Asianet Suvarna News Asianet Suvarna News

ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ : ಮೈಸೂರು ರೇಪ್ ಕೇಸ್ ಆರೋಪಿ ಅರೆಸ್ಟ್

  • ಯುವತಿಯ ಮೇಲೆ ಅತ್ಯಾಚಾರ ನಡೆಸಿ ಸುಮಾರು 35 ಲಕ್ಷ ರು. ವಂಚಿಸಿದ ಪ್ರಕರಣ
  • ಮಂಗಳೂರು ಪೊಲೀಸರಿಂದ ಮುಡಿಪು ಮೂಲದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್
Mysuru Rape case Accused arrested in Bengaluru snr
Author
Bengaluru, First Published Sep 25, 2021, 3:37 PM IST | Last Updated Sep 25, 2021, 3:37 PM IST

 ಮಂಗಳೂರು (ಸೆ.25):  ಮೈಸೂರು (Mysuru) ಮೂಲದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಸುಮಾರು 35 ಲಕ್ಷ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು (Mangaluru) ಪೊಲೀಸರು (Police) ಮುಡಿಪು ಮೂಲದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮುಹಮ್ಮದ್‌ ಅಜ್ವಾನ್‌ (32) ಎಂದು ಗುರುತಿಸಲಾಗಿದೆ. ಬೆಂಗಳೂರಿನ ದೊಡ್ಡಸಂದ್ರದಲ್ಲಿ ಈತನನ್ನು ಗುರುವಾರ ಮಂಗಳೂರು ಪೊಲೀಸರ ತಂಡ ಬಂಧಿಸಿದೆ. ಈತನ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಬುಧವಾರ ಯುವತಿಯ ಮೇಲೆ ಅತ್ಯಾಚಾರ, ಸುಲಿಗೆ ನಡೆಸಿದ ಪ್ರಕರಣ ದಾಖಲಾಗಿತ್ತು.

ಮೈಸೂರಿನಲ್ಲಿ 2019ರಲ್ಲಿ ಅಜ್ವಾನ್‌ ಜೊತೆ ತಾನು ಸಂರ್ಪಕದಲ್ಲಿದ್ದುದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಮೊಬೈಲ್‌ (mobile) ರಿಚಾರ್ಜಿಂಗ್‌ ಶಾಪ್‌ನಲ್ಲಿ ಕೆಲಸಕ್ಕಿದ್ದ ಅಜ್ವಾನ್‌ ತನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ತಿಳಿಸಿದ್ದಾರೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ.

ರೇಪ್ ವಿಡಿಯೋ ಮಾಡ್ಕೊಂಡು ಸ್ನೇಹಿತರಿಗೆ ಕಳಿಸಿದ..ಮುಂದಾಗಿದ್ದು ಘೋರ ದುರಂತ!

ಮುಡಿಪು ಮೂಲದ ಯುವಕನಿಂದ ದೌರ್ಜನ್ಯಕ್ಕೊಳಗಾದ ಯುವತಿ ಸೆ. 21ರಂದು ಮಧ್ಯಾಹ್ನ ಯುವಕನ ಮನೆಗೆ ತೆರಳಿದ್ದರು. ಆ ಸಂದರ್ಭ ಆತನ ತಂದೆ, ತಾಯಿ ಅಜ್ಜಿ ಹಾಗೂ ಇಬ್ಬರು ಸಹೋದರಿಯರು ಮನೆಯಲ್ಲಿದ್ದರು. ಆತನನ್ನು ಮನೆಗೆ ಕರೆಸುವವರೆಗೆ ತಾನು ಇಲ್ಲಿಂದ ಹೋಗುವುದಿಲ್ಲ ಎಂದಾಗ ಮನೆಯವರಲ್ಲಿ ಒಬ್ಬರು ನನ್ನ ಕಪಾಳಕ್ಕೆ ಬಾರಿಸಿ ಕಳುಹಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯ ಮನೆಯಿಂದ ಹೊರಟ ಆಕೆ ದುಃಖದಿಂದ ಬಸ್‌ ನಿಲ್ದಾಣದಲ್ಲಿದ್ದಾಗ ಅಲ್ಲಿದ್ದ ಸಾರ್ವಜನಿಕರು 112ಗೆ ಕರೆ ಮಾಡಿದ್ದರು. ಕೊಣಾಜೆ ಪೊಲೀಸರು ಆಕೆಯನ್ನು ಸಂಪರ್ಕಿಸಿ ಠಾಣೆಗೆ ಕರೆತಂದು ಸಾಂತ್ವಾನ ಹೇಳಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 5 ದಿನ ಬಳಿಕ ಕೇಸ್‌!

ಆಕೆ ತನ್ನ ವಕೀಲರನ್ನು ಸಂಪರ್ಕಿಸಿ ತಾನು ಮೈಸೂರಿನಲ್ಲಿಯೇ ಪ್ರಕರಣ ದಾಖಲಿಸುವುದಾಗಿ ಹೇಳಿದ ಕಾರಣ ಆಕೆಯನ್ನು ಪೊಲೀಸ್‌ ವಾಹನದಲ್ಲಿಯೇ ಮಂಗಳೂರು ಬಸ್‌ ನಿಲ್ದಾಣಕ್ಕೆ ಕರೆತಂದು ಬಸ್ಸಿನ ಮೂಲಕ ಸುರಕ್ಷಿತವಾಗಿ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಮತ್ತೆ ವಕೀಲರ ಸಲಹೆಯ ಮೇರೆಗೆ ಆಕೆ ಇಲ್ಲಿಯೇ ಪ್ರಕರಣ ದಾಖಲಿಸಲು ನಿರ್ಧರಿಸಿದ ಕಾರಣ ಮಹಿಳಾ ಠಾಣೆಗೆ ಕರೆತಂದು ಪ್ರಕರಣ (case) ದಾಖಲಿಸಲಾಗಿತ್ತು.

2019ರಿಂದ ಯುವತಿ ಜೊತೆ ಸಂಪರ್ಕ ಹೊಂದಿದ್ದ ಆರೋಪಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ್ದಾನೆ. ಮಾತ್ರವಲ್ಲದೆ ತನ್ನಿಂದ ಹುಣಸೂರು, ಮೈಸೂರಿನಲ್ಲಿ ಕೆಫೆ ಮಾಡುವುದಾಗಿ ಹೇಳಿ 35 ಲಕ್ಷ ರು. ಪಡೆದಿದ್ದಾನೆ. ಆದರೆ ಆತನಿಗೆ ಈಗಾಗಲೇ ಮದುವೆಯಾಗಿರುವ ವಿಷಯ ತಿಳಿದು ಆತನ ಜೊತೆ ವಿಚಾರಿಸಿದಾಗ ತನ್ನ ಪತ್ನಿಗೆ ವಿಚ್ಛೇದನ ನೀಡಿ ನಿನ್ನನ್ನೇ ಮದುವೆಯಾಗುವುದಾಗಿ ಆತ ಹೇಳಿಕೊಂಡಿದ್ದ. ಬಳಿಕ ಮದುವೆಯೂ ಆಗದೆ, ಹಣವನ್ನೂ ವಾಪಾಸು ನೀಡದೆ ವಂಚಿಸಿರುವುದಾಗಿ ಯುವತಿ ಬಳಿ ಮಾತನಾಡಿದ ಸಂದರ್ಭ ಆಕೆ ಹೇಳಿಕೊಂಡಿದ್ದಾಳೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ಆರಂಭದಲ್ಲಿ ದೂರು ದಾಖಲಿಸಲು ನಿರಾಕರಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯುವತಿಯಲ್ಲಿಯೇ ಆರೋಪ ಮಾಡಿದವರು ವಿಚಾರಿಸಬಹುದು. ಪೊಲೀಸ್‌ ಠಾಣೆಯಲ್ಲಿ ಆಕೆಯ ನಿರ್ಧಾರದಂತೆ ಆರಂಭದಲ್ಲಿ ಮೈಸೂರಿಗೆ ಹಿಂತಿರುಗಿ ಅಲ್ಲಿನ ಠಾಣೆಯಲ್ಲಿ ದೂರು ನೀಡುವಂತೆ ಆಕೆಗೆ ಎಲ್ಲ ರೀತಿಯ ಸಹಕಾರವನ್ನು ಸ್ಥಳೀಯ ಪೊಲೀಸರು ನೀಡಿದ್ದಾರೆ ಎಂದು ಕಮಿಷನರ್‌ ಹೇಳಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376, 384 ಮತ್ತು 323ರಡಿ ಪ್ರಕರಣ ದಾಖಲಿಸಲಾಗಿದೆ.

ಲವ್‌ ಜಿಹಾದ್‌ ಪ್ರಕರಣ: ಹಿಂದೂ ಸಂಘಟನೆ ಆರೋಪ

ಹಿಂದು ಯುವಕನೆಂದು ನಂಬಿಸಿ ಮುಸ್ಲಿಂ ಯುವಕನಿಂದ ಮೈಸೂರಿನ ಹಿಂದು ಯುವತಿಗೆ 35 ಲಕ್ಷ ರು. ವಂಚನೆ ಮಾಡಿರುವುದು ಇದು ಲವ್‌ ಜಿಹಾದ್‌ ಪ್ರಕರಣವಾಗಿದೆ. ತಕ್ಷಣ ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರಿನ ವಿಶ್ವ ಹಿಂದು ಪರಿಷದ್‌ ಮತ್ತು ದುರ್ಗಾವಾಹಿನಿ ಸಂಘಟನೆ ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದೆ.

ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಹಿಂದು ಯುವತಿಗೆ ಕೊಣಾಜೆಯ ಮುಡಿಪು ಪರಿಸರದ ಮೊಹಮ್ಮದ್‌ ಆಜ್ವಿನ್‌ ಎಂಬಾತ ಹಿಂದು ಎಂದು ಮದುವೆಯಾಗುವುದಾಗಿ ನಂಬಿಸಿ ಊಟಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದೈಹಿಕ ಸಂಪರ್ಕ ನಡೆಸಿ ಅರೆನಗ್ನ ಫೋಟೋಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಬ್ಲಾಕ್‌ ಮೇಲ್‌ ಮಾಡಿ 35 ಲಕ್ಷ ರು. ಪಡೆದು ವಂಚಿಸಿರುವ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈಗಾಗಲೇ ಆತನಿಗೆ ಎರಡು ಮದುವೆಯಾಗಿದೆ. ಇದೊಂದು ಲವ್‌ ಜಿಹಾದ್‌ ಪ್ರಕರಣವಾಗಿದ್ದು ಅಲ್ಲದೆ ಇದೊಂದು ವ್ಯವಸ್ಥಿತ ಜಾಲವಾಗಿದ್ದು ಆರೋಪಿಯನ್ನು ಮತ್ತು ಇದಕ್ಕೆ ಸಹಕರಿಸಿರುವವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಭಾಗ ಮಾತೃಶಕ್ತಿ ಪ್ರಮುಖ್‌ ಸುರೇಖಾ ರಾಜ್ ಮತ್ತು ಜಿಲ್ಲಾ ದುರ್ಗಾವಾಹಿನಿ ಸಂಚಾಲಕಿ ಶ್ವೇತಾ ಅದ್ಯಪಾಡಿ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios