ಬೆಂಗಳೂರು[ಜು.17]: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಒಳಗಾಗಿದ್ದ ರಾಯಚೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಮಧು ಪತ್ತಾರ್‌ ನಿಗೂಢ ಸಾವಿನ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಪೊಲೀಸರು ಯುವತಿಯ ‘ಆತ್ಮಹತ್ಯೆಗೆ ಪ್ರಚೋದನೆ’ ನೀಡಿದ ಆರೋಪದಡಿ ಮೃತಳ ಪ್ರಿಯತಮ ಸುದರ್ಶನ್‌ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.

ಮಂಗಳವಾರ ರಾಯಚೂರಿನ 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸುಮಾರು 1068 ಪುಟಗಳ ಚಾಜ್‌ರ್‍ಶೀಟ್‌ ಸಲ್ಲಿಸಿರುವ ತನಿಖಾ ತಂಡ ಸುದರ್ಶನ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಅಡ್ಡಗಟ್ಟಿಹಲ್ಲೆ, ಇಚ್ಛೆಗೆ ವಿರುದ್ಧವಾಗಿ ಹಿಂಬಾಲಿಸುವುದು ಹಾಗೂ ಯುವತಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖಿಸಿದ್ದು, 63 ಸಾಕ್ಷ್ಯ, 45 ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

2014ರಲ್ಲಿ ಪಿಯುಸಿಯಲ್ಲಿ ಮಧು ಮತ್ತು ಸುದರ್ಶನ್‌ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಮಧು ವಿಜ್ಞಾನ ವಿದ್ಯಾರ್ಥಿನಿಯಾಗಿದ್ದರೆ, ಸುದರ್ಶನ್‌ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ. ಆ ವೇಳೆ ಅವರ ಮಧ್ಯೆ ಸ್ನೇಹವಾಗಿದೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಪಿಯುಸಿ ಮುಗಿದ ಬಳಿಕವೂ ಗೆಳೆತನ ಹಾಗೆಯೇ ಮುಂದುವರೆದಿತ್ತು. ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಧು ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದಳು. ಇತ್ತ ಸುದರ್ಶನ್‌ ಬಿಕಾಂ ಪದವೀಧರನಾಗಿದ್ದ.

ಮಧು ಆತ್ಮಹತ್ಯೆಗೆ ಆರು ತಿಂಗಳ ಹಿಂದಿನಿಂದ ಸುದರ್ಶನ್‌ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತು. ಮಧು ನಡವಳಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಜಗಳ ಮಾಡುತ್ತಿದ್ದ. ಅಲ್ಲದೆ, ನಿಂದಿಸಿ ಹಲ್ಲೆ ನಡೆಸುತ್ತಿದ್ದ. ಇದೇ ರೀತಿ ಎರಡ್ಮೂರು ಬಾರಿ ಸಾರ್ವಜನಿಕವಾಗಿ ಮಧು ಮೇಲೆ ಆರೋಪಿ ಹಲ್ಲೆ ನಡೆಸಿದ್ದ. ಆರೋಪಿ ವರ್ತನೆಯಿಂದ ಬೇಸತ್ತ ಯುವತಿ ಮಧು ಪ್ರಿಯಕರನಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಳು. ಆದರೂ ಯುವತಿಯನ್ನು ಬಿಡದೆ ಆರೋಪಿ ಹಿಂಬಾಲಿಸುತ್ತಿದ್ದ.

ಕಳೆದ ಏ.13ರಂದು ಮಧು ಎಂದಿನಂತೆ ಮನೆಯಿಂದ ಕಾಲೇಜಿಗೆ ತೆರಳಿದ್ದಳು. ದಾರಿ ಮಧ್ಯೆ ಮಧುಗೆ ಆರೋಪಿ ಎದುರಾಗಿದ್ದು ಮಧು ಜತೆ ಜಗಳವಾಡಿದ್ದ. ಸಾರ್ವಜನಿಕರು ಜಗಳ ಬಿಡಿಸಿ ಕಳುಹಿಸಿದ್ದರು. ಅಲ್ಲಿಂದ ಮಧು ನೇರವಾಗಿ ತಾನು ವ್ಯಾಸಂಗ ಮಾಡುತ್ತಿದ್ದ ನವೋದಯ ಕಾಲೇಜಿನ ಆವರಣಕ್ಕೆ ತೆರಳಿದ್ದಳು. ಮಧುನನ್ನು ಹಿಂಬಾಲಿಸಿಕೊಂಡು ಬಂದ ಆರೋಪಿ ಕಾಲೇಜು ಆವರಣದ ಪಾರ್ಕಿಂಗ್‌ ಸ್ಥಳದಲ್ಲಿದ್ದ ಯುವತಿಯ ದ್ವಿಚಕ್ರ ವಾಹನದ ಕೀ ಮತ್ತು ಮೊಬೈಲ್‌ ಕಸಿದುಕೊಂಡಿದ್ದ. ನೀನು ನನ್ನನ್ನೇ ಪ್ರೀತಿಸಬೇಕು. ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆವೊಡ್ಡಿದ್ದ. ಪ್ರಿಯಕರ ಸುದರ್ಶನ್‌ ಕಿರುಕುಳದಿಂದ ಬೇಸತ್ತ ಯುವತಿ ನೇರವಾಗಿ ಕಾಲೇಜು ಆವರಣದಿಂದ ನಿರ್ಜನ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಯುವತಿಯನ್ನು ಹಿಂಬಾಲಿಸಿಕೊಂಡು ಹೋದ ಸುದರ್ಶನ್‌ಗೆ ಮಧು ಯಾವ ಸ್ಥಳಕ್ಕೆ ಹೋದಳು ಎಂಬ ಬಗ್ಗೆ ಗೊತ್ತಾಗಿಲ್ಲ. ಅಂದೇ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಆಕೆಯ ಪೋಷಕರು ಮಧು ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಕೊಳೆತಿದ್ದ ಮೃತ ದೇಹ:

ಆತ್ಮಹತ್ಯೆ ಮಾಡಿಕೊಂಡು ಕೆಲ ದಿನಗಳಾಗಿದ್ದರಿಂದ ಮೃತ ದೇಹ ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿತ್ತು. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಸಿಮೆಎಣ್ಣೆ, ಪೆಟ್ರೋಲ್‌ ಸುರಿದಿಲ್ಲ. ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಮರಣೊತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿದೆ ಎಂದು ಹೇಳಲಾಗಿದೆ.

ಮಂತ್ರಾಲಯಕ್ಕೆ ಹೋಗಿದ್ದರು

ಮಧು ಆತ್ಮಹತ್ಯೆಗೂ ಕೆಲ ದಿನಗಳ ಹಿಂದೆ ಪ್ರಿಯತಮ ಸುದರ್ಶನ್‌ ಜತೆ ರಾಯಚೂರಿನ ಮಂತ್ರಾಲಯಕ್ಕೆ ಹೋಗಿದ್ದಳು. ಮಂತ್ರಾಲಯದಲ್ಲಿ ಕೊಠಡಿ ಕಾಯ್ದಿರಿಸಿ ಅಲ್ಲಿಯೇ ಉಳಿದುಕೊಂಡಿದ್ದರು. ಮಧು ನಾಪತ್ತೆಯಾಗುತ್ತಿದ್ದಂತೆ ಸುದರ್ಶನ್‌ ತನ್ನ ತಾಯಿ ಜತೆ ಮಂತ್ರಾಲಯಕ್ಕೆ ತೆರಳಿ ಹುಡುಕಾಟ ನಡೆಸಿದ್ದ. ಅಲ್ಲದೆ, ಮಂತ್ರಾಲಯದಲ್ಲಿ ಮಧು ಎಲ್ಲಿಗೆ ಹೋಗಿದ್ದಾಳೆ ಎಂದು ಭವಿಷ್ಯ ಕೂಡ ಕೇಳಿದ್ದ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.