'ಶ್ರೀರಾಮುಲು DCM ಆಗಬೇಕು ಅನ್ನೋದು ಜನರ ಬೇಡಿಕೆ,ನಾನೇಕೆ ಅಲ್ಲಗಳೆಯಲಿ'
ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕು ಅನ್ನೋದು ಜನರ ಬೇಡಿಕೆ| ಜನರ ಬೇಡಿಕೆಯನ್ನ ನಾನು ಅಲ್ಲಗೆಳೆಯುವುದಿಲ್ಲ| ಈ ಬಗ್ಗೆ ಪಕ್ಷ ಹೈಕಮಾಂಡ್, ಸಿಎಂ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳುತ್ತಾರೆ|
ಬಳ್ಳಾರಿ(ಜ.25): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತಾರೆ. ಉಪಚುನಾವಣೆಯಲ್ಲಿ ಸೋತವರಿಗೆ ಸಚಿವರನ್ನಾಗಿ ಮಾಡುವ ಬೇಡಿಕೆ ವಿಚಾರದ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕು ಅನ್ನೋದು ಜನರ ಬೇಡಿಕೆಯಾಗಿದೆ. ಜನರ ಬೇಡಿಕೆಯನ್ನ ನಾನು ಅಲ್ಲಗೆಳೆಯುವುದಿಲ್ಲ. ಈ ಬಗ್ಗೆ ಪಕ್ಷ ಹೈಕಮಾಂಡ್, ಸಿಎಂ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಳ್ಳಾರಿ ವಿಮ್ಸ್‌ನಲ್ಲಿ ವ್ಹೀಲ್‌ಚೇರ್ ನೀಡದ ಅಮಾನವೀಯ ಘಟನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಇಂತಹ ಘಟನೆಗಳನ್ನ ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ನೋಡಿದ್ದೆವು. ಆದರೆ, ಈಗ ಬಳ್ಳಾರಿಯಲ್ಲಿಯೇ ಇಂತಹ ಘಟನೆ ನಡೆದಿದೆ. ತಪ್ಪಿತಸ್ಥರು ಯಾರೇ ಇದ್ದರೂ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಿಮ್ಸ್ ನಿರ್ಲಕ್ಷ್ಯ: ಹೃದ್ರೋಗಿ ಮಗಳ ಹೆಗಲ ಮೇಲೆ ಹೊತ್ತು ಓಡಿದ ತಂದೆ!
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಬಗ್ಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದಾಗ ಇದರ ಬಗ್ಗೆ ಗಮನಿಸಿದ್ದೇನೆ.ಬೆಡ್ ಕೊರತೆ ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಇದೇ ವೇಳೆ ಹೇಳಿದ್ದಾರೆ.