ದೇಶದ ಆಹಾರ ಖಾಸಗಿ ವ್ಯಕ್ತಿಗಳ ತಿಜೋರಿಯಲ್ಲಿ ಭದ್ರ: ಟಿಕಾಯತ್
ದೇಶಕ್ಕೆ ಆಹಾರ ಭದ್ರತೆ ನೀಡುತ್ತಿರುವ ರೈತರೇ ಅಭದ್ರತೆಗೆ ಒಳಗಾಗುತ್ತಿದ್ದಾರೆ| ಕಪ್ಪು ಕಾಯ್ದೆಗಳ ಮೂಲಕ ಆಹಾರ ಧಾನ್ಯಗಳ ಅಭಾವ ಸೃಷ್ಟಿಸಿ ಇಡೀ ಕೃಷಿ ವ್ಯವಸ್ಥೆಯನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳುವ ಹುನ್ನಾರ| ಅದನ್ನು ತಡೆಯಲು ನಮ್ಮ ಹೋರಾಟದ ಜತೆಗೆ ಇಡೀ ದೇಶದ ರೈತರು ಒಂದಾಗುತ್ತಿದ್ದಾರೆ ಎಂಬುದನ್ನು ಕೇಂದ್ರ ಬಿಜೆಪಿ ಸರ್ಕಾರ ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದ ಟಿಕಾಯತ್|
ಧಾರವಾಡ(ಏ.01): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಕಪ್ಪು ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದ ಜನರಿಗೆ ಸಿಗಬೇಕಾದ ಆಹಾರವನ್ನು ರೈತರಿಂದ ಕಸಿದುಕೊಂಡು ಖಾಸಗಿ ವ್ಯಕ್ತಿಗಳ ತಿಜೋರಿಯಲ್ಲಿಟ್ಟು ಕೀಲಿ ಹಾಕುವ ಪ್ರಯತ್ನದಲ್ಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ ಟಿಕಾಯತ್ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಆಹಾರ ಭದ್ರತೆ ನೀಡುತ್ತಿರುವ ರೈತರೇ ಅಭದ್ರತೆಗೆ ಒಳಗಾಗುತ್ತಿದ್ದಾರೆ. ಕಪ್ಪು ಕಾಯ್ದೆಗಳ ಮೂಲಕ ಆಹಾರ ಧಾನ್ಯಗಳ ಅಭಾವ ಸೃಷ್ಟಿಸಿ ಇಡೀ ಕೃಷಿ ವ್ಯವಸ್ಥೆಯನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳುವ ಹುನ್ನಾರ ನಡೆದಿದ್ದು, ಅದನ್ನು ತಡೆಯಲು ನಮ್ಮ ಹೋರಾಟದ ಜತೆಗೆ ಇಡೀ ದೇಶದ ರೈತರು ಒಂದಾಗುತ್ತಿದ್ದಾರೆ ಎಂಬುದನ್ನು ಕೇಂದ್ರ ಬಿಜೆಪಿ ಸರ್ಕಾರ ತಿಳಿದುಕೊಳ್ಳಬೇಕು ಎಂದು ಟಿಕಾಯತ್ ಎಚ್ಚರಿಸಿದ್ದಾರೆ.
ಮಂಡಿ (ಎಪಿಎಂಸಿ) ಹೊರಗಡೆ ಬೆಳೆಗಳನ್ನು ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈಗಾಗಲೇ ಮಧ್ಯಪ್ರದೇಶ ಇನ್ನಿತರ ಉತ್ತರ ಭಾರತದ ರಾಜ್ಯಗಳಲ್ಲಿ ಮಂಡಿ ಹೊರಗೆ ಮಾರಾಟ ಮಾಡಿದ ಬೆಳೆಗಾರರಿಗೆ ಕೆಲವು ಕಂಪನಿಗಳು ವಂಚಿಸಿದ ಉದಾಹರಣೆಗಳಿವೆ. ರೈತ ಪರ ಕಾನೂನು ಎನ್ನುವ ಪ್ರಧಾನ ಮಂತ್ರಿಗಳು ಈ ಕುರಿತು ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ ಎಂದು ಟಿಕಾಯತ್ ಗಮನ ಸೆಳೆದರು.
ಟಿಕಾಯತ್ ವಿರುದ್ಧ ಕೇಸ್ : ಯಾವ ಪ್ರಕರಣ
ಕೃಷಿ ಮಾರುಕಟ್ಟೆಗಳು ರಾಜ್ಯ ಪಟ್ಟಿಯಲ್ಲಿ ಬರುತ್ತಿದ್ದು, ಅವುಗಳನ್ನು ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತಿರುವುದು ವಿಷಾದನೀಯ ಎಂದ ಅವರು, ಅಂಬಾನಿ ಅವರು ವಿಧಾನಸೌಧದಲ್ಲಿ ತನ್ನ ಕಂಪನಿಯ ಕೌಂಟರ್ ತೆರೆದರೂ ಅಚ್ಚರಿಯೇನಿಲ್ಲ ಎಂದ ಬೇಸರ ವ್ಯಕ್ತಪಡಿಸಿದರು. ಬರೀ ಕೃಷಿ ಮಾತ್ರವಲ್ಲದೇ ಉದ್ಯೋಗ ಕ್ಷೇತ್ರವೂ ಪೆಟ್ಟು ತಿಂದಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೃಷಿ ಮಾತ್ರವಲ್ಲದೇ ದೇಶದ ಎಲ್ಲ ಸಮಸ್ಯೆಗಳನ್ನು ಒಗ್ಗೂಡಿಸಿಕೊಂಡು ಹೊಸ ವ್ಯವಸ್ಥೆ ತರಲು ಹೋರಾಟ ನಡೆಸುತ್ತಿದ್ದೇವೆ. ಇದು ಚಳವಳಿಯ ಆರಂಭ. ಬರುವ ದಿನಗಳಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಈ ಹೋರಾಟ ವಿಸ್ತರಣೆಯಾಗಲಿದೆ ಎಂದರು.
ಭಾಷಾತಜ್ಞ ಜಿ.ಎನ್. ದೇವಿ ಮಾತನಾಡಿ, ದೆಹಲಿಯಲ್ಲಿ ಹೊಸ ಸಂಸತ್ತು ನಿರ್ಮಾಣವಾಗುತ್ತಿದೆ. ಅದರ ಭದ್ರ ಬುನಾದಿಗೆ ರೈತರು ತಮ್ಮ ಹೊಲದ ಮಣ್ಣು ಕೊಡಬೇಕು. ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದು, ರೈತರು ತಮ್ಮ ಉಳಿವಿಗಾಗಿ ಮಣ್ಣಿನ ಸತ್ಯಾಗ್ರಹ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿ ಎಂಬ ರೈತರ ಬೇಡಿಕೆಗೆ ಬೆಲೆಯೇ ಇಲ್ಲವಾಗಿದೆ. ಆದರೆ, ಕಾರ್ಪೊರೇಟ್ ಕಂಪನಿಗಳ ಪರವಾಗಿ ಮೂರು ಕಾಯ್ದೆಗಳ ಬಗ್ಗೆ ಚರ್ಚೆಯೇ ಇಲ್ಲದೇ ಜಾರಿಗೆ ತರಲಾಗುತ್ತಿದೆ. 125 ದಿನಗಳ ಕಾಲ ಚಳವಳಿ ನಡೆಸಿದರೂ ರೈತರೊಂದಿಗೆ ಪ್ರಧಾನಿ ಮಾತುಕತೆ ಆಡದಿರುವುದು ಅವರ ಮೊಂಡುತನ ಪ್ರದರ್ಶಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಗೂ ಮುಂಚೆ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳೆದ 60 ದಿನಗಳಿಂದ ಹೋರಾಟ ನಡೆಸಿದ ಪಿ.ಎಚ್. ನೀರಲಕೇರಿ ಅವರನ್ನು ಭೇಟಿ ಮಾಡಿದರು. ರೈತ ಹೋರಾಟಗಾರರಾದ ಯದುವೀರ ಸಿಂಗ್, ಕೆ.ಟಿ. ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ, ಬಿ.ಆರ್. ಪಾಟೀಲ, ಕಬ್ಬು ಬೆಳೆಗಾರರ ಸಂಘದ ಕುರಬೂರು ಶಾಂತಕುಮಾರ, ಶಿವಾನಂದ ಹೊಳೆಹಡಗಲಿ, ಸಿದ್ದಣ್ಣ ಕುಂಬಾರ, ಶ್ರೀಶೈಲಗೌಡ ಕಮತರ ಮತ್ತಿತರು ಇದ್ದರು. ಈ ಕಾರ್ಯಕ್ರಮದ ನಂತರ ಕಲಾಭವನಕ್ಕೆ ತೆರಳಿದ ರೈತ ಮುಖಂಡರ ತಂಡವು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿತು. ಸಂಯುಕ್ತ ರೈತ ಸಂಘಗಳ ಮುಖಂಡರಾದ ವೆಂಕನಗೌಡ ಪಾಟೀಲ, ಗಂಗಾಧರ ಪಾಟೀಲ ಕುಲಕರ್ಣಿ ಇದ್ದರು.