Asianet Suvarna News Asianet Suvarna News

ದಸರಾ ಕವಿಗೋಷ್ಠಿಯಲ್ಲಿ ಮೀ ಟೂ, ಸ್ವಚ್ಛ ಭಾರತಕ್ಕೆ ಕಾವ್ಯಲೇಪನ

ದಸರಾ ಕವಿಗೋಷ್ಠಿಯ ಅಂಗವಾಗಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ ಯುವ ಕವಿಗೋಷ್ಠಿಯಲ್ಲಿ ಹಲವು ಮಹತ್ತರ ಕವನಗಳು ಹೀಗೆ ಗಮನ ಸೆಳೆದವು. ಮೀ ಟೂ ಚಳವಳಿಯ ಭಾಗವಾಗಿ ಹೆಣ್ಣು ಅನುಭವಿಸುತ್ತಿರುವ ಶೋಷಣೆ, ಲೈಂಗಿಕ ಕಿರುಕುಳದ ಆದ್ರತೆಯನ್ನು ಬಣ್ಣಿಸಿದರೆ, ಮತ್ತೊಂದು ಸ್ವಚ್ಛ ಭಾರತದ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಾರದ ಗೀಳನ್ನು ವ್ಯಂಗ್ಯಭರಿತವಾಗಿ ಹೇಳಿದ ಕವನದ ಸಾಲುಗಳು ಕಾವ್ಯದ ಮೂಲಕ ಎತ್ತಿ ತೋರಿಸುತ್ತಿದ್ದವು.

Mysore Dasara Literary Fest For Youth Poets
Author
Bengaluru, First Published Oct 14, 2018, 3:36 PM IST

- ಉತ್ತನಹಳ್ಳಿ ಮಹದೇವ
ಮೈಸೂರು(ಅ.14):
‘ಮಿಟ್ಟು ಮೀ.. ಟೂ... ಮೀ ಟೂ ಮೀ ಟೂ... ಅಂದ್ರೆ... ನನಗೂ ಸಹ ಹೀಗೆ ಆಗಿತ್ತೂ... ಕ್ಯಾಂಟೀನ್ ಕ್ಯಾಂಪಸ್‌ನಲ್ಲಿ ಟೈಪಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ... ಬಸ್‌ಸ್ಟ್ಯಾಂಡ್, ಟ್ರೈನ್ ಸ್ಟೇಷನ್‌ನಲ್ಲಿ ಬಸ್ ಸೀಟಿನಲ್ಲಿ ಟೋಲ್‌ಗೇಟ್‌ನಲ್ಲಿ ಆಗೇಕೆ ಮೌನವಾಗಿತ್ತು ಮೀ ಟೂ ಮೀ ಟೂ..’

‘ಗೋಡೆ ಕರೆಯುತ್ತಿದೆ ಬಾ ಎಂದು ಇಲ್ಲಿ ಮೂತ್ರ ಮಾಡು ಎಂದು ತನ್ನ ಸುತ್ತಿರುವ ವಾಸನೆಗೆ ಸ್ವಲ್ಪ ಸೇರಿಸು ಎಂದು ಗೋಡೆ ನೋಡಿದ ತಕ್ಷಣ ಎಲ್ಲಿಲ್ಲದ ಕರೆ ಗಾಡಿ ನಿಲ್ಲಿಸಿ... ಓಡಿಹೋಗಿ ಇಳಿಸಲೇಬೇಕು ಆ ಹೊರೆ’

- ಈ ಎರಡೂ ಕವನಗಳು ಪ್ರಸ್ತುತ ಸಂದರ್ಭದಲ್ಲಿ ಜರುಗುತ್ತಿರುವ ವಿದ್ಯಮಾನಗಳನ್ನೇ ಕುರಿತು ನಿರ್ಮಲ ಸಿ. ಎಲಿಗಾರ ಮತ್ತು ದಂತ ವೈದ್ಯ ಡಾ. ರೇಷ್ಮಾ ರಮೇಶ್ ರಚಿಸಿ ಸಹೃದಯಿ ಕೇಳುಗರನ್ನು ತಮ್ಮತ್ತ ಸೆಳೆದು ಚಿಂತಿಸುವಂತೆ ಮಾಡಿದರು.

ದಸರಾ ರಜೆಗೆ 2500 ಹೆಚ್ಚುವರಿ ಬಸ್‌

ದಸರಾ ಕವಿಗೋಷ್ಠಿಯ ಅಂಗವಾಗಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ ಯುವ ಕವಿಗೋಷ್ಠಿಯಲ್ಲಿ ಹಲವು ಮಹತ್ತರ ಕವನಗಳು ಹೀಗೆ ಗಮನ ಸೆಳೆದವು. ಮೀ ಟೂ ಚಳವಳಿಯ ಭಾಗವಾಗಿ ಹೆಣ್ಣು ಅನುಭವಿಸುತ್ತಿರುವ ಶೋಷಣೆ, ಲೈಂಗಿಕ ಕಿರುಕುಳದ ಆದ್ರತೆಯನ್ನು ಬಣ್ಣಿಸಿದರೆ, ಮತ್ತೊಂದು ಸ್ವಚ್ಛ ಭಾರತದ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಾರದ ಗೀಳನ್ನು ವ್ಯಂಗ್ಯಭರಿತವಾಗಿ ಹೇಳಿದ ಕವನದ ಸಾಲುಗಳು ಕಾವ್ಯದ ಮೂಲಕ ಎತ್ತಿ ತೋರಿಸುತ್ತಿದ್ದವು.

ಮತ್ತೊಬ್ಬ ಕವಯತ್ರಿ ಶೋಭಾ ನಾಯಕ ಸ್ತ್ರೀ ಸಂವೇದನೆಯ ‘ಹಾಸಿಗೆ ಮೇಲೆ ಬರೆಯುತ್ತಾನೆ ಚರಿತ್ರೆ ಪುರುಷ ಅವನದೇ ಓಲೆ’ ಎಂದರೆ ಕೆ.ಪಿ. ಲಲಿತಾ ‘ನಾವು ಹಾವಲ್ಲ, ಆಮೆ... ನಿಮ್ಮ ವರ್ತಮಾನ ಬದುಕದು ನಾಳೆಯ ನರ್ತನದಲ್ಲಿ, ನಮ್ಮ ಆವೇಷದ ಬೆಂಕಿ ಸಾಯದು ಕೊನೆಯಲ್ಲಿ’ ಎಂದು ಹೆಣ್ಣು ಕುಲದ ಒಡಲ ಕಿಚ್ಚನ್ನು ಸ್ಫುರಿಸಿದರು. ಕವಿ ಚಾಂದ್‌ಪಾಷಾ ಎನ್.ಎಸ್. ಸೀತಾದಹನ ಶೀರ್ಷಿಕೆಯಡಿ ‘ಅವನು ಕಟ್ಟಿದ ಅನುಮಾನದ ಹುತ್ತದಲಿ ನನ್ನ ಶೀಲ ಹಾವಾಗದಿರಲೆಂಬ ಹಪಹಪಿಸುವಿಕೆ’ ಎಂದರೆ, ನಾಗರೇಖಾ ಗಾಂವಕರ ಅವರು ‘ಕಣ್ಣೊರೆಸುವ ಹಸ್ತಗಳು ಮಸಿಯಲ್ಲಾಡಿಸಿ ಕೈಗಳ ಮುಖಕ್ಕೆ ಬಳಿಯುತ್ತ ನಗುತ್ತಿವೆ’ ಎಂದು ಚಡಪಡಿಕೆಯನ್ನು, ತೊಳಲಾಟವನ್ನು ನಿವೇದಿಸಿದರು.

ಮೈಸೂರು ದಸರಾ ಎಷ್ಟೊಂದು ಸುಂದರ..

ದೂರದ ಕಾಸರಗೋಡಿನಿಂದ ಬಂದಿದ್ದ ಡಾ. ಬಾಲಕೃಷ್ಣ ಹೊಸಂಗಡಿ ಕೇರಳದಲ್ಲಿ ಸವೆಸಿದ ಪ್ರಯಾಣವನ್ನು ಸರಳ ಭಾಷೆಯಲ್ಲಿ ಕಟ್ಟಿಕೊಟ್ಟ ಕವಿತೆಗೂ ಚಪ್ಪಾಳೆಯ ರಂಗು ಬಂದಿತು. ಉಪನ್ಯಾಸಕ ಎಚ್.ಎನ್. ಈಶಕುಮಾರ್ ‘ಭೂಮಿಯ ತೂಕದವಳು ತ್ಯಾಗದ ಶಿಖರವು ಅವಳು ಹೆತ್ತು ಹೊತ್ತು ಬೇಯುವ ಕರುಣೆಯ ತಾಯವಳು, ಅಬ್ಬಾ!’ ಎಂದು ಅಮ್ಮನನ್ನು ನೆನೆದರೆ, ಶಂಕರ ಅಂಕಶೆಟ್ಟಿಪುರ ‘ಅವ್ವ ಅವ್ವ ನನ್ನವ್ವ, ನಂಜವ್ವ’ ಕವನದ ಮೂಲಕ ತಾಯಿಯನ್ನು ನೆನೆದು ಪೊರೆದುದಕ್ಕೆ ಕೃತಜ್ಞತೆ ಸಲ್ಲಿಸಿದರು. 

ಒಟ್ಟಾರೆ ಇಡೀ ಕವಿಗೋಷ್ಠಿಯು ಬೌದ್ಧಿಕ ವಿಕಸನ, ಸೌಹಾರ್ದತೆ, ಭಾವಲೋಕ ತೆರೆದಿಟ್ಟಿತು. 32 ಕವಿಗಳು ಭಾಗವಹಿಸಿ ಅಕ್ಷರ ದಿಬ್ಬಣ ಎಳೆದರು. ಕವಯತ್ರಿ ಶ್ರೀಮತಿ ಕೆ. ಷರೀಫ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕವಿ ಶೂದ್ರ ಶ್ರೀನಿವಾಸ್, ಮೈವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ, ಉಪಸಮಿತಿಯ ಪ್ರೊ. ಎಂ.ಜಿ. ಮಂಜುನಾಥ, ಎಂ.ಎಸ್. ಮರಿಸ್ವಾಮಿಗೌಡ ಇದ್ದರು.

ಕಾವ್ಯ ಸಮಾಜದ ಸಮಸ್ಯೆಗಳಿಗೆ ದಿವ್ಯವೌಷಧ
ಮನುಷ್ಯತ್ವದ ಕಾವ್ಯ ಹುಟ್ಟುವ ಸಂದರ್ಭದಲ್ಲಿ ಮನಸ್ಸು ರಾಜಕಾರಣದಿಂದ ಕಲ್ಮಷವಾಗಿಬಿಟ್ಟಿದೆ. ಸೈನಿಕ ಹನುಮಂತ ಕೊಪ್ಪದ್ ಸತ್ತಾಗ ಆ ಜಾಗದಲ್ಲಿ ಒಬ್ಬ ಮುಸ್ಲಿಂ ಸಾಯಬಾರದೆ ಎನ್ನುವ ಜನರ ಮನಸ್ಸು ಎಷ್ಟು ಹೊಲಸುಗೊಂಡಿದೆ. ಎರಡು ಪಾರಿವಾರಗಳು ಮಂದಿರ ಮಸೀದಿ, ಚರ್ಚ್‌ಗಳಲ್ಲಿ ಕೂತು ಹೇಳುತ್ತವೆ, ನಾನು ಎಲ್ಲ ಕಡೆ ಇರುವ ಹಾಗೆ ಮನುಷ್ಯರು ಇರದಿರಲು ನಮ್ಮ ಮಟ್ಟಕ್ಕೆ ಅವರು ಬೆಳೆದಿಲ್ಲ ಎಂಬ ರೂಪಕ ನಮ್ಮನ್ನು ಸದಾ ಎಚ್ಚರಿಸುತ್ತದೆ. ಕ್ಷಣಿಕ ರಾಜಕಾರಣದ ವಿಷಯಗಳ ಕಡೆ ಅಲ್ಲ. ಕಾವ್ಯ ಸಮಾಜದ ಸಮಸ್ಯೆಗಳಿಗೆ ದಿವ್ಯವೌಷಧವಾಗಿರಬೇಕು ಎಂದು ಕವಯತ್ರಿ ಶ್ರೀಮತಿ ಕೆ. ಷರೀಫ ತಿಳಿಸಿದರು.

ಕಾವ್ಯ ಮಾನಸಿಕ ಆರೋಗ್ಯ ಕಾಪಾಡಬೇಕು: ಶೂದ್ರ
ಒಂದು ಕಾವ್ಯ ಶ್ರೇಷ್ಠವಾಗಿ ಅದು ಮಾನಸಿಕ ಆರೋಗ್ಯವನ್ನು ಕಾಪಾಡಬೇಕು. ಕಾವ್ಯ ರಚಿಸುವವನಿಗೆ ಗದ್ಯವೂ ಕೂಡ ಕಾವ್ಯಮಯವಾಗಿರುತ್ತದೆ. ಪಿ. ಲಂಕೇಶ, ಕಿರಂ ನಾಗರಾಜು, ಕೆ.ಜಿ. ನಾಗರಾಜು, ಶ್ರೀಕೃಷ್ಣ ಆಲನಹಳ್ಳಿ ಕಾವ್ಯ ರಚಿಸುವುದರ ಜತೆಗೆ ಗದ್ಯವನ್ನು ಶ್ರೇಷ್ಠಗೊಳಿಸಿದರು. ಕಾವ್ಯ ಚರ್ಚೆಗಿಳಿದರೆ ಮಧ್ಯರಾತ್ರಿವೆರಗೂ ನಡೆಯುವಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಲೋಕ ಕಾವ್ಯವನ್ನು ಕಟ್ಟಿಕೊಟ್ಟಿದೆ. ಸಂತ ವ್ಯಕ್ತಿತ್ವ ಹೇಗಿರಬೇಕೆಂಬುದನ್ನು ಕಾವ್ಯ ಹೇಳಿಕೊಡುತ್ತದೆ ಎಂದು ಕವಿ ಶೂದ್ರ ಶ್ರೀನಿವಾಸ ತಿಳಿಸಿದರು.

ಐತಿಹಾಸಿಕ ದಸರಾ ಮಹೋತ್ಸವಕ್ಕೆ ಸುಧಾ ಮೂರ್ತಿ ಚಾಲನೆ


 

Follow Us:
Download App:
  • android
  • ios