ಆತ್ಮನಿರ್ಭರ ಯೋಜನೆಗೆ ಅನಾನಸ್ ಆಯ್ಕೆ
ಆತ್ಮನಿರ್ಭರ್ ಯೋಜನೆಯಡಿ ಬೇಗನೆ ಹಾಳಾಗುವ ಉತ್ಪನ್ನಗಳ ಉದ್ದಿಮೆಗಳಿಗೆ ನೆರವು ಒದಗಿಸಲಾಗುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ ಒಂದು ಉತ್ಪನ್ನವನ್ನು ಗುರುತಿಸಿ ಅಂತಿಮಗೊಳಿಸಬೇಕಾಗಿದೆ. ಜಿಲ್ಲೆಯಲ್ಲಿ 1400 ಹೆಕ್ಟೇರ್ ಪ್ರದೇಶದಲ್ಲಿ 56 ಸಾವಿರ ಮೆಟ್ರಿಕ್ ಟನ್ ಅನಾನಸ್ ಬೆಳೆಯಲಾಗುತ್ತಿದ್ದು, ಇದರಲ್ಲಿ ಶೇ.10ರಷ್ಟನ್ನು ಮಾತ್ರ ಇಲ್ಲಿ ಸಂಸ್ಕರಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಆ.06): ಆತ್ಮನಿರ್ಭರ ಯೋಜನೆಯಡಿ ಜಿಲ್ಲೆಯಲ್ಲಿ ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯಲ್ಲಿ ಅನಾನಸ್ ಹಾಗೂ ಎರಡನೇ ಹಂತದಲ್ಲಿ ಕಾಳು ಮೆಣಸು ಹಾಗೂ ಕುಂಬಳಕಾಯಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತಾದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನ ಕುರಿತು ಬೇಸ್‌ಲೈನ್ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಯೋಜನೆಯಡಿ ಬೇಗನೆ ಹಾಳಾಗುವ ಉತ್ಪನ್ನಗಳ ಉದ್ದಿಮೆಗಳಿಗೆ ನೆರವು ಒದಗಿಸಲಾಗುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ ಒಂದು ಉತ್ಪನ್ನವನ್ನು ಗುರುತಿಸಿ ಅಂತಿಮಗೊಳಿಸಬೇಕಾಗಿದೆ. ಜಿಲ್ಲೆಯಲ್ಲಿ 1400 ಹೆಕ್ಟೇರ್ ಪ್ರದೇಶದಲ್ಲಿ 56 ಸಾವಿರ ಮೆಟ್ರಿಕ್ ಟನ್ ಅನಾನಸ್ ಬೆಳೆಯಲಾಗುತ್ತಿದ್ದು, ಇದರಲ್ಲಿ ಶೇ.10ರಷ್ಟನ್ನು ಮಾತ್ರ ಇಲ್ಲಿ ಸಂಸ್ಕರಿಸಲಾಗುತ್ತಿದೆ. ಯೋಜನೆಯ ಸಮರ್ಪಕ ಅನುಷ್ಠಾನದಿಂದ ಅನಾನಸ್ ಬೆಳೆಗೆ ಇನ್ನಷ್ಟು ಉತ್ತೇಜನ ಸಾಧ್ಯವಿದೆ ಎಂದು ಅವರು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ ಕುಮಾರ್ ಮಾತನಾಡಿ, ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಿಗಳು, ಎಫ್‌ಪಿಒಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿಗಳ ಸಾಲ ಸೌಲಭ್ಯ ಹೆಚ್ಚಿಸುವುದು, ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಬಲಪಡಿಸುವುದು, ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನು, ಪ್ಯಾಕೇಜಿಂಗ್, ಇನ್‌ಕ್ಯುಬೇಷನ್ ಸೌಲಭ್ಯ ಕಲ್ಪಿಸುವುದು ಯೋಜನೆ ಉದ್ದೇಶವಾಗಿದೆ ಎಂದು ತಿಳಿಸಿದರು.
ಹಬ್ಬದ ಬೆನ್ನಲ್ಲೇ ತರಕಾರಿ, ಹಣ್ಣು ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ..!
ಇದೇ ರೀತಿ ತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಗೆ ಪ್ರೋತ್ಸಾಹ ನೀಡುವುದು, ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ಒದಗಿಸುವುದು ಇದರಲ್ಲಿ ಸೇರಿದೆ ಎಂದರು.
ಯೋಜನೆಯಡಿ ವೈಯಕ್ತಿಕ ಅತಿ ಸಣ್ಣ ಉದ್ದಿಮೆಗಳಿಗೆ ಪ್ರತಿ ಘಟಕಕ್ಕೆ 10ಲಕ್ಷ ರು. ಗರಿಷ್ಠ ಮಿತಿಯೊಂದಿಗೆ ಯೋಜನಾ ವೆಚ್ಚದ ಶೇ.35ರಷ್ಟುಸಾಲ ಸಹಾಯಧನ ಒದಗಿಸಲಾಗುವುದು. ಇದರಲ್ಲಿ ಫಲಾನುಭವಿ ಕೊಡುಗೆ ಕನಿಷ್ಠ ಶೇ.10ರಷ್ಟಿದ್ದು, ಬಾಕಿ ಬ್ಯಾಂಕಿನ ಸಾಲ ಒದಗಿಸಲಾಗುವುದು. ರೈತ ಉತ್ಪಾದಕರ ಸಂಸ್ಥೆಗಳಿಗೆ ಸಹ ಸಮಾನ ರೀತಿಯ ಸೌಲಭ್ಯ ಒದಗಿಸಲಾಗುವುದು ಎಂದರು.
ಸ್ವಸಹಾಯ ಗುಂಪಿನ ಪ್ರತಿ ಸದಸ್ಯರಿಗೆ ಕಾರ್ಯನಿರ್ವಹಣಾ ಬಂಡವಾಳ ಹಾಗೂ ಚಿಕ್ಕ ಪರಿಕರಗಳನ್ನು ಖರೀದಿಸಲು 40 ಸಾವಿರ ರು. ಸಾಲವಾಗಿ ಒದಗಿಸಲಾಗುವುದು. ಸದಸ್ಯರು ಇದನ್ನು ಗುಂಪಿಗೆ ಮರು ಪಾವತಿಸಬೇಕು. ಇದೇ ರೀತಿ ಪ್ರಯೋಗಾಲಯ, ಕೋಲ್ಡ್ ಸ್ಟೋರೇಜ್‌ನಂತಹ ಮೂಲಭೂತ ಸೌಕರ್ಯಗಳಿಗೆ, ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗೆ ಬೆಂಬಲ ನೀಡಲಾಗುವುದು ಎಂದು ಹೇಳಿದರು.