ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಕೊರತೆ : ಬೆಳೆ ಒಣಗುವ ಭೀತಿಯಲ್ಲಿ ರೈತ
- ಮುಂಗಾರು ಆರಂಭದಲ್ಲಿ ಕೈ ಹಿಡಿದಿದ್ದ ವರುಣ ಇತ್ತೀಚಿನ ಹಲವು ದಿನಗಳಿಂದ ಕಣ್ಣಾಮುಚ್ಚಾಲೆ
- ಬೆವರು ಸುರಿಸಿದ್ದ ಬೆಳೆ ಕಳೆದುಕೊಳ್ಳುವ ಆತಂಕ ಇದೀಗ ಜಿಲ್ಲೆಯ ಅನ್ನದಾತನಿಗೆ
ಚಿಕ್ಕಬಳ್ಳಾಪುರ (ಅ.07): ಮುಂಗಾರು (Monsoon) ಆರಂಭದಲ್ಲಿ ಕೈ ಹಿಡಿದಿದ್ದ ವರುಣ ಇತ್ತೀಚಿನ ಹಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದು ಬೆವರು ಸುರಿಸಿದ ಬೆಳೆ ಕಳೆದುಕೊಳ್ಳುವ ಆತಂಕ ಇದೀಗ ಜಿಲ್ಲೆಯ ಅನ್ನದಾತನಿಗೆ (Farmers) ಎದುರಾಗಿದೆ.
ಹೌದು, ಈ ವರ್ಷವೂ ಮುಂಗಾರು ಉತ್ತಮಗೊಂಡು ಕೃಷಿ ಇಲಾಖೆ ನಿರೀಕ್ಷೆಗೂ ಮೀರಿ ದಾಖಲೆಯ ಶೇ.97.58 ರಷ್ಟುಬಿತ್ತನೆ ಗುರಿ ಸಾಧಿಸಲಾಗಿದೆ. ಆದರೆ ತಿಂಗಳಿಂದ ವರುಣನ (Rain) ಅವಕೃಪೆಗೆ ಬೆಳೆಗಳು ಒಳಗಾಗಿದ್ದು ತೇವಾಂಶದ ಕೊರೆತೆಗೆ ಈಗ ಒಣಗುವ ಪರಿಸ್ಥಿತಿ ತಲೆದೋರಿದೆ.
ಜಿಲ್ಲೆಯಲ್ಲಿ ಮಳೆಯ ಕೊರತೆ
ಹೇಳಿ ಕೇಳಿ ಜಿಲ್ಲೆಯು ಕಳೆದ ಮೂರು ವರ್ಷಗಳಿಂದ ಬರಗಾಲದಿಂದ (Drought) ಪಾರಾಗಿದೆ. 3 ವರ್ಷಗಳಿಂದಲೂ ಮುಂಗಾರು ಕೈ ಹಿಡಿದು ಉತ್ತಮ ಬೆಳೆಗಳು ಆಗಿ ರೈತರು ಸಂತೃಪ್ತಿ ಹೊಂದಿದ್ದಾರೆ. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಅರ್ಭಟಿಸಿ ಈಗ ಬೆಳೆಗಳು ತೆನೆ, ಕಾಳು ಕಟ್ಟುವ ಸಂದರ್ಭದಲ್ಲಿಯೆ ಕೈ ಕೊಡುತ್ತಿದ್ದು ವಿಶೇಷವಾಗಿ ನೆಲಗಡಲೆ, ತೊಗರಿ, ಅವರೆ, ರಾಗಿ, ಮುಸುಕಿನ ಜೋಳ ಮಳೆ ಕೊರತೆಗೆ ಬೆಳೆ ಕಳೆದುಕೊಳ್ಳುವ ಭೀತಿ ಜಿಲ್ಲೆಯ ಅನ್ನದಾತರನ್ನು ಆವರಿಸಿದೆ.
ಚಿಕ್ಕಬಳ್ಳಾಪುರ : ಬೆಳೆ ವಿಮೆ ಯೋಜನೆಗೆ ರೈತರ ನಿರಾಸಕ್ತಿ
ಹೀಗಾಗಿ ಜಿಲ್ಲೆಯಲ್ಲಿ ಮಳೆಯ ದರ್ಶನಕ್ಕೆ ರೈತರು ಆಕಾಶದತ್ತ ದಿಟ್ಟಿಸಿ ನೋಡುವಂತಾಗಿದೆ. ಆದರೆ ಮೋಡ ಕವಿದ ವಾತಾವರಣ ಜಿಲ್ಲೆಯಲ್ಲಿದ್ದರೂ ಮಳೆ ದರ್ಶನ ಮಾತ್ರ ಆಗುತ್ತಿಲ್ಲ.
ನಿರೀಕ್ಷೆಗೂ ಮೀರಿ ಬಿತ್ತನೆ:
ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ತೊಗರಿ, ಅವರೆ, ನೆಲಗಡಲೆ, ರಾಗಿ, ಮುಸುಕಿನ ಜೋಳ ಬೆಳೆಯಲಾಗಿದೆ. ವಿಶೇಷವಾಗಿ ರಾಗಿ ಕೃಷಿ ಇಲಾಖೆ ಗುರಿ ಮೀರಿ ಬಿತ್ತನೆಗೊಂಡಿದೆ. ಅದೇ ರೀತಿ ಅವರೆ, ತೊಗರಿ ಕೂಡ ಉತ್ತಮ ಬಿತ್ತನೆಯಾಗಿ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಕೃಷಿ ಇಲಾಖೆ (Agriculture Department) ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಜಿಲ್ಲೆಯಲ್ಲಿ 1.45 ಲಕ್ಷ ಹೆಕ್ಟೇರ್ ಪೈಕಿ 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡು ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಲಾಗಿದೆ.
ಸಿರಿಧಾನ್ಯಗಳಿಗೆ ಬಂಗಾರದ ಬೆಲೆ : ಬೆಳೆಯಲು ರೈತರ ಹಿಂದೇಟು
ಆದರೆ ಸೆಪ್ಪೆಂಬರ್ ತಿಂಗಳಲ್ಲಿ ಆಗಬೇಕಿದ್ದ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದೇ ಇರುವ ಪರಿಣಾಮ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಳೆ ಅಶ್ರಿತ ಬೆಳೆಗಳು ಒಣಗುತ್ತಿದ್ದು ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಹೇಳಿ ಕೇಳಿ ಜಿಲ್ಲೆಯ ಬಯಲು ಪ್ರದೇಶ ಆಗಿರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿದೆ. ಹೀಗಾಗಿ ಕಾಲಕಾಲಕ್ಕೆ ಮಳೆ ಆಗದೇ ಹೋದರೆ ಬೆಳೆಗಳು ರೈತನ ಕೈಗೆ ಸಿಗುವುದು ಕಷ್ಟವಾಗಲಿದೆ.
ಎಲ್ಲವೂ ಮಳೆಯಾಶ್ರಿತ ಬೆಳೆಗಳು
ಜೊತೆಗೆ ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು ಪ್ರದೇಶಗಳಲ್ಲಿ ಹೆಚ್ಚು ಮಳೆ ಅಶ್ರಿತ ಕೃಷಿ ಬೆಳೆಗಳು ಇದ್ದು ಈ ತಾಲೂಕುಗಳಲ್ಲಿ ಮಳೆ ಕೈ ಕೊಟ್ಟಿರುವ ಪರಿಣಾಮ ರೈತರ ಪಾಲಿಗೆ ವಾಣಿಜ್ಯ ಬೆಳೆಯಾದ ನೆಲಗಡಲೆ, ರಾಗಿ ಒಣಗುತ್ತಿವೆ. ನಾಲ್ಕೈದು ದಿನಗಳಲ್ಲಿ ಮಳೆ ಆಗದಿದ್ದರೆ ರೈತ ವಲಯಕ್ಕೆ ಭಾರೀ ನಷ್ಟಉಂಟಾಗುತ್ತದೆಯೆಂಬ ಆತಂಕ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸೆಪ್ಟೆಂಬರ್‌ನಲ್ಲಿ ಕೇವಲ 65 ಎಂಎಂ ಮಳೆ
ಜಿಲ್ಲೆಯಲ್ಲಿ ಸೆಪ್ಪೆಂಬರ್ ತಿಂಗಳಲ್ಲಿ ಆಗುವ ಮಳೆ ಅಶ್ರಿತ ಬೆಳೆಗಳಿಗೆ ಜೀವ ತುಂಬುತ್ತವೆ. ಆದರೆ ಸೆಪ್ಪೆಂಬರ್‌ನಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 159 ಎಂಎಂ ಆಗಬೇಕು. ಆದರೆ ಆಗಿದ್ದು ಮಾತ್ರ ಕೇವಲ 65 ಎಂಎಂ ಮಳೆ ಮಾತ್ರ. ಬರೋಬ್ಬರಿ 59.1 ಎಂಎಂ ಮಳೆ ಕಡಿಮೆ ಆಗಿದೆಯೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪ ಕನ್ನಡಪ್ರಭಗೆ ಮಾಹಿತಿ ನೀಡಿದ್ದಾರೆ. ನಾಲ್ಕೈದು ದಿನಗಳಲ್ಲಿ ಮಳೆ ಆಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.