ಮಂಡ್ಯ : ಮಳೆ ಕೊರತೆಯಿಂದ ಕೆರೆಗಳು ಖಾಲಿ ಖಾಲಿ..!
ಕೃಷ್ಣರಾಜಸಾಗರ ಜಲಾಶಯ ಜುಲೈನಲ್ಲೇ ತುಂಬಿ ಹರಿಯುತ್ತಾ ತಮಿಳುನಾಡಿಗೆ ಲಕ್ಷ ಟಿಎಂಸಿ ನೀರು ಶರವೇಗದಲ್ಲಿ ಹರಿದುಹೋಗುತ್ತಿರುವ ಚಿತ್ರಣ ಒಂದೆಡೆಯಾದರೆ ಪಕ್ಕದಲ್ಲೇ ಇರುವ ಕೆರೆಗಳ ಒಡಲು ಬರಿದಾಗಿರುವುದು ಮತ್ತೊಂದೆಡೆಯಾಗಿದೆ. ಇದು ವಿಚಿತ್ರವೆನಿಸಿದರೂ ಸತ್ಯವಾಗಿದೆ.
ಮಂಡ್ಯ ಮಂಜುನಾಥ
ಮಂಡ್ಯ : ಕೃಷ್ಣರಾಜಸಾಗರ ಜಲಾಶಯ ಜುಲೈನಲ್ಲೇ ತುಂಬಿ ಹರಿಯುತ್ತಾ ತಮಿಳುನಾಡಿಗೆ ಲಕ್ಷ ಟಿಎಂಸಿ ನೀರು ಶರವೇಗದಲ್ಲಿ ಹರಿದುಹೋಗುತ್ತಿರುವ ಚಿತ್ರಣ ಒಂದೆಡೆಯಾದರೆ ಪಕ್ಕದಲ್ಲೇ ಇರುವ ಕೆರೆಗಳ ಒಡಲು ಬರಿದಾಗಿರುವುದು ಮತ್ತೊಂದೆಡೆಯಾಗಿದೆ. ಇದು ವಿಚಿತ್ರವೆನಿಸಿದರೂ ಸತ್ಯವಾಗಿದೆ.
ರೈತರನ್ನು ಸಮಾಧಾನಪಡಿಸಲು ನಾಲೆಗಳಿಗೆ 2500 ಕ್ಯುಸೆಕ್ ನೀರು ಹರಿಸಿ ನೀರಾವರಿ ಅಧಿಕಾರಿಗಳು ಮೌನವಹಿಸಿದ್ದಾರೆ. ಕೆರೆಗಳನ್ನು ಸಂಪರ್ಕಿಸುವ ನಾಲೆಗಳಿಗೆ ಇದುವರೆಗೂ ನೀರು ಬಿಡುಗಡೆ ಮಾಡದಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಕೃಷ್ಣರಾಜಸಾಗರ ಜಲಾಶಯ, ಗೊರೂರು ಅಣೆಕಟ್ಟು ತುಂಬಿ ಅಧಿಕ ಪ್ರಮಾಣದಲ್ಲಿ ನೀರನ್ನು ಹರಿಯಬಿಟ್ಟಿದ್ದರೂ ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶದ ಕೆರೆಗಳನ್ನು ತುಂಬಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಜಿಲ್ಲಾಧಿಕಾರಿಗಳೂ ಸೇರಿದಂತೆ ಜನಪ್ರತಿನಿಧಿಗಳು ತಮಿಳುನಾಡಿಗೆ ಹರಿದುಹೋಗುವ ನೀರನ್ನು ವೀಕ್ಷಣೆ ಮಾಡಿಕೊಂಡು ಕುಳಿತಿದ್ದಾರೆಯೇ ವಿನಃ ಖಾಲಿ ಬಿದ್ದಿರುವ ಕೆರೆಗಳ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಅವುಗಳನ್ನು ತುಂಬಿಸಿ ನೀರಿನ ಶೇಖರಣೆಗೆ ಪ್ರಾಮುಖ್ಯತೆ ನೀಡುವ, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಬದ್ಧತೆಯನ್ನು ಪ್ರದರ್ಶಿಸದಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ಮಳೆ ಕೊರತೆ:
ಮಂಡ್ಯ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಬಿದ್ದಿರುವುದನ್ನು ಹೊರತುಪಡಿಸಿದರೆ ಜೂನ್- ಜುಲೈ ತಿಂಗಳಲ್ಲಿ ಮುಂಗಾರು ಮಳೆ ಸಾಕಷ್ಟು ಕೊರತೆಯಾಗಿದೆ. ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಆಶಾದಾಯಕವಾಗಿತ್ತು. ನಂತರ ಮುಂಗಾರು ಮಳೆ ಜಿಲ್ಲೆಯೊಳಗೆ ಕಣ್ಣಾಮುಚ್ಚಾಲೆ ಆಟವಾಡುತ್ತಾ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಲೇ ಇದೆ. ಬೆಳಗ್ಗೆಯಿಂದ ಸಂಜೆಯವರೆಗೂ ಮೋಡ ಮುಸುಕಿದ ವಾತಾವರಣವಿದ್ದರೂ ಆಗಾಗ ಸಾಧಾರಣ ಮಳೆ ಸುರಿದು ಹೋಗುತ್ತಿದೆ. ಭಾರೀ ಮಳೆಯಾಗುವ ನಿರೀಕ್ಷೆ ಮೂಡಿಸಿದರೂ ಕೆಲವೇ ಸಮಯದಲ್ಲಿ ಅದೆಲ್ಲವೂ ತಿಳಿಯಾಗಿ ಹುಸಿಯಾಗಿಸುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
985 ಕೆರೆಗಳಲ್ಲಿ 69 ಕೆರೆಗಳಷ್ಟೇ ಭರ್ತಿ:
ಈಗ ಕೆಆರ್‌ಎಸ್, ಹೇಮಾವತಿ ಜಲಾಶಯಗಳು ತುಂಬಿ ಲಕ್ಷಾಂತರ ಕ್ಯುಸೆಕ್ ನೀರು ಹೊರಹರಿಯುತ್ತಿದ್ದರೂ ಕೆರೆಗಳನ್ನು ಪ್ರಧಾನವಾಗಿಸಿಕೊಂಡು ತುಂಬಿಸುವುದಕ್ಕೆ ಈಗಲೂ ಅಧಿಕಾರಿ ವರ್ಗ ಮುಂದಾಗಿಲ್ಲ. ಬೆಳೆಗಳಿಗೆ ನೀರು ಹರಿಸುವ ಸಮಯದಲ್ಲೇ ಜಿಲ್ಲೆಯಲ್ಲಿರುವ 985ಕೆರೆಗಳನ್ನು ತುಂಬಿಸುವುದಕ್ಕೆ ಆಸಕ್ತಿ ತೋರಬೇಕಿತ್ತು. ಈ ಕೆರೆಗಳ ಪೈಕಿ ಕಾವೇರಿ ನೀರಾವರಿ ನಿಗಮ ವ್ಯಾಪ್ತಿಗೆ 174ಕೆರೆಗಳು, ಪಿಆರ್‌ಇಡಿ ವ್ಯಾಪ್ತಿಗೆ 418 ಕೆರೆಗಳು ಬರಲಿವೆ. ಮುಖ್ಯವಾಗಿ ಈ ಕೆರೆಗಳನ್ನು ತುಂಬಿಸುವ ಬದ್ಧತೆಯನ್ನು ಪ್ರದರ್ಶಿಸಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿರುವ 985 ಕೆರೆಗಳ ಪೈಕಿ ಕೇವಲ 69ಕೆರೆಗಳಲ್ಲಷ್ಟೇ ಶೇ.100ರಷ್ಟು ನೀರು ತುಂಬಿದ್ದರೆ, 82 ಕೆರೆಗಳಲ್ಲಿ ಶೇ.75ರಷ್ಟು ನೀರು, 120 ಕೆರೆಗಳಲ್ಲಿ ಶೇ.50ರಷ್ಟು, 216 ಕೆರೆಗಳಲ್ಲಿ ಶೇ.25ರಷ್ಟು ನೀರಿದ್ದರೆ 482 ಕೆರೆಗಳಲ್ಲಿ ಶೇ.25ಕ್ಕಿಂತಲೂ ಕಡಿಮೆ ನೀರು ಸಂಗ್ರಹವಾಗಿದೆ. ಇದರ ಜೊತೆಗೆ ಮಳೆಯಾಶ್ರಿತ ಪ್ರದೇಶದಲ್ಲಿರುವ ಹಲವಾರು ಕೆರೆಗಳು ನೀರಿಲ್ಲದೆ ಬರಡಾಗಿ ನಿಂತಿವೆ. ಕೆರೆಗಳು ತುಂಬದಿರುವುದರಿಂದ ರೈತರು ನೀರಿಲ್ಲದೆ ಕೃಷಿ ಚಟುವಟಿಕೆ ಕೈಗೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.
ವಿತರಣಾ ನಾಲೆಗಳಲ್ಲಿ ಹೂಳು, ಗಿಡಗಂಟೆಗಳು:
ಮುಖ್ಯ ನಾಲೆಗಳಲ್ಲಿ ಹರಿಯುತ್ತಿರುವ ನೀರು ಬೆಳೆಗಳಿಗೆ ಅನುಕೂಲವಾಗಿದ್ದರೆ, ಕೆರೆಗಳಿಗೆ ಸಂಪರ್ಕ ಕಲ್ಪಿಸುವ ವಿತರಣಾ ನಾಲೆಗಳಲ್ಲಿ ಗಿಡ-ಗಂಟೆಗಳು ಬೆಳೆದುಕೊಂಡು ಹೂಳು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸುವ ಪ್ರಯತ್ನ ಇದುವರೆಗೂ ನಡೆದಿಲ್ಲ. ಕಳೆದ ವರ್ಷ ಬೇಸಿಗೆ ಸಮಯದಲ್ಲಿ ಕೆರೆಗಳಲ್ಲಿ ತುಂಬಿದ್ದ ಹೂಳನ್ನೆಲ್ಲಾ ವೈಜ್ಞಾನಿಕವಾಗಿ ತೆಗೆದು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಬಹುದಿತ್ತು. ಆ ಕೆಲಸವನ್ನೂ ನೀರಾವರಿ ಇಲಾಖೆ ಮಾಡಲಿಲ್ಲ. ಮುಂಗಾರು ಪೂರ್ವದಲ್ಲಿ ವಿತರಣಾ ನಾಲೆಗಳಲ್ಲಿ ಬೆಳೆದಿದ್ದ ಗಿಡ- ಗಂಟೆಗಳನ್ನು ತೆರವುಗೊಳಿಸಿ ಹೂಳನ್ನು ತೆಗೆಸಿದ್ದರೆ ಸರಾಗವಾಗಿ ಕೆರೆಗಳಿಗೆ ನೀರು ಹರಿದುಹೋಗುತ್ತಿತ್ತು. ಆ ಕೆಲಸವನ್ನೂ ಮಾಡದಿರುವುದರಿಂದ ಕೆರೆಗಳಿಗೆ ನೀರು ಸೇರುತ್ತಿಲ್ಲ. ಯಥೇಚ್ಛ ನೀರಿದ್ದರೂ ರೈತರು ಕೃಷಿ ಚಟುವಟಿಕೆ ನಡೆಸಲಾಗದ ಸ್ಥಿತಿ ಎದುರಿಸುತ್ತಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದಷ್ಟೇ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮುಖ್ಯವಾಗಿದೆಯೇ ವಿನಃ ಕೆರೆಗಳನ್ನು ತುಂಬಿಸುವ, ಅಚ್ಚುಕಟ್ಟುದಾರರಿಗೆ ನೀರಿನ ಅನುಕೂಲ ಮಾಡಿಕೊಡುವ ಇಚ್ಛಾಶಕ್ತಿಯೇ ಇಲ್ಲದಿರುವುದು ಜಿಲ್ಲೆಯ ದೊಡ್ಡ ದುರಂತ.
ಹಲವು ಕೆರೆಗಳಿಗೆ ನೇರವಾಗಿ ನಾಲೆಗಳಿಂದ ನೀರಿನ ಸಂಪರ್ಕವಿಲ್ಲ. ಮುಖ್ಯನಾಲೆಗಳ ಮೂಲಕ ಪಿಕಪ್ ನಾಲೆಗಳಿಗೆ ನೀರು ಹರಿದು ಅಲ್ಲಿಂದ ರೈತರ ಗದ್ದೆಗಳಿಗೆ ಹರಿದ ನಂತರ ನೀರು ಕೆರೆಯನ್ನು ಸೇರುತ್ತದೆ. ಕೆಆರ್‌ಎಸ್ ತುಂಬಿ ಹರಿದರೂ ವಿತರಣಾ ನಾಲೆ, ಪಿಕಪ್ ನಾಲೆಗಳಲ್ಲೇ ನೀರು ಹರಿಯುತ್ತಿಲ್ಲ. ರೈತರು ಭತ್ತದ ಒಟ್ಲು ಹಾಕಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲ. ಇನ್ನು ಕೆರೆಗಳು ತುಂಬುವ ಮಾತೆಲ್ಲಿ ಎಂಬುದು ರೈತ ಹನಿಯಂಬಾಡಿ ನಾಗರಾಜು ಹೇಳುವ ಮಾತು.
ಅಮೃತ ಸರೋವರಗಳು ಖಾಲಿ ಖಾಲಿ:
ಅಂತರ್ಜಲ ವೃದ್ಧಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಮುಚ್ಚಿಹೋಗಿದ್ದ ಹಲವಾರು ಕಲ್ಯಾಣಿಗಳು, ಕಟ್ಟೆಗಳನ್ನೆಲ್ಲಾ ಅಮೃತ ಸರೋವರ ಯೋಜನೆಯಡಿ ಪುನಶ್ಚೇತನಗೊಳಿಸಲಾಗಿದೆ. ಮಳೆ ಕೊರತೆಯಿಂದ ಅವುಗಳು ಭರ್ತಿಯಾಗದೆ ಬರಡಾಗಿ ನಿಂತಿವೆ. ಇವುಗಳು ಭರ್ತಿಯಾಗಬೇಕಾದರೆ ಮಳೆಯಾಗಲೇಬೇಕು. ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮಳೆಯಾಗದಿರುವುದರಿಂದ ಅಮೃತ ಸರೋವರಗಳು ನೀರಿಲ್ಲದೆ ಕಳಾಹೀನ ಸ್ಥಿತಿಯಲ್ಲಿ ಉಳಿದಿವೆ.
ಹೂಳು ತುಂಬಿರುವುದರಿಂದ ಕೆರೆಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆ ಇದೆ. ಈ ವೇಳೆಗೆ ಹೂಳು ತೆಗೆಸಿ ವಿತರಣಾ ನಾಲೆಗಳನ್ನು ಸ್ವಚ್ಛಗೊಳಿಸಿಟ್ಟುಕೊಳ್ಳಬೇಕಿತ್ತು. ಆ ಕೆಲಸ ಮಾಡದಿರುವುದರಿಂದ ಕೆರೆಗಳನ್ನು ತುಂಬಿಸುವುದಕ್ಕೆ ಈವರೆಗೆ ಸಾಧ್ಯವಾಗಿಲ್ಲ. ತಮಿಳುನಾಡಿಗೆ ನೀರು ಹರಿದುಹೋಗುತ್ತಿರುವುದನ್ನು ನೋಡಿ ಅಧಿಕಾರಿಗಳು ಖುಷಿಪಡುತ್ತಿದ್ದಾರೆ.
- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ
ಅಂತರ್ಜಲ ಹೆಚ್ಚಿಸುವ ಬದ್ಧತೆ, ಕಾರ್ಯದಕ್ಷತೆಯೇ ಅಧಿಕಾರಿಗಳಿಗಿಲ್ಲ. ಕೆರೆ-ಕಟ್ಟೆಗಳನ್ನು ತುಂಬಿಸುವುದಕ್ಕೆ ಜನಪ್ರತಿನಿಧಿಗಳಿಗೂ ಆಸಕ್ತಿ ಇಲ್ಲ. ಇದು ಈ ಜಿಲ್ಲೆಯ ದೌರ್ಭಾಗ್ಯ. ಸಂಪರ್ಕ ನಾಲೆಗಳನ್ನು ದುರಸ್ತಿಗೊಳಿಸಿಲ್ಲ. ಅವುಗಳನ್ನು ಸ್ವಚ್ಛಗೊಳಿಸಬೇಕಾದರೆ ಹಣ ಬೇಕು. ಕೆಲವೆಡೆ ಮೋಟಾರ್ ಪಂಪ್‌ಗಳ ಮೂಲಕ ನೀರೆತ್ತಬೇಕು. ಹೀಗಾಗಿ ಕೆರೆಗಳು ನೀರು ಕಾಣದೆ ಬರಡಾಗಿವೆ.
- ಕೆ.ಎಸ್.ನಂಜುಂಡೇಗೌಡ, ರೈತ ಮುಖಂಡರು
ಕೆರೆಗಳಿಗೆ ನೀರು ತುಂಬಿಸಿ ಎಂದರೆ ಡಿಸ್ನಿಲ್ಯಾಂಡ್ ಮಾಡ್ತೀವಿ, ಅಮ್ಯೂಸ್‌ಮೆಂಟ್ ಪಾರ್ಕ್ ಮಾಡ್ತೀವಿ ಅಂತಾರೆ. ಆಡಳಿತ ನಡೆಸುವವರಿಗೆ ಬೇಡದ ಯೋಜನೆಗಳ ಕಡೆಗಿರುವ ಆಸಕ್ತಿ ರೈತರಿಗೆ ಅನುಕೂಲವಾಗುವ ಯೋಜನೆಗಳ ಕಡೆಗಿಲ್ಲ. ಸಾಕಷ್ಟು ನೀರಿದ್ದರೂ ಅದನ್ನು ರೈತರಿಗೆ ಉಪಯೋಗಕ್ಕೆ ಸಿಗುವಂತೆ ಮಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ವಿಫಲರಾಗಿದ್ದಾರೆ.
- ಇಂಡುವಾಳು ಚಂದ್ರಶೇಖರ್, ರೈತ ಮುಖಂಡರು
ಎಲ್ಲಾ ಕೆರೆಗಳನ್ನೂ ಒಟ್ಟಿಗೆ ತುಂಬಿಸಲಾಗುವುದಿಲ್ಲ. ಅದಕ್ಕೆ ಮಳೆಯ ನೆರವೂ ನಮಗೆ ಬೇಕು. ಹಲವೆಡೆ ವಿತರಣಾ ನಾಲೆಗಳಲ್ಲಿ ಗಿಡ- ಗಂಟೆಗಳು, ಹೂಳು ತುಂಬಿದೆ. ಈಗ ಮುಖ್ಯವಾಗಿರುವ ಕಡೆಗಳಲ್ಲಿ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ನಾಲ್ಕು ಕಟ್ಟು ನೀರು ಬಿಡುಗಡೆ ಮಾಡುವ ಸಮಯದಲ್ಲಿ ಹಂತ ಹಂತವಾಗಿ ಕೆರೆಗಳನ್ನು ತುಂಬಿಸಲಾಗುವುದು.
- ರಘುರಾಮ್, ಅಧೀಕ್ಷಕ ಇಂಜಿನಿಯರ್, ಕೆಆರ್‌ಎಸ್