ಘಟಪ್ರಭಾ(ಫೆ.17): ಸ್ಥಳೀಯ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಪ್ರಯಾಣಿಕರು ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಮಕ್ಕಳು, ವೃದ್ಧರನ್ನು ಕಟ್ಟಿಕೊಂಡು ಲಗೇಜಿನೊಂದಿಗೆ ಹೋಗಲು ನರಕಯಾತನೆ ಅನುಭವಿಸುವಂತಾಗಿದೆ.

ಹೌದು, ಬೆಳಗಾವಿ ಜಿಲ್ಲೆಯ ಘಟಪ್ರಭಾ ರೈಲು ನಿಲ್ದಾಣದಲ್ಲಿ ಜೋಡಿ ರೈಲುಮಾರ್ಗ ಕಾಮಗಾರಿ ನಡೆದಿದೆ. ಹೀಗಾಗಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಮೇಲ್ಸೇತುವೆ ಕಿತ್ತು ಹಾಕಿ ಕಾಮಗಾರಿ ನಡೆಸಿದ್ದಾರೆ. ಆದರೆ ಆಮೆವೇಗದಲ್ಲಿ ನಡೆದಿರುವ ಕಾಮಗಾರಿಯಿಂದ ಪ್ರಯಾಣಿಕರು ಸಾಕಷ್ಟುಕಿರಿಕಿರಿ ಅನುಭವಿಸುವಂತಾಗಿದೆ. ಘಟಪ್ರಭಾ ನಿಲ್ದಾಣದಲ್ಲಿ ಎರಡು ಪ್ಲಾಟ್‌ಫಾರ್ಮ್‌ ಇವೆ. ದಿನಕ್ಕೆ ಸುಮಾರು 14 ರೈಲುಗಳು ಇದೇ ನಿಲ್ದಾಣದಲ್ಲಿ ನಿಂತು ಸಂಚರಿಸುತ್ತಿವೆ. ಹೀಗಾಗಿ ನಿತ್ಯ ಸಾವಿರಾರು ಪ್ರಯಾಣಿಕರು ಇದೇ ಸ್ಟೇಶನ್‌ನಿಂದ ಪ್ರಯಾಣ ಆರಂಭಿಸುತ್ತಿದ್ದಾರೆ. ಪಾದಚಾರಿ ಮೇಲ್ಸೇತುವೆ ನಿಧಾನ ಗತಿಯ ಕಾಮಗಾರಿಯಿಂದಾಗಿ ಜನರಿಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಇದರಿಂದ ಮಕ್ಕಳು, ವೃದ್ಧರು, ಮಹಿಳೆಯರು ನಿತ್ಯ ಇಲ್ಲಿ ಪಡಬಾರದ ಯಾತನೆ ಪಡುವಂತಾಗಿದೆ.

ಘಟಪ್ರಭಾದಿಂದ ಮೀರಜ್‌ ಕಡೆಗೆ ಹೋಗುವ ಎಲ್ಲ ರೈಲುಗಳು ಪ್ಲಾಟ್‌ಫಾರ್ಮ್‌ 2ರಲ್ಲಿ ಬಂದು ನಿಲ್ಲುತ್ತವೆ. ಆದರೆ ಆ ಪ್ಲಾಟ್‌ಫಾರ್ಮ್‌ಗೆ ಹೋಗಲು ಯಾವುದೇ ವ್ಯವಸ್ಥೆಯಿಲ್ಲ. ಪ್ಲಾಟ್‌ಫಾರ್ಮ್‌ ಬಹಳಷ್ಟ ಎತ್ತರವಾಗಿದ್ದು, ತಮ್ಮ ಲಗೇಜ್‌ದೊಂದಿಗೆ ಅದನ್ನು ಹತ್ತಲು ವಯಸ್ಸಾದವರು, ಹೆಣ್ಣುಮಕ್ಕಳು ಹರಸಾಹಸ ಪಡಬೇಕಿದೆ. ಚಿಕ್ಕಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ಏರುವುದಂತೂ ತುಂಬಾ ದುಸ್ತರವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೆಲ್ಲದರ ಮಧ್ಯೆ ಒಂದು ಮತ್ತು ಎರಡನೇ ಪ್ಲಾಟ್‌ಫಾರ್ಮ್‌ ನಡುವೆ ಆಗಾಗ ಒಂದು ಗೂಡ್ಸ್‌ ಟ್ರೈನ್‌ ಕೆಲವು ದಿನಗಳಿಂದ ಘಟಪ್ರಭಾ ಸ್ಟೇಶನ್‌ದಲ್ಲಿ ನಿಲ್ಲುತಿದ್ದು, ಯಲ್ಲಮ್ಮನ ಜಾತ್ರೆಯ ಸಮಯವಾದ್ದರಿಂದ ರೈಲು ಬಂದಾಗ ಜನರು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗಲು ಪರದಾಡುವ ದೃಶ್ಯ ಅತ್ಯಂತ ಅಪಾಯಕಾರಿಯಾಗಿದೆ. ಈ ಸಂದರ್ಭದಲ್ಲಿ ಏನಾದರೂ ಅನಾಹುತವಾದರೆ ಜೀವಕಳೆದುಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿದೆ. ಇದಕ್ಕೆ ಯಾರು ಹೊಣೆ ಎಂಬಂತಾಗಿದೆ.

ಈ ಬಗ್ಗೆ ಪ್ರಯಾಣಿಕರು ಹಲವು ಬಾರಿ ಮೇಲಧಿಕಾರಿಗಳ ಗಮನ ಸೆಳೆದ ಹಿನ್ನೆಲೆ ನಂತರ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ರೈಲು ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನಾದರೂ ರೈಲ್ವೆ ಗುತ್ತಿಗೆದಾರರು, ಅಧಿಕಾರಿಗಳು ಆಸಕ್ತಿ ವಹಿಸಿ ಪ್ರಯಾಣಿಕರ ತೊಂದರೆ ತಪ್ಪಿಸುವತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಪಾದಚಾರಿ ಮೇಲ್ಸೇತುವೆ ಕಾಮಗಾರಿ ಕಾರ್ಯ ಸಾಕಷ್ಟು ವಿಳಂಬವಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿ ಬೇಗನೆ ಪೂರ್ಣಗೊಳಿಸುವಲ್ಲಿ ಸಂಬಂಧಿಸಿದ ರೈಲ್ವೆ ಅಧಿಕಾರಿಗಳು ಮುಂದಾಗಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗೋಕಾಕ ತಾಲೂಕಿನ ಕನ್ನಡ ಸೇನೆಯ ಅಧ್ಯಕ್ಷ ಅಪ್ಪಾಸಾಹೇಬ ಮುಲ್ಲಾ ಹೇಳಿದ್ದಾರೆ.

ರೈಲ್ವೆ ಪಾದಚಾರಿಯ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಗೂಡ್ಸ್‌ ಟ್ರೈನ್‌ ನಿಂತಿದ್ದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದ್ದರೂ ಕೆಲಸ ಪೂರ್ಣಗೊಂಡಿದೆ. ಕಾಂಕ್ರೀಟ್‌ ಕೆಲಸ ನಡೆದಿದೆ. ಕೇವಲ 7 ದಿನಗಳಲ್ಲಿ ಪೂರ್ಣಗೊಂಡು ಪ್ರಯಾಣಿಕರು ಉಪಯೋಗಿಸಲು ಅನುಕೂಲ ಮಾಡಿಕೊಡುತ್ತೇವೆ ಎಂದು ಮೇಲ್ಸೇತುವೆ ಕಾಮಗಾರಿ ಸೂಪರ್‌ವೈಸರ್‌ ಮೂರ್ತಿ ತಿಳಿಸಿದ್ದಾರೆ.