ಬೆಂಗಳೂರು [ಮಾ.02]:   ಕಳೆದ ಕೆಲವು ತಿಂಗಳ ಹಿಂದೆ ದಾಖಲೆ ಪ್ರಮಾಣದಲ್ಲಿ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಈರುಳ್ಳಿ, ಬೆಳ್ಳುಳ್ಳಿ ಮತ್ತು ತರಕಾರಿ ಬೆಲೆ ಇದೀಗ ಗಣನೀಯವಾಗಿ ಕುಸಿದಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರಲ್ಲಿ ಮಂದಹಾಸ ಮೂಡಿಸಿದ್ದರೆ, ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಹೊಸ ಬೆಳೆ ಬಂದಿದೆ, ಉತ್ತಮ ಇಳುವರಿಯೂ ಇದೆ. ಮಾರುಕಟ್ಟೆಗೆ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರುವುದರಿಂದ ಬೇಡಿಕೆ ಕಡಿಮೆಯಾಗಿದೆ.

ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಶತಕ ಬಾರಿಸಿದ್ದ ಈರುಳ್ಳಿ ಈಗ ಕೆ.ಜಿ. 10-12 ರು., ಕೆಲವು ದಿನಗಳ ಹಿಂದೆ 250 ರು. ಇದ್ದ ಬೆಳ್ಳುಳ್ಳಿ ಕೆ.ಜಿ. 130-140 ರು.ಗೆ ಇಳಿಕೆಯಾಗಿದೆ. ಮುಂದಿನ ವಾರದೊಳಗೆ ಮತ್ತಷ್ಟುಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಬಿಸಿಲಿನ ಝಳ ಏರಿದಲ್ಲಿ ಬೆಲೆಯಲ್ಲಿ ವ್ಯತ್ಯಾಸವಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಈರುಳ್ಳಿ, ಬೆಳ್ಳುಳ್ಳಿ ಜತೆಗೆ ಬೆಲೆ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಸಹ ಇಳಿಕೆಯಾಗಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆ ಕಳೆದ ಕೆಲ ದಿನಗಳಿಂದ ಶೇ.10ರಿಂದ 40ರಷ್ಟುಕುಸಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಕೆಲವರು ಅಧಿಕ ಬೆಲೆಗೆ ತರಕಾರಿ, ಈರುಳ್ಳಿ, ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದಾರೆ. ತಳ್ಳುವ ಗಾಡಿ ವ್ಯಾಪಾರಿಗಳು ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಹಳೆಯ ದರದಲ್ಲೇ ಮಾರಾಟ ಮಾಡುತ್ತಿರುವುದು ಗ್ರಾಹಕರಿಗೆ ಹೊಡೆತ ನೀಡಿದೆ.

ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು : ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್...

ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್‌.ವಿ. ಗೋಪಿ ಅವರು, ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇದ್ದ ಬೆಲೆ ಈಗಿಲ್ಲ. ಹೊಸ ಬೆಳೆ ಮಾರುಕಟ್ಟೆಗೆ ಪೂರೈಕೆಯಾಗಿರುವುದರಿಂದ ಈಗ ತರಕಾರಿ ಬೆಲೆ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕೆ.ಜಿ.ಗೆ 6-8 ರು. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. 15-30 ರು.ವರೆಗಿದೆ. ಈರುಳ್ಳಿ 100 ರು.ಗೆ 5 ಕೆ.ಜಿ. ಮಾರಾಟ ಮಾಡಲಾಗುತ್ತಿದೆ. ವಿವಿಧ ಸೊಪ್ಪುಗಳು ಒಂದು ಕಂತೆಗೆ 10ರಿಂದ 15 ರು. ಬೆಲೆ ಇದೆ. ತರಕಾರಿ ಬೆಳೆಗೆ ನೀರಿನ ಕೊರತೆ ಎದುರಾಗಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಬಿಸಿಲಿನ ಧಗೆ ಹೆಚ್ಚಿದಲ್ಲಿ ಬೆಲೆ ಏರಿಕೆಯಾಗಬಹುದು ಎಂದು ತಿಳಿಸಿದರು.

ಒಂದು ವಾರದಿಂದ ಅಗ್ಗದಲ್ಲಿ ತರಕಾರಿ ಸಿಗುತ್ತಿವೆ. ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. ಟೊಮೆಟೊ 24 ಕೆ.ಜಿ. ಬಾಕ್ಸ್‌ಗೆ 220 ರು. ಬೆಲೆ ನಿಗದಿಯಾಗಿದ್ದು, ಕೆ.ಜಿ. 9-10 ರು., ಈರುಳ್ಳಿ ಒಂದು ಮೂಟೆ 1200 ರು., ಬೆಳ್ಳುಳ್ಳಿ ಕೆ.ಜಿ. 120-130 ರು., ಮಂಗಳೂರು ಸೌತೆ 50 ಕೆ.ಜಿ. ಮೂಟೆ 200 ರು.ಗೆ ಖರೀದಿಯಾಗುತ್ತಿದೆ. ತರಕಾರಿಯನ್ನು ಹಲವು ದಿನಗಳ ಕಾಲ ಶೇಖರಿಸಿಡಲು ಸಾಧ್ಯವಿಲ್ಲ. ಹೀಗಾಗಿ ಕೇಳಿದಷ್ಟುಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಕಲಾಸಿಪಾಳ್ಯದ ತರಕಾರಿ ಸಗಟು ವ್ಯಾಪಾರಿಗಳು.

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ಬೆಳ್ಳುಳ್ಳಿಗಾಗಿ ಮಹಾರಾಷ್ಟ್ರವನ್ನೇ ಅವಲಂಬಿಸಬೇಕಾಗಿದೆ. ಇಂದೋರ್‌, ಹೈದರಾಬಾದ್‌ನಿಂದ ಹೆಚ್ಚಾಗಿ ಆಲೂಗಡ್ಡೆ ಬರುತ್ತಿದ್ದು, ಬೆಲೆ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಈರುಳ್ಳಿ ಕನಿಷ್ಠ 1000-2200 ರು. ಬೆಲೆ ನಿಗದಿಯಾಗಿದೆ. ಆದರೆ, ಪ್ರದೇಶವಾರು ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಾಚ್‌ರ್‍ ಎರಡನೇ ವಾರದಲ್ಲಿ ಹೊಸ ಬೆಳೆ ಬೆಳ್ಳುಳ್ಳಿ ಮಾರುಕಟ್ಟೆಗೆ ಬರಲಿದ್ದು, ಆಗ ಮತ್ತಷ್ಟುಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಉದಯ್‌ ಶಂಕರ್‌ ತಿಳಿಸಿದರು.

----

ಬೆಂಗಳೂರಿನ ಕಲಾಸಿಪಾಳ್ಯ ಸಗಟು ಮಾರುಕಟ್ಟೆಯ ದರ

ಹಿಂದಿನ ಬೆಲೆ ಈಗಿನ ಬೆಲೆ

ಈರುಳ್ಳಿ 50- 60 25

ಬದನೆಕಾಯಿ 30 20

ಬೀನ್ಸ್‌ 40 30

ಹೀರೇಕಾಯಿ 30 20

ಆಲೂಗಡ್ಡೆ 35 25

ಈರುಳ್ಳಿ 40 25

ಬೆಳ್ಳುಳ್ಳಿ 200 130-140

ಟೊಮೆಟೊ 20 15

ಕ್ಯಾರೆಟ್‌ 50 30

ಕೋಸು 30 20

ಬೀಟ್‌ರೂಟ್‌ 40 15

ಕೋಸು 30 20