ಬೆಂಗಳೂರು [ಆ.22]:  ಕುಡುಕ ಗಂಡನ ಹಿಂಸೆ ಸಹಿಸಲಾರದೆ ಮಹಿಳೆಯೊಬ್ಬರು, ತನ್ನ ಪತಿಯನ್ನು ಕೊಂದು ಬಳಿಕ ಮದ್ಯ ಸೇವಿಸಿ ಮೃತಪಟ್ಟಿರುವುದಾಗಿ ನಾಟಕ ಹೆಣೆದು ಅಂತ್ಯಸಂಸ್ಕಾರ ನಡೆಸಿದ ಕುತೂಹಲಕಾರಿ ರಹಸ್ಯವನ್ನು ವೈದ್ಯಕೀಯ ವರದಿ ಬಯಲುಗೊಳಿಸಿದೆ.

ಆನೇಕಲ್‌ ತಾಲೂಕಿನ ಶಾಂತಿಪುರದ ಸಿ.ಸುಬ್ರಮಣಿ (68) ಹತ್ಯೆಯಾದ ದುರ್ದೈವಿ. ಈ ಸಂಬಂಧ ಮೃತನ ಪತ್ನಿ ಮುನಿಯಮ್ಮನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಸುಬ್ರಮಣಿ ನಿಗೂಢವಾಗಿ ಮೃತಪಟ್ಟಿದ್ದರು. ಈ ಬಗ್ಗೆ ಅನುಮಾನಗೊಂಡ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತರ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಸಲ್ಲಿಸಿದ ವರದಿಯಲ್ಲಿ ಮೃತನ ಮೇಲೆ ಹಲ್ಲೆ ನಡೆದು ಹತ್ಯೆ ಮಾಡಲಾಗಿದೆ ಎಂದು ಸ್ಪಷ್ಪಡಿಸಿದ್ದರು.

ಈ ಮಾಹಿತಿ ಆಧರಿಸಿದ ಪೊಲೀಸರು, ಸೋಮವಾರ ಮೃತಳ ಪತ್ನಿ ಮುನಿಯಮ್ಮಳನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಮದ್ಯ ವ್ಯಸನಿ ಪತಿಯ ಕಿರುಕುಳ ಸಹಿಸಲಾರದೆ ತಾನೇ ಹತ್ಯೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಮದ್ಯ ತಂದ ಆಪತ್ತು:  ಕೂಲಿ ಕಾರ್ಮಿಕ ಸುಬ್ರಮಣಿ, ತನ್ನ ಕುಟುಂಬದ ಜತೆ ಶಾಂತಿಪುರದಲ್ಲಿ ನೆಲೆಸಿದ್ದರು. ವಿಪರೀತ ಮದ್ಯ ವ್ಯಸನಿಯಾದ ಆತ, ಪ್ರತಿದಿನ ಪಾನಮತ್ತನಾಗಿ ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದರಿಂದ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಜು.29ರಂದು ರಾತ್ರಿ ಮನೆಯಲ್ಲಿ ಕುಡಿದ ಅಮಲಿನಲ್ಲಿ ಸುಬ್ರಮಣಿ ಗಲಾಟೆ ಮಾಡಿದ್ದಾನೆ. ಈ ವೇಳೆ ಕೆರಳಿದ ಆಕೆ, ಪತಿಗೆ ಕೈಯಿಂದ ಗುದ್ದಿ ಹತ್ಯೆ ಮಾಡಿದ್ದಳು. ಬಳಿಕ ಮರುದಿನ ಮೃತರ ಪುತ್ರ ಮಂಜುನಾಥ್‌, ಘಟನೆ ಬಗ್ಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಜು.30ರ ಬೆಳಗ್ಗೆ 7.30ರಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ತಂದೆ ಹೊಟ್ಟೆಉರಿ ಎನ್ನುತ್ತಿದ್ದರು. ಕೈಕಾಲಿಗೆ ತರಚಿದ ಗಾಯಗಳಾಗಿದ್ದವು. ತಂದೆಯನ್ನು ಪ್ರಶ್ನಿಸಿದಾಗ ಮದ್ಯ ಸೇವಿಸಿ ರಾತ್ರಿ ಬರುವಾಗ ಬಿದ್ದು ಗಾಯವಾಗಿತ್ತು ಎಂದಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಸೆಂಟ್‌ ಜಾನ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಡೆಸಿದಾಗ ಸತ್ಯ ಬಯಲಾಗಿದೆ. ವೈದ್ಯಕೀಯ ವರದಿ ಆಧರಿಸಿ ಪೊಲೀಸರು, ಮೃತರ ಪತ್ನಿ ಮತ್ತು ಪುತ್ರನನ್ನು ವಶಕ್ಕೆ ಪಡೆದಿದ್ದರು. ಆ ವೇಳೆ ತಾನು ಪತಿಯನ್ನು ಕೊಂದು ಬಳಿಕ ಸುಳ್ಳು ಹೇಳಿದೆ ಎಂದು ಮುನಿಯಪ್ಪ ತಪ್ಪೊಪ್ಪಿಕೊಂಡಿರುವುದಾಗಿ ಗೊತ್ತಾಗಿದೆ.