ಮಲೆಬೆನ್ನೂರು[ಸೆ.23]:  ರಾತ್ರೋರಾತ್ರಿ ಕುರಿ ಹಿಂಡಿನೊಳಗೆ ನುಗ್ಗಿ ಕುರಿಗಳನ್ನು ಕಳವು ಮಾಡುತ್ತಿದ್ದ ಐವರ ತಂಡದ ಪೈಕಿ ಒಬ್ಬನ ರುಂಡವನ್ನು ಕುರಿಗಾಯಿ ಕೊಡಲಿಯಲ್ಲಿ ಚೆಂಡಾಡಿದ ಘಟನೆ ಹರಿಹರ ತಾಲೂಕಿನ ಜಿ.ಟಿ.ಕಟ್ಟೆಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದ ಚಮನ್‌ ಸಾಬ್‌ ಬರ್ಬರವಾಗಿ ಹತ್ಯೆಯಾದ ವ್ಯಕ್ತಿ. ಕಳೆದ ರಾತ್ರಿ ಚಮನ್‌ ಸಾಬ್‌ ತನ್ನ ಇತರೆ ನಾಲ್ವರು ಸಹಚರರೊಂದಿಗೆ ಕುರಿ ಕದಿಯಲೆಂದು ಜಿ.ಟಿ.ಕಟ್ಟೆಗ್ರಾಮದ ಕುರಿ ಮಂದೆಯೊಳಗೆ ನುಗ್ಗಿ, ಕುರಿಗಳನ್ನು ಕದ್ದೊಯ್ಯುತ್ತಿದ್ದರು. ಆಗ ಕುರಿಗಾಯಿ ಅರ್ಜುನಪ್ಪನ ಕೈಗೆ ಚಮನ್‌ ಸಾಬ್‌ ಸಿಕ್ಕಿಬಿದ್ದಿದ್ದು, ಇತರೆ ನಾಲ್ವರು ಪರಾರಿಯಾಗಿದ್ದರು.

ರಾತ್ರೋರಾತ್ರಿ ಪದೇಪದೇ ತಮ್ಮ ಕುರಿ ಮಂದೆಯಲ್ಲಿದ್ದ ಕುರಿಗಳು ಕಳವಾಗುತ್ತಿದ್ದುದರಿಂದ ರೋಸಿಹೋಗಿದ್ದ ಅರ್ಜುನಪ್ಪ ಸೇರಿದಂತೆ ಇತರ ಕುರಿಗಾಯಿಗಳು ಹೇಗಾದರೂ ಮಾಡಿ ಕುರಿಗಳ್ಳರನ್ನು ಹಿಡಿಯಲು ಮುಂದಾಗಿದ್ದರು. ಕುರಿ ಕದಿಯಲು ಬಂದಿದ್ದ ತಮ್ಮನ್ನೇ ಕುರಿಗಾಯಿಗಳು ಇದಿರು ನೋಡುತ್ತಿದ್ದಾರೆ ಎಂಬ ಕಲ್ಪನೆಯೂ ಇಲ್ಲದ ಚಮನ್‌ ಸಾಬ್‌ ಹಾಗೂ ಆತನ ಇತರೆ ನಾಲ್ವರು ಸಹಚರರು ಕುರಿ ಮಂದೆಯೊಳಗೆ ನುಗ್ಗಿದರು. ಕುರಿಗಳನ್ನು ಹಿಡಿದುಕೊಂಡು ಓಡುತ್ತಿದ್ದಂತೆಯೇ ಕುರಿಗಾಯಿ ಅರ್ಜುನಪ್ಪ ಇತರರು ಅವರ ಬೆನ್ನು ಹತ್ತಿದ್ದಲ್ಲದೇ ತನ್ನ ಇತರೆ ಕುರಿಗಾಯಿಗಳನ್ನು ಕೂಗಿ ಕರೆದಿದ್ದಾರೆ. ಆಗ ಹೆದರಿದ ಚಮನ್‌ ಸಾಬ್‌ ಕಾಲುಗಳನ್ನು ಕಟ್ಟಿದ್ದ ಕುರಿಗಳನ್ನು ಬಿಟ್ಟು, ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಅರ್ಜುನಪ್ಪ ಕುರಿಗಳ್ಳ ಚಮನ್‌ ಸಾಬ್‌ನನ್ನು ಹಿಡಿದು, ತನ್ನ ಬಳಿಯಿದ್ದ ಕೊಡಲಿಯಿಂದ ರುಂಡವನ್ನೇ ದೇಹದಿಂದ ಬೇರ್ಪಡಿಸಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನಂತರ ಸೀದಾ ಮಲೆಬೆನ್ನೂರು ಪೊಲೀಸ್‌ ಠಾಣೆಗೆ ಹೋಗಿ ಕುರಿ ಕದಿಯಲು ಬಂದಿದ್ದ ಚಮನ್‌ ಸಾಬ್‌ನ ರುಂಡ-ಮುಂಡವನ್ನು ತಾನೇ ಛೇದಿಸಿದ್ದಾಗಿ ಹೇಳಿ ಶರಣಾಗಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಕುರಿ ಕದಿಯಲು ಬಂದಿದ್ದ ಇತರೆ ನಾಲ್ವರು ಯಾರೆಂಬ ಬಗ್ಗೆಯೂ ಪೊಲೀಸರು ಶೋಧ ನಡೆಸಿದ್ದಾರೆ. ಮಲೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿ ಮಂದೆ ಇದ್ದ ಸ್ಥಳದಲ್ಲಿ ಕುರಿ ಕದಿಯಲು ಬಂದಿದ್ದ ಚಮನ್‌ ಸಾಬ್‌ ದೇಹದಿಂದ ಕುತ್ತಿಗೆ ಬೇರ್ಪಟ್ಟು ದೂರದಲ್ಲಿ ಬಿದ್ದಿತ್ತು. ಕದಿಯಲೆಂದು ಕಾಲುಗಳನ್ನು ಕಟ್ಟಲಾಗಿದ್ದ ಕುರಿಗಳೂ ಅಲ್ಲಿಯೇ ಬಿದ್ದಿದ್ದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಕೊಲೆಯಾದ ಚಮನ್‌ ಸಾಬ್‌ ಕುರಿಗಳನ್ನು ಕಳ್ಳತನ ಮಾಡುತ್ತಿದ್ದ. ಈ ಹಿಂದೆ ಆತನ ವಿರುದ್ಧ 10 ಕುರಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದೇ ವಿಚಾರಕ್ಕೆ ಚಮನ್‌ ಸಾಬ್‌ ಬಗ್ಗೆ ಅನುಮಾನಗೊಂಡಿದ್ದ ಕುರಿಗಾಯಿ ಅರ್ಜುನಪ್ಪ ಎಚ್ಚರಿಕೆ ಸಹ ನೀಡಿದ್ದನಂತೆ. ಆದರೂ, ಚಮನ್‌ ಸಾಬ್‌ ಮಾತ್ರ ತನ್ನ ಸಹಚರರೊಂದಿಗೆ ಸೇರಿಕೊಂಡು ಕುರಿ ಕದಿಯುವುದನ್ನು ಮುಂದುವರಿಸಿದ್ದನಂತೆ. ಈಗ ಅದೇ ಕುರಿ ಕಳ್ಳತನ ಮಾಡುತ್ತಿದ್ದ ಕೃತ್ಯವು ಸ್ವತಃ ಚಮನ್‌ ಸಾಬ್‌ ಕುರಿಗಾಯಿಯ ಕೊಡಲಿಗೆ ಕುತ್ತಿಗೆ ಕೊಡುವಂತಹ ಪರಿಸ್ಥಿತಿಯನ್ನು ತಂದೊಡ್ಡಿದಂತಾಗಿದೆ.