ಬೆಂಗಳೂರು(ಫೆ.27):ಭಾರತೀಯ ಜನತಾ ಪಕ್ಷದ ಮೊದಲ ಪ್ರಣಾಳಿಕೆಯಲ್ಲಿನ ಅಂಶವಾಗಿರುವ ‘ಸಮಾನ ನಾಗರಿಕ ಸಂಹಿತೆ’ ಜಾರಿಗೆ ತರಲು ಕಾಲ ಈಗ ಪಕ್ವವಾಗಿದೆ. ಬಿಜೆಪಿಯ ಗರ್ಭದಲ್ಲಿರುವ ಸಮಾನ ನಾಗರಿಕ ಸಂಹಿತೆ ಮಗು ಜನನಕ್ಕೆ ಸೂಕ್ತ ಕಾಲ ಬಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಎ ವಿರೋಧಿ ಹೋರಾಟಗಳಿಂದಾಗಿ ಪ್ರತಿಯೊಬ್ಬರೂ ಗಟ್ಟಿಧ್ವನಿಯಲ್ಲಿ ಸಮಾನತೆ ಪ್ರತಿಪಾದನೆ ಮಾಡುತ್ತಿದ್ದಾರೆ. ಧಾರ್ಮಿಕ ಅಸಮಾನತೆ ಪ್ರತಿಪಾದಿಸುತ್ತಿದ್ದವರೇ ಇದೀಗ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಒತ್ತಾಯಿಸುವ ಮೂಲಕ ಧಾರ್ಮಿಕ ಸಮಾನತೆ ಪ್ರತಿಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಮೂಲ ಉದ್ದೇಶವಾಗಿರುವ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ಕಾಲ ಪಕ್ವ ಆಗಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮಾನ ನಾಗರಿಕ ಸಂಹಿತೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ ಹುಟ್ಟು ಪಡೆದ 1980ರ ಪ್ರಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. 2014 ಹಾಗೂ 2019ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಯ ಪ್ರಮುಖ ಅಂಶವೂ ಇದೇ ಆಗಿದೆ. ಇಷ್ಟುದಿನ ಅಸಮಾನತೆ ಪ್ರತಿಪಾದಿಸುತ್ತಿದ್ದವರು ಮಾತನಾಡುತ್ತಿದ್ದವರು ಈಗ ತ್ರಿವರ್ಣ ಧ್ವಜ ಹಿಡಿದು ನಾವೆಲ್ಲ ಒಂದೇ ಎನ್ನುತ್ತಿದ್ದಾರೆ. ಭಾರತ್‌ ಮಾತಾಕೀ ಜೈ ಬಿಜೆಪಿಗೆ ಮಾತ್ರವೇ ಗುತ್ತಿಗೆಗೆ ಕೊಟ್ಟಂತಿದ್ದವರು ಘೋಷಣೆ ಹಾಕುತ್ತಿದ್ದಾರೆ. ಹೀಗಾಗಿ ಕಾಲ ಪಕ್ವ ಆಗಿದೆ ಎನಿಸುತ್ತದೆ ಎಂದರು.

ಸಮಾನ ನಾಗರೀಕ ಸಂಹಿತೆ ಜಾರಿಗೆ ತರಲು ನಮ್ಮ ಸರ್ಕಾರಕ್ಕೆ ಯಾವುದೇ ಭಯ ಇಲ್ಲ. ನಾವು ಹೇಳಿದ್ದ ಆರ್ಟಿಕಲ್‌ 370 ರದ್ದು ಮಾಡಿದ್ದೇವೆ. ಅಯೋಧ್ಯೆ ತೀರ್ಪು ಸಹ ದೇಶದ ಜನತೆ ಬಯಸಿದಂತೆಯೇ ಬಂದಿದೆ. ಇದೀಗ ಸಿಎಎ ಕೈಗೆತ್ತಿಕೊಂಡಿದ್ದೇವೆ. ಕಾಲ-ಕಾಲಕ್ಕೆ ಎಲ್ಲವನ್ನೂ ಮಾಡುತ್ತಿದ್ದು, ಸಮಾನ ನಾಗರಿಕ ಸಂಹಿತೆಯೂ ಬಿಜೆಪಿಯ ಗರ್ಭದಲ್ಲೇ ಇದೆ. ಜನನ ಆಗುತ್ತದೆ ಎಂದು ಸಚಿವರು ತಿಳಿಸಿದರು.

ಆರ್ಟಿಕಲ್‌ 14 ಎಲ್ಲರಿಗೂ ಸಮಾನತೆ ಪ್ರತಿಪಾದಿಸುತ್ತದೆ. ಈ ಕಾಯ್ದೆಯಂತೆ ದೇಶದೊಳಗಿನ ಜನರಿಗೆ ಧರ್ಮದ ಆಧಾರದ ಮೇಲೆ ಅಸಮಾನತೆ ತೋರುವಂತಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅಂಬೇಡ್ಕರ್‌ ಅವರ ಸಂವಿಧಾನದಲ್ಲಿರುವ ಅವಕಾಶಗಳನ್ನು ಬಳಸಿಕೊಂಡೇ ಅದನ್ನು ಮಾಡುತ್ತೇವೆ ಎಂದು ರವಿ ಸ್ಪಷ್ಟಪಡಿಸಿದರು.

‘ಸಿಎಎ ವಿರೋಧಿ ಹೋರಾಟ ದೇಶದ ವಿರುದ್ಧ ಷಡ್ಯಂತ್ರ’

‘ದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಿಸಲು ಕೆಲ ಶಕ್ತಿಗಳು ಮೊದಲು ಪಟೇಲ್‌, ಜಾಟ್‌ ಸಮುದಾಯ, ದಲಿತರು, ಹಿಂದುಳಿದವರನ್ನು ಎತ್ತಿಕಟ್ಟಿದರು. ಬಳಿಕ ಬಳಿಕ ಭಾಷೆ, ಅಸಹಿಷ್ಣತೆ, ಪ್ರಶಸ್ತಿ ವಾಪಸಿ ಹೆಸರಿನಲ್ಲಿ ಪ್ರಯತ್ನ ಮುಂದುವರೆಸಿದರು. ಇದೀಗ ಪೌರತ್ವ ತಿದ್ದುಪಡಿ ಕಾಯಿದೆ ಹೆಸರಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿ ದೇಶದಲ್ಲಿ ಆಂತರಿಕ ಯುದ್ಧಕ್ಕೆ ತುಕಡೇ ಗ್ಯಾಂಗ್‌ಗಳು ಷಡ್ಯಂತ್ರ ನಡೆಸುತ್ತಿವೆ’ ಎಂದು ಸಚಿವ ಸಿ.ಟಿ. ರವಿ ಆರೋಪ ಮಾಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆಯಿಂದ ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಬದಲಿಗೆ ಪೌರತ್ವವನ್ನು ನೀಡಲಾಗುತ್ತದೆ. ಇದನ್ನು ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಎಲ್ಲರೂ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ದೇಶವನ್ನು ಒಡೆಯಲು ಹಾಗೂ ದೇಶದಲ್ಲಿ ಅಂತರ್‌ಯುದ್ಧಕ್ಕೆ ನಾಂದಿ ಹಾಡಲು ಸಿಎಎ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹರಿಹಾಯ್ದರು.