Asianet Suvarna News Asianet Suvarna News

ತುಂಗಭದ್ರಾ ನೀರು ಪೂರೈಕೆ ಸ್ಥಗಿತ: ಲಕ್ಷ್ಮೇಶ್ವರದಲ್ಲಿ ಪ್ರತಿಭಟನೆ

ಪುರಸಭೆ ಸದಸ್ಯರು ಕರವೇ ಕಾರ್ಯಕರ್ತರಿಂದ ಪುರಸಭೆ ಅಧಿಕಾರಿಗಳ ಮೇಲೆ ಆಕ್ರೋಶ| ಶುದ್ಧೀಕರಣ ಘಟಕದ ಟಿಸಿ ಸುಟ್ಟು 15-20 ದಿನಗಳಾಗಿದ್ದರೂ ಸ್ಥಳೀಯ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ| ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಪಟ್ಟಣದ ಜನತೆಗೆ ನದಿ ನೀರು ಮರೀಚಿಕೆ|

Protest Held at Lakshmeshwar for Driking Water
Author
Bengaluru, First Published Dec 8, 2019, 8:13 AM IST

ಲಕ್ಷ್ಮೇಶ್ವರ(ಡಿ.08): ಕಳೆದ 15 ದಿನಗಳಿಂದ ಪಟ್ಟಣದಲ್ಲಿ ತುಂಗಭದ್ರಾ ನದಿ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಟಿಸಿ ದುರಸ್ತಿಗೊಳಿಸದೇ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿ ಶನಿವಾರ ಪುರಸಭೆ ಸದಸ್ಯರು ಮತ್ತು ಕರವೇ ಕಾರ್ಯಕರ್ತರು ಜಂಟಿಯಾಗಿ ಪುರಸಭೆಯ ಮುಂದೆ ದಿಢೀರ್‌ ಪ್ರತಿಭಟನೆ ನಡೆಸಿದರು.

ನೀರು ಪೂರೈಕೆಯ ಮಾರ್ಗದಲ್ಲಿನ ಸೂರಣಗಿ ಹತ್ತಿರದ ಶುದ್ಧೀಕರಣ ಘಟಕದ ಟಿಸಿ ಸುಟ್ಟು 15-20 ದಿನಗಳಾಗಿದ್ದರೂ ಸ್ಥಳೀಯ ಪುರಸಭೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಪಟ್ಟಣದ ಜನತೆಗೆ ನದಿ ನೀರು ಮರೀಚಿಕೆಯಾಗಿದೆ. ಸುಟ್ಟಿರುವ ಟಿಸಿ ದುರಸ್ತಿ ಕುರಿತು ಅಧಿಕಾರಿಗಳು ದಿನಕ್ಕೊಂದು ಸಬೂಬು ಹೇಳುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಆದರೆ ಜನತೆ ಆಯಾ ವಾರ್ಡಿನ ಸದಸ್ಯರುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದರಿಂದ ಸಿಟ್ಟಿಗೆದ್ದ ಪುರಸಭೆ ಸದಸ್ಯರು ಪುರಸಭೆ ಮುಂದೆ ದಿಢೀರ್‌ ಪ್ರತಿಭಟನೆ ಆರಂಭಿಸಿದರು. ಇವರಿಗೆ ಕರವೇ ಕಾರ್ಯಕರ್ತರು ಸಾಥ್‌ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿಭಟನಾಕಾರರು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದು ಸ್ಪಷ್ಟಭರವಸೆ ನೀಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಗದಗನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಜಿ.ಎನ್‌. ಗೋನಾಳ, ಕಿರಿಯ ಎಂಜಿನಿಯರ್‌ ಎಸ್‌.ಬಿ. ಮರಿಗೌಡರ ಮತ್ತು ಮುಖ್ಯಾಧಿಕಾರಿ ಆರ್‌.ಎಂ.ಪಾಟೀಲ ಸ್ಥಳಕ್ಕಾಗಮಿಸಿ ಸದಸ್ಯರ ಅಹವಾಲನ್ನು ಆಲಿಸಿದರು. ಈ ಸಂದರ್ಭದಲ್ಲಿ ಸದಸ್ಯ ಮಹೇಶ ಹೊಗೆಸೊಪ್ಪಿನ ಅವರು ನಾಲ್ಕೈದು ದಿನಗಳಲ್ಲಿ ನೀರಿನ ಸಮರ್ಪಕ ವ್ಯವಸ್ಥೆಯಾಗಬೇಕು. ಅಲ್ಲದೇ ನೀರು ಸರಬರಾಜಿನ ವ್ಯವಸ್ಥೆಯಲ್ಲಿ ಈ ಹಿಂದಿನ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾಡಿದ ನಿರ್ಲಕ್ಷ್ಯ ಮತ್ತು ಅವ್ಯವಹಾರ ತನಿಖೆಯಾಗಬೇಕು. ಇಲ್ಲದಿದ್ದರೆ ಸಾರ್ವಜನಿಕರು, ರೈತರು, ಸಂಘಟನೆಯವರೊಡಗೂಡಿ ಲಕ್ಷ್ಮೇಶ್ವರ ಸ್ವಂಪ್ರೇರಿತ ಬಂದ್‌ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸದಸ್ಯರಾದ ಬಸವರಾಜ ಓದುನವರ, ಕರವೇ ತಾಲೂಕು ಅಧ್ಯಕ್ಷ ನಾಗೇಶ ಅಮರಾಪುರ, ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಪ್ರಕಾಶ ಕೊಂಚಿಗೇರಿಮಠ, ವಿಜಯ ಆಲೂರ, ಕಾರ್ತಿಕ ಕುಳಗೇರಿ, ಹನಮಂತಪ್ಪ ದುತ್ತರಗಿ, , ಆಸ್ಪಾಕ್‌ ಬಾಗೋಡಿ, ರೈತರಾದ ಶಿವಾನಂದ ಲಿಂಗಶೆಟ್ಟಿ, ಟಾಕಪ್ಪ ಸಾತಪುತೆ, ಖಾನಸಾಬ ಸೂರಣಗಿ, ಮಾಂತೇಶ ಗೋಡಿ, ಸಿದ್ದಪ್ಪ ದುರಗಣ್ಣವರ ಸೇರಿ ಅನೇಕರಿದ್ದರು.

ಈ ಸಂದರ್ಭದಲ್ಲಿ ಹಾಜರಿದ್ದ ಅಧಿಕಾರಿಗಳು ಇನ್ನು 2-3 ದಿನಗಳಲ್ಲಿ ನೀರಿನ ವ್ಯವಸ್ಥೆ ಸರಿಪಡಿಸಲಾಗುವುದು ಮತ್ತು ಈ ಹಿಂದಿನ ಮುಖ್ಯಾಧಿಕಾರಿಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
 

Follow Us:
Download App:
  • android
  • ios