ಹುಬ್ಬಳ್ಳಿ(ಫೆ.17): ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಏಕಾಏಕಿ ಬಿಡುಗಡೆ ಮಾಡಲಾಗಿದೆ ಎಂಬ ಸುದ್ದಿ ಊರೆಲ್ಲ ಹಬ್ಬಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ರಾತ್ರಿ ನಗರದಲ್ಲಿ ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ.

"
ರಸ್ತೆ ಮಧ್ಯೆಯೆಲ್ಲ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ನಗರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಕಮಿಷನರ್‌ ಆರ್‌. ದಿಲೀಪ್‌ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದ ನಂತರವೇ ಪ್ರತಿಭಟನೆ ಶಾಂತವಾಯಿತು.

ಆಗಿದ್ದೇನು?:

ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿರುವ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದರು. ಶನಿವಾರ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಮೂವರನ್ನು ಬಂಧಿಸಲಾಗಿದೆ ಎಂದು ಕಮಿಷನರ್‌ ದಿಲೀಪ್‌ ಹೇಳಿಕೆಯನ್ನೂ ನೀಡಿದ್ದರು. ಆದರೆ, ಭಾನುವಾರ ಬೆಳಿಗ್ಗೆ ಮೂವರನ್ನು ಬಂಧಿಸಿಲ್ಲ. ಬರೀ ವಶಕ್ಕೆ ಪಡೆಯಲಾಗಿತ್ತು. ಸಿಆರ್‌ಪಿಸಿ 169 ಕಾಯ್ದೆ ಅಡಿಯಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಈ ಮಾಹಿತಿ ಖಾಸಗಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಕೆರಳಿದರು.

ಪಾಕ್ ಪರ ಘೋಷಣೆ ಕೂಗಿದವರ ಬಿಡುಗಡೆ: ಸರ್ಕಾರದ ಉದ್ದೇಶವೇ ಬೇರೆ..!

ಈ ಬಗ್ಗೆ ಪೊಲೀಸ್‌ ಕಮಿಷನರ್‌ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದು ಗೋಕುಲ ರಸ್ತೆಯ ಠಾಣೆಯ ಎದುರು ಸಂಜೆ ಪ್ರತಿಭಟನೆ ಶುರು ಮಾಡಿದರು. ಭಾರತ್‌ ಮಾತಾ ಕಿ ಜೈ, ದೇಶದ್ರೋಹಿಗಳಿಗೆ ಶಿಕ್ಷೆಯಾಗಲಿ ಎಂದು ಘೋಷಣೆ ಕೂಗಿದರು. ಪಾಕ್‌ ಪರ ಘೋಷಣೆ ಕೂಗಿರುವ ವಿದ್ಯಾರ್ಥಿಗಳನ್ನು ಪುನಃ ಬಂಧಿಸುವಂತೆ ಒತ್ತಾಯಿಸುತ್ತ ದೇಶದ್ರೋಹಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ ಪೊಲೀಸರು ಸ್ಪಷ್ಟನೆ ನೀಡಲು ಮಹಾನಗರ ಪೊಲೀಸ್‌ ಆಯುಕ್ತರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಪೊಲೀಸರೆ ದೇಶ ವಿರೋಧಿಗಳಿಗೆ ರಕ್ಷಣೆ ನೀಡಿದ್ದಾರೆ ಎಂದು ಕಮೀಷನರ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಒಂದು ಗಂಟೆಯಾದರೂ ಪೊಲೀಸ್‌ ಆಯುಕ್ತರು ಮಾತ್ರ ಪ್ರತಿಭಟನಾ ಸ್ಥಳದತ್ತ ಬರಲೇ ಇಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಪ್ರತಿಭಟನಾಕಾರರು, ರಸ್ತೆಯಲ್ಲಿ ಕುಳಿತು ಭಜನೆ ಮಾಡುತ್ತ, ರಂಗೋಲಿಯಲ್ಲಿ ಪಾಕ್‌ ಹೆಸರು ಬರೆದು ತುಳಿದರು. ನೋಡ ನೋಡುತ್ತಿದ್ದಂತೆ ಪ್ರತಿಭಟನಕಾರರ ಸಂಖ್ಯೆ ದ್ವಿಗುಣಗೊಂಡಿತು. ಬಳಿಕ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಆರಂಭಿಸಿದರು. ಮೊದಲು ಠಾಣೆಯೆದುರು ಟೈರ್‌ಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು ಪ್ರತಿಭಟನೆ ತೀವ್ರಗೊಳಿಸಿದರು.

ಬೆಂಕಿ ನಂದಿಸಲು ಅವಕಾಶ ನೀಡಲಿಲ್ಲ:

ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಯಿತು. ರಸ್ತೆ ಮಧ್ಯೆ ಸಾಲಾಗಿ ಟೈರ್‌ಗಳನ್ನಿಟ್ಟು ಬೆಂಕಿ ಹಚ್ಚಿದ್ದರಿಂದ ಹೊಸ ಬಸ್‌ ನಿಲ್ದಾಣದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಯಿತು. ಒಂದು ಹಂತದಲ್ಲಿ ಪೊಲೀಸರ ನಿಯಂತ್ರಣ ಸಂಪೂರ್ಣ ತಪ್ಪಿತು. ಬಳಿಕ ಹೊಸ ಬಸ್‌ ನಿಲ್ದಾಣ, ಡೆನಿಸನ್ಸ್‌ ಹೋಟೆಲ್‌ ತಿರುವು, ಪೊಲೀಸ್‌ ನಿಲ್ದಾಣದ ಎದುರು ಟೈರ್‌ಗಳಿಗೆ ಬೆಂಕಿಯಿಟ್ಟರು. ಟೈರ್‌ಗೆ ಬೆಂಕಿ ದಗದಗ ಉರಿಯುತ್ತಿದ್ದನ್ನು ತಿಳಿದು ಪೊಲೀಸರು ಅಗ್ನಿ ಶಾಮಕ ದಳಕ್ಕೆ ಪೋನ್‌ ಮಾಡಿ ಕರೆಯಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿತು. ಆದರೆ ಪ್ರತಿಭಟನಾಕಾರರು ಇದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಅಗ್ನಿ ಶಾಮಕ ದಳದ ವಾಹನಗಳು ಬಂದರೂ ಹಾಗೆ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು.ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಯಿತು. 10.30ರ ವರೆಗೂ ರಸ್ತೆಯಲ್ಲಿ ಆತಂಕಮಯ ವಾತಾವರಣ ಉಂಟಾಗಿತ್ತು. ಹೊಸ ಬಸ್‌ ನಿಲ್ದಾಣದ ಬಳಿ ಬ್ಯಾರಿಕೇಡ್‌ ಅಳವಡಿಸಿದ ಪೊಲೀಸರು ಸಂಚಾರ ಮಾರ್ಗ ಬದಲಿಸಿದರು. ಇದರಿಂದಾಗಿ ಸಾರ್ವಜನಿಕರು ತೀವ್ರ ಪರದಾಡಬೇಕಾಯಿತು. ಪೊಲೀಸ್‌ ಇನ್‌ಸ್ಪೆಕ್ಟರ್‌, ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಮಾತಿಗೂ ಮಣಿಯದೆ ಹೋರಾಟದ ಕಾವನ್ನು ಹೆಚ್ಚಿಸುತ್ತಲೆ ಹೋದರು.

'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

ಈ ವೇಳೆ ವಿಹಿಂಪ ಪ್ರಾಂತ ಕಾರ್ಯದರ್ಶಿ ವಿನಾಯಕ ತಲಗೇರಿ, ಮುಖಂಡರಾದ ಗೋವರ್ಧನ ರಾವ್‌ ಮಾತನಾಡಿ, ಪೊಲೀಸ್‌ ಅಧಿಕಾರಿಗಳು ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಪಾಕ್‌ ಪರ ಘೋಷಣೆ ಮಾಡಿದವರನ್ನು ಬಿಡುಗಡೆ ಮಾಡಿ ದೇಶದ್ರೋಹಿಗಳನ್ನು ರಕ್ಷಿಸಿದ್ದಾರೆ ಎಂದು ಆಪಾದಿಸಿದರು.

ಕಮಿಷನರ್‌ಗೆ ಘೇರಾವ್‌:

ಈ ನಡುವೆ ರಾತ್ರಿ 9.30ರ ವೇಳೆಗೆ ಗೋಕುಲ ಠಾಣೆಗೆ ಆಗಮಿಸಿದ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಅವರನ್ನು ಪ್ರತಿಭಟನಾಕಾರರು ಕೆಲಕಾಲ ಒಳಗೆ ಬಿಡದೇ ಘೇರಾವ್‌ ಹಾಕಿದರು. ಈಗಲೇ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು. ಕೊನೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿಕೊಂಡು ಬಂದು ನಿಮಗೆ ವಿವರಿಸುತ್ತೇನೆ ಎಂದು ಹೇಳಿ ಠಾಣೆಯೊಳಗೆ ತೆರಳಿದರು. ಸುಮಾರು 45ನಿಮಿಷಕ್ಕೂ ಹೆಚ್ಚು ಕಾಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಷ್ಟರೊಳಗೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಿಂದುಪರ ಸಂಘಟನೆ ಕಾರ್ಯಕರ್ತರು, ಠಾಣೆಯ ಎದುರಿಗೆ ಬಂದು ಕುಳಿತು ಮತ್ತೆ ಧರಣಿ ಪ್ರಾರಂಭಿಸಿದರು. ಆಗ ಕಮಿಷನರ್‌ ಆರ್‌. ದಿಲೀಪ್‌ ಹೊರಗೆ ಬಂದು, ಪಾಕ್‌ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡುತ್ತಿದ್ದೇವೆ. ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿರುವುದರಿಂದ ಕೆಲವು ವಿಚಾರಗಳನ್ನು ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ. ಪೊಲೀಸ್‌ ಇಲಾಖೆ ಮೇಲೆ ವಿಶ್ವಾಸವಿಡಿ. ಯಾರನ್ನು ರಕ್ಷಿಸುವ ಕೆಲಸ ನಾವಿಲ್ಲಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕವಷ್ಟೇ ಪ್ರತಿಭಟನಾಕಾರರು ಶಾಂತರಾಗಿ ಪ್ರತಿಭಟನೆ ಹಿಂಪಡೆದರು. ಬಳಿಕ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು.

ವಿಶ್ವ ಹಿಂದುಪರಿಷತ್‌ನ ವಿಭಾಗ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಸುಭಾಸಸಿಂಗ್‌ ಜಮಾದಾರ, ಸುಧೀರ ಸರಾಫ್‌, ಬಜರಂಗದಳದ ಜಿಲ್ಲಾ ಸಂಯೋಜಕ ಶಿವಾನಂದ ಸತ್ತಿಗೇರಿ, ಸಿದ್ದಲಿಂಗ ಶೆಟ್ಟಿ, ಅಶೋಕ ಅಣವೆಕರ, ಪ್ರಕಾಶ ಬಳ್ಳಾರಿ, ಮಂಜು ಸುಣಗಾರ, ಕುಮಾರ ಅಣ್ಣಿಗೇರಿ, ಅಭಿಷೇಕ ಮುತ್ತಗಿ, ಮಂಜುನಾಥ ಸಂಗದ, ಮಹೇಶ ಬಳ್ಳಾರಿ, ಪ್ರಕಾಶ ಹೆಬ್ಬಳ್ಳಿ, ಪ್ರಕಾಶ ಅಳಗುಂಡಗಿ ಸೇರಿ ನೂರಾರು ಯುವಕರು ಪ್ರತಿಭಟನೆ ನಡೆಸಿದರು.

ದ್ವಂದ್ವ ಹೇಳಿಕೆಯಿಂದ ಹೆಚ್ಚಿತು ಕಿಚ್ಚು

ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಶನಿವಾರ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಭಾನುವಾರ ನಾವು ಅವರನ್ನು ಬಂಧಿಸಿಯೇ ಇಲ್ಲ. ಕೇವಲ ವಶಕ್ಕೆ ತೆಗೆದುಕೊಂಡಿದ್ದೇವೆ. ಬಳಿಕ ಸಿಆರ್‌ಪಿಸಿ 169 ಕಾಯ್ದೆ ಅಡಿಯಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಇದರಿಂದಾಗಿ ಹಿಂದೂಪರ ಸಂಘಟನೆಗಳು ಕೆರಳುವಂತಾಯಿತು. ಯಾವುದೇ ಕಾರಣಕ್ಕೂ ಪೊಲೀಸ್‌ ಆಯುಕ್ತರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡುವ ವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಗಂಟೆಗಳು ಕಳೆದರೂ ಸ್ಥಳಕ್ಕೆ ಆಯುಕ್ತರು ಬಾರದ ಹಿನ್ನೆಲೆಯಲ್ಲಿ ಪ್ರತಿಭಟನೆ ಕಿಚ್ಚು ಹೆಚ್ಚಾಯಿತು.

ಪ್ರತಿಭಟನೆಗೆ ಮುಸ್ಲಿಂ ಯುವಕನ ಸಾಥ್‌

ಪಾಕ್‌ ಪರ ಘೋಷಣೆ ಕೂಗಿದ ಮೂರು ಕಾಶ್ಮೀರ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದಕ್ಕೆ ಮುಸ್ಲಿಂ ಯುವಕನೊಬ್ಬ ಪ್ರತಿಭಟನೆಗೆ ಸಾಥ್‌ ನೀಡಿ ದೇಶ ಪ್ರೇಮವನ್ನು ಹೆಚ್ಚಿಸಿದ್ದಾನೆ. ಗೋಕುಲ್‌ ಪೊಲೀಸ್‌ ಠಾಣೆಯ ಎದುರಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಗೆ ಮುಸ್ಲಿಂ ಯುವಕನ ಸಾಥ್‌ ನೀಡಿದ್ದಾನೆ. ಪ್ರತಿಭಟನೆ ಮಾಡಲು ಬಂದ ಮುಸ್ಲಿಂ ಯುವಕನನ್ನು ಪೊಲೀಸರು ಪ್ರತಿಭಟನೆ ಮಾಡದಂತೆ ತಡೆ ಹಿಡಿದಿದ್ದಾರೆ. ಆಕ್ರೋಶಗೊಂಡ ಮುಸ್ಲಿಂ ಯುವಕ ನಾನು ಮುಸ್ಲಿಂ ಆದ್ರೂ ಕೂಡಾ ಭಾರತೀಯ, ನಾನು ಕೂಡ ಪ್ರತಿಭಟನೆ ಮಾಡುತ್ತೇನೆ ಎಂದು ಮುಸ್ಲಿಂ ಯುವಕ ಹೇಳಿದ್ದಾನೆ.