Asianet Suvarna News Asianet Suvarna News

ಜೈಲು ಜಾಗದಲ್ಲಿ ಬರಲಿದೆ ಫ್ರೀಡಂ ಪಾರ್ಕ್ ಮಾದರಿ ಉದ್ಯಾನ

 ಹಳೇ ಜೈಲು ಆವರಣವು ಸಾರ್ವಜನಿಕ ಬಳಕೆಗೆ ಉಪಯೋಗುವಂತೆ ಸಿದ್ಧಗೊಳ್ಳಬೇಕು ಎಂಬ ಸಾರ್ವಜನಿಕರ ಕನಸು ಕೊನೆಗೂ ನನಸಾಗಿದೆ. ಇಲ್ಲಿ ಪಾರ್ಕ್ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದೆ. 

Park in old Jail Place Shivamogga
Author
Bengaluru, First Published Sep 30, 2019, 11:03 AM IST

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಸೆ.30):  ಹಳೇ ಜೈಲು ಆವರಣವು ಸಾರ್ವಜನಿಕ ಬಳಕೆಗೆ ಉಪಯೋಗುವಂತೆ ಸಿದ್ಧಗೊಳ್ಳಬೇಕು ಎಂಬ ಸಾರ್ವಜನಿಕರ ಕನಸು ಕೊನೆಗೂ ನನಸಾಗಿದೆ.

ಈ ಪ್ರದೇಶದ ಸುಮಾರು 40 ಎಕರೆ ಪ್ರದೇಶವನ್ನು ಬಂದೀಖಾನೆ ಇಲಾಖೆಯಿಂದ ಕಂದಾಯ ಇಲಾಖೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದ್ದು, ಸೆ.30ರ ಸೋಮವಾರ ಮುಖ್ಯಮಂತ್ರಿಗಳು ಇದಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ನಗರದ ಹೃದಯ ಭಾಗದಲ್ಲಿದ್ದ ಜೈಲನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿದ ಬಳಿಕ ಈ ಜಾಗ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜೈಲು ಸ್ಥಳಾಂತರದ ಯೋಜನೆ ರೂಪಿಸಿದ್ದು, ಇದು ಪೂರ್ತಿಗೊಂಡಿದ್ದು ಕಾಂಗ್ರೆಸ್‌ ಸರ್ಕಾರದಲ್ಲಿ. ಆದರೆ ಆ ಬಳಿಕ ಹಳೆ ಜೈಲು ಆವರಣವನ್ನು ಸಾರ್ವಜನಿಕ ಸಭೆ ಸಮಾರಂಭ ಸೇರಿದಂತೆ ಸಾರ್ವಜನಿಕ ಬಳಕೆಗೆ ಮೀಸಲಿಡುವ ಪ್ರಯತ್ನ ಯಶಸ್ವಿಯಾಗಲಿಲ್ಲ. ಬದಲಾಗಿ ಸರ್ಕಾರದ ಯೋಜನೆಗೆ ಇದನ್ನು ಬಳಸಲು ಒತ್ತಡ ರೂಪಿತಗೊಂಡಿತ್ತು. ಕೆಲವೊಂದು ಇಲಾಖೆಯ ವಸತಿ ಗೃಹ ಸಂಕೀರ್ಣ ನಿರ್ಮಾಣಕ್ಕೂ ಒತ್ತಡ ಹಾಕಲಾಗಿತ್ತು. ಆದರೆ ಅದೂ ಸಾಧ್ಯವಾಗಿರಲಿಲ್ಲ. ಕಾರಣ ಬಂದೀಖಾನೆ ಇಲಾಖೆ ಇದನ್ನು ತನ್ನ ವಶದಲ್ಲಿಯೇ ಇಟ್ಟುಕೊಳ್ಳಲು ಇ​ಚ್ಛಿಸಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪುನಃ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆಗೆ ಜೀವ ಬಂದಿತು. ಅಧಿಕಾರ ಸ್ವೀಕರಿಸಿದ ಮೊದಲ 15 ದಿನದಲ್ಲಿಯೇ ಈ ಸಂಬಂಧ ಆದೇಶವೊಂದನ್ನು ಹೊರಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಚಂದ್ರ ಶೇಖರ್‌ ಆಜಾದ್‌ ಅವರ ಹೆಸರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸಲಾಗುತ್ತಿದೆ. ಶಿವಮೊಗ್ಗದ ಎಲ್ಲ ಚಟುವಟಿಕೆಯ ಕೇಂದ್ರ ಭಾಗವಾಗಿದ್ದ ನೆಹರು ಕ್ರೀಡಾಂಗಣದಲ್ಲಿ ಟ್ರ್ಯಾಕ್‌ ನಿರ್ಮಿಸಿದ ಬಳಿಕ ಇದನ್ನು ಇತರೆ ಬಳಕೆಗೆ ನಿಷೇಧಿಸಲಾಯಿತು. ವಿವಿಧ ಹೋರಾಟದ ಸಭೆಗಳು, ರಾಜಕೀಯ ಸಭೆಗಳು, ದಸರಾ ಉತ್ಸವ, ರಾಷ್ಟ್ರೀಯ ಹಬ್ಬಗಳಿಗೂ ಸರಿಯಾದ ಜಾಗ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಎಲ್ಲ ಸಮಸ್ಯೆಗೂ ಇದು ಪರಿಹಾರವಾಗಲಿದೆ.

ಕೇವಲ ಪೊಲೀ​ಸರ ಓಡಾ​ಟಕ್ಕೆ ಸೀಮಿ​ತ​ವಾ​ಗಿದ್ದ ಜೈಲು

1872ರಲ್ಲಿ ಸುಮಾರು 46 ಎಕರೆ ಪ್ರದೇಶದಲ್ಲಿ ಈ ಜೈಲನ್ನು ನಿರ್ಮಿಸಲಾಗಿತ್ತು. ಮುಖ್ಯವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ಜನರನ್ನು ಬ್ರಿಟೀಷರು ಈ ಜೈಲಿನಲ್ಲಿ ಬಂಧಿಸಿಟ್ಟಿದ್ದರು. ಸುಮಾರು ಒಂದೂವರೆ ಶತಮಾನದ ಹಿಂದೆ ಶಿವಮೊಗ್ಗ ನಗರ ಎಂದರೆ ಬಿಬಿ ಸ್ಟೀಟ್‌, ಕೋಟೆ ರಸ್ತೆ ಮತ್ತು ಪೇಟೆ ಬೀದಿ(ಗಾಂಧಿ ಬಜಾರ್‌). ಅಲ್ಲಿಂದ ಸುಮಾರು 3 ಕಿ. ಮೀ. ದೂರದ ದಟ್ಟಾರಣ್ಯದ ನಡುವೆ ಈ ಜೈಲು ನಿರ್ಮಿಸಿದ್ದು, ಆಗಿನ ಕಾಲಕ್ಕೆ ಇದೊಂದು ನಿಗೂಢ ಪ್ರದೇಶವಾಗಿತ್ತು. ಜನರ ಓಡಾಟವೇ ಇಲ್ಲದ, ಕೇವಲ ಪೊಲೀಸರ ಓಡಾಟಕ್ಕಷ್ಟೇ ಸೀಮಿತವಾಗಿದ್ದ ಈ ಪ್ರದೇಶ ಜನರ ಪಾಲಿಗೆ ನಿಗೂಢ ಮತ್ತು ಭಯದ ಕೇಂದ್ರವೂ ಆಗಿತ್ತು. ಕಳೆದ ಐವತ್ತು ವರ್ಷಗಳಲ್ಲಿ ಶಿವಮೊಗ್ಗ ಬೆಳೆದು ಈ ಜೈಲನ್ನು ದಾಟಿ ಮುಂದೆ ಹೋಯಿತು. ಸದ್ಯ ಇದು ನಗರದ ಕೇಂದ್ರ ಭಾಗದಂತಿದೆ.

ಈಸೂರಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಗಲ್ಲಿಗೇರಿಸಿದ ಸ್ಥಳ

ಸ್ವಾತಂತ್ರ್ಯ ಚಳವಳಿ ಉತ್ತುಂಗ ತಲುಪಿದ ಕಾಲವದು. 1920 ರಿಂದ 1947ರ ನಡುವಿನ ಅವಧಿಯಲ್ಲಿ ಈ ಕಾರಾಗೃಹವು ಚಳವಳಿಗಾರರಿಂದ ತುಂಬಿತುಳುಕುತ್ತಿತ್ತು. 1942 ಸೆಪ್ಟೆಂಬರ್‌ 28ರಂದು ’ಏಸೂರು ಕೊಟ್ಟರು ಈಸೂರು ಕೊಡೆವು’ ಹೆಸರಲ್ಲಿ ಸ್ವಾತಂತ್ರ್ಯದ ಕಹಳೆ ಊದಿದ ಶಿಕಾರಿಪುರ ತಾಲೂಕು ಈಸೂರಿನ 32 ಮಹಿಳೆಯರು ಸೇರಿದಂತೆ 89 ಚಳವಳಿಗಾರರನ್ನು ಇದೇ ಜೈಲಿನಲ್ಲಿ ಇರಿಸಲಾಗಿತ್ತು. 1943ನೇ ಜ. 9 ರಂದು ಬ್ರಿಟಿಷ್‌ ಸರಕಾರವು ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅದರಲ್ಲಿ ಬಡಕಳ್ಳಿಹಾಲಪ್ಪ, ಸೂರ್ಯನಾರಾಯಣಚಾರಿ, ಜೀನಹಳ್ಳಿ ಮಲ್ಲಪ್ಪ, ಗೌಡ್ರು ಶಂಕರಪ್ಪ, ಗುರಪ್ಪ ಸೇರಿದಂತೆ ಐವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಇದಕ್ಕೆ ಸಾಕ್ಷಿಯಾಗಿದ್ದು ಇದೇ ಜೈಲು.

Follow Us:
Download App:
  • android
  • ios