ಕಲಬುರಗಿ(ಫೆ.26): ನಗರ ಮಂಗಳವಾರ ಬೆಳ್ಳಂ ಬೆಳಗ್ಗೆಯೇ ಕಾಮುಕನೋರ್ವನ ಪೈಶಾಚಿಕ ಹಾಗೂ ಅತ್ಯಂತ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಆದರೆ ಈ ಅಮಾನವೀಯ ಘಟನೆ ಸಂಪೂರ್ಣ ಘಟಿಸುವ ಮುನ್ನವೆ ತಕ್ಷಣ ನಗರವಾಸಿಗಳು ಎಚ್ಚೆತ್ತಿದ್ದರಿಂದ ಕಾಮುಕನಿಗೆ ‘ನಿಸರ್ಗ ಸಹಜ ನ್ಯಾಯ’ ರೂಪದಲ್ಲಿ ಧರ್ಮದೇಟಿನ ಶಿಕ್ಷೆಯೂ ದೊರಕಿದೆ. 

ಇಲ್ಲಿನ ಇತಿಸಾಹ ಪ್ರಸಿದ್ಧ ಶರಣಬಸವೇಶ್ವರ ಮಂದಿರದ ಪ್ರಾಂಗಣದಲ್ಲಿ ತನ್ನ ತಾಯಿಯೊಂದಿಗೆ ಬೆಚ್ಚಗೆ ನಸುಕಿನ ಸಕ್ಕರೆ ನಿದ್ರೆಯಲ್ಲಿದ್ದಂತಹ 4 ವರ್ಷದ ಕಂದಮ್ಮಳನ್ನು ಕಾಮುಕ ಚಿಂಚೋಳಿ ತಾಲೂಕಿನ ಮಿರಿಯಾಣ ಮೂಲದ ಪ್ರವೀಣ್ ಉಪಾಯವಾಗಿ ಹೊತ್ತುಕೊಂಡು ಬಂದು ಮಂದಿರ ಪಕ್ಕದ ರಸ್ತೆಯಲ್ಲಿರುವ ಗೋವಾ ಹೋಟೆಲ್ ಬಳಿ ನಿರ್ಜನ ಪ್ರದೇಶ ಹುಡುಕಿ ಅತ್ಯಾಚಾರ ಮಾಡಲು ಮುಂದಾಗಿದ್ದನು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಮುಕನ ಕೃತ್ಯ ಕಂಡು ಬೆದರಿದ ಬಾಲಕಿ ಜೋರಾಗಿ ಕಿರುಚಿದ್ದಾಳೆ. ಇದರಿಂದ ಎಚ್ಚೆತ್ತ ಸುತ್ತಲಿನ ಮಳಿಗೆ, ಮುಂಗಟ್ಟಿನ ಜನ, ಕೆಲವು ಮನೆಯ ಜನ ಗುಂಪಾಗಿ ಏನಾಯ್ತೆಂದು ಓಡಿ ಬರುವಷ್ಟರಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಲು ಮುಂದಾಗಿದ್ದ ಕಾಮುವ ಪ್ರವೀಣನನ್ನು ಅರೆನಗ್ನಾವಸ್ಥೆಯಲ್ಲಿ ಕಂಡವರೇ ಆತನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಹಗ್ಗದಿಂದ ಬಿಗಿದು ಎಲ್ಲರು ಸೇರಿ ಧರ್ಮದೇಟು ನೀಡಿದ್ದಾರೆ. ನಂತರ ಜನರೇ ಮುಂದಾಗಿ ಬ್ರಹ್ಮಪುರ ಪೊಲೀಸ್ ಠಾಣೆಗೆ ಕರೆ ಮಾಡಿ ಕಾಮುಕನ ಕುಕೃತ್ಯದ ಮಾಹಿತಿ ನೀಡಿದ್ದಲ್ಲದೆ ಕಂಬಕ್ಕೆ ಕಟ್ಟಿ ಥಳಿಸಿದ ಕಾಮುಕನನ್ನು ಪೊಲೀಸರಿಗೆ ಒಪ್ಪಿಸಿ ಕಠಿಣ ಶಿಕ್ಷೆ ಕೊಡುವಂತೆ ಆಗ್ರಹಿಸಿದ್ದಾರೆ. 

ನಸುಕಿನ ಜಾವ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ತಾಯಿ ಮತ್ತು ಮಗು ಮಲಗಿದ್ದಾಗ, ಮಗುವನ್ನು ಕರೆತಂದ ಪ್ರವೀಣ ಗೋವಾ ಹೋಟೆಲ್ ಬಳಿಯಿರುವ ಕಟ್ಟಡವೊಂದರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗುವಿನ ಕಿರುಚಾಟ ಗಮನಿಸಿದ ಸ್ಥಳೀಯರು ಧಾವಿಸಿ ಬಂದಿದ್ದರಿಂದ ಹೇಯ ಕೃತ್ಯ ತಡೆಯಲ್ಪಟ್ಟು ಅಮಾಯಕ ಮಗುವಿನ ರಕ್ಷಣೆಯಾಗಿದೆ. ಸುದ್ದಿ ತಿಳಿದು ಬ್ರಹ್ಮಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.