ಧಾರವಾಡ: ದಿನಪತ್ರಿಕೆಯಿಂದ ಸಿದ್ಧವಾಯ್ತು ಪೆನ್ಸಿಲ್‌..!

*  3 ವರ್ಷಗಳ ಸತತ ಪ್ರಯತ್ನದ ನಂತರ ನ್ಯೂಸ್‌ ಪೇಪರ್‌ನಿಂದ ಹೊರಬಂತು ಪೆನ್ಸಿಲ್‌
*  ಲಾಭಕ್ಕಲ್ಲದೆ ಪರಿಸರ ದೃಷ್ಟಿಯಿಂದ ನೂತನ ಚಿಂತನೆ ಮಾಡಿದ ಅಪರ್ಣಾ ಪೂಜಾರಿ
*  ಪೆನ್ಸಿಲ್‌ ಕೊನೆಗೆ ಬೀಜ ಹಾಕುವ ಮಕ್ಕಳಿಗೂ ಪರಿಸರ ಜಾಗೃತಿ ಮೂಡಿಸುತ್ತಿರುವ ಅಪರ್ಣಾ
 

Pencil Made From Newspaper in Dharwad grg

ಬಸವರಾಜ ಹಿರೇಮಠ

ಧಾರವಾಡ(ಜೂ.23): ಇಲ್ಲೊಬ್ಬರು ರದ್ದಿಯಾಗುವ ದಿನಪತ್ರಿಕೆ ಬಳಸಿಕೊಂಡು ಪೆನ್ಸಿಲ್‌ ಉತ್ಪಾದನೆ ಮಾಡುತ್ತಿದ್ದಾರೆ. ಅದೂ ಲಾಭಕ್ಕಾಗಿಯಂತೂ ಅಲ್ಲ, ಪರಿಸರದ ಉಳಿವಿಗಾಗಿ ಎನ್ನುವುದು ವಿಶೇಷ.

ಇಲ್ಲಿಗೆ ಸಮೀಪದ ಕೆಲಗೇರಿ ನಿವಾಸಿ ಅಪರ್ಣಾ ಪೂಜಾರಿ ಅವರು ಮೂರು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ದಿನಪತ್ರಿಕೆ ಮೂಲಕ ಶಾಲಾ ಮಕ್ಕಳು ಬಳಸುವ ಪೆನ್ಸಿಲ್‌ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಪು ವಾತಾವರಣಕ್ಕೆ ಮುದ್ದೆಯಾಗುವ, ಬೇಗ ಹರಿದು ಹೋಗುವ ಗುಣವುಳ್ಳ ನ್ಯೂಸ್‌ ಪೇಪರ್‌ನಿಂದ ಅದ್ಹೇಗೆ ಪೆನ್ಸಿಲ್‌ ತಯಾರಿಸುತ್ತಾರೆ ಎಂಬ ಚಿಂತನೆ ಬರುವುದು ಸಾಮಾನ್ಯ. ಇದು ಎಲ್ಲರಿಗೂ ಅಚ್ಚರಿ ತರುವ ವಿಷಯವೂ ಹೌದು! ಹೀಗಾಗಿ ಹೊಸ ಚಿಂತನೆಯ ಪ್ರಯತ್ನವನ್ನು ಅಪರ್ಣಾ ‘ಕನ್ನಡಪ್ರಭ’ ಮುಂದೆ ಬಿಚ್ಚಿಟ್ಟಿದ್ದಾರೆ.

ಮಹದಾಯಿ ನೀರಿಗಾಗಿ ಹೋರಾಟ, 2ನೇ ದಿನಕ್ಕೆ ಕಾಲಿಟ್ಟ ಅನ್ನದಾತರ ಪ್ರತಿಭಟನೆ, ಸರ್ಕಾರಕ್ಕೆ ಎಚ್ಚರಿಕೆ

ಲಾಭಕ್ಕಾಗಿ ಅಲ್ಲ:

ದಿನನಿತ್ಯ ನಮ್ಮ ಮನೆಯಲ್ಲೂ ಎರಡ್ಮೂರು ಪತ್ರಿಕೆ ತರಿಸಿ ಓದುತ್ತಿದ್ದೆವು. ಓದಿದ ಬಳಿಕ ಅದು ರದ್ದಿಯೇ ಆಗಿರುತ್ತಿತ್ತು. ಮೊದಲಿನಿಂದಲೂ ನನಗೆ ಪರಿಸರದ ಮೇಲೆ ತುಸು ಕಾಳಜಿ. ಹೀಗಾಗಿ ರದ್ದಿಯಾಗುವ ಪತ್ರಿಕೆಗಳಿಂದ ಪರಿಸರ ಸ್ನೇಹಿ ವಸ್ತುವೊಂದನ್ನು ತಯಾರಿಸಬೇಕೆಂಬ ಯೋಚನೆ ಇತ್ತು. ಈ ಕುರಿತಾಗಿ ಗೂಗಲ್‌ ಮೂಲಕ ಸಾಕಷ್ಟುಹುಡುಕಾಟ ಸಹ ನಡೆಸಿದೆ. ಆಗ ಹೊಳೆದಿದ್ದು ಮಕ್ಕಳು ನಿತ್ಯ ಬಳಸುವ ಪೆನ್ಸಿಲ್‌. ಈ ಪೆನ್ಸಿಲ್‌ ಉತ್ಪಾದನೆಗೆ ಸಾಕಷ್ಟುಗಿಡ-ಮರ ಕಡಿಯಲಾಗುತ್ತದೆ. ನನ್ನ ಕೈಲಾದಷ್ಟುಪೇಪರ್‌ ಪೆನ್ಸಿಲ್‌ ಮಾಡುವ ಮೂಲಕ ಪರಿಸರದ ಉಳಿವಿಗೆ ಚಿಕ್ಕದಾಗ ಕೊಡುಗೆ ಕೊಟ್ಟರಾಯ್ತು ಎಂದುಕೊಂಡು ಪೇಪರ್‌ ಪೆನ್ಸಿಲ್‌ ಮಾಡುವುದಾಗಿ ಅಂತಿಮವಾಗಿ ತೀರ್ಮಾನಿಸಿದೆ. ಇದು ಯಾವುದೇ ಸ್ಟಾರ್ಚ್‌ಅಪ್‌ ಕಲ್ಪನೆ ಅಥವಾ ಲಾಭಕ್ಕಾಗಿ ಅಲ್ಲ ಎನ್ನುತ್ತಾರೆ.

ಮೂರು ವರ್ಷಗಳ ಪ್ರಯತ್ನ:

ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಉಪನ್ಯಾಸಕಿ ಆಗಿರುವ ನಾನು, ನ್ಯೂಸ್‌ ಪೇಪರ್‌ ಬಳಸಿ ಹೇಗೆ ಪೆನ್ಸಿಲ್‌ ಮಾಡತೇನಿ ಎಂಬ ಪ್ರಶ್ನೆ ನನಗೆ ಕಾಡುತ್ತಿತ್ತು. ಪತ್ರಿಕೆ ಗಟ್ಟಿವಸ್ತುವಲ್ಲ, ಪೆನ್ಸಿಲ್‌ ಲೆಡ್‌ನ್ನು ಅದು ಹೇಗೆ ಹಿಡಿದುಕೊಳ್ಳಲಿದೆ ಎಂಬುದನ್ನು ತಿಳಿಯಬೇಕಿತ್ತು. ಇದು ಸಾಮಾನ್ಯವಲ್ಲ, ಇದಕ್ಕೆ ತಾಂತ್ರಿಕತೆ ಜೊತೆಗೆ ಹಣವೂ ಬೇಕೆಂದು ಟ್ರಯಲ್‌ ಎಂಡ್‌ ಎರರ್‌ ಮಾದರಿಯಲ್ಲಿ ನಿರಂತರವಾಗಿ ಪ್ರಯತ್ನಿಸಿದೆ. ಈ ಕುರಿತಾಗಿ ತಜ್ಞರಲ್ಲಿ ಮಾಹಿತಿ ಸಹ ಹಂಚಿಕೊಂಡಾಗ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗಲಿಲ್ಲ. ಇದು ನನ್ನಿಂದ ಮಾತ್ರ ಸಾಧ್ಯವೆಂದು ಅರಿತು ಆರಂಭದಲ್ಲಿ ಕೈಯಿಂದ ಪೇಪರ್‌ ಸುತ್ತಿ, ಅದಕ್ಕೆ ಪೆನ್ಸಿಲ್‌ ಲೆಡ್‌ ಹಾಕಿ ಪ್ರಯತ್ನ ನಡೆಯಿತು. ಪ್ರಾಯೋಗಿಕವಾಗಿ ತುಂಬ ತೊಂದರೆಗಳು ಬಂದವು. ಈ ಪ್ರಯತ್ನದಲ್ಲಿ ಉಂಟಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾ ಕೊನೆಗೆ ಯಂತ್ರವೊಂದನ್ನು ಸಿದ್ಧಪಡಿಸಿ ಮೂರು ವರ್ಷಗಳ ನಂತರ ಕೆಲವು ತಾಂತ್ರಿಕ ಹಂತಗಳಲ್ಲಿ ಪೇಪರ್‌ ಪೆನ್ಸಿಲ್‌ ಸಿದ್ಧವಾಯಿತು ಎನ್ನುತ್ತಾರೆ ಅಪರ್ಣಾ.

ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ: ಅಧಿಕಾರಿಗಳಿಗೆ ಸಚಿವ ಆಚಾರ್‌ ಖಡಕ್‌ ಸೂಚನೆ

ಸ್ಪರ್ಧಾತ್ಮಕ ಯುಗದಲ್ಲಿ ಪೇಪರ್‌ ಪೆನ್ಸಿಲ್‌ನ್ನು ಮಾರುಕಟ್ಟೆಗೆ ಹೇಗೆ ತರಬೇಕೆಂದು ಯೋಚಿಸಿದ ಅಪರ್ಣಾ ಪರಿಸರ ಕಾಳಜಿ ಹೊಂದಿದ ಎನ್‌ಜಿಒ ಅಥವಾ ಪರಿಸರವಾದಿಗಳ ಮೂಲಕ ಮಕ್ಕಳಿಗೆ ಮುಟ್ಟಿಸುತ್ತಿದ್ದಾರೆ. ಇಲಾ ಎಂಟರ್‌ಪ್ರೈಸಿಸ್‌ ಹೆಸರಿನಲ್ಲಿ ಪೇಪರ್‌ ಪೆನ್ಸಿಲ್‌ಗಳು ಬೇಡಿಕೆಗೆ ತಕ್ಕಂತೆ ಸಿದ್ಧವಾಗುತ್ತಿದ್ದು ನಾಲ್ಕು ಜನ ಮಹಿಳೆಯರಿಗೂ ಉದ್ಯೋಗ ಒದಗಿಸಿದ್ದಾರೆ. ಪರಿಸರದ ದಿನ ಸಸಿಗಳನ್ನು ನೆಟ್ಟು ನೀರುಣಿಸಿ ಕೈತೊಳೆದುಕೊಳ್ಳುವ ಪರಿಸರವಾದಿಗಳಿರುವ ಈ ಸಂದರ್ಭದಲ್ಲಿ ರದ್ದಿಯಾಗುವ ನ್ಯೂಸ್‌ ಪೇಪರ್‌ ಬಳಸಿ ಪೆನ್ಸಿಲ್‌ ಮಾಡುವ ಮೂಲಕ ನಿತ್ಯವೂ ಪರಿಸರ ಕಾಳಜಿ ಮಾಡುತ್ತಿರುವ ಅಪರ್ಣಾ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು.
ಪೆನ್ಸಿಲ್‌ನಲ್ಲಿ ಬೀಜಗಳೂ ಇವೆ..

ಮಕ್ಕಳಿಗೂ ಪರಿಸರದ ಮೇಲೆ ಕಾಳಜಿ ಬರಲೆಂದು ಪೆನ್ಸಿಲ್‌ ಕೊನೆಗೆ ತರಕಾರಿ, ಹೂ ಬೀಜಗಳನ್ನು ಹಾಕಲಾಗುತ್ತಿದೆ. ಬರೆದು ಪೆನ್ಸಿಲ್‌ ಮುಗಿದ ನಂತರ ಆ ಬೀಜಗಳನ್ನು ಮಕ್ಕಳು ಸಸಿಯಾಗಿ ಬೆಳೆಸಲು ಸಲಹೆ ನೀಡುತ್ತೇನೆ. ಉತ್ಪಾದನೆ ಖರ್ಚು, ವೆಚ್ಚ ತೆಗೆದು . 5ಗೊಂದು ಪೆನ್ಸಿಲ್‌ ಮಾರುತ್ತಿದ್ದು, ಆಸಕ್ತಿ ಉಳ್ಳವರು ತಮ್ಮ ಮನೆಯ ರದ್ದಿ ಪತ್ರಿಕೆಯನ್ನು ಪೆನ್ಸಿಲ್‌ ಉತ್ಪಾದನೆಗೆ ಕೊಡುಗೆ ನೀಡಬಹುದು ಅಂತ ಧಾರವಾಡದ ಅಪರ್ಣಾ ಪೂಜಾರಿ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios