Asianet Suvarna News Asianet Suvarna News

ಕೊಪ್ಪಳ: ರೈತನ ಬದುಕು ಬದಲಿಸಿದ ಮೇರಾಬುಲ್‌ ಗುಲಾಬಿ..!

ಇತ್ತೀಚೆಗೆ ಮೆಕ್ಕೆಜೋಳ, ಸಜ್ಜಿ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಕೈಸುಟ್ಟುಕೊಂಡಿರುವ ಅನೇಕ ರೈತರ ನಡುವೆ ತಾಲೂಕಿನ ಬೆನಕನಾಳ ಗ್ರಾಮದ ಭೀಮಪ್ಪ ಮುಗುಳಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಮೇರಾಬುಲ್‌ ಗುಲಾಬಿ ಹೂ ಬೆಳೆದು, ನಷ್ಟವಿಲ್ಲದೆ ಜೀವನಕ್ಕೆ ಬೇಕಾದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಮಾದರಿ ರೈತನಾಗಿದ್ದಾನೆ.

Merabul Rose Changed the Farmers life at Kushtagi in Koppal grg
Author
First Published Jan 31, 2024, 11:26 PM IST

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ(ಜ.31): ರೈತರೊಬ್ಬರು ನರೇಗಾ ಯೋಜನೆಯಡಿ ತನ್ನ ಜಮೀನಿನಲ್ಲಿ ಮೇರಾಬುಲ್ ಹೆಸರಿನ ಗುಲಾಬಿ ಹೂಗಳನ್ನು ಬೆಳೆದು ಉತ್ತಮ ಆದಾಯ ಗಳಿಸುವ ಮೂಲಕ ಮಾದರಿಯಾಗಿದ್ದಾರೆ. ಇತ್ತೀಚೆಗೆ ಮೆಕ್ಕೆಜೋಳ, ಸಜ್ಜಿ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಕೈಸುಟ್ಟುಕೊಂಡಿರುವ ಅನೇಕ ರೈತರ ನಡುವೆ ತಾಲೂಕಿನ ಬೆನಕನಾಳ ಗ್ರಾಮದ ಭೀಮಪ್ಪ ಮುಗುಳಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಮೇರಾಬುಲ್‌ ಗುಲಾಬಿ ಹೂ ಬೆಳೆದು, ನಷ್ಟವಿಲ್ಲದೆ ಜೀವನಕ್ಕೆ ಬೇಕಾದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಮಾದರಿ ರೈತನಾಗಿದ್ದಾನೆ.

ಈ ಹೂ ಮಾರಾಟದಿಂದ ಈತನಿಗೆ ಪ್ರತಿ ತಿಂಗಳಿಗೆ ₹18,000ದಿಂದ ₹20,000ವರೆಗೆ ನಿಶ್ಚಿತ ಆದಾಯ ಖಾತರಿಯಾಗಿದೆ. ಆಶಾದಾಯಕ ಬದುಕು ಸೃಷ್ಟಿ ಮಾಡಿದೆ ಎನ್ನಬಹುದು. ನರೇಗಾ ಯೋಜನೆಯಡಿ ಹೂವು, ಹಣ್ಣು, ತರಕಾರಿ ಬೆಳೆಯಲು ಗ್ರಾಪಂ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂಬುದನ್ನರಿತ ರೈತ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಈ ಯೋಜನೆಯ ಲಾಭ ಪಡೆದು ಗುಲಾಬಿ ಹೂಗಳನ್ನು ಬೆಳೆಯಲು ಮುಂದಾಗಿದ್ದಾರೆ. ಈ ಗುಲಾಬಿಯನ್ನು ಒಮ್ಮೆ ನಾಟಿ ಮಾಡಿ ಸರಿಯಾಗಿ ಪೋಷಣೆ ಮಾಡಿದರೆ ಕನಿಷ್ಠ ಐದು ವರ್ಷಗಳ ಕಾಲ ಹೂ ಬಿಡುತ್ತದೆ. ಇದು ರೈತ ಕುಟುಂಬದಲ್ಲಿ ಖುಷಿ ತಂದಿರುವುದು ಸುಳ್ಳಲ್ಲ.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಜೊತೆ ಕೈಜೋಡಿಸಲು ಸಿದ್ಧ ಎಂದ ಜನಾರ್ದನರೆಡ್ಡಿ!

ಕುಷ್ಟಗಿ, ಕನಕಗಿರಿ ಭಾಗದ ರೈತರಿಗೆ ಗುಲಾಬಿ ಸಸಿಗಳನ್ನು ಮಾರಾಟ ಮಾಡುವ ಮೂಲಕ ಅದರಿಂದಲೂ ಈ ರೈತ ಲಾಭ ಗಳಿಸುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ₹45,000 ಸಹಾಯಧನ ಪಡೆದು ಒಂದು ಎಕರೆ ಜಮೀನಿನಲ್ಲಿ 3000 ಸಾವಿರ ಹೂವಿನ ಗಿಡಗಳನ್ನು ನಾಟಿ ಮಾಡಿದ್ದಾರೆ.

ಪ್ರತಿದಿನ ಸುಮಾರು 12-14 ಕೆಜಿಯಷ್ಟು ಹೂಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲ ಸಮಯದಲ್ಲಿ ಹೂ ಕಟಾವು ಮಾಡಿ ವ್ಯಾಪಾರಸ್ಥರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಗಜೇಂದ್ರಗಡ, ಇಲಕಲ್, ಹೊಸಪೇಟೆ, ಕುಷ್ಟಗಿ ಸೇರಿದ ಪ್ರಮುಖ ಮಾರುಕಟ್ಟೆಗೆ ಹೂಗಳನ್ನು ಸಾಗಿಸಲಾಗುತ್ತದೆ.

ಕಳೆದ ಒಂದು ವರ್ಷದಿಂದ ₹2.50 ಲಕ್ಷಕ್ಕೂ ಅಧಿಕ ಆದಾಯ ಪಡೆದುಕೊಂಡಿದ್ದಾರೆ. ಹೂ ಕೃಷಿಯಿಂದ ನಿರಂತರ, ನಿಶ್ಚಿತ ಆದಾಯ ಖಚಿತವಾಗಿರುವುದರಿಂದ ಈ ಕುಟುಂಬ ಸ್ವಾಲಂಬನೆ ಬದುಕಿಗೆ ಸಾಕ್ಷಿಯಾಗಿದೆ.

ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಜೀವಮಾನದಲ್ಲೇ ಇಂಥ ಜಾತ್ರೆ ನೋಡಿದ್ದು ಇದೇ ಮೊದಲು, ಡಿಕೆಶಿ

ರೈತರು ಸಾಂಪ್ರದಾಯಿಕ ಕೃಷಿ ಬಿಟ್ಟು ಭಿನ್ನವಾಗಿ ಯೋಚನೆ ಮಾಡಬೇಕು. ನರೇಗಾ ಯೋಜನೆ ಸದುಪಯೋಗ ಪಡೆದು ರೈತ ಭೀಮಪ್ಪ ಮುಗಳಿ ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ. ತೋಟಗಾರಿಕೆ ಇಲಾಖೆ ಯಾವುದೇ ಸಮಯದಲ್ಲಿ ರೈತರಿಗೆ ಸಹಾಯ ಮಾಡಲು ಸನ್ನದ್ಧವಾಗಿರುತ್ತದೆ. ಕಡಿಮೆ ಖರ್ಚು ಅಧಿಕ ಲಾಭ ಎನ್ನುವುದನ್ನು ಮೇರಾಬುಲ್ ರೋಜ್ ಕೃಷಿ ಸಾಕ್ಷಿಯಾಗಿದೆ ಎಂದು ಕುಷ್ಟಗಿ ತಾಪಂ ಇಒ ನಿಂಗಪ್ಪ ಮಸಳಿ ಹೇಳಿದ್ದಾರೆ. 

ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದ ರೈತ ಭೀಮಪ್ಪ ಮುಗುಳಿ ಗುಲಾಬಿ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇನ್ನು ಹೆಚ್ಚಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್ ತಿಳಿಸಿದ್ದಾರೆ.

Follow Us:
Download App:
  • android
  • ios