Asianet Suvarna News Asianet Suvarna News

ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ: ಸಚಿವ ಶೆಟ್ಟರ್‌

ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಮಲಪ್ರಭಾ ಕುಡಿಯುವ ನೀರು| ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌|ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ| ಸಚಿವ ಸಂಪುಟದ ಒಪ್ಪಿಗೆ ಪಡೆದು ಜನವರಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸೂಕ್ತ ಕ್ರಮ|

Pure Drinking Water Supply To all the villages in the district
Author
Bengaluru, First Published Dec 8, 2019, 7:34 AM IST

ಧಾರವಾಡ(ಡಿ.08): ಜಿಲ್ಲೆಯ ಎಲ್ಲಾ ಶಾಸಕರ ಆಸಕ್ತಿ ಮತ್ತು ಕಾಳಜಿಯಿಂದಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಮಲಪ್ರಭಾ ನದಿ ಮೂಲದಿಂದ ಕುಡಿಯುವ ನೀರು ಪೂರೈಸಲು, 1500 ಕೋಟಿ ರೂ.ಗಳ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗಿದೆ. ಶೀಘ್ರದಲ್ಲಿಯೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಬೃಹತ್‌, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಇಲ್ಲಿನ ಆಲೂರು ವೆಂಕಟರಾವ್‌ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ನದಿಮೂಲದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವರೂ ಕೂಡ ಒಪ್ಪಿಗೆ ನೀಡಿದ್ದಾರೆ. ಸಚಿವ ಸಂಪುಟದ ಒಪ್ಪಿಗೆ ಪಡೆದು ಜನವರಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಧಿಕಾರ ಇರುವುದು ರೈತರಿಗೆ ಸಹಾಯ ಮಾಡಲು ಅವರನ್ನು ನಿತ್ಯವೂ ಕಚೇರಿಯಿಂದ ಮನೆಗೆ ಓಡಾಡಿಸಬಾರದು. ರೈತರೊಂದಿಗೆ ಸಂವಾದ ಮಾಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಕೃಷಿ ಸಾಲ ವಿತರಿಸುವ ವಿಧಾನವನ್ನು ರಾಷ್ಟಿ್ರೕಕೃತ ಬ್ಯಾಂಕುಗಳು ಸಾಧ್ಯವಾದಷ್ಟುಸರಳೀಕರಣ ಮಾಡಬೇಕು. ಗ್ರಾಮೀಣ ಭಾಗಗಳ ರೈತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಾಲ ಪಡೆಯಲು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಚಿವರು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚಿಸಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಬ್ಯಾಂಕ್‌ ಅಧಿಕಾರಿಗಳಿಗೆ ಲಗಾಮು ಇಲ್ಲದಂತಾಗಿದೆ. ರೈತರಿಗೆ ಮಾಹಿತಿ ನೀಡದೆ ಅವರ ಖಾತೆಗೆ ಜಮೆಯಾಗಿರುವ ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರು ಅಳಲು ತೊಂಡಿಕೊಂಡಿದ್ದು ಈ ಕೂಡಲೇ ಅವರಿಗೆ ಆ ಹಣವನ್ನ ಮರಳಿಸುವಂತೆ ಸೂಚಿಸಿದರು.

ಪಶು ಸಂಗೋಪನಾ ಇಲಾಖೆಯ ಅಧಿಕಾರಿ ವರದಿ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಅಮೃತ ದೇಸಾಯಿ ದನ- ಕರುಗಳಿಗೆ ಚಿಕಿತ್ಸೆ ನೀಡಲು ಔಷಧಿಗಳ ಕೊರತೆಯಿದೆ ಎಂದು ರೈತರಿಗೆ ಬೇರೆ ಅಂಗಡಿಗಳಲ್ಲಿ ಖರೀದಿಸಲು ಹೇಳುತ್ತಿದ್ದಾರೆ ಪಶು ವೈದ್ಯರು. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕು ಎಂದರು.

ಈ ಬಾರಿ ತೇವಾಂಶ ಹೆಚ್ಚಿಗೆ ಇರುವುದರಿಂದ ಇದುವರೆಗೆ ಮಾವು ಬೆಳೆ ಹೂ ಬಿಟ್ಟಿಲ್ಲ. ರೈತರು ಆತಂಕದಲ್ಲಿದ್ದಾರೆ. ಮಾವು ಬೆಳೆಗಾರರಿಗೆ ವಿಮಾ ಸೌಲಭ್ಯ ಪಡೆಯಲು ಹೆಚ್ಚು ಅರಿವು ಮೂಡಿಸಬೇಕು. ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ರೈತರು ಹೊಲಗಳಿಗೆ ತೆರಳಲು ತೊಂದರೆಯಾಗಿದೆ. ಅವುಗಳನ್ನು ಸಂಚಾರಯೋಗ್ಯವಾಗಿ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಎಸ್‌.ಎಸ್‌. ಅಬೀದ್‌ ಮಾತನಾಡಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 2019-20 ನೇ ಸಾಲಿನ ಹಿಂಗಾರು ಹಂಗಾಮಿಗೆ 1,29,447 ರೈತರು ಹಾಗೂ ಮುಂಗಾರು ಹಂಗಾಮಿಗೆ 1,05,170 ರೈತರು ನೋಂದಣಿ ಮಾಡಿಕೊಂಡಿದ್ದಾರೆ. 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 93,904 ರೈತರು ನೋಂದಾಯಿಸಿಕೊಂಡು, 17.463 ಕೋಟಿ ವಿಮಾ ಕಂತು ಪಾವತಿಸಿದ್ದಾರೆ. ಒಟ್ಟು 44,834 ರೈತರಿಗೆ 105.809 ಕೋಟಿ ಪರಿಹಾರ ಘೋಷಿಸಲಾಗಿದೆ. 3967 ರೈತರಿಗೆ 8.229 ಕೋಟಿ ಪಾವತಿ ಬಾಕಿ ಇದೆ ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾತನಾಡಿ, ಹಾನಿಗೆ ಒಳಗಾದ ಮನೆಗಳ ಸಮೀಕ್ಷೆ ಮಾಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಮೀಕ್ಷೆ ಪೂರ್ಣಗೊಂಡ ನಂತರದಲ್ಲೂ ಜಿಲ್ಲೆಯಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಅಧಿಕಾರಿಗಳಿಂದ ಪರಿಶೀಲನೆ ಮುಗಿದಿದ್ದು, ಸರ್ಕಾರದ ಆದೇಶ ಬಂದ ತಕ್ಷಣ ಅವುಗಳನ್ನು ಸಹ ದಾಖಲಿಸಿ, ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ಅತಿಯಾದ ಮ

ಳೆ ಹಾನಿಯಿಂದಾಗಿ ಜಿಲ್ಲೆಯಲ್ಲಿ 128 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ. ಇವು ಸೇರಿದಂತೆ 19857 ಮನೆಗಳಿಗೆ ಹಾನಿಯಾಗಿದ್ದು, ಈಗಾಗಲೇ . 105 ಕೋಟಿ ಪರಿಹಾರ ಪಾವತಿಸಲಾಗಿದೆ. ಉಳಿದ ಫಾಲಾನುಭವಿಗಳಿಗೂ ಪರಿಹಾರ ಪಾವತಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಸಭೆಯಲ್ಲಿ ತೋಟಗಾರಿಕೆ, ರೇಷ್ಮೆ, ಗ್ರಾಮೀಣ ಕುಡಿಯುವ ನೀರು, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಜಲಮಂಡಳಿ, ಪಿಎಂಜಿವೈ ಸೇರಿದಂತೆ ವಿವಿಧ ಇಲಾಖೆ, ನಿಗಮ- ಮಂಡಳಿಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು.
ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚನ್ನಮ್ಮ ಶಿವನಗೌಡರ್‌, ನಿಂಗಪ್ಪ ಘಾಟೀನ್‌, ಕಲ್ಲಪ್ಪ ಪುಡಕಲಕಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ್‌, ಉಪ ಪೊಲೀಸ್‌ ಆಯುಕ್ತ ಡಿ.ಎಲ್‌. ನಾಗೇಶ, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಆಕೃತಿ ಬನ್ಸಾಲ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ

ಪ್ರವಾಹ ಪರಿಹಾರ ವಿತರಣೆಗೆ ಮೊದಲ ಆದ್ಯತೆ ನೀಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಜಗದೀಶ ಶೆಟ್ಟರ್‌ ಹೇಳಿದರು.
ಇಲ್ಲಿನ ವಾರ್ತಾ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯಕ್ಕೆ ಭೇಟಿ ನೀಡಿ, ಜಿಲ್ಲಾ ಪಂಚಾಯತ್‌ ಸದಸ್ಯರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ಪ್ರವಾಹ ಪರಿಹಾರದ ಮೊದಲ ಹಂತವಾಗಿ ಸುಮಾರು 600 ಕೋಟಿ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಶಾಲಾ ಕಟ್ಟಡಗಳ ದುರಸ್ತಿ, ಗ್ರಾಮೀಣ ಹಾಗೂ ಹೊಲದ ರಸ್ತೆಗಳ ದುರಸ್ತಿ ಮತ್ತು ಮನೆ ಪರಿಹಾರ ನೀಡಲಾಗುತ್ತಿದೆ. ಪ್ರವಾಹ ಹಾನಿ ಕುರಿತು ಮರುಸಮೀಕ್ಷೆ ಮಾಡಲು ಬೇಡಿಕೆ ಬಂದಿದ್ದು, ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನದ ಬೇಡಿಕೆಗಾಗಿ ಎಲ್ಲ ಇಲಾಖೆಗಳಿಂದ ಕ್ರೋಢೀಕರಿಸಿದ ಒಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಬರುವ ಬಜೆಟ್‌ದಲ್ಲಿ ಅಳವಡಿಸಿ ಮುಖ್ಯಮಂತ್ರಿಗಳಿಂದ ಘೋಷಿಸಲಾಗುವುದು ಎಂದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳು ಹಾಗೂ ಹೊಲಮನೆ ರಸ್ತೆಗಳು ಹಾಳಾಗಿದ್ದು, ರೈತರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ತುಂಬಾ ತೊಂದರೆಯಾಗಿದ್ದು, ಆದಷ್ಟು ಬೇಗ ಸಚಿವರು ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸಮಸ್ಯೆ ಪರಿಹರಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ವಿಜಯಲಕ್ಷಿತ್ರ್ಮ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚನ್ನಮ್ಮ , ನಿಂಗಪ್ಪ ಘಾಟೀನ್‌, ಕಲ್ಲಪ್ಪ ಪುಡಕಲಕಟ್ಟಿ, ಜಿಲ್ಲಾ ಪಂಚಾಯತ್‌ ಇತರ ಸದಸ್ಯರು ಪಾಲ್ಗೊಂಡು, ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
 

Follow Us:
Download App:
  • android
  • ios