ರಸ್ತೆ ಪಕ್ಕ ಹೊರಟಿದ್ದವನಿಗೆ ತಿವಿದ ಬಿಡಾಡಿ‌ ದನ, ವೃದ್ಧ ಸ್ಥಳದಲ್ಲೇ ಸಾವು: ಗದಗ ಬೆಟಗೇರಿ ನಗರಸಭೆ ವಿರುದ್ಧ ಜನರ ಆಕ್ರೋಶ!

ಬಿಡಾಡಿ ದನವೊಂದು ಪಾದಚಾರಿಗೆ ತಿವಿದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಟಗೇರಿಯ ಹೊಸ ಬನಶಂಕರಿ ಗುಡಿ ಸಮೀಪ ನಡೆದಿದೆ. 

old man killed by stray cattle people outrage against gadag betageri municipal council gvd

ಗದಗ (ಜು.31): ಬಿಡಾಡಿ ದನವೊಂದು ಪಾದಚಾರಿಗೆ ತಿವಿದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಟಗೇರಿಯ ಹೊಸ ಬನಶಂಕರಿ ಗುಡಿ ಸಮೀಪ ನಡೆದಿದೆ. ಬೆಟಗೇರಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ಶಂಕರಪ್ಪ ಹೊಳೆ (70) ಮೃತಪಟ್ಟವರು. ಬುಧವಾರ ಬೆಳಗ್ಗೆ 8ರ ಸುಮಾರಿಗೆ ಬೆಟಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆ ನಂ.7ರ ಸಮೀಪ ಬಿಡಾಡಿ ದನಗಳು ಕಾದಾಡುತ್ತಿದ್ದವು. ಈ ವೇಳೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಶಂಕಪ್ಪ ಹೊಳೆ ಅವರಿಗೆ ದನವೊಂದು ರಭಸದಿಂದ ತಿವಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. 

‘ಬಿಡಾಡಿ ದನ ಗುದ್ದಿ ತೀವ್ರ ಗಾಯಗೊಂಡಿದ್ದ ವೃದ್ಧನನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು 108 ಅಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ಅಂಬುಲೆನ್ಸ್‌ ಅರ್ಧ ಗಂಟೆಯಾದರೂ ಬರಲಿಲ್ಲ. ಸರಿಯಾದ ಸಮಯಕ್ಕೆ ಅಂಬುಲೆನ್ಸ್‌ ಬಂದಿದ್ದರೆ ವೃದ್ಧ ಬದುಕುತ್ತಿದ್ದ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.  ‘ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಗದಗ ಬೆಟಗೇರಿ ನಗರಸಭೆಗೆ ಈ ಹಿಂದೆ ಕೂಡ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆದರೆ, ಅವರ ನಿರ್ಲಕ್ಷ್ಯದಿಂದಾಗಿ ಇಂದು ವೃದ್ಧರೊಬ್ಬರು ಪ್ರಾಣ ಕಳೆದುಕೊಳ್ಳುವಂತಾಯಿತು’ ಎಂದು ಸ್ಥಳೀಯರು ಕಿಡಿಕಾರಿದರು. 

ಭ್ರಷ್ಟಾಚಾರದಲ್ಲಿ ಬಿಜೆಪಿ ಎತ್ತಿದ ಕೈ, ಮುಡಾದಲ್ಲಿ ಹಗರಣ‌ ಮಾಡಿದ್ದೇ ಅವರು: ಸಚಿವ ದರ್ಶನಾಪುರ

‘ವೃದ್ಧನ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಅವಳಿ ನಗರದಲ್ಲಿರುವ ಎಲ್ಲ ಬಿಡಾಡಿ ದನಗಳನ್ನು ತಕ್ಷಣವೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.  ‘ಬೆಟಗೇರಿಯಲ್ಲಿ ಬುಧವಾರ ಬೆಳಿಗ್ಗೆ ಬಿಡಾಡಿ ದನ ಗುದ್ದಿ ವೃದ್ಧರೊಬ್ಬರನ್ನು ಸಾಯಿಸಿದೆ. ವಿಷಯ ತಿಳಿದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ನಗರಸಭೆ ಸದಸ್ಯ ಮಾಧುಸಾ ಮೇರವಾಡೆ ತಿಳಿಸಿದರು. 

‘ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆ ನಗರಸಭೆಯಿಂದ ಮೂರು ಬಾರಿ ಕಾರ್ಯಾಚರಣೆ ನಡೆಸಲಾಗಿತ್ತು.ಆದರೆ, ಪ್ರಾಣಿದಯಾ ಸಂಘದವರು ಮತ್ತು ಸಾರ್ವಜನಿಕರು ನಮಗೆ ಸಹಕಾರ ಕೊಡಲಿಲ್ಲ. ಮತ್ತೇ ಅವುಗಳನ್ನು ರಸ್ತೆ ಬಿಟ್ಟರು. ಇವತ್ತು ನಡೆದಿರುವ ಘಟನೆ ದುರ್ದೈವದ ಸಂಗತಿ. ಮುಂದೆ ಈ ರೀತಿ ಆಗದಂತೆ ಕ್ರಮವಹಿಸಲಾಗುವುದು’ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ತಿಳಿಸಿದರು. ‘ಅವಳಿ ನಗರದಲ್ಲಿನ ಬಿಡಾಡಿ ದನಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಪ್ರಾಣಿ ದಯಾ ಸಂಘಗಳು, ಹಸುಗಳ ಮಾಲೀಕರು, ಜಿಲ್ಲಾಧಿಕಾರಿ, ಪೊಲೀಸ್‌ ಇಲಾಖೆ ಸಹಯೋಗದಲ್ಲಿ ನಗರಸಭೆ ವತಿಯಿಂದ ಇಂದೇ ಸಭೆ ನಡೆಸಲಾಗುವುದು.  

‘ಗುರುವಾರ ಬೆಳಿಗ್ಗೆ 11 ಗಂಟೆ ವೇಳೆಗೆ  ದನಗಳ ಮಾಲೀಕರು ಅವುಗಳನ್ನು ಮನೆಯಲ್ಲಿ ಕಟ್ಟಿಕೊಳ್ಳಬೇಕು. ಇಲ್ಲವಾದರೆ,  ಅವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.  ‘ಬಿಡಾಡಿ ದನಗಳು ಹಾವಳಿ ತಪ್ಪಿಸಲು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಈ ಹಿಂದೆಯೇ ಗದಗ ಬೆಟಗೇರಿ ನಗರಸಭೆಗೆ ಪತ್ರ ಬರೆಯಲಾಗಿತ್ತು. ಬಿಡಾಡಿ ದನಗಳ ಸ್ಥಳಾಂತರ ಮಾಡುವಂತೆ ಸೂಚಿಸಲಾಗುವುದು’ ಎಂದು ಬೆಟಗೇರಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಲಕ್ಷ್ಷಣ ಆರಿ ತಿಳಿಸಿದ್ದಾರೆ.

ರಾಜ್ಯದ ಜನತೆ ಪ್ರಶ್ನಿಸಬೇಕಾಗಿರುವುದು ದಲಿತ ವಿರೋಧಿ ಕೇಂದ್ರವನ್ನು, ದಲಿತ ಪರ ರಾಜ್ಯ ಸರ್ಕಾರವನ್ನಲ್ಲ: ಸಿದ್ದರಾಮಯ್ಯ

‘ಬಿಡಾಡಿ ದನಗಳು ಗೋಶಾಲೆಯಲ್ಲಿ ಇರುವುದಿಲ್ಲ. ಅಲ್ಲಿ ಕಟ್ಟಿದರೆ ಮೇವು ಕೂಡ ತಿನ್ನಲ್ಲ. ಅವು ಓಡಾಡಿಕೊಂಡೇ ಬದುಕಬೇಕು. ಈ ಕಾರಣಕ್ಕಾಗಿ ಶಿವಯೋಗಿ ಮಂದಿರದವರ  ಜತೆಗೆ ಮಾತನಾಡಿ, ಅಲ್ಲಿನ ಗುಡ್ಡಗಾಡು ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಯತ್ನ ಮಾಡಲಾಗುವುದು. ಜತೆಗೆ ನಗರದಲ್ಲಿ ಕಾರ್ಯಾಚರಣೆ ನಡೆಸಿ ಸಂಚಾರ ಮತ್ತು ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮವಹಿಸಲಾಗುವುದು’ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios