ನೆರೆ ಬಂದು ಹೋದ ಮೇಲೆ ಶಾಲೆಗೆ ಹೋಗುವುದನ್ನೇ ಬಿಟ್ಟ ಮಕ್ಕಳು!
ನೆರೆಯಿಂದ ಮನೆ ಕಳೆದುಕೊಂಡ ಕುಟುಂಬಗಳು ಶಿಥಿಲ ಶಾಲಾ ಕೊಠಡಿಯಲ್ಲಿ ವಾಸ| ಇವರತ್ತ ತಿರುಗಿಯೂ ನೋಡದ ಜನಪ್ರತಿನಿಧಿಗಳು| ಮಗುವಿನೊಂದಿಗೆ ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವ 8 ತಿಂಗಳ ಬಾಣಂತಿ| ವಿದ್ಯಾಭ್ಯಾಸಕ್ಕಾಗಿ ಮೂರು ಕಿ. ಮೀ ದೂರು ನಿತ್ಯ ನಡೆದುಕೊಂಡೇ ಹೋಗಬೇಕು| ಇದರಿಂದ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದಾರೆ|
ಮಲ್ಲಿಕಾರ್ಜುನ ದರಗಾದ
ಹುನಗುಂದ:(ಸೆ.26) ನೆರೆ ಬಂದು ಸೂರು ಕಸಿದುಕೊಂಡು ಹೋಗಿದ್ದರ ಪರಿಣಾಮ ಇಲ್ಲೆರಡು ಕುಟುಂಬಗಳು ಶಿಥಿಲಾವಸ್ಥೆ ಕಟ್ಟಡದಲ್ಲಿಯೇ ವಾಸವಾಗಿವೆ. ಇದರಿಂದ ಅವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿವೆ. ಇದಷ್ಟೇ ಅಲ್ಲದೇ ಇವರ ಐದು ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತವಾಗಿ ಕುಟುಂಬದ ಜೊತೆ ಕಾಲ ಕಳೆಯುವಂತಾಗಿದೆ.
ಇದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಎಮ್ಮೆಟ್ಟಿ ಗ್ರಾಮದ ಹನಮಪ್ಪ ಕಂಗಳ ಹಾಗೂ ಮಲ್ಲಪ್ಪ ಬಾಣಿ ಈ ಎರಡು ಕುಟುಂಬ ಸದ್ಯದ ಪರಿಸ್ಥಿತಿ. ಕಳೆದ ಒಂದು ತಿಂಗಳಿಂದ ಧನ್ನೂರ ಪುನರ್ವಸತಿ ಕೇಂದ್ರದಲ್ಲಿ ಶಿಥಿಲಾವಸ್ಥೆ ಸ್ಥಿತಿಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡದಲ್ಲಿ ಬದುಕು ಸಾಗಿಸುತ್ತಿದ್ದರೂ, ಆಳುವ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಇವರತ್ತ ತಿರುಗಿಯೂ ನೋಡದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ವೃದ್ಧರು, ವಯಸ್ಕರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನರು ಈ ಎರಡು ಕುಟುಂಬದಲ್ಲಿದ್ದಾರೆ. ಬಾಣಿ ಕುಟುಂಬದ ಗೀತಾ ಎಂಬ 8 ತಿಂಗಳ ಬಾಣಂತಿ ತನ್ನ ಮಗುವಿನೊಂದಿಗೆ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾಳೆ. ಇನ್ನು ಎಮ್ಮೆಟ್ಟಿಗ್ರಾಮ ಇವರು ಸ್ಥಳದಿಂದ ಸುಮಾರು 3 ಕಿ. ಮೀ ದೂರವಾಗುತ್ತಿರುವುದರಿಂದ ಈ ಕುಟುಂಬದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಅಷ್ಟು ದೂರು ನಿತ್ಯ ನಡೆದುಕೊಂಡೇ ಹೋಗಬೇಕು. ಇದರಿಂದ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದಾರೆ.
ಪ್ರವಾಹದ ನೀರಿನಲ್ಲಿ ಮುಳುಗಿ ಎರಡು ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಮನೆಯಲ್ಲಿದ್ದ ಎಲ್ಲವೂ ನದಿಯಲ್ಲಿ ಕೃಷ್ಣಾರ್ಪಣೆಯಾಗಿವೆ. ಶಾಲೆ ಆರಂಭಗೊಂಡು ಇದ್ದ ಪರಿಹಾರ ಕೇಂದ್ರವೂ ಬಂದಾಯಿತು. ಗ್ರಾಮದಲ್ಲಿ ನೆಲೆಸಲು ಮನೆಯೂ ಇಲ್ಲದ ಸಂಕಷ್ಟಸ್ಥಿತಿಗೆ ಸಿಲುಕಿ, ಬೇರೆ ದಾರಿ ಇಲ್ಲದೇ ಧನ್ನೂರ ಪುನರ್ವಸತಿ ಕೇಂದ್ರದಲ್ಲಿರುವ ಶಿಥಿಲ ಶಾಲಾ ಕಟ್ಟಡದಲ್ಲಿಯೇ ಬಂದು ಆಶ್ರಯ ಪಡೆದಿದ್ದಾರೆ.
ಸುರಕ್ಷತೆ ಇಲ್ಲ:
ಇಲ್ಲಿ ವಾಸವಾಗಿರುವ ಎರಡು ಕುಟುಂಬಗಳ ಬದುಕು ಸುರಕ್ಷಿತವಾಗಿಲ್ಲ. ಪುನರ್ವಸತಿ ಕೇಂದ್ರದಲ್ಲಿ 1994ರಲ್ಲಿ ಕಟ್ಟಿದ ಈ ಶಾಲಾ ಕಟ್ಟಡದಲ್ಲಿ ಒಂದು ದಿನವೂ ಶಾಲೆ ನಡೆದಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿಯಿಂದ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದೆ. ಕಟ್ಟಡಕ್ಕೆ ಜೋಡಿಸಿದ ಕಿಟಕಿ, ಬಾಗಿಲುಗಳು ಯಾವಾಗಲೋ ಮಾಯವಾಗಿ ಹೋಗಿವೆ. ಜೋರು ಗಾಳಿ ಬೀಸಿದರೆ ಗೋಡೆಯ ಕಲ್ಲು ಬೀಳುವ ಸ್ಥಿತಿ ಇದೆ. ಚಾವಣಿಗೆ ಹಾಕಿದ ಕಾಂಕ್ರಿಟ್ ಪದರು ಆಗಾಗ ಉದುರಿ ಬೀಳುವ ದೃಶ್ಯ ಸಾಮಾನ್ಯವಾಗಿದೆ. ಶಾಲೆಯ ಸುತ್ತಲಿನ ಪ್ರದೇಶದಲ್ಲಿ ಜನವಸತಿ ಇಲ್ಲದ ಕಾರಣ ಮುಳ್ಳು ಕಂಟಿಗಳು ಬೆಳೆದು ಕಾಡಿನ ವಾತಾವರಣ ಕಂಡು ಬರುತ್ತಿದೆ. ಇಷ್ಟೊಂದು ಅಪಾಯದ ಸ್ಥಿತಿ ಇದ್ದರೂ, ಈ ಕುಟುಂಬಗಳಿಗೆ ತಾವಷ್ಟೇ ಅಲ್ಲ ತಮ್ಮ ಬದುಕಿನ ಸಂಗಾತಿಗಳಾದ ದನ-ಕರುಗಳನ್ನೊಂದಿಗೆ ಇಲ್ಲಿ ನೆಲೆಸುವುದು ಅನಿವಾರ್ಯವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ಥಳೀಯ ಗ್ರಾಪಂ ಮೂಲಕ ಟ್ಯಾಂಕರ್ ನೀರು ಪೂರೈಸುವುದನ್ನು ಬಿಟ್ಟರೆ ಈ ಕುಟುಂಬಗಳಿಗೆ ಸರ್ಕಾರದ ಯಾವುದೇ ಸೌಕರ್ಯಗಳಿಲ್ಲ. ಹೀಗಾಗಿ ತಮ್ಮ ಆಹಾರವನ್ನು ತಾವೆ ತಯಾರಿಸಿಕೊಳ್ಳುತ್ತಿದ್ದಾರೆ. ತಮ್ಮ ಬಿದ್ದ ಮನೆಗಳನ್ನು ದುರಸ್ತಿ ಮಾಡಿಕೊಳ್ಳುವವರೆಗೆ ತಾತ್ಕಾಲಿಕ ತಗಡಿನ ಶೆಡ್ ನಿರ್ಮಿಸಿಕೊಡಿ ಎಂಬ ಇವರ ಕೂಗಿಗೆ ಆಡಳಿತ ಕಿವಿಗೊಡುತ್ತಿಲ್ಲ. ಇಂತಹ ಅಪಾಯದ ಕಟ್ಟಡದಲ್ಲಿ ವಾಸವಾಗಿರುವ ಕುಟುಂಬದ ಸದಸ್ಯರಿಗೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರ ನೀಡಬೇಕಿದೆ.