗುರಿ ತಲುಪಲೆಂದು ಜನರ ಮೇಲೆ ಬಲವಂತದ ಹೇರಿಕೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಮೂಡಿಬಂದಿವೆ.
ಲಸಿಕಾಕರಣ ಗುರಿ ಸಾಧನೆಗಾಗಿ, ವ್ಯಕ್ತಿಗಳ ಆರೋಗ್ಯ ಹಿನ್ನೆಲೆ, ಅವರ ಸ್ಥಿತಿಗತಿ ಹಾಗೂ ಸೋಂಕು ತಗುಲಿದ ಎಷ್ಟು ದಿನಗಳ ನಂತರ (ವೈದ್ಯರ ಪ್ರಕಾರ ಮೂರು ತಿಂಗಳು) ಲಸಿಕೆ ಹಾಕಿಸಿಕೊಳ್ಳಬೇಕು ಎಂಬಂಶಗಳನ್ನೇ ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪಗಳು ಮೂಡಿಬಂದಿವೆ. ಲಸಿಕೆಯ ಬಗ್ಗೆ ಹಿಂದುಳಿದ ಈ ಭಾಗದ ಗ್ರಾಮೀಣರಲ್ಲಿ ನಂಬಿಕೆ ಮೂಡಿಸುವಲ್ಲಿ ಆಡಳಿತ ಜಾಣ್ಮೆಯಿಂದ ಮುಂದಾಗುವ ಬದಲು ಈ ತಂತ್ರ ಮತ್ತಷ್ಟೂ ಬೆದರಿಸಿದಂತಾಗುತ್ತದೆ ಅನ್ನೋದು ಪ್ರಜ್ಞಾವಂತರ ಅಂಬೋಣ. 

85,000 ‘ಶ್ರೀಮಂತರ' ಬಿಪಿಎಲ್‌ ಕಾರ್ಡ್‌ ರದ್ದು..!

ಸಮೀಪದ ಅಲ್ಲಿಪೂರ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ, ಲಸಿಕೆ ಪಡೆಯದಿದ್ದರೆ ಪಡಿತರ ನೀಡುವುದಿಲ್ಲವೆಂದು ಪಂಚಾಯತ್ ಡಂಗೂರ ಸಾರಿದ್ದರು. ಗುರಿ ಸಾಧನೆ ತಲುಪಬೇಕು ಎಂಬ ಕಾರಣಕ್ಕಾಗಿ, ಮನೆಗಳಿಗೆ ನುಗ್ಗಿ ಆಟೋಗಳಲ್ಲಿ ಎತ್ತಾಕಿಕೊಂಡು ಹೋಗಿ ಕೆಲವರಿಗೆ ಲಸಿಕೆ ನೀಡಿಸಿದ್ದಾರೆ ಎಂಬ ಆಕ್ರೋಶಗಳು ಮೂಡಿಬಂದಿದ್ದವು. ವಾತಾವರಣ ಹೇಗೆ ನಿರ್ಮಾಣವಾಗಿತ್ತೆಂದರೆ, ಆರೋಗ್ಯ ಸಿಬ್ಬಂದಿಗಳು ಅಥವಾ ಅಧಿಕಾರಿಗಳು ಬರುತ್ತಾರೆಂದರೆ  ಆ ಭಾಗದ ಎಲ್ಲ ಗ್ರಾಮಸ್ಥರು ಊರೇ ಖಾಲಿ ಮಾಡಿ ಓಡಿಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. 

ಲಸಿಕಾಕರಣಕ್ಕೆ ಹೋದಾಗ ಅಲ್ಲಿ ಪ್ರತಿರೋಧಿಸುವ ಅಥವಾ ಸಿಬ್ಬಂದಿಗಳ ಮೇಲೆ ಹಲ್ಲೆ ಮುಂತಾದವುಗಳನ್ನು ಮಾಡುವ ವ್ಯಕ್ತಿಗಳ ಮೇಲೆ ಎಫ್‌ಐಆರ್ ದಾಖಲಿಸಿ, ಪಡಿತರ ರದ್ದುಪಡಿಸುವಂತೆ ಹೇಳಲಾಗಿದೆ. ಲಸಿಕೆ ಹಾಕಿಸಿಕೊಂಡರೆ ೩ನೇ ಅಲೆ ತಡೆಯುವಲ್ಲಿ ಹೆಚ್ಚಿನ ಸಹಕಾರಿಯಾಗ್ತದೆ. ಲಸಿಕಾಕರಣ ಟಾರ್ಗೆಟ್ ರೀಚ್ ಆಗ್ಬೇಕು ಅಂತ ಒತ್ತಡ ತಂತ್ರ ಇದಲ್ಲ  ಎಂದು  ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ತಿಳಿಸಿದ್ದಾರೆ.  

ನಾವು ಯಾರಿಗೂ ಫೋರ್ಸ್ ಮಾಡಿಲ್ಲ, ಮಾಡುವುದೂ ಇಲ್ಲ. ಲಸಿಕೆ ನಂತರ ಹಾಕಿಸಿಕೊಳ್ಳುವೆ ಎಂದು ವೈದ್ಯಕೀಯ ಕಾರಣಗಳ ಸಮೇತ ತಿಳಿಸಿದವರಿಗೆ ಹಾಕಿಲ್ಲ. ಆದರೆ, ಇದು ಮುಂದಿನ ದಿನಗಳಲ್ಲಿ ಸೋಂಕು ತಡೆಗಟ್ಟುವಲ್ಲಿ ಹಾಗೂ ಹರಡಿಸುವಿಕೆ ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಇಂದುಮತಿ ಪಾಟೀಲ್ ಹೇಳಿದ್ದಾರೆ. 

ಎಲ್ಲರೂ ಲಸಿಕೆ ಪಡೆಯಬೇಕು ಎಂಬ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚಿಸಿದ್ದಾರೆ ಅಷ್ಟೇ. ಇದರಲ್ಲಿ ಒಳಿತು ಅಡಗಿದೆ.ಪಡಿತರ ಏಕಾಏಕಿ ರದ್ದುಪಡಿಸಲು ಬರುವುದಿಲ್ಲ, ಆಹಾರ ನೀಡುವುದಿಲ್ಲ ಎಂದು ನಿರಾಕರಿಸಲೂ ಬರುವುದಿಲ್ಲ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. 

ಲಸಿಕಾಕರಣದ ಬಗ್ಗೆ ತಿಳಿವಳಿಕೆ ಮೂಡಿಸುವದಕ್ಕಿಂತ ಹೆಚ್ಚಾಗಿ, ಈ ತರಹದ ಬೆದರಿಕೆಯ ತಂತ್ರಗಳು ಜನರ ಮನಸ್ಸಿನಲ್ಲಿ ಮತ್ತಷ್ಟೂ ಭಯಕ್ಕೆ ಕಾರಣವಾಗ್ತದೆ ಎಂದು ಶಹಾಪುರದ ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ್ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios