Asianet Suvarna News Asianet Suvarna News

ಗಡಿ ವಿವಾದ: ಠಾಕ್ರೆ ಹೇಳಿಕೆ ರಾಜಕೀಯ ಉದ್ದೇಶದಿಂದ ಕೂಡಿದೆ ಎಂದ MES

ಉದ್ಧವ್ ಹೇಳಿಕೆಗೂ ಎಂಇಎಸ್‌ಗೆ ಸಂಬಂಧ ಇಲ್ಲ| ಹೊರಗಿನಿಂದ ಬೆಳಗಾವಿಗೆ ಬಂದು ವಿವಾದಾತ್ಮಕ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು| ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಯ ಕಾರ್ಯಕರ್ತರು|

MES Leader Deepak Dalavi Talks Over Maharashtra CM Uddhav Thackeray Statement
Author
Bengaluru, First Published Jan 3, 2020, 11:35 AM IST

ಬೆಳಗಾವಿ[ಜ.03]: ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ನೀಡಿರುವ ಹೇಳಿಕೆ ರಾಜಕೀಯ ಉದ್ದೇಶದಿಂದ ಕೂಡಿದೆ. ಅವರಿಗೂ ಎಂಇಎಸ್ ಗೂ ಯಾವುದೇ ಸಂಬಂಧವಿಲ್ಲ. ಹೊರಗಿನಿಂದ ಬೆಳಗಾವಿಗೆ ಬಂದು ವಿವಾದಾತ್ಮಕ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಡಿಸಿಪಿ ಸೀಮಾ ಲಾಟ್ಕರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅವರು ಎಂಇಎಸ್ ನಾಯಕರಿಗೆ ಗುಂಡಿಕ್ಕಿ ಎಂದು ನೀಡಿದ ಹೇಳಿಕೆಯನ್ನು ಖಂಡಿಸಿದ ಅವರು ಭೀಮಾಶಂಕರ ವಿರುದ್ಧ ಕ್ರಮಕೈಗೊಳ್ಳಬೇಕು. ಗಡಿ ವಿವಾದದಿಂದ ಅಶಾಂತಿ ನಡೆಯುತ್ತಿದೆ. ಇಂತಹ ಕೃತ್ಯಗಳನ್ನ ಕೈಬಿಡಬೇಕು. ಮರಾಠಿ ಭಾಷಿಕರಿಗೆ ತಮ್ಮದೇ ಆದ ಕೆಲ ಬೇಡಿಕೆಗಳಿವೆ. ಬೇರೆಡೆಯಿಂದ ಬಂದವರು ಮಾಹಿತಿಯಿಲ್ಲದೇ, ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸುತ್ತಾರೆ. ಅಲ್ಲದೇ ನಂತರ ಎಂಇಎಸ್ ನಾಯಕರಿಗೆ ಗುಂಡಿಕ್ಕಿ ಎಂದು ಹೇಳಿಕೆ ನೀಡುತ್ತಾರೆ. ಇದು ಸರಿಯಲ್ಲ. ಇದರಿಂದ ಇಲ್ಲಿನ ಶಾಂತಿ ಭಂಗವಾಗಿ 2 ರಾಜ್ಯಗಳಲ್ಲಿ ಗಲಭೆಗಳು ಆರಂಭಗೊಳ್ಳುತ್ತವೆ. ಇದಕ್ಕೆ ಕೇವಲ ಮರಾಠಿಗರನ್ನು ಮಾತ್ರ ಹೊಣೆ ಮಾಡದೇ ಹೊರಗಿನಿಂದ ಬಂದು ಹೇಳಿಕೆ ನೀಡುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಡಿ ಜಿಲ್ಲೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮರಾಠಿ ಹಾಗೂ ಕನ್ನಡಿಗರ ನಡುವಿನ ಶಾಂತಿ ಕದಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ನೀಡಿರುವುದು ಅದು ರಾಜಕೀಯ ಉದ್ದೇಶ. ಅವರಿಗೂ ಎಂಇಎಸ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ ಕರ್ನಾಟಕ ನವ ನಿರ್ಮಾಣ ಪಡೆಯ ಭೀಮಾಶಂಕರ ಪಾಟೀಲ ಅವರು ರಕ್ಕಸಕೋಪ್ಪ ಜಲಾಶಯದಲ್ಲಿ ವಿಷ ಬೆರೆಸಿ ಕನ್ನಡಿಗರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಗಂಭೀರವಾಗಿ ಆರೋಪ ಮಾಡಿದ್ದಾರೆ. ಆದ ಕಾರಣ ಅವರ ವಿರುದ್ಧ ಕ್ರಮ ಜರುಗಿಸಬೇಕು. ಗಡಿ ಜಿಲ್ಲೆಯಲ್ಲಿ ಬಾಯಿಗೆ ಬಂದಂತೆ ಮಾತಾಡುವವರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. 

ಇದೇ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ದೀಪಕ ದಳವಿ ಮಾತನಾಡಿ, ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಅದಕ್ಕಾಗಿ ಎಂಇಎಸ್‌ನವರು ಯಾವುದೇ ರೀತಿ ಹೇಳಿಕೆ ನೀಡುತ್ತಿಲ್ಲ. ಆದರೆ ಕನ್ನಡ ಪರ ಹೋರಾಟಗಾರರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಯಿಂದ 2 ರಾಜ್ಯಗಳಲ್ಲಿ ಗಲಭೆ ಆರಂಭವಾಗುತ್ತಿವೆ. ಬೇರೆ ಕಡೆಯಿಂದ ಬೆಳಗಾವಿಗೆ ಬಂದು ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ. ಇದರಿಂದ ಸಹಬಾಳ್ವೆಯಿಂದ ಬದುಕುತ್ತಿರುವ ಮರಾಠಿ ಹಾಗೂ ಕನ್ನಡಿಗರ ನಡುವಿನ ಸಂಬಂಧವನ್ನು ಹಾಳಾ ಮಾಡುತ್ತಿದ್ದಾರೆ. ಆದ ಕಾರಣ ಶಾಂತಿ ಕದಡುವಂತಹ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ಮಾಜಿ ಶಾಸಕ ಮನೋಹರ ಕಿಣೇಕರ, ಪ್ರಕಾಶ ಶಿರೋಳಕರ, ಬಂಡು ಕೇರವಾಡಕರ, ಜಿಪಂ ಸದಸ್ಯೆ ಸರಸ್ವತಿ ಪಾಟೀಲ, ಆರ್.ಐ. ಪಾಟೀಲ, ರಾಜು ಮೊರವೆ, ರಂಜೀತ್ ಚವ್ಹಾಣ ಪಾಟೀಲ ಸೇರಿದಂತೆ ಎಂಇಎಸ್, ಶಿವಸೇನೆಯ ಕಾರ್ಯಕರ್ತರು ಭಾಗವಹಿಸಿದ್ದರು.

ಉಡಾಫೆ ಉತ್ತರ ನೀಡಿದ ಮುಖಂಡರು ಮುಗ್ದ ಮರಾಠಿಗರನ್ನು ಮುಂದಿಟ್ಟುಕೊಂಡು ರಾಜಕೀಯ ಬೆಳೆಸಿಕೊಳ್ಳು ತ್ತಿರುವ ಪುಂಡ ಎಂಇಎಸ್ ನಾಯಕರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉಡಾಫೆ ಉತ್ತರ ನೀಡಿದ್ದಲ್ಲದೆ ಕನ್ನಡ ಪತ್ರಕರ್ತರ ಮೇಲೆಯೇ ದಬ್ಬಾಳಿಕೆ ಮಾಡಿ ಪುಂಡಾಟಿಕೆ ಮೆರೆದರು. ಈ ಮೂಲಕ ಎಂಇಎಸ್ ನಾಯಕರು ಕನ್ನಡಿಗರ ಮೇಲೆ ತಮ್ಮ ಕ್ರೌರ್ಯವನ್ನು ಮುಂದುವರಿಸಿದ್ದಾರೆ.

Follow Us:
Download App:
  • android
  • ios