Asianet Suvarna News Asianet Suvarna News

ವಿಮಾನ ನಿಲ್ದಾಣಗಳಲ್ಲಿ ಆರಂಭಿಕ ಹಂತದಲ್ಲಿ ಹ್ಯಾಂಡ್‌ಬ್ಯಾಗ್‌ ತಪಾಸಣೆಯೇ ಇಲ್ಲ

ವಿಮಾನ ನಿಲ್ದಾಣ ಪ್ರವೇಶಿಸಿದ ಬಳಿಕ ವಿಮಾನಯಾನಿಗಳ ಕೈಚೀಲ ಅಥವಾ ಹ್ಯಾಂಡ್‌ ಬ್ಯಾಗ್‌ನ್ನು ಮೊದಲ ಹಾಗೂ ಎರಡನೇ ಹಂತದ ತಪಾಸಣೆ ವೇಳೆ ಪರಿಶೀಲನೆ ನಡೆಸುವುದಿಲ್ಲ. ಮೂರನೇ ಹಂತದ ಕೊನೆಯ ತಪಾಸಣೆ ವೇಳೆ ಹ್ಯಾಂಡ್‌ ಬ್ಯಾಗ್‌ ತಪಾಸಣೆ ನಡೆಯುತ್ತದೆ. ಅಲ್ಲಿವರೆಗೆ ಹ್ಯಾಂಡ್‌ ಬ್ಯಾಗ್‌ ತಪಾಸಣೆ ರಹಿತವಾಗಿರುತ್ತದೆ. ಇದು ಭವಿಷ್ಯದಲ್ಲಿ ಮಂಗಳೂರು ಬಾಂಬ್‌ ಮಾದರಿಯ ಘಟನೆಗೆ ಆಸ್ಪದ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ಭೀತಿ ಪಡುವಂತಾಗಿದೆ.

No hand bag checking in intial stages at airport
Author
Bangalore, First Published Jan 23, 2020, 8:03 AM IST

ಮಂಗಳೂರು(ಜ.23): ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹ್ಯಾಂಡ್‌ಬ್ಯಾಗ್‌ನಲ್ಲಿ ಸಜೀವ ಬಾಂಬ್‌ ಪತ್ತೆಯಾದ ಘಟನೆ ಬಳಿಕವೂ ಮಂಗಳೂರು ಸೇರಿದಂತೆ ದೇಶದ ವಿಮಾನ ನಿಲ್ದಾಣಗಳಲ್ಲಿ ಬ್ಯಾಗೇಜ್‌ ಹೊರತುಪಡಿಸಿ ಹ್ಯಾಂಡ್‌ ಬ್ಯಾಗ್‌ನ್ನು ಮೊದಲ ಹಂತದಲ್ಲಿ ಪೂರ್ತಿ ತಪಾಸಣೆ ನಡೆಸದೆ ಗಂಭೀರ ಭದ್ರತಾ ಲೋಪ ಎಸಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ಕಳವಳ ವ್ಯಕ್ತಗೊಳ್ಳುತ್ತಿದೆ.

ವಿಮಾನ ನಿಲ್ದಾಣ ಪ್ರವೇಶಿಸಿದ ಬಳಿಕ ವಿಮಾನಯಾನಿಗಳ ಕೈಚೀಲ ಅಥವಾ ಹ್ಯಾಂಡ್‌ ಬ್ಯಾಗ್‌ನ್ನು ಮೊದಲ ಹಾಗೂ ಎರಡನೇ ಹಂತದ ತಪಾಸಣೆ ವೇಳೆ ಪರಿಶೀಲನೆ ನಡೆಸುವುದಿಲ್ಲ. ಮೂರನೇ ಹಂತದ ಕೊನೆಯ ತಪಾಸಣೆ ವೇಳೆ ಹ್ಯಾಂಡ್‌ ಬ್ಯಾಗ್‌ ತಪಾಸಣೆ ನಡೆಯುತ್ತದೆ. ಅಲ್ಲಿವರೆಗೆ ಹ್ಯಾಂಡ್‌ ಬ್ಯಾಗ್‌ ತಪಾಸಣೆ ರಹಿತವಾಗಿರುತ್ತದೆ. ಇದು ಭವಿಷ್ಯದಲ್ಲಿ ಮಂಗಳೂರು ಬಾಂಬ್‌ ಮಾದರಿಯ ಘಟನೆಗೆ ಆಸ್ಪದ ನೀಡುವುದನ್ನು ನಿರಾಕರಿಸುವಂತಿಲ್ಲ ಎಂದು ಭೀತಿ ಪಡುವಂತಾಗಿದೆ.

ಹ್ಯಾಂಡ್‌ ಬ್ಯಾಗ್‌ ತಪಾಸಣೆ ಕೊನೆಗೆ!:

ನಿತ್ಯವೂ ಅನೇಕ ಮಂದಿ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗುತ್ತಾರಾದರೂ ಹ್ಯಾಂಡ್‌ಬ್ಯಾಗ್‌ ತಪಾಸಣೆ ಬಗ್ಗೆ ಅಷ್ಟಾಗಿ ಗಮನ ಇರಿಸಿರುವುದಿಲ್ಲ. ಹ್ಯಾಂಡ್‌ಬ್ಯಾಗ್‌ ಅಮೂಲಾಗ್ರ ತಪಾಸಣೆಗೆ ಒಳಗಾಗುವುದು ಕೊನೆ ಗಳಿಕೆಯಲ್ಲಿ ಎಂಬುದೇ ವಿಪರ್ಯಾಸ. ಅಲ್ಲದೆ ಇದುವೇ ಭದ್ರತಾ ಲೋಪಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನುವಂತಾಗಿದೆ.

'ನನ್ನ ಹೆಸರು ದೇಶಕ್ಕೇ ಗೊತ್ತಾಗಬೇಕು!'

ಆರಂಭದಲ್ಲಿ ಭದ್ರತಾ ಸಿಬ್ಬಂದಿಗೆ ವಿಮಾನ ಪ್ರಯಾಣದ ಟಿಕೆಟ್‌ ತೋರಿಸಿ ಮೆಟಲ್‌ ಡಿಟಕ್ಟರ್‌ ಮೂಲಕ ನಿಲ್ದಾಣದ ಒಳಗೆ ಪ್ರವೇಶಿಸಬೇಕು. ಅಲ್ಲಿಯೇ ಬ್ಯಾಗೇಜ್‌ನ್ನು ಮಾತ್ರ ಸ್ಕಾ್ಯನರ್‌ ಯಂತ್ರಕ್ಕೆ ಹಾಕುತ್ತಾರೆ. ಆಗ ಹ್ಯಾಂಡ್‌ ಬ್ಯಾಗ್‌ ಮಾತ್ರ ತಪಾಸಣೆಗೆ ಒಳಗಾಗದೆ ಕೈಯಲ್ಲೇ ಇರುತ್ತದೆ. ಅಲ್ಲಿಂದ ಬ್ಯಾಗೇಜ್‌ ತೆಗೆದುಕೊಂಡು ಬೋರ್ಡಿಂಗ್‌ ಪಾಸ್‌ ಕ್ಲಿಯರೆನ್ಸ್‌ ಮಾಡಬೇಕು. ಬಳಿಕ ಬ್ಯಾಗೇಜ್‌ಗೆ ಟ್ಯಾಗ್‌ ಹಾಕಿ ಪ್ರತ್ಯೇಕವಾಗಿ ವಿಮಾನಕ್ಕೆ ಸಾಗಿಸಲು ರವಾನಿಸುತ್ತಾರೆ. ಹ್ಯಾಂಡ್‌ ಬ್ಯಾಗ್‌ ತಪಾಸಣೆಗೊಳ್ಳುವುದು ಕೊನೆಗೆ ಮೂರನೇ ಹಂತದಲ್ಲಿ ಎಂಬುದು ಗಮನಿಸಬೇಕಾದ ಅಂಶ. ಈ ವೇಳೆ ಪ್ರಯಾಣಿಕನ ಬಾಡಿ ಸ್ಕಾ್ಯನ್‌ ಸಹಿತ ವಾಚ್‌, ಬೆಲ್ಟ್‌, ಶೂ ಸೇರಿದಂತೆ ಅಮೂಲಾಗ್ರ(ಬ್ಯಾಗೇಜ್‌ ಹೊರತುಪಡಿಸಿ) ತಪಾಸಣೆ ನಡೆಯುತ್ತದೆ. ಅಂದರೆ ಹ್ಯಾಂಡ್‌ಬ್ಯಾಗ್‌ ತಪಾಸಣೆಗೆ ಇಲ್ಲಿ ಮಾತ್ರ ಒಳಗಾಗುತ್ತದೆ. ಆದ್ದರಿಂದ ಇಲ್ಲಿವರೆಗೂ ಹ್ಯಾಂಡ್‌ಬ್ಯಾಗ್‌ ಮುಕ್ತ ಪ್ರವೇಶಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಇದುವೇ ಭದ್ರತಾ ಲೋಪಕ್ಕೆ ಕಾರಣವಾಗುವ ಸಾಧ್ಯತೆಯನ್ನು ಮಂಗಳೂರಿನ ಬಾಂಬ್‌ ಪತ್ತೆ ಪ್ರಕರಣ ಹೇಳುತ್ತಿದೆ.

ಮೊದಲೇ ತಪಾಸಣೆ ಯಾಕಿಲ್ಲ?:

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹ್ಯಾಂಡ್‌ಬ್ಯಾಗ್‌ನಲ್ಲಿ ಸಜೀವ ಬಾಂಬ್‌ ತಂದಿರುವ ಪ್ರಕರಣ ಸಂಭವಿಸಿರುವಾಗ ವಿಮಾನ ನಿಲ್ದಾಣದೊಳಗೆ ಯಾಕೆ ಆರಂಭಿಕ ಹಂತದಲ್ಲಿ ಹ್ಯಾಂಡ್‌ಬ್ಯಾಗ್‌ ತಪಾಸಣೆ ನಡೆಸಬಾರದು ಎಂಬ ಪ್ರಶ್ನೆ ಪ್ರಯಾಣಿಕರಿಂದ ಕೇಳಿಬರುತ್ತಿದೆ. ಇದಕ್ಕೆ ನಿಖರವಾದ ವಿಮಾನ ನಿಲ್ದಾಣದ ಅಧಿಕಾರಿಗಳಿಂದಲೂ ಸಿಗುತ್ತಿಲ್ಲ.

ಇದುವರೆಗೆ ಬಹುತೇಕ ವಿಮಾನ ನಿಲ್ದಾಣದಲ್ಲಿ ಹ್ಯಾಂಡ್‌ಬ್ಯಾಗ್‌ ತಪಾಸಣೆ ಮೂರನೇ ಹಂತದಲ್ಲಿ ಮಾತ್ರ ನಡೆಯುತ್ತದೆ. ಅಲ್ಲಿವರೆಗೆ ಹ್ಯಾಂಡ್‌ಬ್ಯಾಗ್‌ನಲ್ಲಿ ಏನೂ ತೆಗೆದುಕೊಂಡು ಹೋದರೂ ಕೇಳುವವರಿಲ್ಲ ಎಂಬ ಪರಿಸ್ಥಿತಿ ಇದೆ. ವಿಮಾನ ನಿಲ್ದಾಣದೊಳಗೆ ಮೆಟಲ್‌ ಡಿಟಕ್ಟರ್‌ ಮೂಲಕ ಪ್ರವೇಶ ಇದ್ದರೂ, ಸ್ಫೋಟಕದಂತಹ ವಸ್ತುಗಳನ್ನು ಉಪಾಯವಾಗಿ ಸಾಗಿಸುವ ಪ್ರಕರಣಗಳು ನಡೆಯುತ್ತಿರುವಾಗ ಮುಂಜಾಗ್ರತಾ ಕ್ರಮವಾಗಿ ಹ್ಯಾಂಡ್‌ಬ್ಯಾಗ್‌ಗಳಿಗೂ ಮೊದಲ ಹಂತದಲ್ಲೇ ತಪಾಸಣೆ ಕಡ್ಡಾಯಗೊಳಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಾರೆ.

ಇಷ್ಟೆಲ್ಲಾ ಭದ್ರತೆ ಇದ್ದರೂ ಆದಿತ್ಯರಾವ್ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದೇ ರೋಚಕ!

ವಿಮಾನ ನಿಲ್ದಾಣದ ಭದ್ರತಾ ಮೂಲಗಳು ಹೇಳುವ ಪ್ರಕಾರ, ಮೆಟಲ್‌ ಡಿಟಕ್ಟರ್‌ ಮೂಲಕ ಪ್ರವೇಶಿಸುವಾಗ ಸ್ಫೋಟಕಗಳಿದ್ದರೆ ಗೊತ್ತಾಗುತ್ತದೆ. ಬಳಿಕ ಬ್ಯಾಗೇಜ್‌ ತಪಾಸಣೆ ನಡೆಸಲಾಗುತ್ತದೆ. ಹ್ಯಾಂಡ್‌ಬ್ಯಾಗ್‌ ಕೊನೆ ಹಂತದಲ್ಲಿ ತಪಾಸಣೆಗೆ ಒಳಗಾಗುತ್ತದೆ. ಬ್ಯಾಗೇಜ್‌ ಹಾಗೂ ಹ್ಯಾಂಡ್‌ಬ್ಯಾಗ್‌ ಎರಡೂ ತಪಾಸಣೆ ಕಷ್ಟವಾಗುತ್ತದೆ ಎಂಬ ಸಬೂಬು ಹೇಳುತ್ತಾರೆ. ವಿಮಾನ ನಿಲ್ದಾಣದ ನಿಯಮಾನುಸಾರ ತಪಾಸಣೆ ನಡೆಸಲಾಗುತ್ತದೆ ಎನ್ನುತ್ತಾರೆ.

ಹ್ಯಾಂಡ್‌ಬ್ಯಾಗ್‌ ತಪಾಸಣೆಯನ್ನು ಆರಂಭಿಕ ಹಂತದಲ್ಲೇ ನಡೆಸಬೇಕು. ಕೊನೆಹಂತದಲ್ಲಿ ನಡೆಸುವುದು ಸರಿಯಲ್ಲ. ಈ ಮಧ್ಯೆ ಭದ್ರತಾ ಲೋಪವಾದರೆ ಕಷ್ಟವಾಗುತ್ತದೆ ಎಂದು ಈ ಹಿಂದಿನ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದರು. ಆದರೆ ಡಿಜಿಸಿಎ ಇದುವರೆಗೆ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿಲ್ಲ.

ತಿರುಪತಿ ಮಾದರಿ ಆರಂಭದಲ್ಲೇ ಸಂಪೂರ್ಣ ತಪಾಸಣೆಗೆ ಚಿಂತನೆ

ಮಂಗಳೂರು ಸೇರಿದಂತೆ ಎಲ್ಲ ವಿಮಾನ ನಿಲ್ದಾಣಗಳಿಗೆ ತಿರುಪತಿ ಮಾದರಿಯಲ್ಲಿ ಅಂದರೆ ಆರಂಭಿಕ ಹಂತದಲ್ಲೇ ದಾರಿ ಮಧ್ಯೆಯೇ ಸಂಪೂರ್ಣ ತಪಾಸಣೆಗೆ ಒಳಪಡಿಸುವ ವ್ಯವಸ್ಥೆ ಕಾರ್ಯರೂಪಕ್ಕೆ ತರುವ ಬಗ್ಗೆ ಭದ್ರತಾ ವಲಯದಲ್ಲಿ ಚಿಂತನೆ ಆರಂಭಗೊಂಡಿದೆ.

ಮಂಗಳೂರಲ್ಲಿ ಬಾಂಬ್‌ ಇಟ್ಟ ಆದಿತ್ಯ ಬೆಳೆದ ಮನೆ ಇದು..!

ತಿರುಪತಿ ಬೆಟ್ಟದಿಂದ ತಿರುಮಲಕ್ಕೆ ತೆರಳಬೇಕಾದರೆ, ದಾರಿ ಮಧ್ಯೆ ಬಾಡಿ ಸ್ಕಾ್ಯನ್‌, ಬ್ಯಾಗೇಜ್‌ ಹಾಗೂ ವಾಹನ ತಪಾಸಣೆ ನಡೆಯುತ್ತದೆ. ಇದಲ್ಲದೆ ತಿರುಮಲದಲ್ಲೂ ಪ್ರತ್ಯೇಕ ತಪಾಸಣೆ ನಡೆಯುತ್ತದೆ. ಇದೇ ಮಾದರಿಯಲ್ಲಿ ವಿಮಾನ ನಿಲ್ದಾಣ ಪ್ರವೇಶದ ಆರಂಭಿಕ ಚೆಕ್ಕಿಂಗ್‌ ಪಾಯಿಂಟ್‌ನಲ್ಲಿ ತಪಾಸಣೆ ನಡೆಯಬೇಕು.ಈ ರೀತಿಯ ತಪಾಸಣೆ ಜಮ್ಮು ವಿಮಾನ ನಿಲ್ದಾಣದಲ್ಲಿ ಇದೆ ಎಂದು ಹೇಳಲಾಗಿದೆ. ಈ ಮಾದರಿಯ ತಪಾಸಣೆಯನ್ನು ಇತರೆ ಕಡೆಗಳಲ್ಲಿ ಯಾಕೆ ಅನುಷ್ಠಾನಕ್ಕೆ ತರಬಾರದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗೆ ತಪಾಸಣೆ ನಡೆಸಿದರೂ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ ನಂತರ ಯಥಾಪ್ರಕಾರ ಬಿಗು ತಪಾಸಣೆ ಇರುತ್ತದೆ. ವಿಮಾನ ನಿಲ್ದಾಣದ ಹೊರಗೆ ಚೆಕ್ಕಿಂಗ್‌ ಪಾಯಿಂಟ್‌ನಲ್ಲಿ ಪ್ರತ್ಯೇಕ ಸ್ಕ್ಯಾನರ್, ಬಾಡಿ ಸ್ಕಾ್ಯನರ್‌ ಅಳವಡಿಸಬೇಕು, ಇದಕ್ಕೆ ಪ್ರತ್ಯೇಕ ಭದ್ರತಾ ಸಿಬ್ಬಂದಿ, ತಪಾಸಣೆ ಯಂತ್ರಗಳು ಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ಖರ್ಚು ತಗಲುತ್ತದೆ. ಹಾಗಾಗಿ ಹೊರಾಂಗಣದಲ್ಲಿ ಪ್ರತ್ಯೇಕ ಪೂರ್ತಿ ತಪಾಸಣೆ ಸುಲಭವಲ್ಲ ಎನ್ನುವುದು ಭದ್ರತಾ ಅಧಿಕಾರಿಗಳ ಅಂಬೋಣ. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್‌ ಪತ್ತೆ ಘಟನೆ ಬಳಿಕ ಚೆಕ್ಕಿಂಗ್‌ ಪಾಯಿಂಟ್‌ನಲ್ಲಿ ಭದ್ರತಾ ಸಿಬ್ಬಂದಿ ಸಾಮಾನ್ಯ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸುತ್ತಿದ್ದಾರೆ.

-ಆತ್ಮಭೂಷಣ್‌ ಮಂಗಳೂರು

Follow Us:
Download App:
  • android
  • ios