ಬುಡಕಟ್ಟು ಸಂಸ್ಕೃತಿ ಉಳಿಸುವುದು ಸವಾಲಿನ ಕೆಲಸ
ಆಧುನಿಕತೆಯ ಹಲವು ಸವಾಲುಗಳ ನಡುವೆ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವುದೂ ಸಹ ಒಂದು ಸವಾಲಿನ ಕೆಲಸ ಎಂದು ನಾಡೋಜ ಪೊ›.ಬರಗೂರು ರಾಮಚಂದ್ರಪ್ಪ ಹೇಳಿದರು.
ತುಮಕೂರು : ಆಧುನಿಕತೆಯ ಹಲವು ಸವಾಲುಗಳ ನಡುವೆ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವುದೂ ಸಹ ಒಂದು ಸವಾಲಿನ ಕೆಲಸ ಎಂದು ನಾಡೋಜ ಪೊ›.ಬರಗೂರು ರಾಮಚಂದ್ರಪ್ಪ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವ ಮಾನಸ ಸಭಾಂಗಣದಲ್ಲಿ ಸಾಹಿತಿ, ಸಂಸ್ಕೃತಿ ಚಿಂತಕ ಡಾ.ಕೆ.ತಿಮ್ಮಯ್ಯ ಅವರ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬುಡಕಟ್ಟು ಮತ್ತು ಆದಿವಾಸಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅನೇಕ ಅಡ್ಡಿ ಆತಂಕಗಳಿವೆ. ಅವರ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಂಡೇ ಮುಖ್ಯ ವಾಹಿನಿಗೆ ತರುವುದು ಒಂದು ಸವಾಲಿನ ಕೆಲಸವೇ ಆಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಆಚಾರ ವಿಚಾರಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಿ ಕೃತಿಗಳನ್ನು ಹೊರತಂದಿರುವ ಡಾ.ಕೆ.ತಿಮ್ಮಯ್ಯ ಅವರ ಶ್ರಮ ಅಭಿನಂದನಾರ್ಹ ಎಂದರು.
ಹಿಂದೆ ನಾವು ಕಂಡಂತ ಒಬ್ಬ ದಿಟ್ಟಚಿಂತಕ ನೆಹರು ಅವರು ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವುದು ಸುಲಭ. ಆದರೆ ಅನುಷ್ಠಾನಕ್ಕೆ ತರುವುದು ಕಷ್ಟಎಂದು ಹೇಳಿದ್ದರು. ಅವರ ಆಗಿನ ಹೇಳಿಕೆಯನ್ನು ನಾವಿಂದು ಕಾಣುತ್ತಿದ್ದೇವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯಗಳು, ಭಿನ್ನಾಭಿಪ್ರಾಯಗಳು ಇರಬೇಕು. ಚರ್ಚೆಗಳಿಗೆ ಅವಕಾಶ ಇರಬೇಕು. ಈ ದೇಶದಲ್ಲಿ ಬಹಳ ಹಿಂದಿನಿಂದಲೂ ಮಹಿಳೆಯ ಸ್ವಾತಂತ್ರ್ಯಹರಣ ಮಾಡಲಾಗಿದೆ. ಈ ದೇಶದ ಸಂಪ್ರದಾಯ ವಾದಿಗಳು ಪುರುಷ ಪ್ರಾಧಾನ್ಯತೆಯನ್ನು ಪೋಷಿಸಿಕೊಂಡು ಬಂದು ಮಹಿಳೆಯನ್ನು ಚೌಕಟ್ಟುಗಳ ಒಳಗೆ ಬಂಧಿಸಿದರು. ಸಾಂಪ್ರದಾಯಿಕ ಮನಸ್ಸುಗಳು ಯಾವತ್ತೂ ಆಕೆಯನ್ನು ಹೊರಗೆ ಬಿಡಲಿಲ್ಲ. ಕೆಲವು ವರ್ಗಗಳಿಗೆ ಇದು ಸೀಮಿತವಾಯಿತು. ಇಂತಹ ಅನೇಕ ಕಟ್ಟುಪಾಡುಗಳನ್ನು ಸಡಿಲಿಸಿ ಹೊರಬರುವ ಪ್ರಯತ್ನಗಳು ನಡೆದದ್ದು ಅತ್ಯಂತ ಶ್ಲಾಘನಾರ್ಹ. ಆದರೆ ಇಂದಿಗೂ ಸಹ ಕೆಲವು ಅಮಾನವೀಯ ಆಚರಣೆಗಳು ಇರುವುದು ದುರಂತ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹೊಳಲ್ಕೆರೆ ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ರಾಮಾಯಣ, ಮಹಾಭಾರತದಂತಹ ದೊಡ್ಡ ಕೃತಿಗಳನ್ನು ಗಮನಿಸಿದಾಗ ಅದನ್ನು ಬರೆದವರು ತಳಸಮುದಾಯಗಳು ಎಂಬುದು ಅರ್ಥವಾಗುತ್ತದೆ. ಬಹಳಷ್ಟುಹಿಂದುಳಿದ ಸಮುದಾಯಗಳಲ್ಲಿ ಪ್ರತಿಭೆಗಳು ಇರುತ್ತವೆ. ಅದರೆ ಅವಕಾಶಗಳಿಲ್ಲದೆ ಕಮರಿಹೋಗುತ್ತಿವೆ. ಬರವಣಿಗೆ ಯಾರ ಸ್ವತ್ತೂ ಅಲ್ಲ. ಆದರೆ ಸಾಧನೆ ಮುಖ್ಯ ಎಂದರು.
ಬೆಂಗಳೂರು ವಿ.ವಿ. ಪ್ರಾಧ್ಯಾಪಕ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಅವರು ಕಾಡುಗೊಲ್ಲ ಸಾಲಾವಳಿ ಕೃತಿ ಕುರಿತು ಮಾತನಾಡಿ, ಸಂಶೋಧನೆ ಎಂಬುದು ಒಂದು ತಂತಿಯ ಮೇಲಿನ ನಡಿಗೆ ಇದ್ದಂತೆ. ಒಂದು ಸಮುದಾಯದ ಸಂಸ್ಕೃತಿಯ ಪಂಗಡ, ಉಪ ಪಂಗಡಗಳ ಅಧ್ಯಯನ ಇಲ್ಲದೆ ಹೋದರೆ ಸಂಶೋಧನೆ ಪೂರ್ಣವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಶೋಧನೆ ನಿರಂತರ ಬದಲಾವಣೆಗೆ ಒಗ್ಗಿಕೊಳ್ಳಬೇಕು. ವಿವಿಧ ಸಮುದಾಯಗಳು ಇಂದು ಮೀಸಲಾತಿಯ ಕಡೆಗೆ ಹೋರಾಟಕ್ಕೆ ಇಳಿಯುತ್ತಿವೆ. ಆದರೆ ಮೀಸಲಾತಿಗೆ ಎಲ್ಲ ವಿಧದಲ್ಲೂ ಅರ್ಹತೆ ಹೊಂದಿರುವ ಕಾಡುಗೊಲ್ಲ ಬುಡಕಟ್ಟು ಸಮುದಾಯ ಹೋರಾಟಗಳಿಂದ ದಿಕ್ಕು ತಪ್ಪುತ್ತಿದೆ. ಸಂಘಟನಾತ್ಮಕ ಹೋರಾಟ ಇಲ್ಲದೆ ಹೋದರೆ ಸವಲತ್ತುಗಳನ್ನು ದಕ್ಕಿಸಿಕೊಳ್ಳುವುದು ಕಷ್ಟಎನ್ನುವ ಸ್ಥಿತಿ ಬಂದಿರುವುದು ಶೋಚನೀಯ ಎಂದರು.
ದಾವಣಗೆರೆಯ ಸಂಸ್ಕೃತಿ ಚಿಂತಕ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ಹಾಲುಮೀಸಲು ಕೃತಿ ಕುರಿತು ಮಾತನಾಡಿ, ಕಾಡುಗೊಲ್ಲರ ಬಗ್ಗೆ 25 ಅಧ್ಯಯನಗಳು ನಡೆದಿವೆ. 60 ಪುಸ್ತಕಗಳು ಪ್ರಕಟವಾಗಿವೆ. 40 ಪ್ರಾಚೀನ ಕಾವ್ಯಗಳಲ್ಲಿ ಈ ಸಮುದಾಯದ ಬಗ್ಗೆ ಪ್ರಸ್ತಾಪ ಇದೆ. ಇದರೊಳಗೆ ಇಂದು ಡಾ.ಕೆ.ತಿಮ್ಮಯ್ಯ ಅವರ ಕೃತಿಗಳು ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ವಿಷಯ. ತಿಮ್ಮಯ್ಯ ಅವರದ್ದು ವಿಸ್ಕೃತ ಕ್ಷೇತ್ರವಾಗಿದ್ದು, ಬುಡಕಟ್ಟಿನ ವಿಷಯದ ಬಗ್ಗೆ ಸಾಕಷ್ಟುಅಧ್ಯಯನ ನಡೆಸಿದ್ದಾರೆ ಎಂದರು.
ಕೇಲುಬಾಳೆ ಕೃತಿ ಕುರಿತು ಸಾಹಿತಿ ದೊಡ್ಡಬಾಣಗೆರೆ ಮಾರಣ್ಣ, ಮೂರು ಕುಲ ಮುನ್ನೂರು ಸಾವಿರ ಬಳಗ ಕೃತಿ ಕುರಿತು ಚಿತ್ರದುರ್ಗ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಿ.ಚಂದ್ರಶೇಖರಗೌಡ ಇತರರು ಮಾತನಾಡಿದರು.
ಪ್ರಾಂಶುಪಾಲಲರಾದ ಡಾ.ಟಿ.ಆರ್.ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ತಿಮ್ಮಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಚಿಕ್ಕಪ್ಪಯ್ಯ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮಹಲಿಂಗಪ್ಪ, ಕೊರಟಗೆರೆ ಜೆಡಿಎಸ್ ಮುಖಂಡ ಮಹಲಿಂಗಪ್ಪ, ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಕರಿಯಪ್ಪ, ಯದುನಂದನ ಪ್ರಕಾಶನದ ಹೆಚ್.ಆರ್.ರಾಜೇಶ್, ತುಮಕೂರು ವಿ.ವಿ. ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಜಿ.ತಿಪ್ಪೇಸ್ವಾಮಿ, ಕೃಷ್ಣಪ್ಪ ಕರಿರಾಮರಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಸಿದ್ಧಗಂಗಾ ಕಾಲೇಜು ಕನ್ನಡ ಅಧ್ಯಾಪಕಿ ಡಾ.ರೇಖಾ ಹಿಮಾನಂದ್ ಕಾರ್ಯಕ್ರಮ ನಿರೂಪಿಸಿದರು.
ಕಾಡುಗೊಲ್ಲ ಬುಡಕಟ್ಟು ಹೆಚ್ಚು ಪ್ರಜಾಸತ್ತಾತ್ಮಕವಾದ ಲಕ್ಷಣಗಳನ್ನು ಹೊಂದಿದೆ. ಆದರೆ ಅವರ ಸಂಸ್ಕೃತಿ, ಆಚಾರ ವಿಚಾರಗಳು ಆಧುನಿಕ ಸಮಾಜದಲ್ಲಿ ಅಪಾಯಕ್ಕೆ ಸಿಲುಕುತ್ತಿವೆ. ಬುಡಕಟ್ಟು ಸಂಸ್ಕೃತಿಗಳು ಈಗಿನ ಜನಸಮೂಹಕ್ಕೆ ಆದರ್ಶವಾಗಬೇಕಿದೆ.
- ಪೊ›.ಬರಗೂರು ರಾಮಚಂದ್ರಪ್ಪ, ಚಿಂತಕ
ಅನಾವರಣಗೊಂಡ ಕೃತಿಗಳು
ಕಾಡುಗೊಲ್ಲ ಸಾಲಾವಳಿ
ಹಾಲುಮೀಸಲು
ಕೇಲುಬಾಳೆ
ಮೂರು ಕುಲ ಮುನ್ನೂರು ಸಾವಿರ ಬಳಗ