ಕಳ್ಳಕೃಷಿ ಸಾಮಗ್ರಿ ಕಳ್ಳತನದ ವೇಳೆ ಸಿಕ್ಕಿ ಬಿದ್ದಿದ್ದವರ ಹತ್ಯೆ : ಆರೋಪಿಗೆ ಜಾಮೀನು
ತೋಟದಲ್ಲಿ ಕೃಷಿ ಸಾಮಾಗ್ರಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿದು ಥಳಿಸಿ ಅವರ ಸಾವಿಗೆ ಕಾರಣವಾದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ತುಮಕೂರಿನ ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಪಿ.ವಿ. ರಂಗಸ್ವಾಮಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು : ತೋಟದಲ್ಲಿ ಕೃಷಿ ಸಾಮಾಗ್ರಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿದು ಥಳಿಸಿ ಅವರ ಸಾವಿಗೆ ಕಾರಣವಾದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ತುಮಕೂರಿನ ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಪಿ.ವಿ. ರಂಗಸ್ವಾಮಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪಿ.ವಿ. ರಂಗಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಉಮೇಶ್ ಅಡಿಗ ಅವರ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯನಾಶಕ್ಕೆ ಯತ್ನಿಸಬಾರದು. ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯದೇ ತುಮಕೂರು ಜಿಲ್ಲೆ ಬಿಟ್ಟು ತೆರಳಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಪ್ರಕರಣ ಹಿನ್ನೆಲೆ: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಕೆ.ಗಿರೀಶ್ ಮತ್ತು ಪಿ.ಎನ್. ಗಿರೀಶ್ ಎಂಬುವವರು ಹಳ್ಳಿಯ ತೋಟಗಳಿಂದ ಅಡಿಕೆ ಗೊನೆ, ಪಂಪ್ ಸೆಟ್ ಮೋಟರ್, ಸ್ಟಾರ್ಟರ್ ಮುಂತಾದವುಗಳನ್ನು ಕಳ್ಳತನ ಮಾಡುತ್ತಿದ್ದರು. 2023ರ ಏ.21ರಂದು ಗ್ರಾಮದಲ್ಲಿ ಈ ಇಬ್ಬರೂ ತೋಟವೊಂದರಲ್ಲಿ ಸ್ಟಾರ್ಟರ್ ಕಳವು ಮಾಡುತ್ತಿದ್ದ ವೇಳೆ ಊರ ಜನರಿಗೆ ಸಿಕ್ಕಿಬಿದ್ದಿದ್ದರು. ಅವರನ್ನು ಊರ ಜನರು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಕಳ್ಳರಿಬ್ಬರೂ ಸಾವನ್ನಪ್ಪಿದ್ದರು.
ಪ್ರಕರಣ ಸಂಬಂಧ ಮೃತ ಕೆ.ಗಿರೀಶ್ ಅವರ ತಾಯಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಪೆದ್ದನಹಳ್ಳಿಯ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ವಿ. ರಂಗಸ್ವಾಮಿಯವರನ್ನೂ ಸೇರಿಸಿ 29 ಆರೋಪಿಗಳನ್ನು ಮೇ 2ರಂದು ಬಂಧಿಸಿದ್ದರು. ಅವರ ವಿರುದ್ಧ ಕೊಲೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಜಾಮೀನು ಕೋರಿ ಪಿ.ವಿ. ರಂಗಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ತುಮಕೂರು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಆರೋಪಿ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ವಾದ ಮಂಡಿಸಿ, ಮೃತರನ್ನು ಕೊಲೆ ಮಾಡುವ ಯಾವುದೇ ಉದ್ದೇಶವೂ ಅರ್ಜಿದಾರರಿಗೆ ಇರಲಿಲ್ಲ. ಕೇವಲ ಕಳ್ಳರನ್ನು ಹಿಡಿದು ಬುದ್ಧಿಕಲಿಸಬೇಕೆಂಬ ಉದ್ದೇಶ ಹೊಂದಿದ್ದರು. ಆರೋಪಿಗಳು ಮೃತರಿಗೆ ಸುಟ್ಟು ಗಾಯಗೊಳಿಸಿದ್ದರು ಎಂಬುದಾಗಿ ಘಟನೆಯ ಪ್ರತ್ಯಕ್ಷ ಸಾಕ್ಷಿದಾರರುರ ಹೇಳಿಕೆ ನೀಡಿದ್ದರು. ಆದರೆ, ಮೃತರ ಮೈಮೇಲೆ ಅಂತಹ ಯಾವುದೇ ಗಾಯಗಳು ಕಂಡುಬಂದಿಲ್ಲ. ಹಾಗಾಗಿ ಅಂತಹ ಸಾಕ್ಷಿಗಳ ಹೇಳಿಕೆ ನಂಬಲಾರ್ಹವಲ್ಲ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಕೋರಿದರು.
ಈ ವಾದ ಪುರಸ್ಕರಿಸಿದ ಹೈಕೋರ್ಟ್ ಅರ್ಜಿದಾರರಿಗೆ ಜಾಮೀನು ನೀಡಿ ಆದೇಶಿಸಿದೆ.