ಆತ್ಮಭೂಷಣ್‌

ಮಂಗಳೂರು (ಜ.10):  ಪ್ರಶ್ನೆ ಪತ್ರಿಕೆಗಳ ಸೋರಿಕೆ, ಉತ್ತರ ಪತ್ರಿಕೆಗಳ ಬಂಡಲ್‌ ಕಳೆದುಹೋಗುವಂಥ ಪರೀಕ್ಷಾ ಅಕ್ರಮ ಹಾಗೂ ಗೊಂದಲಗಳಿಗೆ ಕಡಿವಾಣ ಹಾಕಲು ಮಂಗಳೂರು ವಿಶ್ವವಿದ್ಯಾಲಯ ಹೊಸತೊಂದು ಪ್ರಯೋಗಕ್ಕೆ ಮುಂದಾಗಿದೆ. ವಿವಿ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಪ್ರಶ್ನೆ, ಉತ್ತರ ಪತ್ರಿಕೆಗಳ ಸಾಗಣೆ ಹಾಗೂ ಸ್ವೀಕಾರ ವೇಳೆ ಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಇದೇ ಮೊದಲ ಬಾರಿಗೆ ‘ಫೇಸ್‌ ರೆಕಗ್ನಿಶನ್‌’ನಂಥ ಅತ್ಯಾಧುನಿಕ ವ್ಯವಸ್ಥೆಯ ಮೊರೆ ಹೋಗಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ವಿವಿಯೊಂದು ಇಂಥ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ಹೆಗ್ಗಳಿಕೆಗೆ ಮಂಗಳೂರು ವಿವಿ ಪಾತ್ರವಾಗಲಿದೆ.

"

ಪ್ರಸ್ತುತ ಮಂಗಳೂರು ವಿವಿಯಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಾಟ ಖಾಸಗಿ ಏಜೆನ್ಸಿ ಮೂಲಕ ನಡೆಯುತ್ತಿದೆ. ಆದರೆ, ಈ ರೀತಿಯ ಸಾಗಣೆ ವ್ಯವಸ್ಥೆಯ ಭದ್ರತೆ ಕುರಿತು ಅನೇಕ ಬಾರಿ ಟೀಕೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನದತ್ತ ವಿವಿ ತೆರೆದುಕೊಳ್ಳುತ್ತಿದೆ. ಅದರಂತೆ ವಿವಿ ವ್ಯಾಪ್ತಿಯ 210 ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಪರೀಕ್ಷಾ ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ಇನ್ನು ಮುಂದೆ ಆ್ಯಪ್‌ ಆಧಾರಿತ ‘ಯುನಿವಾಲ್ಟ್‌’ ಎಂಬ ಭದ್ರತಾ ಪೆಟ್ಟಿಗೆ ಬಳಕೆಯಾಗಲಿದೆ. ಇದರೊಳಗೆ ಪ್ರತ್ಯೇಕ ಕಂಪಾರ್ಟ್‌ಮೆಂಟ್‌ಗಳಿದ್ದು, ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಇರಿಸಾಗುತ್ತದೆ.

ಪ್ರತಿಯೊಂದು ಪ್ರಶ್ನೆ ಪತ್ರಿಕೆಗೂ ಸೆಂಟರ್‌ ಕೋಡ್‌, ಡಿಜಿಟಲ್‌ ಕೋಡ್‌, ಪರೀಕ್ಷೆಯ ಮುಖ್ಯಸ್ಥರ ಹೆಸರು ಸಹಿತ ಸಮಗ್ರ ವಿವರಗಳು ನಮೂದಾಗಿರುತ್ತವೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ತಮ್ಮ ಮೊಬೈಲ್‌ಗೆ ವಿಶೇಷ ಆ್ಯಪ್‌ವೊಂದನ್ನು ಕಂಪನಿಯವರೇ ಡೌನ್‌ಮಾಡಿ ಕೊಡಲಿದ್ದು, ಅಲ್ಲಿ ಡಿಜಿಟಲ್‌ಕೋಡ್‌, ಸೆಂಟರ್‌ ಕೋಡ್‌ನಂಥ ಮಾಹಿತಿಯನ್ನು ನೀಡಬೇಕಾಗುತ್ತದೆ. ಹೀಗಾಗಿ ಮೇಲ್ವಿಚಾರಕರನ್ನು ಹೊರತುಪಡಿಸಿ ಬೇರಿನ್ಯಾರೂ ‘ಯುನಿವಾಲ್ಟ್‌’ ಅನ್ನು ತೆರೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಈ ಪೆಟ್ಟಿಗೆಯನ್ನು ಹೊರಗಿನವರು ತೆರೆಯಲೆತ್ನಿಸಿದರೆ ಸೈರನ್‌ ಮೊಳಗುವ ತಂತ್ರಜ್ಞಾನವೂ ಯುನಿವಾಲ್ಟ್‌ ಹೊಂದಿದೆ.

ಪೆಟ್ಟಿಗೆ ತೆರೆದರೆ ಫೋಟೋ ಕ್ಲಿಕ್‌: ‘ಯುನಿವಾಲ್ಟ್‌’ ಭದ್ರತಾ ಪೆಟ್ಟಿಗೆಯು ಪ್ರಶ್ನೆ ಪತ್ರಿಕೆ ತುಂಬಿಸುವಾಗ, ಅದನ್ನು ಕಾಲೇಜು ಮುಖ್ಯಸ್ಥರು ತೆರೆಯುವಾಗ, ಮತ್ತೆ ಉತ್ತರ ಪತ್ರಿಕೆ ತುಂಬಿಸುವಾಗ, ಉತ್ತರ ಪತ್ರಿಕೆಯನ್ನು ವಿವಿಯ ಕೋಡಿಂಗ್‌ ಕೇಂದ್ರಕ್ಕೆ ಹಸ್ತಾಂತರಿಸುವಾಗ ಜತೆಗೆ, ಮೌಲ್ಯಮಾಪಕರಿಗೆ ನೀಡುವಾಗಲೂ ಸಂಬಂಧಿಸಿದ ವ್ಯಕ್ತಿಯ ಫೇಸ್‌ ರೆಕಗ್ನಿಶನ್‌ ಮಾಡುವ ವ್ಯವಸ್ಥೆ ಯುನಿವಾಲ್ಟ್‌ನಲ್ಲಿರಲಿದೆ. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಯನ್ನು ಪೆಟ್ಟಿಗೆಗೆ ತುಂಬಿಸುವ ಹಾಗೂ ತೆಗೆಯುವವರ ಮುಖದ ಫೋಟೋವನ್ನೂ ಸ್ವಯಂ ಆಗಿ ಈ ಪೆಟ್ಟಿಗೆಯಲ್ಲಿ ಅಳವಡಿಸಿರುವ ಕ್ಯಾಮೆರಾ ಕ್ಲಿಕ್‌ ಮಾಡುತ್ತದೆ. ಈ ಫೋಟೋಗಳು ನೇರವಾಗಿ ವಿವಿಯ ಕುಲಪತಿ ಹಾಗೂ ರಿಜಿಸ್ಟ್ರಾರ್‌ ಅವರ ಕಂಪ್ಯೂಟರ್‌ಗೆ ರವಾನೆಯಾಗುತ್ತವೆ.

7ನೇ ತರಗತಿ ಪಬ್ಲಿಕ್ ಪರೀಕ್ಷೆ ಖಚಿತ: ಇಂದು ನಿಯಮಗಳ ನಿರ್ಧಾರ..

ಜಿಪಿಎಸ್‌ ಮೂಲಕ ಟ್ರ್ಯಾಕ್‌: ಕುಲಪತಿ ಹಾಗೂ ರಿಜಿಸ್ಟ್ರಾರ್‌ಗಳು ಪ್ರಶ್ನೆ ಹಾಗೂ ಉತ್ತರ ಪತ್ರಿಕೆ ಸಾಗಣೆಯನ್ನು ಕುಳಿತಲ್ಲಿಂದಲೇ ಟ್ರ್ಯಾಕ್‌ ಮಾಡಲೂ ಈ ವ್ಯವಸ್ಥೆಯಲ್ಲಿ ಅವಕಾಶ ಇದೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವ ವಾಹನಕ್ಕೂ ಜಿಪಿಎಸ್‌ ಅಳವಡಿಸುವುದರಿಂದ ಪ್ರಶ್ನೆ ಪತ್ರಿಕೆ ಬಂಡಲ್‌ ಸೋರಿಕೆ ಅಥವಾ ಉತ್ತರ ಪತ್ರಿಕೆ ತಿದ್ದುವ ಸಾಧ್ಯತೆಗಳೂ ಕಡಿಮೆ. ಸಾಗಾಟದ ಸಮಯ, ಅವಧಿ ಹೀಗೆ ಎಲ್ಲದರ ರಿಯಲ್‌ ಟೈಮ್‌ ಟ್ರ್ಯಾಕಿಂಗ್‌ ಸಾಧ್ಯವಾಗಲಿದೆ ಎನ್ನುತ್ತಾರೆ ವಿವಿ ಅಧಿಕಾರಿಗಳು. ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಯಿಂದಲೇ ಈ ಹೊಸ ತಂತ್ರಜ್ಞಾನ ಅನುಷ್ಠಾನಕ್ಕೆ ಬರಲಿದೆಯಂತೆ.

ಈಗ ಜಾರಿಗೆ ತರುತ್ತಿರುವ ಹೊಸ ವ್ಯವಸ್ಥೆಯಿಂದ ಪರೀಕ್ಷಾ ಅಕ್ರಮ, ಮರುಪರೀಕ್ಷೆಯಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಕಿರಿಕಿರಿಗಳಿಂದ ಮುಕ್ತಿ ಸಿಗಲಿದೆ. ಪ್ರಶ್ನೆಪತ್ರಿಕೆಯನ್ನು ಎಷ್ಟುಗಂಟೆಗೆ, ಯಾರ ಕೈಗೆ ಸೇರಿತು, ಉತ್ತರಪತ್ರಿಕೆ ಯಾರ ಕೈಯಿಂದ ಯಾರಿಗೆ ಹಸ್ತಾಂತರ ಆಯ್ತು, ಮೌಲ್ಯಮಾಪಕರ ಕೈ ತಲುಪಿದೆಯೇ, ಇಲ್ಲವೇ ಎಂಬಿತ್ಯಾದಿ ವಿಚಾರಗಳ ಕುರಿತ ಪೂರ್ಣ ವಿವರ ಈ ವ್ಯವಸ್ಥೆ ಮೂಲಕ ಸುಲಭವಾಗಿ ತಿಳಿದುಕೊಳ್ಳುವುದು ಸಾಧ್ಯವಿದೆ ಎನ್ನುತ್ತಾರೆ ವಿವಿಯ ಅಧಿಕಾರಿಗಳು.

ಇ-ಆಡಳಿತ ಯೋಜನೆಯಡಿ ‘ಕ್ಯಾಂಪಸ್‌ ಮ್ಯಾನೇಜ್‌ಮೆಂಟ್‌ ಕಂಪನಿ’ ಈ ಹೊಸ ತಂತ್ರಜ್ಞಾನವನ್ನು ಮಂಗಳೂರು ವಿವಿಯಲ್ಲಿ ಕಾರ್ಯಗತಗೊಳಿಸುತ್ತಿದೆ. ಈ ಕಂಪನಿ ಈಗಾಗಲೇ ದೇಶದ ಐಐಟಿ ಮಾತ್ರವಲ್ಲ ವಿದೇಶಗಳ ಸುಮಾರು 700ಕ್ಕೂ ಅಧಿಕ ವಿವಿಗಳಲ್ಲಿ ಇದೇ ರೀತಿಯ ಪ್ರಶ್ನೆ ಪತ್ರಿಕೆ ಸಾಗಣೆ ಮಾಡುತ್ತಿದೆ.

ಐಐಟಿಯಲ್ಲಷ್ಟೇ ಇದೆ ಈ ವ್ಯವಸ್ಥೆ!

ಪರೀಕ್ಷಾ ಅಕ್ರಮ ತಡೆಯಲು ‘ಯುನಿವಾಲ್ಟ್‌’ ಹಾಗೂ ‘ಫೇಸ್‌ ರೆಕಗ್ನಿಶನ್‌’ನಂಥ ಅತ್ಯಾಧುನಿಕ ವ್ಯವಸ್ಥೆ ಸದ್ಯ ದೇಶದ ಐಐಟಿ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಅನುಷ್ಠಾನದಲ್ಲಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ವಿವಿಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರುತ್ತಿರುವುದು ದೇಶದಲ್ಲಿ ಇದೇ ಮೊದಲು. ಅದೂ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಮಾತ್ರ ಎಂದು ವಿವಿ ಮೂಲಗಳು ತಿಳಿಸಿವೆ.

ಈ ವ್ಯವಸ್ಥೆ ಅತ್ಯಂತ ಭದ್ರತೆಯಿಂದ ಕೂಡಿದ್ದು, ಎಲ್ಲೂ ಲೋಪವಾಗುವ ಸಾಧ್ಯತೆ ಇಲ್ಲ. ಮೇ ತಿಂಗಳಲ್ಲಿ ನಡೆಯುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ವೇಳೆ ಈ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ.

- ಪ್ರೊ.ಪಿ.ಎಸ್‌.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿವಿ