ಗಣಿನಾಡಲ್ಲಿ HIV ಸೋಂಕಿತರ ಸಂಖ್ಯೆ ಇಳಿಮುಖ
- ಗಣಿನಾಡಿನಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಮುಖ
- ಐದು ವರ್ಷಗಳಲ್ಲಿ 5 ಲಕ್ಷ ಜನರಿಗೆ ಆರೋಗ್ಯ ತಪಾಸಣೆ
- 2091 ಜನರಿಗೆ ಸೋಂಕು ದೃಢ
- ಈವರೆಗೆ ಏಡ್‌್ಸನಿಂದ ಸಾವಿಗೀಡಾದವರ ಸಂಖ್ಯೆ 3488
ಕೆ.ಎಂ. ಮಂಜುನಾಥ್
ಬಳ್ಳಾರಿ (ಡಿ.2) : ಕಳೆದ ಒಂದು ದಶಕದ ಹಿಂದೆಯಷ್ಟೇ ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದ್ದ ಗಣಿ ಜಿಲ್ಲೆ ಬಳ್ಳಾರಿಯಲ್ಲೀಗ ಸೋಂಕು ಹರಡುವಿಕೆಯ ಪ್ರಮಾಣ ಗಮನಾರ್ಹ ಕುಸಿತ ಕಂಡಿದೆ. ಯುವ ಸಮುದಾಯದಲ್ಲಿ ಹೆಚ್ಚುತ್ತಿರುವ ಜಾಗೃತಿ, ಆರೋಗ್ಯ ಇಲಾಖೆಯ ಎಚ್‌ಐವಿ/ ಏಡ್‌್ಸ ನಿಯಂತ್ರಣಾ ಘಟಕದಿಂದ ನಿರಂತರವಾಗಿ ನಡೆಯುತ್ತಿರುವ ಕಾಂಡೋಮ್ ಬಳಕೆಯ ಅರಿವು ಹಾಗೂ ಗುರಿ ಮೀರಿ ಕೈಗೊಳ್ಳುತ್ತಿರುವ ಆರೋಗ್ಯ ತಪಾಸಣೆ ಸೋಂಕು ಬಾಧೆ ಇಳಿಮುಖಗೊಳಿಸಿದೆ.
ಕಳೆದ ಆರು ವರ್ಷಗಳಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಪರೀಕ್ಷೆಯ ಪ್ರಮಾಣ ಹೆಚ್ಚಿಸಿದ್ದರಿಂದ ಎಚ್‌ಐವಿಯಿಂದ ಪಾರಾದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಸಂಗತಿಯೂ ಹೌದು. 2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 411 ಜನ ಸೋಂಕಿತರು ಕಂಡು ಬಂದಿದ್ದರು. 2018-19 ಹಾಗೂ 2019-20ರ ಸಾಲಿನವರೆಗೆ ಸೋಂಕಿತರ ಸಂಖ್ಯೆ 403ರಿಂದ 468ರವರೆಗೆ ಇತ್ತು. 2020-21ರಿಂದ ಇಳಿಕೆಯ ಕ್ರಮಾಂಕ ಕಂಡು ಬಂದಿದೆ. 2020-21ರಲ್ಲಿ 260, 2021-22ರಲ್ಲಿ 262 ಸೋಂಕಿತರಿದ್ದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 189ಕ್ಕೆ ಕುಸಿತಗೊಂಡಿದೆ. ಆರು ವರ್ಷಗಳಲ್ಲಿ ಒಟ್ಟು 1993ಜನ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ ಬಳ್ಳಾರಿ ತಾಲೂಕಿನಲ್ಲಿ ಅತಿ ಹೆಚ್ಚು 1465 ಸೋಂಕಿತರು ಇದ್ದು, ಅತಿ ಕಡಿಮೆ ಕಂಪ್ಲಿ ತಾಲೂಕಿನಲ್ಲಿ 15 ಜನರಿದ್ದಾರೆ ಎಂದು ತಿಳಿದು ಬಂದಿದೆ.
ಸಲಿಂಗಕಾಮಿ ವ್ಯಕ್ತಿಗೆ ಮಂಕಿಪಾಕ್ಸ್, ಕೋವಿಡ್ -19 ಮತ್ತು ಎಚ್ಐವಿ ಎಲ್ಲ ಒಟ್ಟಿಗೆ ಬಂದಿದೆಯಂತೆ..!
5 ಲಕ್ಷ ಸೋಂಕಿತರ ಪರೀಕ್ಷೆ:
ಎಚ್‌ಐವಿ ಸೋಂಕಿತರ ಸಾವನ್ನು ಸೊನ್ನೆಗೆ ತರಬೇಕು ಎಂದು ನಾನಾ ಯೋಜನೆ ರೂಪಿಸಿಕೊಂಡಿರುವ ಬಳ್ಳಾರಿ ಜಿಲ್ಲೆ ಎಚ್‌ಐವಿ/ಏಡ್‌್ಸ ನಿಯಂತ್ರಣ ಮತ್ತು ನಿರ್ವಾಹಣಾ ಘಟಕ ಆಪ್ತ ಸಮಾಲೋಚನೆ, ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿಕೊಂಡಿದ್ದು, ಐಸಿಟಿಸಿ ಕೇಂದ್ರಗಳ ಮೂಲಕ 2017ರಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 5,39,981 ಜನರಿಗೆ ಎಚ್‌ಐವಿ ಪರೀಕ್ಷೆ ಮಾಡಿಸಲಾಗಿದ್ದು, ಈ ಪೈಕಿ 2091 ಜನರಿಗೆ ಸೋಂಕು ಇರುವುದು ದೃಢಗೊಂಡಿದೆ. ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಇರುವ ಎಚ್‌ಐವಿ ಬಾಧಿತರು ಸೇರಿದಂತೆ ಒಟ್ಟು 4862 ಜನರಿದ್ದಾರೆ. ಈ ಪೈಕಿ ಹೊರ ಜಿಲ್ಲೆ ಹಾಗೂ ರಾಜ್ಯಗಳ ಜನರು ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1970 ಜನ ಎಚ್‌ಐವಿ ಸೋಂಕಿತ ಮಹಿಳೆಯರು ಹಾಗೂ 1970 ಜನ ಪುರುಷರು ಸೋಂಕು ನಿಯಂತ್ರಣ ಚಿಕಿತ್ಸೆಯಲ್ಲಿದ್ದಾರೆ. ಕಳೆದ ಆರು ವರ್ಷಗಳಲ್ಲಿ 25,586 ಜನ ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಮಾಡಿಸಲಾಗಿದ್ದು, ಈ ಪೈಕಿ 9 ಗರ್ಭಿಣಿಯರಿಗೆ ಸೋಂಕು ಇರುವುದು ಖಚಿತಗೊಂಡಿದೆ. ಒಟ್ಟು ಆರು ವರ್ಷಗಳಲ್ಲಿ 35 ಜನ ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 342 ಮಕ್ಕಳು ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಡ್ಯಾಪ್ಕೊಗೆ ರಾಜ್ಯಪ್ರಶಸ್ತಿ
ಎಚ್‌ಐವಿ ಸೋಂಕಿತರಿಗೆ ಆಪ್ತ ಸಮಾಲೋಚನೆ,ಎಚ್‌ಐವಿ ಬಾಧಿತ ಗರ್ಭಿಣಿಯರಿಗೆ ಹೆರಿಗೆ, ಜನರ ಆರೋಗ್ಯ ಪರೀಕ್ಷೆ ಹೆಚ್ಚಿಸಿ, ಸೋಂಕಿತರ ಪತ್ತೆ ಹಚ್ಚುವಿಕೆ ಸೇರಿದಂತೆ ಇಲಾಖೆ ನೀಡಿದ ಗುರಿ ಮೀರಿ ಕಾರ್ಯ ನಿರ್ವಹಿಸಿದ ಬಳ್ಳಾರಿ ಜಿಲ್ಲಾ ಎಚ್‌ಐವಿ/ಏಡ್‌್ಸ ನಿಯಂತ್ರಣ ಮತ್ತು ನಿರ್ವಾಹಣಾ ಘಟಕಕ್ಕೆ ಈ ಬಾರಿ ರಾಜ್ಯಮಟ್ಟದ ಅತ್ಯುತ್ತಮ ಡಾಪ್ಕೊ ಪ್ರಶಸ್ತಿ ಸಂದಿದೆ. ಬಳ್ಳಾರಿ ಜಿಲ್ಲೆಯ ಎಚ್‌ಐವಿ ನಿಯಂತ್ರಣ ಘಟಕ ಕಳೆದ 2012, 2018, 2019 ಹಾಗೂ 2020ನೇ ಸಾಲಿನಲ್ಲಿ ಸಹ ಮಾದರಿ ಘಟಕ ಎಂಬ ಪ್ರಶಸ್ತಿ ಪಡೆದಿತ್ತು. ಈ ಬಾರಿಯೂ ಪ್ರಶಸ್ತಿಗೆ ಭಾಜನವಾಗಿರುವ ಘಟಕದ ಕಾರ್ಯವನ್ನು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ ಸೇರಿದಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಶ್ಲಾಘಿಘಿಘಿಘಿಸಿದ್ದಾರೆ.
ಕೊರೋನಾ ಔಷಧ ಕಂಡು ಹಿಡಿಯುವ ಪೈಪೋಟಿ ಮಧ್ಯೆ ಸಿಕ್ತು ಏಡ್ಸ್‌ಗೆ ಮದ್ದು!
ಜಿಲ್ಲೆಯ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ಘಟಕದ ಎಲ್ಲ ಸಿಬ್ಬಂದಿ ಶ್ರಮದಿಂದ ಎಚ್‌ಐವಿ ಸೋಂಕು ನಿಯಂತ್ರಣ ಕಾರ್ಯಕ್ಕೆ ಫಲ ಸಿಕ್ಕಿದೆ. ಯುವಕರಿಗೆ ಸೂಕ್ತ ಮಾರ್ಗದರ್ಶನ ಅಗತ್ಯವಿದೆ. ಲೈಂಗಿಕ ರೋಗಗಳ ಕುರಿತು ಮುಕ್ತವಾಗಿ ಮಾತನಾಡಿ ಅವರಲ್ಲಿರುವ ಭಯ ಹೋಗಲಾಡಿಸುವ ಕೆಲಸವನ್ನು ಪೋಷಕರು ಸಹ ಮಾಡಬೇಕಾಗಿದೆ.
ಡಾ. ಇಂದ್ರಾಣಿ, ಜಿಲ್ಲಾ ಎಚ್‌ಐವಿ/ಏಡ್‌್ಸ ನಿಯಂತ್ರಣಾ ಅಧಿಕಾರಿ (ಡ್ಯಾಪ್ಕೊ) ಬಳ್ಳಾರಿ.