ರಾಮನಗರ : ಜಿಲ್ಲೆಯಲ್ಲಿ ಜನನ-ಮರಣ ನೋಂದಣಿ ಶೇ.100 ಸಾಧಿಸಲು ಸೂಚನೆ
ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 2023ರ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ಜನನ - ಮರಣ ನೋಂದಣಿ ಪ್ರಕ್ರಿಯೆ ಶೇ. ನೂರರಷ್ಟು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ರಾಮನಗರ : ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 2023ರ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ಜನನ - ಮರಣ ನೋಂದಣಿ ಪ್ರಕ್ರಿಯೆ ಶೇ. ನೂರರಷ್ಟು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಘಟಿಸುವ ಪ್ರತಿಯೊಂದು ಜನನ ಹಾಗೂ ಮರಣ ಘಟನೆಗಳನ್ನು ಕಡ್ಡಾಯವಾಗಿ 21 ದಿನದೊಳಗೆ ನೋಂದಾಯಿಸಿಕೊಳ್ಳಬೇಕು ಹಾಗೂ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಉಚಿತವಾಗಿ ನೀಡಬೇಕು.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳನ್ನು ಜನನ ಹಾಗೂ ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜನನ ಮರಣ ನೋಂದಣಾಧಿಕಾರಿಗಳು ಅಥವಾ ಉಪನೋಂದಣಾಧಿಕಾರಿಗಳು ಸಂಬಂಧಿಸಿದ ಪ್ರದೇಶಗಳ ವರದಿಗಳನ್ನು ಸಕಾಲದಲ್ಲಿ ಸಲ್ಲಿಸಬೇಕು ಹಾಗೂ ಅವುಗಳನ್ನು ಸಂರಕ್ಷಿಸಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಜನ್ಮ ತಂತ್ರಾಂಶ ಅನುಷ್ಠಾನಕ್ಕಿಂತ ಹಿಂದಿನ ಅವಧಿಯ ಜನನ ಮರಣ ನೋಂದಣಿಯ ದಾಖಲೆಗಳನ್ನು ಶಾಶ್ವತವಾಗಿ ಕಾಯ್ದಿರಿಸಲು ಸ್ಕ್ಯಾಂನಿಂಗ್ ಮತ್ತು ಡಿಜಿಟೈಜೇಷನ್ ಮಾಡಿಸಿ ಈ ಜನ್ಮ ತಂತ್ರಾಂಶದೊಂದಿಗೆ ಪೋರ್ಟ್ ಮಾಡಿಸುವಂತೆ ತಿಳಿಸಿದರು.
ಆಸ್ಪತ್ರೆಯಲ್ಲಿ ಮಗು ಜನಿಸಿದ ತಕ್ಷಣ ಜನನ ಘಟನೆ ನೋಂದಾಯಿಸಿ ಉಚಿತ ಜನನ ಪ್ರಮಾಣ ಪತ್ರದೊಂದಿಗೆ ತಾಯಿ-ಮಗುವನ್ನು ಮನೆಗೆ ಕಳಿಸುವ ಧೇಯೋದ್ದೇಶ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಉಪನೋಂದಣಿ ಘಟಕಗಳನ್ನು ಆರಂಭಿಸಲಾಗಿದೆ. ಅನಗತ್ಯ ತಡೆ ನೋಂದಣಿಗಳನ್ನು ತಪ್ಪಿಸಲು ಜನನ ಹಾಗೂ ಮರಣ ಘಟಿಸಿದ ಸ್ಥಳದಲ್ಲಿಯೇ ನೋಂದಣಿಯಾಗುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಜನನ- ಮರಣ ಎಲ್ಲಿ ಸಂಭವಿಸುತ್ತದೆಯೋ ಅದೇ ನೋಂದಣಿ ಘಟಕದಲ್ಲಿ ಪ್ರಮಾಣ ಪತ್ರ ಪಡೆಯಲು ನೋಂದಣಿದಾರರು ಅಥವಾ ಉಪನೋಂದಣಾಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ನೋಂದಣಾಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಂಭವಿಸುವ ಪ್ರತಿಯೊಂದು ಜನನದ ಅಥವಾ ಮರಣದ ವಿಚಾರವನ್ನು ಎಚ್ಚರಿಕೆಯಿಂದ ತಿಳಿದುಕೊಂಡು ನೋಂದಣಿ ಮಾಡಬೇಕಾಗಿರುತ್ತದೆ ಹಾಗೂ ಆಸ್ಪತ್ರೆಗಳಲ್ಲಾಗುವ ಜನನ ಮರಣ ಘಟನೆಗಳು ಆಸ್ಪತ್ರೆಯಲ್ಲಿಯೇ ನೋಂದಣಿಯಾಗಬೇಕು ಎಂದು ತಿಳಿಸಿದರು.
ಜನನ ಹಾಗೂ ಮರಣ ಘಟನೆಗಳನ್ನು ಸಮರ್ಪಕವಾಗಿ ನಿಗದಿತ ಸಮಯದಲ್ಲಿ ನೋಂದಣಿ ಮಾಡಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು, ಎಎನ್‌ಎಂಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಕಂದಾಯ ಹಾಗೂ ಆರೋಗ್ಯ, ಪೊಲೀಸ್ ಸಿಬ್ಬಂದಿಗಳನ್ನು ಜನನ ಮರಣ ನೋಂದಣಾಧಿಕಾರಿಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಮೊಬೈಲ್ ವಾಟ್ಸ್ ಅಪ್ ಗ್ರೂಪ್ ರಚಿಸಿಕೊಂಡು ಘಟಿಸುವ ಪ್ರತಿಯೊಂದು ಜನನ ಮತ್ತು ಮರಣದ ಘಟನೆಗಳನ್ನು ತಪ್ಪದೇ ನೋಂದಾಯಿಸುವಂತೆ ಕ್ರಮ ವಹಿಸಬೇಕು ಈ ಬಗ್ಗೆ ಸಂಬಂಧಿಸಿದ ನೋಂದಣಾಧಿಕಾರಿ ಅಥವಾ ಉಪನೋಂದಣಾಧಿಕಾರಿ ಸೂಕ್ತ ನಿರ್ದೇಶನ ನೀಡುವಂತೆ ಅವರು ಸೂಚನೆ ನೀಡಿದರು.
ಈ ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗದೆ ಬಾಕಿ ಉಳಿದ ಘಟನೆಗಳನ್ನು ನೋಂದಾಯಿಸಲು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕರು ಜಂಟಿ ತಪಾಸಣೆ ನಡೆಸಿ ಬಾಕಿ ಉಳಿದ ಜನನ ಮರಣ ಘಟನೆಗಳನ್ನು ನಮೂನೆಗಳಲ್ಲಿ ಲಭ್ಯವಿರುವ ಬಗ್ಗೆ ವರದಿಯನ್ನು ಜಂಟಿಯಾಗಿ ದೃಢೀಕರಿಸಿ ಸಲ್ಲಿಸುವಂತೆ ಹಾಗೂ ಜಿಲ್ಲೆಯಲ್ಲಿ ಬಾಕಿ ಇರುವ 269 ಜನನ ಘಟನೆಗಳು ಹಾಗೂ 80 ಮರಣ ಘಟನೆಗಳ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಂಬಂದಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗರಿಕ ನೋಂದಣಿ ಪದ್ಧತಿಯಡಿ ಪ್ರತಿ ತಾಲೂಕಿನಲ್ಲಿ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯನ್ನು ನಡೆಸಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಮರಣಗಳಿಗೆ ಸಂಬಂಧಿಸಿದಂತೆ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ (ನಮೂನೆ 4/4 ಎ) ವರದಿಯನ್ನು ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು.
-ಯಶವಂತ್ ವಿ.ಗುರುಕರ್, ಜಿಲ್ಲಾಧಿಕಾರಿ