ಆನಂದ್ ಎಂ. ಸೌದಿ

ಯಾದಗಿರಿ(ಮೇ.30): ತಿಂಗಳ ಹಿಂದಷ್ಟೇ ‘ಗ್ರೀನ್ ಝೋನ್’ ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ತೀವ್ರತೆ ದಿನದಿಂದ ದಿನಕ್ಕೇ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕೇವಲ 17 ದಿನಗಳ ಅಂತರದಲ್ಲಿ 215 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿಗೆ ಸಾಕ್ಷಿಯಾದ ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟೂ ಹೆಚ್ಚಾಗುವ ಸಾಧ್ಯತೆ ಇದ್ದು, ಜೂನ್-ಜುಲೈ ಮಾಸಾಂತ್ಯದಲ್ಲಿ ಮಳೆ-ಗಾಳಿ ಜೊತೆಗೆ ಸೋಂಕಿತರ ಸಂಖ್ಯೆಯ ಗ್ರಾಫು ಸಾವಿರ ಗಡಿ ದಾಟಲೂಬಹುದು ಎಂಬ ಜಿಲ್ಲಾಡಳಿತದ ಆಂತರಿಕ ವಲಯದಲ್ಲಿನ ಲೆಕ್ಕಾಚಾರ ಆತಂಕ ಮೂಡಿಸಿದೆ.

ಇನ್ನು. ಸಾಂಸ್ಥಿಕ ಕ್ವಾರಂಟೈನ್ ಅವಧಿ 7 ದಿನಗಳಿಗೆ ಮಾಡಿ, ಜನರು ಆರೋಗ್ಯವಾಗಿದ್ದರೆ ಕೋವಿಡ್ ಟೆಸ್ಟ್ ಮಾಡಿಸದೆಯೇ ಮನೆಗೆ ಕಳುಹಿಸಬಹುದು ಎಂಬ ಸರ್ಕಾರದ ಆದೇಶ ಮುಂದಿನ ದಿನಗಳಲ್ಲಿ ಭಾರಿ ಕಷ್ಟದ ದಿನಗಳನ್ನ ಸೃಷ್ಟಿಸಬಹುದು. ಕೋವಿಡ್ ಲಕ್ಷಣಗಳು ಗೊತ್ತಾಗುವುದೇ 10-12 ದಿನಗಳ ನಂತರ ಎಂದು ಈ ಮೊದಲು ಹೇಳಿದ್ದ ಸರ್ಕಾರ, ಈಗ ಅವರನ್ನು ಬಿಡುಗಡೆ ಮಾಡಲು ಹೊರಟಿರುವುದು ನೋಡಿದರೆ, ಈವರೆಗೆ ಕ್ವಾರಂಟೈನ್ ಕೇಂದ್ರಗಳಲ್ಲೇ ಮಾತ್ರ ಕಂಡಿದ್ದ ಸೋಂಕು, ಮುಂಬರುವ ದಿನಗಳಲ್ಲಿ ಉಳಿದ ಹಳ್ಳಿ ಹಾಗೂ ನಗರ ಪ್ರದೇಶಗಳ ಜನರಿಗೂ ತಟ್ಟುವ ಆತಂಕ ಎದುರಾಗಲಿದೆ ಎನ್ನಲಾಗಿದೆ. ಈ ಎರಡು ದಿನಗಳ ಅಂತರದಲ್ಲಿ ಮುನ್ನೂರಕ್ಕೂ ಹೆಚ್ಚು ಜನರನ್ನು ಮನೆಗೆ ಕಳುಹಿಸಲಾಗಿದೆ.

ಕೊರೋನಾ ಕಾಟ: ಯಾದಗಿರಿ ವ್ಯಕ್ತಿಯ ರಿಪೋರ್ಟ್‌ನಲ್ಲಿ ಗೊಂದಲವೋ ಗೊಂದಲ !

ಅತೀ ಹೆಚ್ಚು ವಲಸಿಗರ ವಾಪಸ್ :

ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧೆಡೆ ಹೊಟ್ಟೆಪಾಡಿಗಾಗಿ ದುಡಿಯಲು ತೆರಳಿದ್ದ ಕೂಲಿ ಕಾರ್ಮಿಕರು/ವಲಸಿಗರ ಲಾಕ್‌ಡೌನ್ ಘೋಷಣೆಯಾದ ಮಾ.24 ರಿಂದ ಈವರೆಗೆ (ಮೇ 25) ಈವರೆಗೆ ಒಂದೂವರೆ ಲಕ್ಷದಷ್ಟು ಸಂಖ್ಯೆಯಲ್ಲಿ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಅದರಲ್ಲೂ, ಕಳೆದ 20-25 ದಿನಗಳಿಂದ ವಾಪಸ್ಸಾದ ವಲಸಿಗರ ಒಟ್ಟು 30 ಸಾವಿರ ವಲಸಿಗರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಬಂದವರೇ 15 ಸಾವಿರದಷ್ಟಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರನ್ನು ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲಾಗಿದೆ. ಸದ್ಯ, ಯಾದಗಿರಿಯಲ್ಲಿ ಪತ್ತೆಯಾದ ಸೋಂಕು ಪೀಡಿತರೆಲ್ಲರೂ ಕ್ವಾರಂಟೈನ್ ಕೇಂದ್ರಗಳಲ್ಲಿನವರು ಹಾಗೂ ಸೋಂಕು ಹೆಚ್ಚಿದ ಪ್ರದೇಶಗಳಿಂದ ಬಂದವರೇ ಹೆಚ್ಚು. ಜಿಲ್ಲೆಯ ಒಟ್ಟು 224 ಕ್ವಾರಂಟೈನ್ ಕೇಂದ್ರಗಳಲ್ಲಿ 14,643 ಜನರಿದ್ದಾರೆ.

ಆರೋಗ್ಯವಾಗಿರುವ ವ್ಯಕ್ತಿ ಹಾಗೂ ಶಂಕಿತ/ಸೋಂಕಿತರನ್ನು ಬೇರ್ಪಡಿಸದೆ ಹಿಂಡು ಹಿಂಡಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿ ಕುರಿಗಳಂತೆ ಹಾಕಿದ್ದರಿಂದ ಆರೋಗ್ಯವಾಗಿರುವ ವ್ಯಕ್ತಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಂದು ವರ್ಷದ ಮಕ್ಕಳಿಂದ ಹಿಡಿದು 14 ವರ್ಷದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರನ್ನೂ ಸೋಂಕು ಬಿಟ್ಟಿಲ್ಲ.

ಈವರೆಗೆ (ಮಾ. 24ರಿಂದ ಮೇ 28 ರವರೆಗೆ) ಒಟ್ಟು 13,300 ಜನರ ಕೋವಿಡ್ ಟೆಸ್ಟ್ ಮಾಡಿಸಿದ್ದು, 72288 ವರದಿ ನಿರೀಕ್ಷಿಸಲಾಗುತ್ತಿದೆ. ಶನಿವಾರದ ಬೆಳಿಗ್ಗೆವರೆಗೆ 223 ಜನರ ವರದಿ ಪಾಸಿಟಿವ್ ಬಂದಿತ್ತು. ಜಿಲ್ಲಾಡಳಿತದ ಮಾಹಿತಿಯಂತೆ, ವಲಸೆ ಬಂದವರ 15 ಸಾವಿರ ಜನರ ಪೈಕಿ ಮೂರರಿಂದ ನಾಲ್ಕು ಸಾವಿರದಷ್ಟು ಜನರಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಅಂದರೆ, ಇನ್ನೂ 10 ರಿಂದ 12ಸಾವಿರ ಸಂಖ್ಯೆಯಷ್ಟು ವಲಸಿಗರ ಟೆಸ್ಟ್ ಮಾಡಿಸುವುದರ ಜೊತೆಗೆ ವರದಿಗಾಗಿ ಕಾಯಬೇಕಾಗಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು, ಕ್ವಾರಂಟೈನ್ ಕೇಂದ್ರಗಳಲ್ಲಿ ನ ಜನರ ಕೋವಿಡ್ ಟೆಸ್ಟ್ ಹೆಚ್ಚಾಗಿ ಮಾಡಿಸಲಾಗುತ್ತಿದೆ. ಜನರಲ್ಲಿ ಆತಂಕ ಬೇಡ, ಕೊರೋನಾ ಸೋಂಕು ಎದುರಿಸಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.